ಮಳೆಗಾಲದಲ್ಲಿ ಹಲ್ಲು ಜುಂ ಅಂತಿದ್ರೆ ಹೀಗೆ ಮಾಡಿ; ಹಲ್ಲುಗಳ ಆರೋಗ್ಯ ಕಾಪಾಡಲು ಬೆಸ್ಟ್‌ ಟಿಪ್ಸ್ ಇವು
ಕನ್ನಡ ಸುದ್ದಿ  /  ಜೀವನಶೈಲಿ  /  ಮಳೆಗಾಲದಲ್ಲಿ ಹಲ್ಲು ಜುಂ ಅಂತಿದ್ರೆ ಹೀಗೆ ಮಾಡಿ; ಹಲ್ಲುಗಳ ಆರೋಗ್ಯ ಕಾಪಾಡಲು ಬೆಸ್ಟ್‌ ಟಿಪ್ಸ್ ಇವು

ಮಳೆಗಾಲದಲ್ಲಿ ಹಲ್ಲು ಜುಂ ಅಂತಿದ್ರೆ ಹೀಗೆ ಮಾಡಿ; ಹಲ್ಲುಗಳ ಆರೋಗ್ಯ ಕಾಪಾಡಲು ಬೆಸ್ಟ್‌ ಟಿಪ್ಸ್ ಇವು

ಮಳೆಗಾಲದಲ್ಲಿ ಬಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಹಲ್ಲಿನ ಆರೋಗ್ಯ ಉತ್ತಮವಾಗಿದ್ದರೆ, ದೇಹದ ಆರೋಗ್ಯವೇ ಉತ್ತಮವಾಗಿರುತ್ತದೆ. ಆರ್ದ್ರ ವಾತಾವರಣದಲ್ಲಿ ನಮ್ಮ ಗಮನಕ್ಕೆ ಬರದ ಕೆಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಅವುಗಳ ಬಗ್ಗೆ ನಿಮಗೆ ಎಚ್ಚರ ಇರಬೇಕು.

ಮಳೆಗಾಲದಲ್ಲಿ ಹಲ್ಲು ಜುಂ ಅಂತಿದ್ರೆ ಹೀಗೆ ಮಾಡಿ
ಮಳೆಗಾಲದಲ್ಲಿ ಹಲ್ಲು ಜುಂ ಅಂತಿದ್ರೆ ಹೀಗೆ ಮಾಡಿ (Photo by engin akyurt on Unsplash)

ಮಳೆಗಾಲ ಬಂತು ಅಂದ್ರೆ ಬಿಸಿ ಬಿಸಿ ಚಹಾ, ಕಾಫಿ ಅಥವಾ ಗರಿ ಗರಿ ತಿಂಡಿಗಳಿಗಾಗಿ ಮನಸು ಹಾತೊರೆಯುತ್ತದೆ. ಮಳೆಯ ಚಳಿಗೆ ಹೊರಗಿಂದ ಬಂದ ಬಳಿಕ ಹೊಗೆಯಾಡುವ ಕಾಫಿಯನ್ನು ಸವಿಯುವುದೇ ಖುಷಿ. ನಿತ್ಯ ಒಂದೇ ಬಗೆಯ ಕಾಫಿ ಅಥವಾ ಟೀ ಕುಡಿದರೂ ಸಾಕು ಎನಿಸುವುದಿಲ್ಲ. ಕೆಲವೊಮ್ಮೆ ಬಾಯಿಗೆ ಮತ್ತು ಮನಸ್ಸಿಗೆ ಹಿತ ಎನಿಸುವ ಬಿಸಿ ಆಹಾರಗಳನ್ನು ಸೇವಿಸಲು ನಿಮ್ಮ ಬಾಯಿ ಅವಕಾಶ ಕೊಡುವುದಿಲ್ಲ. ಆಹಾರವನ್ನು ಬಾಯಿಗಿಟ್ಟಾಗ ಹಲ್ಲು ಜುಂ ಅನ್ನುತ್ತದೆ. ಇದರರರ್ಥ ನೀವು ಬಾಯಿಯ ಆರೋಗ್ಯದ ಬಗ್ಗೆ ಇನ್ನಷ್ಟು ಗಮನ ಕೊಡಬೇಕು ಎಂಬುದಾಗಿದೆ.

ಮಳೆಗಾಲದಲ್ಲಿ ಬಾಯಿ ಮತ್ತು ಹಲ್ಲಿನ ಆರೋಗ್ಯಕ್ಕೆ ಏನೂ ಸಮಸ್ಯೆಯಾಗುವುದಿಲ್ಲ ಎಂದುಕೊಂಡರೆ ನಿಮ್ಮ ಕಲ್ಪನೆ ತಪ್ಪು. ಹಲ್ಲಿನ ಸೆನ್ಸೇಷನ್‌ ಅನುಭವವಾದರೆ, ನೀವು ಬಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಹಲ್ಲಿನ ಕೊಳೆತ ಮತ್ತು ಒಸಡು ಕಾಯಿಲೆ ಸಮಸ್ಯೆ ಕಾಣಿಸಿಕೊಂಡರೆ ಹಲ್ಲಿನ ಆರೈಕೆಯಲ್ಲಿ ಏರುಪೇರಾಗಿದೆ ಎಂದರ್ಥ. ಹೀಗಾಗಿ ನೀವು ನಿಮ್ಮ ದೇಹದ ನೈರ್ಮಲ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಹಾಗೆ ಬಾಯಿಯ ಕಾಳಜಿಗೂ ಸಮಯ ಕೊಡಬೇಕಾಗುತ್ತದೆ.

ಹಲ್ಲು ಮತ್ತು ಒಸಡುಗಳ ಸೂಕ್ಷ್ಮತೆಯ ಸಮಸ್ಯೆಗಳಿಂದ ಮುಕ್ತಿ ಪಡೆಯಲು, ಹಲ್ಲುಗಳನ್ನು ಸರಿಯಾಗಿ ಆರೈಕೆ ಮಾಡಬೇಕು. ಮಳೆಗಾಲದಲ್ಲಿ ಬಾಯಿಯ ಆರೋಗ್ಯದ ಕಾಳಜಿಗೆ ಕೆಲವೊಂದು ಸರಳ ಕ್ರಮಗಳನ್ನು ಅನುಸರಿಸಿ.

ಹಲ್ಲುಗಳನ್ನು ನಿತ್ಯ ಬ್ರಷ್ ಮಾಡಿ

ಇದು ನಿರಂತರವಾಗಿ ಬಹುತೇಕರು ಮಾಡುತ್ತಾರೆ. ನಿಯಮಿತವಾಗಿ ಹಲ್ಲುಜ್ಜುವುದು ಬಾಯಿಯ ಆರೋಗ್ಯಕ್ಕೆ ತುಂಬಾ ಮುಖ್ಯ. ಮಳೆಗಾಲದಲ್ಲಿ ಹೆಚ್ಚಿನ ಆರ್ದ್ರತೆಯಿಂದಾಗಿ ಬಾಯಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಹಲ್ಲಿನ ಸೋಂಕಿನ ಅಪಾಯ ಹೆಚ್ಚು. ಇದಕ್ಕಾಗಿ ನಿತ್ಯ ಎರಡು ಬಾರಿ ಹಲ್ಲುಗಳನ್ನು ಬ್ರಷ್ ಮಾಡುವುದು ಒಳ್ಳೆಯದು. ರಾತ್ರಿ ಮಲಗುವ ಮುನ್ನ ಮರೆಯದೆ ಬ್ರಷ್‌ ಮಾಡಿ. ಮಾಂಸಾಹಾರ ಸೇವಿಸಿದ ಬಳಿಕ ಇದು ಅಗತ್ಯ. ನಂಜುನಿರೋಧಕ ಮೌತ್‌ವಾಶ್ ಬಳಸಿದರೆ ಇನ್ನೂ ಒಳ್ಳೆಯದು.

ಒಸಡುಗಳ ಸಮಸ್ಯೆ

ಹೆಚ್ಚಿನ ತೇವಾಂಶದಿಂದಾಗಿ ವಸಡಿನ ಉರಿಯೂತ ಮತ್ತು ರಕ್ತಸ್ರಾವ ಉಂಟಾಗಬಹುದು. ಹೀಗಾಗಿ ಮೃದುವಾದ ಬ್ರಿಸ್ಟಲ್ ಟೂತ್ ಬ್ರಷ್ ಮತ್ತು ಫ್ಲೋರೈಡ್ ಟೂತ್‌ಪೇಸ್ಟ್ ಬಳಸಿಕೊಂಡು ಹಲ್ಲುಗಳನ್ನು ಬ್ರಷ್ ಮಾಡಿ. ಇದು ಉರಿಯೂತ ತಡೆಗಟ್ಟಲು ಸಹಾಯ ಮಾಡುತ್ತದೆ.

ಶಿಲೀಂದ್ರ ಸೋಂಕುಗಳು

ಮಳೆಗಾಲದ ಆರ್ದ್ರ ವಾತಾವರಣಕ್ಕೆ ಬಾಯಿಯಲ್ಲಿ ಶಿಲೀಂಧ್ರಗಳ ಸೋಂಕು ಉಂಟಾಗಬಹುದು. ಹೀಗಾಗಿ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಆಗಾಗ ಬಾಯಿಯನ್ನು ನೀರಿನಿಂದ ಸ್ವಚ್ಛಗೊಳಿಸಿ. ಎರಡು ಗಂಟೆಗೊಮ್ಮೆ ಏನಾದರೂ ಸೇವಿಸಿ.

ಹಲ್ಲುಜ್ಜುವ ಬ್ರಷ್‌ಗಳನ್ನು ಇಡುವ ಕ್ರಮ

ಮಳೆಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಹೆಚ್ಚಿರುತ್ತದೆ. ಹೀಗಾಗಿ ಬ್ರಷ್‌ ಒಣಗಲು ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಗೆ ನಿಮ್ಮ ಬ್ರಷ್ ಕಾರಣವಾಗಬಹುದು. ಹೀಗಾಗಿ ಹಲ್ಲುಜ್ಜುವ ಬ್ರಷ್‌ಗಳನ್ನು ಸ್ವಚ್ಛ ಹಾಗೂ ಶುಷ್ಕ ಸ್ಥಳದಲ್ಲಿ ಇರಿಸಿ. ಗಾಳಿಯಾಡುವ ಸ್ಥಳದಲ್ಲಿಟ್ಟರೆ ಬೇಗ ಒಣಗುತ್ತದೆ. ಟೂತ್ ಬ್ರಷ್ ಕವರ್ ಹಾಕುವುದು ಬೇಡ. ಅದರಿಂದ ತೇವಾಂಶ ಹಾಗೆಯೇ ಉಳಿದುಬಿಡುತ್ತದೆ.

ಶುದ್ಧ ನೀರನ್ನು ಕುಡಿಯಿರಿ

ಮಳೆಗಾಲದಲ್ಲಿ ನಮಗೆ ಅರಿವಿಲ್ಲದಂತೆ ಅತಿಸಾರ ಮತ್ತು ಕಾಲರಾದಂತಹ ನೀರಿನಿಂದ ಹರಡುವ ರೋಗಗಳ ಅಪಾಯ ಹೆಚ್ಚು. ಇದರಿಂದ ಬಾಯಿಯ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಶುದ್ಧ ನೀರನ್ನು ಕುದಿಸಿ ಕುಡಿಯಿರಿ. ಅಥವಾ ಫಿಲ್ಟರ್ ಮಾಡಿದ ನೀರನ್ನು ಮಾತ್ರ ಸೇವನೆ ಮಾಡಿ.

ಸಕ್ಕರೆ ಸೇವನೆ

ಮಳೆಗಾಲದಲ್ಲಿ ಸಿಹಿ ತಿನಿಸುಗಳ ಸೇವನೆ ಹೆಚ್ಚಳವಾದರೆ ಹಲ್ಲು ನೋವಿಗೆ ಕಾರಣವಾಗುತ್ತದೆ. ಹಲ್ಲಿನ ಕುಳಿಗಳನ್ನು ತಪ್ಪಿಸಲು ಸಿಹಿ ತಿನಿಸು ಸೇವನೆಯನ್ನು ಕಡಿಮೆ ಮಾಡಿ.

ಹಲ್ಲಿನ ತಪಾಸಣೆ

ಮೇಲ್ನೋಟಕ್ಕೆ ನಿಮ್ಮ ಬಾಯಿಯ ಆರೋಗ್ಯ ಚೆನ್ನಾಗಿದೆ ಎಂದು ನಿಮಗೆ ಅನಿಸಬಹುದು. ಆದರೆ ವರ್ಷಕೊಮ್ಮೆಯಾದರೂ ದಂತವೈದ್ಯರನ್ನು ಭೇಟಿ ಮಾಡಿ ಮಾಯಿಯ ಆರೋಗ್ಯ ಪರಿಶೀಲಿಸಿ. ಅಗತ್ಯವೆನಿಸಿದರೆ ಹಲ್ಲನ್ನು ಶುಚಿಮಾಡಿಸಿ.

Whats_app_banner