Kannada News  /  Lifestyle  /  Rain Proverbs In Kannada Rainy Season In Karnataka Rain In Kannada Traditions Celebration Of Rain News In Kannada Mnk
ಕನ್ನಡ ಮಳೆ ಗಾದೆಗಳು: ಸಂಜೆ ಬಂದ ಮಳೆ, ಸಂಜೆ ಬಂದ ನೆಂಟ ಇಬ್ಬರೂ ಹೋಗಲ್ಲ; 78ಕ್ಕೂ ಹೆಚ್ಚು ಅಪರೂಪದ ಮಳೆಗಾದೆಗಳು ಇಲ್ಲಿವೆ
ಕನ್ನಡ ಮಳೆ ಗಾದೆಗಳು: ಸಂಜೆ ಬಂದ ಮಳೆ, ಸಂಜೆ ಬಂದ ನೆಂಟ ಇಬ್ಬರೂ ಹೋಗಲ್ಲ; 78ಕ್ಕೂ ಹೆಚ್ಚು ಅಪರೂಪದ ಮಳೆಗಾದೆಗಳು ಇಲ್ಲಿವೆ

Rain Proverbs: ಕನ್ನಡ ಮಳೆ ಗಾದೆಗಳು: ಸಂಜೆ ಬಂದ ಮಳೆ, ಸಂಜೆ ಬಂದ ನೆಂಟ ಇಬ್ಬರೂ ಹೋಗಲ್ಲ; 78ಕ್ಕೂ ಹೆಚ್ಚು ಅಪರೂಪದ ಮಳೆಗಾದೆಗಳು ಇಲ್ಲಿವೆ

25 May 2023, 14:11 ISTHT Kannada Desk
25 May 2023, 14:11 IST

Rain Proverbs in Kannada: ನಮ್ಮ ಹಿಂದಿನ ಪೂರ್ವಜರ ಬಾಯಿಂದ ಹೊರಬಂದ ಗಾದೆ ಮಾತುಗಳು ಇಂದಿಗೂ ಪ್ರಸ್ತುತ. ಇದೀಗ ಇನ್ನೇನು ಮಳೆಗಾಲದ ಹೊಸ್ತಿಲಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಹಿರಿಯರು ಹೇಳಿದ ಮಳೆ ಗಾದೆಗಳು ಇಲ್ಲಿವೆ. ಒಂದಲ್ಲ ಎರಡಲ್ಲ ಬರೋಬ್ಬರಿ 78ಕ್ಕೂ ಅಧಿಕ ಗಾದೆಗಳು. ಒಂದು ಬಾರಿ ಓದಿ ಮೆಲುಕು ಹಾಕಿ. ಮಕ್ಕಳಿಗೂ ಕಲಿಸಿ.

ಹಿಂದೆ ಪೂರ್ವಜರು ಮಳೆಯ ನಕ್ಷತ್ರಗಳ ಮೇಲೆ ಹಲವಾರು ಗಾದೆಗಳನ್ನು ಕಟ್ಟಿದ್ದಾರೆ. ಅವು ಅಕ್ಷರಶಃ ಸತ್ಯವಾಗಿವೆ. ವಿಜ್ಞಾನಿಗಳನ್ನು ಮೀರಿ ತಮ್ಮ ಅನುಭವದ ಮೇಲೆ ಹಲವಾರು ಗಾದೆ ಮಾತುಗಳನ್ನು ಹೇಳಿದ್ದಾರೆ. ಮೆಲಕು ಹಾಕುವುದಕ್ಕಾಗಿ ಇಲ್ಲಿ ಕೆಲವನ್ನು ತಿಳಿಸಲಾಗಿದೆ.

