Child Health: ನಿಮ್ಮ ಕಂದಮ್ಮನಿಗಿದು ಮೊದಲ ಮಳೆಗಾಲವೇ; ಮಗುವಿಗೆ ಸ್ನಾನ ಮಾಡಿಸುವುದರಿಂದ ಆರೋಗ್ಯ ರಕ್ಷಣೆವರೆಗೆ ಹೀಗಿರಲಿ ಆರೈಕೆ
Rain and Infants Health ಮುಂಗಾರು ಆರಂಭವಾಗಿದೆ. ರಾಜ್ಯದ ಕೆಲವೆಡೆ ಮಳೆ ಜೋರಾಗಿದೆ. ಮಳೆ ಆರಂಭವಾದ ಕೂಡಲೇ ಆರೋಗ್ಯ ಸಮಸ್ಯೆಗಳೂ ಆರಂಭವಾಗುತ್ತದೆ. ಅದರಲ್ಲೂ ಹಸುಗೂಸುಗಳು ಹಾಗೂ ಎಳೆಯ ಕಂದಮ್ಮಗಳ ಮೇಲೆ ಮಳೆಗಾಲದಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು. ಎಳೆಯ ಕಂದಮ್ಮಗಳನ್ನು ಸ್ನಾನ ಮಾಡಿಸುವುದು ಹಾಗೂ ಇತರ ಚಟುವಟಿಕೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಚಿಟಪಟ ಚಿರಿಚಿರಿ ಮಳೆಯೊಂದಿಗೆ ಧಾರಾಕಾರ ಮಳೆಯೂ ಆರಂಭವಾಗಿದ್ದು, ಬಿಸಿಲಿನ ದಾಹವನ್ನು ಕೊಂಚ ನೀಗಿಸಿದೆ. ಮಳೆ ಪ್ರತಿಯೊಬ್ಬರಲ್ಲೂ ಹರುಷ ತರುವುದು ಸುಳ್ಳಲ್ಲ. ಮಳೆಯನ್ನು ನಾವೆಲ್ಲರೂ ಸಂಭ್ರಮದಿಂದ ಎದುರುಗೊಳ್ಳುತ್ತೇವೆ. ಆದರೆ ಮೊದಲ ಬಾರಿ ಮಗುವನ್ನು ಪಡೆದ ಪೋಷಕರು ಮಳೆಗಾಲದಲ್ಲಿ ಮಗುವಿನ ಕಾಳಜಿ ವಿಚಾರದಲ್ಲಿ ಕೊಂಚ ಗೊಂದಲದಲ್ಲಿರುವುದು ಸಹಜ. ಅಲ್ಲದೆ ಮಳೆಯು ಅವರಲ್ಲಿ ಆತಂಕದ ಛಾಯೆಯನ್ನೂ ಹುಟ್ಟಿಸಬಹುದು. ಅತಿಯಾದ ಮಳೆ, ಸೊಳ್ಳೆಗಳ ಕಾಲ ಹಾಗೂ ಸೋಂಕು ಉಂಟು ಮಾಡುವ ಸೂಕ್ಷ್ಮಾಣು ಜೀವಿಗಳು ಮಗುವಿನ ಆರೋಗ್ಯಕ್ಕೆ ಹಾನಿ ಮಾಡುವುದರಲ್ಲಿ ಸಂಶಯವಿಲ್ಲ. ಆ ಕಾರಣಕ್ಕೆ ಮಳೆಗಾಲದಲ್ಲಿ ಕಂದಮ್ಮನ ಆರೋಗ್ಯದ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕು. ಅಲ್ಲದೆ ಮಗುವಿನ ಆರೋಗ್ಯ ರಕ್ಷಣೆ ಪೋಷಕರ ಗುರಿಯಾಗಿರಬೇಕು.
ಮಳೆಗಾಲದಲ್ಲಿ ಮಗುವಿನೊಂದಿಗೆ ಮನೆಯೊಳಗೆ ಹೀಗಿರಿ
ಈ ವಿಷಯವಾಗಿ ಹಿಂದೂಸ್ತಾನ್ ಟೈಮ್ಸ್ ಲೈಫ್‌ಸ್ಟೈಲ್‌ಗೆ ಸಂದರ್ಶನ ನೀಡಿದ ಲುಲ್ಲಾನಗರದ ಮದರ್‌ಹುಡ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ. ಶಾಲಿನಿ ವಿಜಯ್ ʼಈ ಋತುವಿನಲ್ಲಿ ನೀರಿನಿಂದ ಹರಡುವ ಸೋಂಕುಗಳು ಹೆಚ್ಚುವ ಕಾರಣ ನಿಮ್ಮ ಶಿಶು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಪರಿಣಾಮವಾಗಿ ಮೊದಲ ಬಾರಿ ನೀವು ಮೊದಲ ಬಾರಿ ಮಗು ಪಡೆದಿದ್ದರೆ, ನಿಮ್ಮ ಮಗುವನ್ನು ಮಾನ್ಸೂನ್‌ನಿಂದ ರಕ್ಷಿಸಲು ಹೆಚ್ಚಿನ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಮಳೆಗಾಲದಲ್ಲಿ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವ ಜೊತೆಗೆ ಇತರ ಮಕ್ಕಳನ್ನು ಮಗುವಿನಿಂದ ದೂರ ಇಡುವವರೆಗೆ ಹಲವು ವಿಷಯದಲ್ಲಿ ಎಚ್ಚರ ವಹಿಸಬೇಕು.
