ಧನುಷ್ಕೋಡಿ ರಾಮಸೇತುವತ್ತ ಹರಿಯಬೇಕಿದೆ ಸರ್ಕಾರದ ಚಿತ್ತ, ಇಲ್ಲವಾದಲ್ಲಿ ಖಾಯಂ ಆಗಿ ಬಿಡಬಹುದು ಆ್ಯಡಮ್ ಬ್ರಿಡ್ಜ್; ರಾಜೀವ ಹೆಗಡೆ ಬರಹ
ರಾಜೀವ ಹೆಗಡೆ ಬರಹ: ರಾಮಸೇತುವನ್ನು ಪಾರಂಪರಿಕ ತಾಣವೆಂದು ಘೋಷಿಸಿ, ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಮೋದಿ ಸರ್ಕಾರದ ಮೇಲಿದೆ. ಇಲ್ಲವಾದಲ್ಲಿ ರಾಮಸೇತುವು ಖಾಯಂ ಆಗಿ ಮಾಯವಾಗಿ ಆ್ಯಡಮ್ ಬ್ರಿಡ್ಜ್ ಆಗಿಬಿಡಬಹುದು. ಇದು ಮಾಯವಾದರೆ ರಾಮ ಹಾಗೂ ರಾಮಾಯಣದ ಅಸ್ತಿತ್ವಕ್ಕೆ ಧಕ್ಕೆಯಾಗಬಹುದು. ಇದು ಸುಲಭವಾಗಿ ಬಿಡುವ ಸಣ್ಣ ವಿಚಾರ ಖಂಡಿತವಾಗಿಯೂ ಅಲ್ಲ.

ಸಣ್ಣವನಿದ್ದಾಗ ದೂರದರ್ಶನದಲ್ಲಿ ರಾಮಾಯಣ ನೋಡುತ್ತಿದ್ದಾಗ ರಾಮಸೇತುವಿನ ಬಗ್ಗೆ ಎಲ್ಲಿಲ್ಲದ ಕುತೂಹಲ ಹುಟ್ಟಿಕೊಂಡಿತ್ತು. ಸ್ವಲ್ಪ ಬುದ್ಧಿ ಬಂದ ಬಳಿಕ ಆ ರಾಮಸೇತು ಎಲ್ಲಿರಬಹುದು ಎನ್ನುವುದನ್ನು ಅರಿಯಲು ನೆರವಿಗೆ ಬಂದಿದ್ದು ಗೂಗಲ್ ಅರ್ಥ್. ಇದರ ಜತೆಗೆ ಕಾಲ ಕಾಲಕ್ಕೆ ರಾಮಸೇತುವಿನ ಬಗ್ಗೆ ಬರುತ್ತಿದ್ದ ಲೇಖನ, ವಿಡಿಯೋಗಳನ್ನು ನೋಡಿದ್ದೆ. ಆದರೆ ಇವತ್ತಿನವರೆಗೆ ಧನುಷ್ಕೋಡಿಯಲ್ಲಿನ ರಾಮಸೇತು ತಾಣಕ್ಕೆ ಭೇಟಿ ನೀಡುವ ಅವಕಾಶ ಆಗಿರಲಿಲ್ಲ.
ಆದರೆ ಮೊನ್ನೆ ನನ್ನ ಕಾರಿನಲ್ಲೇ ಭಾರತದ ಆ ಭಾಗದ ತುತ್ತ ತುದಿಗೆ ಹೋಗಿ ನಿಂತಾಗ ರಾವಣನ ರಾಜ್ಯವಾಗಿದ್ದ ಶ್ರೀಲಂಕಾದಿಂದ ಏರ್‌ಟೆಲ್ ನೆಟ್‌ವರ್ಕ್ ಸಂದೇಶವೊಂದನ್ನು ಕಳುಹಿಸಿ, ಅಂತರರಾಷ್ಟ್ರೀಯ ರೋಮಿಂಗ್ ಸರ್ವಿಸ್ ಬೇಕೇ ಎಂದು ಕೇಳಿತು. ಆದರೆ ವಿಪರ್ಯಾಸವೆಂದರೆ ನಾನು ನಿರೀಕ್ಷೆ ಇರಿಸಿಕೊಂಡು ಹೋಗಿದ್ದ ರಾಮಸೇತುವಿನ ಬಗ್ಗೆ ಒಂದಕ್ಷರ ಕೂಡ ಅಲ್ಲೆಲ್ಲೂ ಕಾಣಿಸಲಿಲ್ಲ.
