ಕನ್ನಡ ಸುದ್ದಿ  /  Lifestyle  /  Rainy Season Before Welcoming Rain Must Have Some Preparation Health Food Home Karnataka Weather News In Kannada Rst

Rainy Season: ಮುಂಗಾರಿನ ಆರಂಭ; ಮಳೆರಾಯನ ಸ್ವಾಗತಕ್ಕೂ ಮುನ್ನ ಇರಲಿ ಒಂದಿಷ್ಟು ಸಿದ್ಧತೆ

Rainy Season: ಮುಂಗಾರಿನ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಮಳೆಗಾಲದಲ್ಲಿ ಮಳೆಯ ಸ್ವಾಗತದ ಖುಷಿಯ ನಡುವೆ ಆರೋಗ್ಯ ಹಾಗೂ ಇತರ ವಿಷಯಗಳ ಕಾಳಜಿಯೂ ಅವಶ್ಯ. ಆ ಕಾರಣಕ್ಕೆ ಮೊದಲೇ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದರಿಂದ ಮಳೆಗಾಲ ಅನಾಹುತಗಳನ್ನು ತಪ್ಪಿಸುವ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

ಮಳೆಗಾಲದ ಆರಂಭಕ್ಕೂ ಮುನ್ನ ಇರಲಿ ಸಿದ್ಧತೆ
ಮಳೆಗಾಲದ ಆರಂಭಕ್ಕೂ ಮುನ್ನ ಇರಲಿ ಸಿದ್ಧತೆ (PTI)

ಕಳೆದ ಕೆಲ ತಿಂಗಳಿನಿಂದ ಭೂಮಿ ಕಾದು ಬೆಂಡಾಗಿದ್ದು, ಮಳೆರಾಯನ ಆಗಮನಕ್ಕಾಗಿ ಎದುರು ನೋಡುವಂತಾಗಿದೆ. ರಾಜ್ಯದ ಕೆಲವೆಡೆ ಮಳೆಯಾಗುತ್ತಿದ್ದರೂ ಬಿಸಿಲಿನ ಧಗೆ ಕಡಿಮೆಯಾಗಿಲ್ಲ. ಮನುಷ್ಯ ಸೇರಿದಂತೆ ಪ್ರಕೃತಿ, ಪ್ರಾಣಿ ಪಕ್ಷಿಗಳು ಮಳೆ ಹನಿ ಭೂಮಿಯನ್ನು ಸ್ಪರ್ಶಿಸುವ ಗಳಿಗೆಗಾಗಿ ಕಾದು ಕುಳಿತಿರುವುದು ಸುಳ್ಳಲ್ಲ. ಮೇ ತಿಂಗಳ ಅಂತ್ಯ, ಜೂನ್‌ ತಿಂಗಳ ಆರಂಭ ಎಂದರೆ ಮುಂಗಾರು ಪ್ರವೇಶಿಸುವ ಕಾಲ. ಮಳೆ ಹನಿ ಕಾದ ಭೂಮಿಯನ್ನು ತಣಿಸಿದಂತೆ ಮನಸ್ಸಿಗೂ ಖುಷಿ ಕೊಡುತ್ತದೆ.

ಆದರೆ ಈ ಖುಷಿ ನಡುವೆ ಮಳೆಗಾಲಕ್ಕೆ ಒಂದಿಷ್ಟು ಸಿದ್ಧತೆ ಬೇಕೇಬೇಕು. ಮಳೆ ಹನಿಸುವ ಖುಷಿಯೊಂದಿಗೆ ಗುಡುಗು, ಸಿಡಿಲು ಭಯವೂ ಜೊತೆಯಾಗುತ್ತದೆ. ಇದರೊಂದಿಗೆ ಸೊಳ್ಳೆ, ನೊಣಗಳು ಹೆಚ್ಚುವ ಕಾರಣ ಕಾಯಿಲೆಗಳೂ ಹರಡುವುದು ಹೆಚ್ಚು. ಅಲ್ಲದೆ ಅಕಾಲಿಕ ಸುರಿಯುವ ಮಳೆಯಲ್ಲಿ ನೆನೆಯುವುದರಿಂದ ಜ್ವರ, ನೆಗಡಿ ಕಾಣಿಸಬಹುದು. ಮಕ್ಕಳಿಗೂ ಶಾಲಾರಂಭವಾಗುವ ಕಾರಣ ಸಿದ್ಧತೆ ಅವಶ್ಯ. ಹಿರಿಯರ ಆರೋಗ್ಯದಲ್ಲೂ ವ್ಯತ್ಯಯವಾಗುವ ಕಾರಣ ಅವರ ಕುರಿತು ಕಾಳಜಿ ಬೇಕು. ಇದರೊಂದಿಗೆ ಮನೆ ಸುತ್ತಲಿನ ಪರಿಸರದ ಸ್ವಚ್ಛತೆಯೂ ಅಗತ್ಯ.

