ರಾಗಿ ತಿಂದವನು ನಿರೋಗಿ ಅನ್ನೋದು ಇದಕ್ಕೆ ನೋಡಿ; ರಾಗಿಯಲ್ಲಿರುವ ಪೌಷ್ಟಿಕಾಂಶದ ಬಗ್ಗೆ ತಿಳಿದರೆ ಪ್ರತಿದಿನ ಇದನ್ನು ತಿನ್ನುವಿರಿ
ರಾಗಿಯು ಪೌಷ್ಟಿಕಾಂಶದಿಂದ ಹೇರಳವಾಗಿದೆ. ಇದು ಕಾರ್ಬೋಹೈಡ್ರೇಟ್‌ಗಳು, ನಾರಿನಂಶ ಮತ್ತು ಪ್ರೋಟೀನ್‌ಗಳ ಸಮೃದ್ಧ ಮೂಲವಾಗಿದೆ. ಇತರ ಧಾನ್ಯಗಳಿಗೆ ಹೋಲಿಸಿದರೆ ರಾಗಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ಕಡಿಮೆ ಮಟ್ಟದ ಕೊಬ್ಬನ್ನು ಹೊಂದಿದೆ. ಇದರಲ್ಲಿರುವ ಪೋಷಕಾಂಶಗಳ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ರಾಗಿ ತಿಂದವನು ನಿರೋಗಿ ಎಂಬ ಮಾತಿದೆ. ಹಿಂದೆಲ್ಲಾ ಬಡವರ ಆಹಾರವಾಗಿದ್ದ ರಾಗಿಯನ್ನು ಇಂದು ಸಿರಿವಂತರು ಕೂಡ ತಿನ್ನುತ್ತಾರೆ. ಯಾಕೆಂದರೆ ಇದರಲ್ಲಿರುವ ಪೌಷ್ಟಿಕಾಂಶದ ಮೌಲ್ಯವನ್ನು ಅರಿತ ಜನ ರಾಗಿಯತ್ತ ಮೊರೆ ಹೋಗಿದ್ದಾರೆ. ಮಧ್ಯಾಹ್ನ ಅಥವಾ ರಾತ್ರಿಯೂಟಕ್ಕೆ ಬಹುತೇಕ ಮಂದಿಗೆ ರಾಗಿ ಮುದ್ದೆ ಬೇಕೇ ಬೇಕು. ಕೇವಲ ಮುದ್ದೆಯಾಗಿ ಮಾತ್ರವಲ್ಲ ರಾಗಿ ಮಾಲ್ಟ್, ರಾಗಿ ಅಂಬಲಿ ಇತ್ಯಾದಿ ತಯಾರಿಸಿಯೂ ಸೇವಿಸುತ್ತಾರೆ.
ರಾಗಿಯು ಪೌಷ್ಟಿಕಾಂಶದಿಂದ ಹೇರಳವಾಗಿದೆ. ಇದು ಕಾರ್ಬೋಹೈಡ್ರೇಟ್‌ಗಳ (ಮುಖ್ಯವಾಗಿ ಪಿಷ್ಟ), ನಾರಿನಂಶ ಮತ್ತು ಪ್ರೋಟೀನ್‌ಗಳ ಸಮೃದ್ಧ ಮೂಲವಾಗಿದೆ. ಇತರ ಧಾನ್ಯಗಳಿಗೆ ಹೋಲಿಸಿದರೆ ರಾಗಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ಕಡಿಮೆ ಮಟ್ಟದ ಕೊಬ್ಬನ್ನು ಹೊಂದಿದೆ. ಹೀಗಾಗಿ ತೂಕ ಇಳಿಕೆಗೂ ಇದು ನೆರವಾಗುತ್ತದೆ.
ರಾಗಿಯಲ್ಲಿರುವ ಪೌಷ್ಟಿಕಾಂಶಗಳು ಯಾವ್ಯಾವು ಎಂಬುದು ಇಲ್ಲಿದೆ
ನಾರಿನಂಶ ಅಧಿಕವಾಗಿದೆ: ರಾಗಿಯು ಆಹಾರದ ನಾರಿನ ಅತ್ಯುತ್ತಮ ಮೂಲವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಜೀರ್ಣಾಂಗವ್ಯೂಹದ ಮೂಲಕ ತ್ಯಾಜ್ಯವನ್ನು ಸುಲಭವಾಗಿ ಸಾಗಿಸಲು ಅನುಕೂಲವಾಗುವ ಮೂಲಕ ಮಲಬದ್ಧತೆಯನ್ನು ತಡೆಯುತ್ತದೆ. ಹಾಗೆಯೇ ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತೂಕವನ್ನು ನಿಯಂತ್ರಿಸಲು ಅಥವಾ ಅತಿಯಾಗಿ ತಿನ್ನುವುದನ್ನು ತಡೆಯಲು ಬಯಸುವವರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
ಪ್ರೋಟೀನ್ ಸಮೃದ್ಧವಾಗಿದೆ: ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಬೆಳವಣಿಗೆ, ಸ್ನಾಯು ಬಲಪಡಿಸಲು ಇತ್ಯಾದಿಗೆ ಮುಖ್ಯವಾದ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ರಾಗಿ ಒಳಗೊಂಡಿದೆ. ರಾಗಿಯಲ್ಲಿರುವ ಪ್ರೋಟೀನ್ ಅಂಶವು ಕಿಣ್ವ ಉತ್ಪಾದನೆ ಮತ್ತು ಹಾರ್ಮೋನ್ ನಿಯಂತ್ರಣ ಸೇರಿದಂತೆ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವಲ್ಲಿ ಪ್ರೋಟೀನ್ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದು ದಿನವಿಡೀ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ರಾಗಿಯಲ್ಲಿ ಪ್ರೋಟೀನ್ ಸಮೃದ್ಧವಾಗಿರುವುದರಿಂದ, ಇದು ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ ಮತ್ತು ಅತಿಯಾಗಿ ತಿನ್ನಬೇಕೆಂಬ ಆಸೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ತೂಕ ನಿರ್ವಹಣೆಗೂ ಸಹಕಾರಿಯಾಗಿದೆ. ಪ್ರೋಟೀನ್ ಸಮೃದ್ಧವಾಗಿರುವುದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ. ರಾಗಿಯಲ್ಲಿರುವ ಅಮೈನೋ ಆಮ್ಲಗಳು ಕಾಲಜನ್ ಉತ್ಪಾದನೆಗೆ ಕೊಡುಗೆ ನೀಡುತ್ತವೆ.