ರಾಮ ನಡೆದುಹೋದ ದಾರಿಯಲ್ಲಿ ಸೂರ್ಯನ ಮೊದಲ ರಶ್ಮಿಯನ್ನು ನೋಡಬೇಕು ಎನ್ನುವ ತವಕದಲ್ಲಿ ಸೂರ್ಯೋದಯದ ವೇಳೆಗೆ ಧನುಷ್ಕೋಡಿ ರಸ್ತೆಯಲ್ಲಿ ನನ್ನ ಕಾರು ಚಲಿಸುತ್ತಿತ್ತು. ಸಮುದ್ರವನ್ನು ಸೀಳಿಕೊಂಡು ಹೋದ ಅನುಭವದಲ್ಲಿ ತುತ್ತ ತುದಿಯ ಪಾಯಿಂಟ್‌ಗೆ ತಲುಪಿದ್ದೆ. ನಾವು ತಲುಪುವ ವೇಳೆಗೆ ನೂರಾರು ಜನರು ಈಗಾಗಲೇ ಅಲ್ಲಿ ಜಮಾಯಿಸಿದ್ದರು. ಆ ಜಾತ್ರೆಯ ಮಧ್ಯೆಯೇ ನಮ್ಮ ಫೋಟೋಶೂಟ್‌ಗೆ ನೆರವಾಗುವಂತೆ ಕೊನೆಯ ಪಾಯಿಂಟ್ ಗುರುತಿಸಿಕೊಂಡು ಒಂದಿಷ್ಟು ಚಿತ್ರಗಳನ್ನು ಕ್ಲಿಕ್ಕಿಸಿದೆವು. ನಮ್ಮ ಸರ್ಕಾರಕ್ಕೆ ರಾಮಸೇತುವನ್ನು ಅಧಿಕೃತಗೊಳಿಸುವ ಆಸೆ ಹೇಗಿಲ್ಲವೋ, ಅದೇ ರೀತಿ ಅಂದು ಸೂರ್ಯನಿಗೂ ಮೋಡದ ಹೊರಗಿನಿಂದ ಬಂದು ನಮಗೆ ದರ್ಶನ ಕೊಡಿಸುವ ಇರಾದೆ ಇರಲಿಲ್ಲ. ಈ ಮೂಲಕ ಪೂರ್ವದ ತುದಿಯಲ್ಲಿ ಸೂರ್ಯೋದಯ ನೋಡಿ, ಮೊದಲ ರಶ್ಮಿಯ ಶಾಕವನ್ನು ಅನುಭವಿಸುವ ಕನಸು ನನಸಾಗಲಿಲ್ಲ. ಆ ಬೇಸರದ ನಡುವೆಯೂ ರಾಮ ನಡೆದುಕೊಂಡು ಹೋಗಿರಬಹುದಾದ ಸೇತುವೆಯನ್ನು ಕಲ್ಪಿಸಿಕೊಂಡು ಶ್ರೀಲಂಕಾದತ್ತ ಕಣ್ಣು ಹಾಯಿಸಿದೆವು. ಕಣ್ಣು ಹಾಯಿಸದಷ್ಟು ದೂರದವರೆಗೆ ಸಮುದ್ರದ ನೀರಿದೆ. ಒಂದೆಡೆ ಬಂಗಾಳಕೊಲ್ಲಿಯಿದ್ದರೆ, ಇನ್ನೊಂದೆಡೆ ಹಿಂದೂ ಮಹಾಸಾಗರವಿದೆ. ಇವೆರಡನ್ನು ಕಣ್ತುಂಬಿಸಿಕೊಂಡು, ಅಲ್ಲಿಯೇ ಪಕ್ಕದಲ್ಲಿರುವ ಕೋದಂಡರಾಮ ದೇವಾಲಯಕ್ಕೆ ಭೇಟಿ ನೀಡಿದೆವು.
ಆ ದೇವಸ್ಥಾನದವರು ಹೇಳುವ ಪ್ರಕಾರ, ರಾವಣನ ರಾಜ್ಯವನ್ನು ಗೆದ್ದುಬಂದ ರಾಮನು, ವಿಭೀಷಣನಿಗೆ ಪಟ್ಟಾಭಿಷೇಕ ಮಾಡುವ ತಾಣವದು. ಒಂದೊಮ್ಮೆ ಆ ದೇವಾಲಯಕ್ಕೆ ಅಷ್ಟೊಂದು ಪೌರಾಣಿಕ ಮಹತ್ವವಿರುವುದು ನಿಜವಾಗಿದ್ದರೆ, ಅದನ್ನು ತುಂಬಾ ಕೆಟ್ಟದಾಗಿ ನಿರ್ವಹಿಸಲಾಗುತ್ತಿದೆ. ಅಲ್ಲೇ ಪಕ್ಕದಲ್ಲಿನ ಸಮುದ್ರದಂಚಿನಲ್ಲಿ ಒಂದು ಸಣ್ಣ ಟೆಂಟ್ ಹಾಕಿಕೊಂಡು, ಇಲ್ಲಿಂದಲೇ ರಾಮಸೇತು ಆರಂಭ ಹಾಗೂ ರಾಮ ನಡೆದುಕೊಂಡು ಹೋದ ಕಲ್ಲಿದೆ ನೋಡಿ ಎಂದು ಹಣ ವಸೂಲಿ ಮಾಡುವ ದಂಧೆ ನಡೆಯುತ್ತಿದೆ. ನಮ್ಮನ್ನಾಳುವ ಸರ್ಕಾರಕ್ಕೆ ನಮ್ಮ ಪರಂಪರೆ ಬಗ್ಗೆ ಆಸಕ್ತಿ ಇರದಿದ್ದಾಗ ಸ್ಥಳೀಯರು ಈ ರೀತಿ ವಸೂಲಿ ಮಾಡುವುದರಲ್ಲಿ ಯಾವುದೇ ವಿಶೇಷವಿಲ್ಲ. ಮುಂದೊಂದು ದಿನ ಆ್ಯಡಮ್ ನಡೆದ ದಾರಿಯೆಂದು ಇನ್ನೊಬ್ಬರು ಹಣ ವಸೂಲಿ ಮಾಡಲು ಕೂಡ ಶುರು ಮಾಡಬಹುದು.
ಧನುಷ್ಕೋಡಿ ರಾಮಸೇತು
ಅಂದ್ಹಾಗೆ ರಾಮೇಶ್ವರದಿಂದ ಶ್ರೀಲಂಕಾದವರೆಗೆ ನಿರ್ಮಿಸಿದ ರಾಮ ಸೇತು ಧನುಷ್ ಮಾರ್ಗದ ಆಕಾರವನ್ನು ಹೋಲುವುದರಿಂದ ಇದಕ್ಕೆ ಧನುಷ್ಕೋಡಿ ಎಂದು ಹೆಸರಿಸಲಾಗಿದೆ. 15ನೇ ಶತಮಾನದವರೆಗೂ ಈ ಸೇತುವೆಯು ರಾಮೇಶ್ವರಂನಿಂದ ಮನ್ನಾರ್ ದ್ವೀಪದವರೆಗೆ ಕಾಲ್ನಡಿಗೆಯ ಸೇತುವೆಯಾಗಿತ್ತಂತೆ. ಆದರೆ ನಂತರ ಸಂಭವಿಸಿದ ನೈಸರ್ಗಿಕ ವಿಕೋಪಗಳಿಂದ ಸಮುದ್ರ ಮಟ್ಟವು ಏರಿಕೆಯಾಗಿ ಸೇತುವೆಯು ನೀರಿನಲ್ಲಿ ಮುಳುಗಿತು ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಸಾವಿರಾರು ವರ್ಷಗಳ ಹಿಂದಿನ ರಾಮಸೇತುವಿನ ನಿಜವಾದ ತಾಣವು ಧನುಷ್ಕೋಡಿಯಿಂದ ಕೆಲ ಕಿ.ಮೀ ದೂರವಿರಬಹುದು ಎಂದು ಕೂಡ ವ್ಯಾಖ್ಯಾನಿಸಲಾಗುತ್ತದೆ.
