ಕನ್ನಡ ಸುದ್ದಿ  /  Lifestyle  /  Quick Breakfast Recipe Indian How To Prepare Wheat Flour Dosa Wheat Flour Dosa Recipe In Kannada Godhi Dose Mgb

ಪಟಾಪಟ್​ ಅಂತ ಬೆಳಗಿನ ಉಪಹಾರಕ್ಕೆ ರೆಡಿ ಮಾಡಿ ಗೋಧಿ ಹಿಟ್ಟಿನ ದೋಸೆ; ಇಲ್ಲಿದೆ ರೆಸಿಪಿ, ಆರೋಗ್ಯಕ್ಕೂ ಹಿತ

Wheat Flour Dosa recipe in Kannada: ನಾವಿಲ್ಲಿ ನಿಮಗೆ ಗೋಧಿ ಹಿಟ್ಟಿನ ದೋಸೆ ಮಾಡುವ ಸರಳ ವಿಧಾನವನ್ನ ತಿಳಿಸಿಕೊಟ್ಟಿದ್ದೇವೆ. ಇದನ್ನ ನೀವು ಬೆಳಗಿನ ಉಪಹಾರಕ್ಕೆ ಮಾತ್ರವಲ್ಲದೇ ಸಂಜೆ ಟೀ ಜೊತೆ ಸ್ನಾಕ್ಸ್ ಆಗಿಯೂ ಮಾಡಿಕೊಳ್ಳಬಹುದು.

ಗೋಧಿ ಹಿಟ್ಟಿನ ದೋಸೆ (twitter/@chitrasendhil)
ಗೋಧಿ ಹಿಟ್ಟಿನ ದೋಸೆ (twitter/@chitrasendhil)

ಕೆಲವೊಮ್ಮೆ ಬೆಳಗ್ಗೆ ಲೇಟ್​ ಆಗಿ ಎದ್ದೋ ಅಥವಾ ಇತರ ಕೆಲಸಗಳ ನಡುವೆ ಬಿಡುವಾಗದೆ ಬೆಳಗಿನ ಉಪಹಾರ ಸಿದ್ಧಪಡಿಸಲು ಆಗುವುದಿಲ್ಲ. ಇಂತಹ ಸಮಯದಲ್ಲಿ ನಿಮ್ಮ ಕೈ ಹಿಡಿಯುತ್ತೆ ಗೋಧಿ ಹಿಟ್ಟಿನ ದೋಸೆ. ಹೆಚ್ಚು ಸಾಮಗ್ರಿಗಳಿಲ್ಲದೇ ಪಟಾಪಟ್​ ಅಂತ ಮಾಡುವ ತಿಂಡಿ ಇದಾಗಿದೆ. ಬಿಸಿಬಿಸಿ ಗೋಧಿ ಹಿಟ್ಟಿನ ದೋಸೆ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಏಕೆಂದರೆ ಇದನ್ನ ಮಾಡುವುದು ಗೋಧಿ ಹಿಟ್ಟಿನಿಂದ.

ಗೋಧಿ ಹಿಟ್ಟನ್ನು ವಿವಿಧ ರೂಪದಲ್ಲಿ ಸೇವಿಸುವುದರಿಂದ ಚರ್ಮದ ಆರೋಗ್ಯ, ಕೂದಲ ಆರೋಗ್ಯ, ಹೃದಯದ ಆರೋಗ್ಯವನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ, ತೂಕ ಇಳಿಕೆ, ದೀರ್ಘಕಾಲದ ಉರಿಯೂತ, ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಕ್ಯಾನ್ಸರ್​ ಅಪಾಯ ಕಡಿಮೆ ಮಾಡುತ್ತದೆ. ಗೋಧಿ ಹಿಟ್ಟನ್ನು ನೀವು ರೊಟ್ಟಿ, ದೋಸೆ ಹೀಗೆ ನಾನಾ ರೂಪದಲ್ಲಿ ಸೇವಿಸಬಹುದು. ನಾವಿಲ್ಲಿ ನಿಮಗೆ ಗೋಧಿ ಹಿಟ್ಟಿನ ದೋಸೆ ಮಾಡುವ ಸರಳ ವಿಧಾನವನ್ನ ತಿಳಿಸಿಕೊಟ್ಟಿದ್ದೇವೆ,. ಇದನ್ನ ನೀವು ಬೆಳಗಿನ ಉಪಹಾರಕ್ಕೆ ಮಾತ್ರವಲ್ಲದೇ ಸಂಜೆ ಟೀ ಜೊತೆ ಸ್ನಾಕ್ಸ್ ಆಗಿಯೂ ಮಾಡಿಕೊಳ್ಳಬಹುದು.