ಹೀಗಿರಲಿ ಮಕ್ಕಳ ಸಿದ್ಧತೆ

* ಜೂನ್‌ ತಿಂಗಳ ಆರಂಭದಲ್ಲಿ ಮಕ್ಕಳನ್ನು ಶಾಲೆಯೊಂದಿಗೆ, ಮಳೆರಾಯನೂ ಸ್ವಾಗತಿಸುತ್ತಾನೆ. ಹಾಗಾಗಿ ಮಕ್ಕಳಿಗೆ ಸೂಕ್ತ ಎನ್ನಿಸುವ ಛತ್ರಿ ಅಥವಾ ರೈನ್‌ಕೋಟ್‌ ತಂದಿರಿಸಿಕೊಳ್ಳುವುದು ಅವಶ್ಯ. ಇದರೊಂದಿಗೆ ಮಳೆ ನೀರು ಒಳ ಹೋಗದಂತಹ ಬ್ಯಾಗ್‌ ತರುವುದೂ ಅವಶ್ಯ.

* ಮಕ್ಕಳಿಗೆ ಮಳೆಯಲ್ಲಿ ನೆನೆಯುವುದರಿಂದಾಗುವ ಆರೋಗ್ಯ ಸಮಸ್ಯೆಯನ್ನು ತಿಳಿಸಬೇಕು. ಜೊತೆಗೆ ಶಾಲೆಯಲ್ಲಿ ಅಥವಾ ಶಾಲೆಗೆ ಹೋಗಿ, ಬರುವಾಗ ಗುಡುಗು, ಸಿಡಿಲು ಕಾಣಿಸಿದರೆ ಮರ, ಗಿಡಗಳ ಕೆಳಗೆ ನಿಲ್ಲದಂತೆ ಸೂಚನೆ ನೀಡಬೇಕು.

* ಮಳೆ, ಗುಡುಗು, ಸಿಡಿಲಿನ ಸಮಯದಲ್ಲಿ ಕರೆಂಟ್‌ ಲೈನ್‌ ಅಥವಾ ವಿದ್ಯುತ್‌ ಸಂಬಂಧಿಸಿದ ವಸ್ತುಗಳ ಬಳಿ ನಿಲ್ಲದಂತೆ ತಿಳಿಸಿ.

* ಮಳೆಗಾಲದಲ್ಲಿ ಮಕ್ಕಳಿಗೆ ಕುದಿಸಿ ಆರಿಸಿದ ನೀರನ್ನೇ ಕುಡಿಯಲು ತಿಳಿಸಿ.

* ಸಾಧ್ಯವಾದಷ್ಟು ಬಿಸಿ ಆಹಾರವನ್ನೇ ಸೇವಿಸಲು ಹೇಳಿ. ಶಾಲೆಗೆ ಸಾಧ್ಯವಾದಷ್ಟು ಹಾಟ್‌ಬಾಕ್ಸ್‌ ಕಳುಹಿಸಿ.

* ಮಳೆಗಾಲದಲ್ಲಿ ಮಕ್ಕಳನ್ನು ಒಬ್ಬರೇ ಶಾಲೆ ಅಥವಾ ಹೊರಗಡೆ ಕಳುಹಿಸಬೇಡಿ. ನದಿ, ಹಳ್ಳ, ರಸ್ತೆ ಚರಂಡಿಯ ಸಮೀಪ ಮಕ್ಕಳು ತಿರುಗಾಡದಂತೆ ನೋಡಿಕೊಳ್ಳಿ.

* ರಸ್ತೆ ಬದಿ ಆಹಾರಗಳನ್ನು ತಿನ್ನದಂತೆ ಕಟ್ಟು ನಿಟ್ಟಾಗಿ ಹೇಳಿ.

ಹೀಗಿರಲಿ ಹಿರಿಯರ ಆರೈಕೆ

* ಮಳೆಗಾಲದಲ್ಲಿ ತಂಪಿನ ವಾತಾವರಣದ ಕಾರಣದಿಂದ ಹಿರಿಯರಲ್ಲಿ ಆರೋಗ್ಯ ಸಮಸ್ಯೆ ಕಾಣಿಸುವುದು ಹೆಚ್ಚು. ಆ ಕಾರಣಕ್ಕೆ ಸಾಧ್ಯವಾದಷ್ಟು ಅವರ ದೇಹ ಬೆಚ್ಚಗಿರುವಂತೆ ನೋಡಿಕೊಳ್ಳಿ.

* ಮಳೆಗಾಲಕ್ಕೆ ಹೊಂದುವ ಸ್ವೆಟರ್‌ ಕೊಡಿಸಿ.

* ಮಳೆಗಾಲದಲ್ಲಿ ಮನೆಯ ಒಳಗೂ ಸಾಕ್ಸ್‌ ಹಾಕಿಕೊಂಡಿರಲು ತಿಳಿಸಿ.

* ಯಾವುದೇ ಕಾರಣಕ್ಕೂ ಮಳೆಯಲ್ಲಿ ನೆನೆಯದಂತೆ ನೋಡಿಕೊಳ್ಳಿ.