ಅಪರೂಪದ ಮಳೆ ಗಾದೆಗಳು ಇಲ್ಲಿವೆ

  • ಮಳೆ ಬಂದರೆ ಕೇಡಲ್ಲ ಮಗ ಉಂಡರೆ ಕೇಡಲ್ಲ.
  • ಮಳೆಗಾಲದ ಮಳೆ ನಂಬಲಾಗದು; ಮನೆ ಹೆಂಡ್ತಿ ನಗೆ ನಂಬಲಾಗದು.
  • ಅಣ್ಣ ಹುಸಿಯಾದರೂ ತಮ್ಮ ತಂಪು ತರದೇ ಹೋಗಲ್ಲ.
  • ಸಂಜೆ ಬಂದ ಮಳೆ, ಸಂಜೆ ಬಂದ ನೆಂಟ ಇಬ್ಬರೂ ಹೋಗಲ್ಲ
  • ದಡ್ಡ ಮಗ ಉಂಡರು ಕೇಡು ಅಡ್ಡ ಮಳೆ ಬಂದರೂ ಕೇಡು.
  • ಮಳೆ ಬಂತು‌ ಮಳೆ ಕೊಡೆ ಹಿಡಿದು ನಡೆ.
  • ಅಣ್ಣಾ ಬಿಟ್ಟರೂ, ತಮ್ಮ ಬಿಡನು. ಪುಷ್ಯ ಪುನರ್ವಸು
  • ಸೋನೆ ಮಳೆ ಸಂಜೆಯಲ್ಲಿ ಹಿಡಿದರೆ ನಿಲ್ಲೋ ಲಕ್ಷಣವೇ ಇಲ್ಲಾ…
  • ಹತ್ತೆ (ಹಸ್ತ) ಮಳೆ ಬಂದು ಚಿತ್ತ ಬಿಸಿಲು ಬಂದು ಮತ್ತೆ ಸ್ವಾತಿ ಜೆಡಿ ಹಿಡಿದರೆ ರೈತ ಕೇಳಿದ ಒಳ್ಳೆ ಬೆಳೆ ಆಗುತ್ತೆ.
  • ಮಳೆ ಬರೋದನ್ನ, ಸಿರಿ ಬರೋದನ್ನ ಪತ್ತೆ ಹಚ್ಚೊಕಾಗಲ್ಲ.
  • ಪೂರ್ವಾಷಾಢ, ಉತ್ತರಾಷಾಢ ಬೇಡವೇ ಬೇಡ.

ಅಶ್ವಿನಿ

  • ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು,
  • ಅಶ್ವಿನಿ ಸಸ್ಯ ನಾಶಿನಿ
  • ಅಶ್ವಿನಿ ಸನ್ಯಾಸಿನಿ
  • ಅಶ್ವಿನಿ ಆದ್ರೆ ಶಿಶುವಿಗೆ ಹಾಲಿಲ್ಲ

ಭರಣಿ

  • ಭರಣಿ ಮಳೆ ಧರಣಿ ಬೆಳೆ
  • ಭರಿಣಿ ಬಂದ್ರ ದರಿಣಿ ಬೆಳೀತದ,
  • ಭರಣಿ ಸುರಿದರೆ ಧರಣಿ ಬದುಕೀತು,
  • ಭರಣಿ ಬಂದರೆ ಧರಣಿ ತಣಿಯುತ್ತೆ.
  • ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ,
  • ಭರಣಿ ಬಂದ್ರೆ ಧರಣಿ ಎಲ್ಲಾ ಹಸಿರು.
  • ಭರಣಿ ಮಳೆ ಧರಣಿ ತಂಪು
  • ಭರಣಿ ಮಳೆ ಧರಣಿ ಎಲ್ಲಾ ಆಳ್ತು

ಕೃತಿಕಾ

  • ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು

ರೋಹಿಣಿ

  • ರೋಹಿಣಿ ಮಳೆ ಓಣಿಯೆಲ್ಲಾ ಕೆಸರು
  • ರೋಹಿಣಿ ಮಳೆಗೆ ಓಣ್ಯೆಲ್ಲಾ ಜೋಳ

ಮೃಗಶಿರ

  • ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು.
  • ಮೃಗಶಿರಾ ಮಳೆಯಲಿ ಗಿಡ ಮುರಿದು ನೆಟ್ಟರೂ ಬದುಕುವುದು.
  • ಮೃಗಶಿರ ಮಿಂಚಿದರೆ ಮೂರು ಮಳೆ ಇಲ್ಲ.

ಆರಿದ್ರಾ

  • ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ,
  • ಆದರೆ ಆರಿದ್ರಾ, ಇಲ್ವಾದ್ರೆ ದರಿದ್ರ!
  • ಆರಿದ್ರಾ ಮಳೆ ಆರದೆ ಹುಯ್ಯುತ್ತೇ,
  • ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ,
  • ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.
  • ಆರಿದ್ರೆಯಲಿ ಗಿಡ ಆದರೆ ಆದಿತು..

ಪುನರ್ವಸು

  • ಪುನವ೯ಸು ಮಳೆ ಬಂದು ಪಂಚಾಂಗ ಓದಾಯ್ತು, ಎಳೆ ಕರು ರಾಸಾಯ್ತು.

ಪುಷ್ಯ

  • ಪುಷ್ಯ ಮಳೆ ಭಾಷೆ ಕೂಟ್ಟ ಮಳೆ (ತಪ್ಪಿಸುವುದಿಲ್ಲ)
  • ಪುಷ್ಯದಲಿ ನೆಟ್ಟ ಗಿಡ ಪುಟುಗೋಸಿ ಆದೀತು..