ಮೊದಲ ಬಾರಿ ಮಗು ಪಡೆದ ಪೋಷಕರು ಮಳೆಗಾಲದಲ್ಲಿ ಕೆಲವು ಶಿಶು ಆರೈಕೆ ಸಲಹೆಗಳನ್ನು ಪಾಲಿಸಲು ಅವರ ತಿಳಿಸಿದ್ದಾರೆ. ಆ ಸಲಹೆಗಳು ಹೀಗಿವೆ.
ಮಳೆಯಿಂದ ಸೂಕ್ತ ರಕ್ಷಣೆ ಪಡೆಯಿರಿ
ಮಳೆಗಾಲದಲ್ಲಿ ಮಗುವಿನೊಂದಿಗೆ ಹೊರ ಹೋಗುವಾಗ ಅವರಿಗೆ ರೇನ್‌ಕೋಟ್, ಸಾಕ್ಸ್, ಶೂ ಎಲ್ಲವನ್ನು ಸರಿಯಾಗಿ ಹಾಕಿದ್ದೀರಾ ಗಮನಿಸಿ. ಅವರ ಕಿವಿಗಳಿಗೆ ಹಾಕಿ ತಾಕದಂತೆ ಮುಚ್ಚುವುದು ಬಹಳ ಮುಖ್ಯವಾಗುತ್ತದೆ. ಅತಿಯಾದ ಬೇಸಿಗೆಗೆ ಒಗ್ಗಿಕೊಂಡಿದ್ದ ಮಗು ಚಳಿಗಾಳಿ, ಮಳೆಗೆ ಒಗ್ಗಿಕೊಳ್ಳಲು ಕಷ್ಟ ಪಡಬಹುದು. ಮಗುವಿಗೆ ಹತ್ತಿ ಬಟ್ಟೆಯನ್ನೇ ತೊಡಸಿ, ಆದರೆ ಅದರ ಮೇಲೆ ಉಣ್ಣೆಯ ಸ್ವೆಟರ್ ಅಥವಾ ಜಾಕೆಟ್ ತೊಡಿಸಲು ಮರೆಯದಿರಿ. ಮಗುವಿಗೆ ತೊಡಿಸುವ ಬಟ್ಟೆ ಸಂಪೂರ್ಣವಾಗಿ ಒಣಗಿದೆಯೇ ಎಂಬುದನ್ನು ನೋಡಲು ಮರೆಯದಿರಿ. ಮಳೆಗಾಲದಲ್ಲಿ ಬಟ್ಟೆ ತೇವಾಂಶವನ್ನು ಹೀರಿಕೊಳ್ಳುತ್ತದೆ, ಇದು ಶೀಲಿಂಧ್ರ ರೋಗಗಳಿಗೆ ಕಾರಣವಾಗಬಹುದು.
ಒದ್ದೆ ಡಯಾಪರ್ ಬಳಕೆ ಬೇಡ
ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ಒದ್ದೆ ಡಯಾಪರ್‌ನಲ್ಲಿ ಮಗು ಇರುವಂತೆ ಮಾಡಬೇಡಿ. ಒಂದು ನಿಮಿಷವೂ ಕೂಡ ಒದ್ದೆ ಡಯಾಪರ್‌ನಲ್ಲಿ ಇರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮಳೆಗಾಲದಲ್ಲಿ ಮಗು ಆಗಾಗ ಮೂತ್ರ ವಿಸರ್ಜನೆ ಮಾಡಬಹುದು. ಇದು ಚರ್ಮದ ದದ್ದುಗಳಿಗೆ ಕಾರಣವಾಗಬಹುದು. ಬಟ್ಟೆಗಳು ಕೂಡ ಸ್ವಲ್ಪ ಒದ್ದೆಯಾಗಿದ್ದರೂ ಮಕ್ಕಳಿಗೆ ಕಿರಿಕಿರಿ ಉಂಟು ಮಾಡಬಹುದು, ಮಾತ್ರವಲ್ಲ ಅವರ ಅವರಿಗೆ ಚಳಿಯಾಗಬಹುದು. ಆ ಕಾರಣಕ್ಕೆ ಮಗುವಿನ ಬೆಡ್‌ಶೀಡ್, ಹಾಸುವ ಬಟ್ಟೆಗಳು ಒದ್ದೆಯಾಗಿದ್ದರೆ ತಕ್ಷಣಕ್ಕೆ ಬದಲಿಸಲು ಮರೆಯದಿರಿ. ಮಕ್ಕಳಿಗೆ ಕೆಲ ಹೊತ್ತು ಡಯಾಪರ್ ಅಥವಾ ಬಟ್ಟೆ ಇಲ್ಲದೆ ಇರಿಸಬಹುದು.