ಗೋಧಿ ಹಿಟ್ಟಿನ ದೋಸೆ ಮಾಡಲು ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು

ಅಕ್ಕಿ ಹಿಟ್ಟು

ಮೊಸರು

ಈರುಳ್ಳಿ

ಹಸಿಮೆಣಸು

ಕೊತ್ತುಂಬರಿ ಸೊಪ್ಪು

ಅರಿಶಿನ

ಚಾಟ್​ ಮಸಾಲ

ಎಣ್ಣೆ

ಉಪ್ಪು

ಗೋಧಿ ಹಿಟ್ಟಿನ ದೋಸೆ ಮಾಡುವ ವಿಧಾನ

ಒಂದು ಪಾತ್ರೆಗೆ ಗೋಧಿ ಹಿಟ್ಟು ಹಾಕಿ ಅದಕ್ಕೆ ಸ್ವಲ್ಪ​ ಮೊಸರು, ಸ್ವಲ್ಪ ಅಕ್ಕಿ ಹಿಟ್ಟು ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಹಾಕಿ ಕಲಸಿ. ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ಹಿಟ್ಟನ್ನು ಕಲಸಿಕೊಳ್ಳಿ. ಹಿಟ್ಟು ಕಲಸುವಾಗ ತೀರಾ ತೆಳುವಾದರೆ ಮತ್ತಷ್ಟು ಗೋಧಿ ಹಿಟ್ಟು ಸೇರಿಸಿಕೊಳ್ಳಿ ಅಥವಾ ತೀರಾ ದಪ್ಪ ಆದ್ರೆ ನೀರು ಸೇರಿಸಿಕೊಳ್ಳಿ.

ಹಿಟ್ಟನ್ನು ಚೆನ್ನಾಗಿ ಕಲಸಿದ ಬಳಿಕ ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಚೂರುಗಳು, ಸಣ್ಣಗೆ ಕತ್ತರಿಸಿದ ಕೊತ್ತಂಬರಿ, ಸಣ್ಣಗೆ ಕತ್ತರಿಸಿದ ಹಸಿಮೆಣಸಿಕ ಕಾಯಿ ಮತ್ತು ಚಾಟ್​ ಮಸಾಲ ಹಾಕಿ ಮಿಕ್ಸ್​ ಮಾಡಿ.

ಈಗ ಸ್ಟವ್​ ಮೇಲೆ ಹೆಂಚು ಇಟ್ಟು ಎಣ್ಣೆ ಸವರಿ ದೋಸೆಯಂತೆ ಗೋಧಿ ಹಿಟ್ಟಿನ ಮಿಶ್ರಣವನ್ನು ಹೊಯ್ಯಿರಿ. ಅದರ ಮೇಲೆ ಎಣ್ಣೆ ಸಿಂಪಡಿಸಿ ಹೆಂಚಿನ ಪ್ಲೇಟ್​ ಮುಚ್ಚಿ. ಕೆಲವು ಸೆಕೆಂಡುಗಳ ಬಳಿಕ ದೋಸೆಯನ್ನು ಮಗುಚಿ ಹಾಕಿ. ಇದು ಎರಡೂ ಸೈಡ್​ ಬೇಯಬೇಕು.

ಇದೀಗ ಗೋಧಿ ದೋಸೆ ಸಿದ್ಧ. ಇದನ್ನ ನೀವು ಚಟ್ನಿ ಅಥವಾ ಚಟ್ನಿ ಪುಡಿ ಅಥವಾ ಸಾಂಬಾರ್​ ಜೊತೆ ತಿನ್ನಬಹುದು. ಇದನ್ನು ಬಿಸಿಬಿಸಿಯಾಗಿ ತಿನ್ನಲು ಸೂಕ್ತ. (ಅಕ್ಕಿ ಹಿಟ್ಟು, ಮೊಸರು, ಅರಿಶಿನ, ಚಾಟ್​ ಮಸಾಲ ಇಲ್ಲದೆ ಕೂಡ ಗೋಧಿ ಹಿಟ್ಟಿನ ದೋಸೆ ಮಾಡಬಹುದು. ಹಸಿಮೆಣಸಿನ ಕಾಯಿ ಬೇಡ ಎಂದರೆ ಸ್ವಲ್ಪ ಖಾರದ ಪುಡಿ ಸೇರಿಸಿಕೊಂಡು ಹಿಟ್ಟು ಕಲಸಬಹುದು).