ಆಶ್ಲೇಷ

  • ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ
  • ಆಶ್ಲೆ ಮಳೆ ಕೈತುಂಬಾ ಬೆಳೆ
  • ಆಶ್ಲೇಷ ಮಳೆ ಈಸಲಾರದ ಹೊಳೆ.
  • ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು.
  • ಅಸ್ಲೆ ಮಳೆಗೆ ಸಸ್ಲೆ ಬೆಟ್ಟಕ್ಕೆ ನೆಗೀತು
  • ಆಶ್ಲೇಷಾ ಮಳೆಗೆ ಅಂಗಾಲೂ ನೆನೆಯೊಲ್ಲವಂತೆ.
  • ಆಶ್ಲೇಷಾ ಗಿಡಗಳಿಗೆ ಕೊಳೆಬರಿಸುವ ನಂಜಿನ ಮಳೆ.
  • ಅಶ್ಲೆ ಮಳೆ ಹುಯ್ಶಾಲಿ, ಸೋಸಲು ಗಟ್ಟ ಹತ್ತಾಲಿ

ಮಘೇ

  • ಬಂದರೆ ಮಗೆ ಹೋದರೆ ಹೊಗೆ,
  • ಬಂದರೆ ಮಘೆ ಇಲ್ಲದಿದ್ದರೆ ಧಗೆ,
  • ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.
  • ಮಗೆ ಮಳೆ ಮಗೆ ಗಾತ್ರ ಬೀಳ್ತದೆ.
  • ಮಘೇ ಮೊಗೆಬೆಳೆಯುವ ಮಳೆ..
  • ಮಘಮಳೆ ಮೊಗೆದು ಹೊಯ್ಯುವುದು.

ಹುಬ್ಬ

  • ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.
  • ಹುಬ್ಬೆ ಮಳೆ ಅಬ್ಬೇ ಹಾಲು ಉಂಡಂತೆ..
  • ಹುಬ್ಬೆ ಮಳೆ ಅಬ್ಬೆ ಹಾಲು ಕುಡದ್ಹಾಂಗೆ.
  • ಹುಬ್ಬೆ ಮಳೆ ಉಬ್ಬುಬ್ಕೊಂಡು ಹೊಡೆ.
  • ಹುಬ್ಬೆ ಮಳೆ ಉಬ್ಬುಬ್ಬುಕೊಂಡು ಬಂದ್ರು ಗುಬ್ಬಚ್ಚಿ ಪುಕ್ಕ ನೆನಿಲಿಲ್ಲ.

ಉತ್ತರೆ

  • ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.
  • ಉತ್ತರ ಎದುರುತ್ತರದ ಮಳೆ.
  • ಉತ್ತರೆ ಮಳೆಗೆ ಹುತ್ತದಲ್ಲಿರುವ ಹಾವೆಲ್ಲಾ ಹೊರಗೆ.
  • ಉತ್ತರಿ ಬಿತ್ತಿರಿ ಅದು ಬರದಿದ್ದರೆ ನೀವು ಸತ್ತಿರಿ

ಹಸ್ತ

  • ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ
  • ಹಸ್ತಾ ಭಾರಿಸಿದರೆ ಅಷ್ಟೇ..
  • ಹಸ್ತ ಮಳೆ ಎತ್ಲಿಂದಾದ್ರೂ ಬರುತ್ತೆ

ಚಿತ್ತ

  • ಕುರುಡು ಚಿತ್ತೆ ಎರಚಿದತ್ತ ಬೆಳೆ.
  • ಚಿತ್ತಾ ಮಳೆ ವಿಚಿತ್ರ ಬೆಳೆ!
  • ಚಿತ್ತಾ ಚಿತ್ರವಿಚಿತ್ರ ಮಳೆ..
  • ಕುರ್ಡು ಚಿತ್ತೆ ಎತ್ಲಾಗ ಬಿದ್ದರೂ ಬರುತ್ತೆ.

ಸ್ವಾತಿ

  • ಸ್ವಾತಿ ಮಳೆ ಮುತ್ತಿನ ಬೆಳೆ.
  • ಸ್ವಾತಿ ಮಳೆ ಹೇತೆನೆಂದ್ರೂ ಬಿಡದು.
  • ಸ್ವಾತಿ ಮುತ್ತಿನ ಹನಿಯ ಮಳೆ..
  • ಸ್ವಾತಿ ಮಳೆ ಹೋದ್ರಾ ಇನ್ಯಾತರ ಮಳೆ

ವಿಶಾಖ

  • ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.
  • ವಿಶಾಖ ಹೊಯ್ದರೆ ವಿಷಜಂತುವಿನ ಉಪಟಳ.
  • ವಿಶಾಖೆ ಮಳೆಗೆ ಹುಳವೆಲ್ಲಾ ಸಾಯುತ್ತೆ.

ಅನುರಾಧ

  • ಅನುರಾಧ ಬಂದರೆ ನಮ್ಮ ರಾಗಿ ನಮ್ಮದು.
  • ಅನುರಾಧಾ ಹೊಯ್ದರೆ ರೋಗ ನಿವಾರಣೆ.

ಪೂರ್ವಾಷಾಢ, ಉತ್ತರಾಷಾಢ

  • ಪೂರ್ವಾಷಾಢ, ಉತ್ತರಾಷಾಢ ಬೇಡವೇ ಬೇಡ