* ಇಳಿ ಸಂಜೆಯ ಹೊತ್ತಿನಲ್ಲಿ ವಾಕಿಂಗ್‌ ಹೋಗುವುದನ್ನು ತಡೆಯಿರಿ.

* ಸಾಧ್ಯವಾದಷ್ಟು ಬಿಸಿ ಆಹಾರವನ್ನೇ ನೀಡಿ.

* ಮಳೆಗಾಲಕ್ಕೆ ಹೊಂದುವ ರೇನ್‌ಕೋಟ್‌ ತಂದು ಕೊಡಿ.

* ಕುದಿಸಿ ಆರಿಸಿದ ನೀರನ್ನೇ ಕುಡಿಯಲು ಹೇಳಿ.

ವಯಸ್ಕರಲ್ಲೂ ಇರಲಿ ಎಚ್ಚರ

* ಮಳೆಗಾಲಕ್ಕೆ ಹಿರಿ, ಕಿರಿಯರು ಮಾತ್ರವಲ್ಲ, ವಯಸ್ಕರು ಸಿದ್ಧರಾಗಬೇಕು. ಮಳೆ ಬರಲು ಇನ್ನೂ ಸಮಯವಿದೆ ಎಂದುಕೊಂಡು ಛತ್ರಿ ಅಥವಾ ರೇನ್‌ಕೋಟ್‌ ಖರೀದಿಸದೇ ಇರುವುದು ಸರಿಯಲ್ಲ. ಮೊದಲ ಮಳೆಯ ಖುಷಿಯಲ್ಲಿ ನೆನೆಯುವುದು, ಛತ್ರಿ, ರೇನ್‌ಕೋಟ್‌ ಇಲ್ಲದೆ ಹೊರ ಹೋಗುವುದು ಇಂತಹ ಹವ್ಯಾಸಕ್ಕೆ ಕಡಿವಾಣ ಹಾಕಿ.

* ಮಳೆಗಾಲದಲ್ಲಿ ಬೆಚ್ಚಗಿನ ಬೋಂಡಾ, ಬಜ್ಜಿ, ಪಾನಿಪಾರಿ ತಿನ್ನಬೇಕು ಎನ್ನಿಸುವುದು ಸಹಜ. ಆದರೆ ಯಾವುದೇ ಕಾರಣಕ್ಕೆ ಈ ಆಹಾರಕ್ಕೆ ಬಾಯಿ ಚಪಲ ತೋರಿಸಬೇಡಿ. ಕರಿದ ಪದಾರ್ಥಗಳು ಮಳೆಗಾಲದಲ್ಲಿ ಆರೋಗ್ಯ ಕೆಡಿಸುವುದರಲ್ಲಿ ಅನುಮಾನವಿಲ್ಲ.

* ಗಾಯವಾಗದಂತೆ ನೋಡಿಕೊಳ್ಳಿ. ಮಳೆಗಾಲದಲ್ಲಿ ಗಾಯವಾದರೆ ಬೇಗನೆ ವಾಸಿಯಾಗುವುದಿಲ್ಲ. ಆ ಕಾರಣಕ್ಕೆ ಸಾಧ್ಯವಾದಷ್ಟು ಗಾಯವಾಗದಂತೆ ನೋಡಿಕೊಳ್ಳುವುದು ಅವಶ್ಯ. ಇದು ಹಿರಿಯರು ಹಾಗೂ ಮಕ್ಕಳಿಗೂ ಅನ್ವಯವಾಗುತ್ತದೆ.

ಮನೆಯ ಪರಿಸರ ಸ್ವಚ್ಛವಾಗಿರಲಿ

ಮಳೆಗಾಲದಲ್ಲಿ ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯ. ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಿ. ನೀರು ನಿಲ್ಲುವಂಥ ಪಾಟ್‌, ತೆಂಗಿನಕಾಯಿ ಸಿಪ್ಪೆ, ಡಬ್ಬಿಗಳನ್ನು ಖಾಲಿ ಮಾಡಿಸಿ. ನೀರು ಸರಾಗವಾಗಿ ಹರಿದು ಹೋಗುವಂತೆ ದಾರಿ ಮಾಡಿಕೊಡಿ. ಕಿಟಕಿ, ಬಾಗಿಲುಗಳು ಭದ್ರವಾಗಿವೆಯೇ ನೋಡಿಕೊಳ್ಳಿ. ಸೊಳ್ಳೆಗಳು ಹುಟ್ಟದಂತೆ ನೋಡಿಕೊಳ್ಳುವುದು ಬಹಳ ಅವಶ್ಯ. ಮಳೆಗಾಲದಲ್ಲಿ ಸೊಳ್ಳೆಗಳಿಂದ ಮಲೇರಿಯಾ ಡೆಂಗ್ಯುವಿನಂತಹ ಕಾಯಿಲೆಗಳು ಹರಡುವುದು ಹರಡುವುದು ಜಾಸ್ತಿ.