ಕೊನೆಯದಾಗಿ: ರಾಮ ಸಾಗಿದ ಮಾರ್ಗದ ಬಗ್ಗೆ ಸ್ಥಳೀಯ ತಮಿಳುನಾಡು ಸರ್ಕಾರ ಏನಾದರೂ ಮಾಡಿತು ಎನ್ನುವ ಕಿಂಚಿತ್ ನಿರೀಕ್ಷೆಯೂ ನನಗಿಲ್ಲ. ಏಕೆಂದರೆ ಆ ಜಾಗವನ್ನು ಆ್ಯಡಮ್ ಬ್ರಿಡ್ಜ್ ಎಂದು ತಮಿಳುನಾಡು ಸರ್ಕಾರವೇ ಸಾಕಷ್ಟು ಸರ್ಕಾರಿ ದಾಖಲೆಗಳಲ್ಲಿ ಹೇಳಿದೆ, ವಿಧಾನಸಭೆಗಳಲ್ಲೂ ಚರ್ಚೆ ಮಾಡಿದೆ. ಆದರೆ ನಮ್ಮ ದೇಶದ ಭವ್ಯ ಪರಂಪರೆ ಕಾಪಾಡುತ್ತೇವೆ ಎಂದು ಹೇಳಿಕೊಂಡು ಬಂದಿರುವ ಮೋದಿ ಸರ್ಕಾರದ ಮೇಲೆ ಈ ಕುರಿತು ಸಾಕಷ್ಟು ನಿರೀಕ್ಷೆಯಿದೆ. ರಾಮ, ರಾಮಾಯಣ ಹಾಗೂ ರಾಮಸೇತುವಿನ ಬಗ್ಗೆ ನಂಬಿಕೆ ಇರಿಸಿಕೊಂಡು ಹೋದ ಜನರಿಗೆ ಈ ರೀತಿ ಮೋಸವಾಗುವ ಕಾಯಕಕ್ಕೆ ಜವಾಬ್ದಾರಿಯುತ ಸರ್ಕಾರ ಕೈ ಹಾಕಬಾರದು. ಈ ಜಾಗವನ್ನು ಪಾರಂಪರಿಕ ತಾಣವೆಂದು ಘೋಷಿಸಿ, ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಮೋದಿ ಸರ್ಕಾರದ ಮೇಲಿದೆ. ಇಲ್ಲವಾದಲ್ಲಿ ರಾಮಸೇತುವು ಕಾಯಂ ಆಗಿ ಮಾಯವಾಗಿ ಆ್ಯಡಮ್ ಬ್ರಿಡ್ಜ್ ಆಗಿಬಿಡಬಹುದು. ಇದು ಮಾಯವಾದರೆ ರಾಮ ಹಾಗೂ ರಾಮಾಯಣದ ಅಸ್ತಿತ್ವಕ್ಕೆ ಧಕ್ಕೆಯಾಗಬಹುದು. ಇದು ಅಷ್ಟು ಸುಲಭವಾಗಿ ಬಿಡುವ ಸಣ್ಣ ವಿಚಾರವಂತು ಖಂಡಿತವಾಗಿಯೂ ಅಲ್ಲ. ಅಂದ್ಹಾಗೆ ಈ ಬಗ್ಗೆ ಒಂದಿಷ್ಟು ಹೋರಾಟವನ್ನು ಸುಬ್ರಹ್ಮಣ್ಯನ್ ಸ್ವಾಮಿ ಮಾಡುತ್ತಿದ್ದಾರೆ. ಅವರ ಕಾನೂನು ಹೋರಾಟಕ್ಕೆ ಕೇಂದ್ರ ಸರ್ಕಾರವು ನೆರವು ಕೊಡುತ್ತಿಲ್ಲ ಎಂದು ಆಗಾಗ ಸ್ವಾಮಿ ಹೇಳಿಕೆ ನೀಡಿದ್ದನ್ನು ನೀವು ಅಲ್ಲಲ್ಲಿ ಓದಬಹುದು.
