ಕನ್ನಡ ಸುದ್ದಿ  /  Lifestyle  /  Ramadan 2024 Why Muslims Break Their Fasting By Eating Dates During Roza Iftar Sehri Ramadan Celebration Rsa

Ramadan 2024: ಮುಸ್ಲಿಂ ಬಾಂಧವರು ಖರ್ಜೂರವನ್ನು ಸೇವಿಸುವ ಮೂಲಕವೇ ರಂಜಾನ್ ಉಪವಾಸ ಮುರಿಯುವುದೇಕೆ..? ಇಲ್ಲಿದೆ ಮಾಹಿತಿ

Ramadan 2024: ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ರೋಜಾ ಆಚರಣೆ ಆರಂಭಗೊಂಡಿದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಉಪವಾಸವಿರುವ ಮುಸ್ಲಿಮರು ಸೂರ್ಯಾಸ್ತದ ಬಳಿಕ ಖರ್ಜೂರವನ್ನೇ ಸೇವಿಸುವ ಮೂಲಕ ಉಪವಾಸವನ್ನೇಕೆ ಮುರಿಯುತ್ತಾರೆ ಎನ್ನುವುದಕ್ಕೆ ಕಾರಣ ಇಲ್ಲಿದೆ ನೋಡಿ.

ಖರ್ಜೂರ ಸೇವಿಸುವ ಮೂಲಕ ರಂಜಾನ್‌ ಉಪವಾಸ ಮುರಿಯುವ ಮುಸ್ಲಿಮರು
ಖರ್ಜೂರ ಸೇವಿಸುವ ಮೂಲಕ ರಂಜಾನ್‌ ಉಪವಾಸ ಮುರಿಯುವ ಮುಸ್ಲಿಮರು (PC: Unsplash)

ರಂಜಾನ್‌ 2024: ಮುಸ್ಲಿಮರ ಪವಿತ್ರ ಹಬ್ಬಗಳ ಪೈಕಿ ಒಂದಾದ ರಂಜಾನ್ ಹಬ್ಬದ ಆಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರು ಉಪವಾಸ ವೃತಗಳನ್ನು ಕೈಗೊಳ್ಳುತ್ತಾರೆ . ಈಗಾಗಲೇ ಮುಸ್ಲಿಂ ಬಾಂಧವರು ಈ ವರ್ಷದ ರಂಜಾನ್ ಹಬ್ಬಕ್ಕೆ ಉಪವಾಸ ವೃತವನ್ನು ಆರಂಭಿಸಿದ್ದಾರೆ.

ರಂಜಾನ್ ಉಪವಾಸವನ್ನು ರೋಜಾ ಎಂದು ಕರೆಯಲಾಗುತ್ತದೆ. ಈ ರೋಜಾವನ್ನು ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕೈಗೊಳ್ಳುತ್ತಾರೆ. ಸೂರ್ಯೋದಯಕ್ಕೂ ಮುನ್ನ ಸೇವಿಸುವ ಆಹಾರವನ್ನು ಸೆಹ್ರಿ ಎಂದೂ ಸೂರ್ಯಾಸ್ತದ ಬಳಿಕ ಸೇವಿಸುವ ಆಹಾರವನ್ನು ಇಫ್ತಾರ್ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಮುಸ್ಲಿಮರು ತಮ್ಮ ಉಪವಾಸವನ್ನು ಖರ್ಜೂರ ಸೇವಿಸುವ ಮೂಲಕ ಪೂರ್ಣಗೊಳಿಸುತ್ತಾರೆ. 12 ರಿಂದ 17 ಗಂಟೆಗಳ ಕಠಿಣ ಉಪವಾಸದ ಬಳಿಕ ಮುಸ್ಲಿಮರು ಖರ್ಜೂರವನ್ನೇ ಸೇವಿಸುವುದರ ಹಿಂದೆ ದೊಡ್ಡ ಇತಿಹಾಸವೇ ಇದೆ.

ಖರ್ಜೂರ ಸೇವಿಸುವ ಮೂಲಕ ಉಪವಾಸ ಮುರಿಯುತ್ತಿದ್ದ ಪ್ರವಾದಿಗಳು

ಪಶ್ಚಿಮ ಏಷ್ಯಾಗಳಲ್ಲಿ ಈ ಸಮಯದಲ್ಲಿ ಖರ್ಜೂರವು ಹೆಚ್ಚಾಗಿ ಸಿಗುವುದರಿಂದ ರೋಜಾ ಮುಗಿದ ಬಳಿಕ ಮುಸ್ಲಿಮರು ಖರ್ಜೂರವನ್ನು ಸೇವಿಸುವ ಮೂಲಕ ಉಪವಾಸ ಮುರಿಯುತ್ತಾರೆ ಎಂದು ಭೌಗೋಳಿಕ ಕಾರಣ ನೀಡಬಹುದು. ಪ್ರವಾದಿಗಳೇ ರಂಜಾನ್ ಸಮಯದಲ್ಲಿ ರಸಭರಿತವಾದ ಖರ್ಜೂರಗಳನ್ನು ಸೇವನೆ ಮಾಡುವ ಮೂಲಕ ಉಪವಾಸ ಮುರಿಯುತ್ತಿದ್ದರು. ಪ್ರವಾದಿ ಮುಹಮ್ಮದ್ ಅವರ ನೆಚ್ಚಿನ ಹಾಗೂ ಅವರು ಹೆಚ್ಚಾಗಿ ಇಷ್ಟಪಟ್ಟು ತಿನ್ನುತ್ತಿದ್ದ ಆಹಾರ ಪದಾರ್ಥ ಖರ್ಜೂರವಾಗಿತ್ತು. ಹೀಗಾಗಿ ಇಫ್ತಾರ್ ಸಮಯದಲ್ಲಿ ಮುಸ್ಲಿಮರು ಖರ್ಜೂರವನ್ನು ಸೇವಿಸುವ ