ಅಭಿವೃದ್ಧಿ ಹೆಸರಲ್ಲಿ ವಿದೇಶಕ್ಕೆ ಹೋಗಿ ಮೋಜು ಮಾಡುವ ರಾಜಕಾರಣಿಗಳು ಪಕ್ಕದ ರಾಜ್ಯ ನೋಡಿ ಕಲಿಯುವುದು ಸಾಕಷ್ಟಿದೆ: ರಾಜೀವ ಹೆಗಡೆ ಬರಹ
ತಮಿಳುನಾಡಿನಲ್ಲಿ ಚೆನ್ನೈ ಹೊರತುಪಡಿಸಿ ಕೃಷ್ಣಗಿರಿ, ಧರ್ಮಗಿರಿ, ಸೇಲಂ, ನಾಮಕ್ಕಲ್, ತಿರುಚಿ, ತಂಜಾವೂರು ಸೇರಿದಂತೆ ಅನೇಕ ಕಡೆ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ಆ ರೀತಿ ಇಲ್ಲ. ಅಭಿವೃದ್ಧಿ ಹೆಸರಿನಲ್ಲಿ ವಿದೇಶ ಪ್ರವಾಸ ಹೋಗುವ ರಾಜಕಾರಣಿಗಳು ಪಕ್ಕದ ರಾಜ್ಯ ನೋಡಿ ಕಲಿಯುವುದಿದೆ. (ಬರಹ: ರಾಜೀವ ಹೆಗಡೆ).

ಕರ್ನಾಟಕದಲ್ಲಿ ಎಷ್ಟೋ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಕೆಲವು ಆಮೆಗತಿಯಲ್ಲಿ ಸಾಗುತ್ತಿವೆ, ಇನ್ನೂ ಕೆಲವು ಆರಂಭವಾಗಿಯೇ ಇಲ್ಲ. ರಾಜ್ಯದ ಇತರ ನಗರಗಳಿಂದ ಹೋಲಿಸಿದರೆ ಬೆಂಗಳೂರು ಬಹಳ ಅಭಿವೃದ್ಧಿ ಹೊಂದಿದೆ. ಈ ವಿಚಾರವಾಗಿ ಲೇಖಕ ರಾಜೀವ ಹೆಗಡೆ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಬರಹವನ್ನು ಯಥಾವತ್ತು ಇಲ್ಲಿ ಮರುಪ್ರಕಟಿಸಲಾಗಿದೆ.
ಅಭಿವೃದ್ಧಿ ಎಂದಾಕ್ಷಣ ಬೆಂಗಳೂರು, ಚೆನ್ನೈ, ಮುಂಬೈ ಎನ್ನುವ ಸಾಮಾನ್ಯ ಆಲೋಚನೆಯನ್ನು ಆಡಳಿತ ನಡೆಸುವವರು ಅಂದುಕೊಳ್ಳುತ್ತಾರೆ. ಈ ರಾಜಧಾನಿ ನಗರಗಳ ಸುತ್ತ ಆಡಳಿತದಲ್ಲಿರುವವರು ಖರೀದಿಸಿಟ್ಟ ಬೇನಾಮಿ ಆಸ್ತಿಗಳಿಗೆ ಬೆಲೆ ತಂದುಕೊಳ್ಳಲು ಇಂತಹ ಅಡ್ಡ ಕಸುಬು ಮಾಡುತ್ತಾರೆ ಎನ್ನುವ ಮಾತುಗಳಿವೆ. ಆದರೆ ಈ ಅಡ್ಡ ಕಸುಬನ್ನು ಮಾಡುತ್ತಿಲ್ಲ ಎಂದು ಸಾಬೀತು ಮಾಡಲು ಪ್ರಯತ್ನಿಸಿದ ರಾಜಕಾರಣಿಗಳ ಸಂಖ್ಯೆ ತೀರಾ ಕಡಿಮೆಯಿದೆ. ಅದರಲ್ಲೂ ಕರ್ನಾಟಕದ ಮಟ್ಟಿಗೆ ಬೆಂಗಳೂರು, ಗ್ರೇಟರ್ ಬೆಂಗಳೂರು, ದಕ್ಷಿಣ ಬೆಂಗಳೂರಿನ ಆಣೆಯಾಗಿಯೂ ಅಭಿವೃದ್ಧಿ ಎನ್ನುವುದು ಬೆಂಗಳೂರಿನ ಹೆಸರಿಗೆ ಸೀಮಿತ ಮಾಡುವ ಹುನ್ನಾರವನ್ನು ಆಳಿದ ಬಹುತೇಕರು ಮಾಡಿದ್ದಾರೆ. ಆದರೆ ನಾನು ತಮಿಳುನಾಡಿನಲ್ಲಿ ಓಡಾಡಿದಾಗ ಅನುಭವ ಸಾಕಷ್ಟು ಭಿನ್ನವಾಗಿತ್ತು.
ಸಾಕಷ್ಟು ಅಭಿವೃದ್ಧಿ ಹೊಂದಿರುವ ತಮಿಳುನಾಡಿನ ಕೃಷ್ಣಗಿರಿ, ಧರ್ಮಗಿರಿ
ಬೆಂಗಳೂರಿನ ಪಕ್ಕದಲ್ಲೇ ಇರುವ ಹೊಸೂರಿನಿಂದ ಆದಿಯಾಗಿ ಕೃಷ್ಣಗಿರಿ, ಧರ್ಮಗಿರಿ, ಸೇಲಂ, ನಾಮಕ್ಕಲ್, ತಿರುಚಿ, ತಂಜಾವೂರು, ಕರೂರು ಸೇರಿ ಸಣ್ಣಪುಟ್ಟ ನಗರ, ಪಟ್ಟಣ, ಗ್ರಾಮ ಪಂಚಾಯಿತಿಗಳಲ್ಲೂ ಸಾಕಷ್ಟು ಉದ್ಯೋಗ ಸೃಷ್ಟಿಯಾಗಿರುವ ವಾತಾವರಣ ಅಲ್ಲಿ ಕಾಣಿಸುತ್ತದೆ. ನಮ್ಮ ರಾಜ್ಯದ ಕೆಲ ಜಿಲ್ಲೆಗಳಂತೆ ಕೇವಲ ಪ್ರವಾಸೋದ್ಯಮದ ಕಾರಣದಿಂದ ಈ ನಗರಗಳು ಬೆಳೆದಿರುವುದಲ್ಲ. ಬದಲಾಗಿ ಉತ್ಪಾದನಾ ಘಟಕ, ಸಣ್ಣ ಪುಟ್ಟ ಉದ್ದಿಮೆಗಳು ನಾವು ಸಂಚರಿಸಿದ ಬಹುತೇಕ ಕಡೆ ಕಾಣಿಸುತ್ತಿತ್ತು. ಇದಕ್ಕೆ ಸಾಕ್ಷಿ ಎನ್ನುವಂತೆ ಕೈಗಾರಿಕೆಗಳಿಗೆ ಕೆಲಸಕ್ಕೆ ಬೈಕ್ ಮೂಲಕ ಹೋಗುವ ಯುವಕರು, ಅಲ್ಲಲ್ಲಿ ಲೋಡ್-ಅನ್‌ಲೋಡ್ ಮಾಡಲು ನಿಂತಿರುವ ಹತ್ತಾರು ಲಾರಿಗಳು ಹಾಗೂ ಆ ರಸ್ತೆಯಲ್ಲಿ ಸಂಚರಿಸುವ ಭಾರೀ ಸಂಖ್ಯೆಯ ಲಾರಿಗಳು ಕಾಣಿಸುತ್ತಿದ್ದವು.
ಇದಕ್ಕೆ ಪೂರಕವಾಗಿ ರಸ್ತೆಗಳು ಕೂಡಾ ಅಷ್ಟೇ ಉತ್ತಮವಾಗಿ ಗುಣಮಟ್ಟದಿಂದ ನಿರ್ಮಾಣವಾಗಿವೆ. ಇಂದಿನ ಕಾಲದ ಅಭಿವೃದ್ಧಿಯ ಸಂಕೇತ ಎನಿಸಿಕೊಳ್ಳುವ ಫ್ಲೈ ಓವರ್‌ಗಳು ಕೂಡ ಈ ನಗರಗಳಲ್ಲಿ ಕಾಣಸಿಗುತ್ತವೆ. ಉದ್ಯಮಕ್ಕೆ ಪೂರಕವಾಗಿ ಮೂಲ ಸೌಕರ್ಯಕ್ಕೆ ಅಲ್ಲಿಯ ಸರ್ಕಾರ ಹಣ ಸುರಿದಿರುವುದನ್ನು ಕಾಣಬಹುದು. ಆದಾಗ್ಯೂ ತಮಿಳುನಾಡಿನ ಜನರು ಚೆನ್ನೈಯನ್ನು ಕೇಂದ್ರಿತ ಅಭಿವೃದ್ಧಿ ಎಂದು ಟೀಕಿಸುತ್ತಾರೆ. ನಾನು ಉಲ್ಲೇಖಿಸಿದ ನಗರಗಳನ್ನು ಹೊರತುಪಡಿಸಿ ಕೊಯಮತ್ತೂರು ಹಾಗೂ ಸುತ್ತಲಿನ ಕೆಲ ನಗರಗಳು ಕೂಡಾ ಉತ್ಪಾದನೆ ವಲಯದಲ್ಲಿ ಸಾಕಷ್ಟು ಮುಂದುವರಿದಿವೆಯಂತೆ.
ಬೆಂಗಳೂರಿಗೆ ಸಿಂಹಪಾಲು
ನನ್ನ ತಮಿಳುನಾಡಿನ ಸ್ನೇಹಿತನ ಆಯಾಮದಲ್ಲಿ ಕರ್ನಾಟಕದ ಅಭಿವೃದ್ಧಿಯನ್ನು ಪರಿಶೀಲಿಸಿದರೆ, ಬೆಂಗಳೂರಿಗೆ ಸಿಂಹಪಾಲಿದೆ. ಚೆನ್ನೈ ನಗರವು ತಮಿಳುನಾಡು ಜಿಡಿಪಿಯ ಶೇ 30ರ ಪಾಲನ್ನು ಹೊಂದಿದ್ದರೆ, ಬೆಂಗಳೂರು ಅದರ ದುಪ್ಪಟ್ಟು ಪಾಲು ಹೊಂದಿದೆ. ಈ ಮೂಲಕ ಕರ್ನಾಟಕವು ಬೆಂಗಳೂರು ಕೇಂದ್ರಿತವಾಗಿ ಎಷ್ಟು ಬೆಳೆದಿದೆ ಎನ್ನುವುದನ್ನು ತಿಳಿಸುತ್ತದೆ. ಅಂದ ಹಾಗೆ ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟರೆ ಫ್ಲೈ ಓವರ್ ಇರುವುದು ಮಂಗಳೂರು, ಬೆಳಗಾವಿ ಮಾತ್ರ ಎನಿಸುತ್ತದೆ. ಮಂಗಳೂರಿನ ಫ್ಲೈ ಓವರ್‌ದ್ದು ಕಥೆಯಲ್ಲ, ವ್ಯಥೆ. ಹಾಗೆಯೇ ಬೆಳಗಾವಿಯ ಫ್ಲೈ ಓವರ್, ದೇವರಿಗೆ ಇಷ್ಟವಾಗುವ ಹಾಗಿದೆ. ಇನ್ನು ಈಗ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಫ್ಲೈ ಓವರ್‌ನ್ನು ಜಗತ್ತಿನ ಅತಿದೊಡ್ಡ ವಾಕಿಂಗ್ ಫ್ಲೈ ಓವರ್ ಮಾಡಲು ಸಿದ್ಧತೆ ಮಾಡಲಾಗುತ್ತಿದೆಯೆಂದು ಶೆಟ್ಟರ್-ಜೋಶಿ ಮನೆಯ ಕಡೆಯಿಂದ ಸುದ್ದಿ ಬಂದಿದೆ. ಇನ್ನು ಉಳಿದಂತೆ ಅಭಿವೃದ್ಧಿ ಹಾಗೂ ಉದ್ದಿಮೆಗಳನ್ನು ನೋಡಿದಾಗ ಎಲ್ಲವೂ ಬೆಂಗಳೂರು ಕೇಂದ್ರಿತವಾಗಿವೆ. ಕರ್ನಾಟಕದ ಕರಾವಳಿ ಭಾಗದಲ್ಲಿನ ಬಂದರು ಹಾಗೂ ಶಿಕ್ಷಣದ ಲಾಭ ಪಡೆಯುವಲ್ಲಿ ನಮ್ಮ ಸರ್ಕಾರ ಯಾವುದೇ ಕೆಲಸ ಮಾಡಿಲ್ಲ. ರಾಜ್ಯದ ಉಳಿದ ಭಾಗಗಳಲ್ಲಿಯೂ ಗಣಿಯನ್ನು ಹೊರತುಪಡಿಸಿ ಇನ್ನಿತರ ಉದ್ಯಮಗಳ ಅಭಿವೃದ್ಧಿಗೆ ಗಮನವನ್ನೇ ಕೊಟ್ಟಿಲ್ಲ.
ಹುಬ್ಬಳ್ಳಿಯನ್ನು ಉತ್ತರ ಕರ್ನಾಟಕದ ಐಟಿ ಪಾರ್ಕ್ ಮಾಡಲು, ಬೆಳಗಾವಿಯನ್ನು ಏರೋ ಸ್ಪೇಸ್ ಹಬ್ ಮಾಡಲು ಮೊದಲ ಹೆಜ್ಜೆ ಇಟ್ಟು ಅಲ್ಲೇ ಸುಸ್ತಾದಂತೆ ಸರ್ಕಾರ ವರ್ತಿಸುತ್ತಿದೆ. ಕೈಗಾರಿಕೆಗಳು ಬರುತ್ತಿಲ್ಲ ಎಂದು ಸುಲಭವಾಗಿ ಹೇಳಬಹುದು. ಆದರೆ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ಏನು ಮಾಡಿದೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಬೆಂಗಳೂರಿನ ಹೊರ ವಲಯದಲ್ಲಿನ ಸ್ವಂತ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಡಿಮ್ಯಾಡ್ ತಂದುಕೊಳ್ಳಲು ಆಡುವ ನಾಟಕದಂತೆ ಕರ್ನಾಟಕದ ಅಭಿವೃದ್ಧಿ ಪಥ ಗೋಚರವಾಗುತ್ತದೆ. ಬಾಯೆತ್ತಿದರೆ ಬೆಂಗಳೂರಿನ ಹೊರ ವಲಯದಲ್ಲಿಯೇ ಎಲ್ಲ ಪಾರ್ಕ್‌ಗಳು ಹುಟ್ಟಿಕೊಳ್ಳುತ್ತವೆ.
ಬೆಂಗಳೂರಿನ ಹೊರ ವಲಯದಲ್ಲಿ ಅಗತ್ಯ ಮೂಲ ಸೌಕರ್ಯ ಕೊಡಲಾಗದಿದ್ದರೂ ಹರ ಸಾಹಸ ಮಾಡುತ್ತಿರುವುದನ್ನು ನೋಡಿದರೆ ದುರುದ್ದೇಶವಿದೆ ಎನ್ನುವುದು ಸಾಮಾನ್ಯರಿಗೂ ಅರ್ಥವಾಗುತ್ತದೆ. ಇಲ್ಲವಾದಲ್ಲಿ ಕರ್ನಾಟಕದ ಸುಶಿಕ್ಷಿತ ಹಳ್ಳಿಗಳು ಖಾಲಿ ಆಗುತ್ತಿರಲಿಲ್ಲ.