ಮಳೆಗಾಲದಲ್ಲಿ ಕಾಡುವ ರೋಗಗಳ ಮೇಲಿರಲಿ ಗಮನ
ಜ್ವರ, ಮೈಕೈನೋವು, ಸೀನುವಿಕೆ ಮತ್ತು ಇತರ ರೋಗಲಕ್ಷಣಗಳು ಮಾನ್ಸೂನ್ ಸಂಬಂಧಿತ ಕಾಯಿಲೆಗಳ ಲಕ್ಷಣಗಳಾಗಿವೆ ಹಾಗೂ ಇವು ವೈರಲ್ ಸೋಂಕುಗಳ ಬೆಳವಣಿಗೆಯನ್ನು ಸಹ ಸೂಚಿಸಬಹುದು. ಶೀಘ್ರದಲ್ಲೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮತ್ತು ಅನಾರೋಗ್ಯದ ಆರಂಭಿಕ ಹಂತದಲ್ಲಿರುವಾಗಲೇ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ.
ಸೊಳ್ಳೆಗಳಿಂದ ನಿಮ್ಮನ್ನು ಮಗುವನ್ನು ರಕ್ಷಿಸಿಕೊಳ್ಳಿ
ಸೊಳ್ಳೆ ಕಡಿತವು ನವಜಾತ ಶಿಶುವಿಗೆ ಹಲವು ರೀತಿಯಲ್ಲಿ ತೊಂದರೆಗಳನ್ನು ಉಂಟು ಮಾಡಬಹುದು ಹಾಗೂ ದೇಹದ ಹಲವು ಜಾಗಗಳಲ್ಲಿ ಕೆಂಪಾಗಿ ಚರ್ಮ ಊದಿಕೊಳ್ಳಬಹುದು. ನಿಮ್ಮ ಮಗುವಿನ ಮಂಚಕ್ಕೆ ಸೊಳ್ಳೆ ಪರದೆಯನ್ನು ಅಳವಡಿಸಲು ಮರೆಯದಿರಿ. ಮುಸ್ಸಂಜೆಯ ಸಮಯದಲ್ಲಿ ಸಂಪೂರ್ಣವಾಗಿ ಮುಚ್ಚಿದ ಉಡುಪುಗಳನ್ನು ಧರಿಸಿ. ನೈಸರ್ಗಿಕ ಅಂಶವಿರುವ ಸೊಳ್ಳೆ ನಿವಾರಕಗಳಿದ್ದರೆ, ಅದನ್ನು ಬಳಸಬಹುದು.
ಮಳೆಗಾಲದಲ್ಲಿ ಮಗುವಿನ ಸ್ನಾನ
ʼಮಳೆಗಾಲದಲ್ಲಿ ಮಗುವಿನ ಪ್ರತಿನಿತ್ಯ ಸ್ನಾನ ಮಾಡಿಸಬೇಕು ಎಂಬುದೇನಿಲ್ಲ. ಯಾಕೆಂದರೆ ಮಗು ಮನೆಯೊಳಗೆ ಇರುತ್ತದೆ, ಮೈ ಬೆವರುವುದು ಕಡಿಮೆ. ಹಾಗಾಗಿ ಮಳೆಗಾಲದಲ್ಲಿ ಪ್ರತಿ ವಾರ ಎರಡದಿಂದ ಮೂರು ಬಾರಿ ಸ್ನಾನ ಮಾಡಿಸಿದರೆ ಸಾಕು. ನಿಮ್ಮ ಮನೆಯಲ್ಲಿ ಬೇರೆ ಮಕ್ಕಳು ಅಥವಾ ವಯಸ್ಕರು ಹೊರಗೆ ಹೋಗಿ ಬಂದರೆ ಸ್ನಾನ ಮಾಡಿದ ಬಳಿಕ ಮಗುವನ್ನು ಮುಟ್ಟಲು ಬಿಡಿ. ಅದರಲ್ಲೂ ಅವರು ಬಿಸಿನೀರಿನಿಂದ ಸ್ನಾನ ಮಾಡುವುದು ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ನವಜಾತ ಶಿಶುಗಳು ಹಾಗೂ ಎಳೆಯ ಕಂದಮ್ಮನ ಆರೋಗ್ಯದ ವಿಚಾರದಲ್ಲಿ ಪೋಷಕರು ಸಾಕಷ್ಟು ಎಚ್ಚರ ವಹಿಸಬೇಕು. ಮಗುವಿನೊಂದಿಗೆ ತಾಯಿಯ ಆರೋಗ್ಯವೂ ಬಹಳ ಮುಖ್ಯವಾಗುತ್ತದೆ.