ಕ್ಯಾಲ್ಸಿಯಂ ಸಮೃದ್ಧ: ರಾಗಿಯಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆ ಆರೋಗ್ಯಕ್ಕೆ ಪ್ರಯೋಜನಕಾರಿ. ಅಲ್ಲದೆ ಕ್ಯಾಲ್ಸಿಯಂ ಕೊರತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಕೊರತೆಯು ಮೂಳೆ ದುರ್ಬಲಗೊಳ್ಳುವಿಕೆ, ಸ್ನಾಯು ಸೆಳೆತ ಮತ್ತು ಇತರೆ ಸಮಸ್ಯೆಗಳಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ ಹಲ್ಲುಗಳ ಆರೋಗ್ಯಕ್ಕೂ ಕ್ಯಾಲ್ಸಿಯಂ ಅತ್ಯಗತ್ಯ. ಇವು ಹಲ್ಲುಗಳನ್ನು ಕೊಳೆಯದಂತೆ ರಕ್ಷಿಸಲು ಸಹಾಯ ಮಾಡುತ್ತದೆ. ರಾಗಿಯಲ್ಲಿ ಹೆಚ್ಚಿನ ಪ್ರಮಾಣ ಕ್ಯಾಲ್ಸಿಯಂ ಅಂಶವಿರುವುದರಿಂದ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯೋಜನಕಾರಿಯಾಗಿದೆ. ರಾಗಿಯಲ್ಲಿರುವ ಕ್ಯಾಲ್ಸಿಯಂ ವಿಶೇಷವಾಗಿ ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರಿಗೆ ಪ್ರಯೋಜನಕಾರಿಯಾಗಿದೆ.
ಹೆಚ್ಚಿನ ಕಬ್ಬಿಣದ ಅಂಶ: ರಾಗಿಯು ಕಬ್ಬಿಣಂಶದ ಉತ್ತಮ ಮೂಲವಾಗಿದೆ. ಕಬ್ಬಿಣದ ಕೊರತೆಯ ರಕ್ತಹೀನತೆಯನ್ನು ತಡೆಗಟ್ಟಲು ಇದು ನಿರ್ಣಾಯಕವಾಗಿದೆ. ರಾಗಿಯಿಂದ ತಯಾರಿಸಲಾದ ಆಹಾರ ಸೇವಿಸುವು ಮೂಲಕ ದೇಹವು ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಉತ್ತೇಜಿಸುತ್ತದೆ. ಈ ಕಬ್ಬಿಣಂಶ ಸಮೃದ್ಧವಾಗಿರುವ ಧಾನ್ಯವು ವಿಶೇಷವಾಗಿ ಸಸ್ಯಾಹಾರಿಗಳು, ಗರ್ಭಿಣಿಯರು ಮತ್ತು ಕಬ್ಬಿಣದ ಕೊರತೆಯನ್ನು ಹೊಂದಿರುವವರಿಗೆ ಪ್ರಯೋಜನಕಾರಿಯಾಗಿದೆ,
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: ರಾಗಿಯು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಮಧುಮೇಹಿಗಳಿಗೆ ರಾಗಿ ಉತ್ತಮ ಆಯ್ಕೆಯಾಗಿದೆ. ರಾಗಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಳವಾಗುವುದಿಲ್ಲ. ಅಲ್ಲದೆ ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಮಧುಮೇಹಿಗಳಿಗಂತೂ ಇದು ಉತ್ತಮ ಆಹಾರ ಎಂದರೆ ತಪ್ಪಿಲ್ಲ.
ಉತ್ಕರ್ಷಣ ನಿರೋಧಕಗಳು: ರಾಗಿಯು ಪಾಲಿಫಿನಾಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಇದು ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಳ, ಚರ್ಮದ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)