ಕರ್ನಾಟಕದ ರಾಜಕಾರಣಿಗಳು ಕಲಿಯುವುದು ಸಾಕಷ್ಟಿದೆ
ಆದರೆ ತಮಿಳುನಾಡಿನಲ್ಲಿ ಪರಿಸ್ಥಿತಿ ಸ್ವಲ್ಪ ವಿಭಿನ್ನವಾಗಿ ಕಾಣಿಸುತ್ತಿದೆ.ಇದೇ ಕಾರಣದಿಂದ ಎರಡನೇ ಹಂತ ನಗರಗಳಲ್ಲಿ ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳು ಕಾಣಿಸುತ್ತಿವೆ. ರಸ್ತೆಗಳ ಅಗಲೀಕರಣವೂ ನಡೆಯುತ್ತಿದೆ. ಆ ನಗರಗಳಲ್ಲಿ ಪ್ರವಾಸಿಗರನ್ನು ಹೊರತುಪಡಿಸಿ ದೊಡ್ಡ ಸಂಖ್ಯೆಯಲ್ಲಿ ಸ್ಥಳೀಯರು ಕಾಣಿಸುತ್ತಿದ್ದಾರೆ. ಕಾರುಗಳಿಗಿಂತ ಸ್ಥಳೀಯರ ಬೈಕ್‌ಗಳು ಹೆಚ್ಚು ಓಡಾಡುತ್ತಿವೆ. ನಾವು ಸಾಕಷ್ಟು ಬಾರಿ ತಮಿಳುನಾಡು ರಾಜಕಾರಣಿಗಳನ್ನು ಬೇರೆಯದೇ ಕಾರಣಕ್ಕೆ ಟೀಕಿಸುತ್ತೇವೆ. ಆದರೆ ಸ್ಥಳೀಯ ಅಭಿವದ್ಧಿ ವಿಚಾರದಲ್ಲಿ ನೋಡಿದಾಗ, ನಮ್ಮ ರಾಜ್ಯದ ರಾಜಕಾರಣಿಗಳಿಗಿಂತ ಸಾವಿರ ಪಾಲು ವಾಸಿ ಎಂದು ಮೇಲ್ನೋಟಕ್ಕಂತೂ ಕಾಣಿಸುತ್ತದೆ.
ಕೊನೆಯದಾಗಿ: ನಾವು ಕೊನೆಯ ದಿನ ಮಧುರೈನಿಂದ ಮೆಟ್ಟೂರಿಗೆ ಹೊರಟಿದ್ದೆವು. ಆ ಮಾರ್ಗದಲ್ಲಿ ಕರೂರು ಬಿಟ್ಟರೆ ಇನ್ಯಾವುದೇ ದೊಡ್ಡ ನಗರಗಳು ಕಾಣಿಸದು. ಆದರೆ ಮೆಟ್ಟೂರಿಗೆ ಹೋಗುವ ಮಾರ್ಗದಲ್ಲಿ ಹತ್ತಾರು ಸಣ್ಣ ಪುಟ್ಟ ಅರೆ ನಗರಗಳು ಕಾಣಿಸುತ್ತವೆ. ಅಲ್ಲಿಯ ವಾಣಿಜ್ಯ ವಹಿವಾಟುಗಳು ಹಾಗೂ ಅಂಗಡಿಗಳನ್ನು ನೋಡಿದಾಗ ಸ್ಥಳೀಯ ಉದ್ಯೋಗ ಸೃಷ್ಟಿಯಾಗಿರುವುದು ಕಣ್ಣಿಗೆ ರಾಚುತ್ತದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗದಿದ್ದರೆ ಆ ಮಟ್ಟಿಗೆ ವಾಣಿಜ್ಯ ವಹಿವಾಟು ಕೇಂದ್ರಗಳು ಇರಲು ಸಾಧ್ಯವಿಲ್ಲ. ಅಭಿವೃದ್ಧಿಗಾಗಿ ವಿದೇಶಕ್ಕೆ ಹೋಗಿ ಮೋಜು ಮಾಡಿ ಬರುವ ಆಡಳಿತಗಾರರು, ಪಕ್ಕದ ರಾಜ್ಯಕ್ಕೆ ಹೋಗಿ ಬಂದರೆ ಕಲಿಯುವುದು ಸಾಕಷ್ಟಿದೆ ಎನಿಸುತ್ತದೆ. ನನಗೆ ವೈಯಕ್ತಿವಾಗಿಯೂ ಈ ಬಗ್ಗೆ ಅಧ್ಯಯನ ಮಾಡುವ ಆಸಕ್ತಿ ಹುಟ್ಟಿದೆ.
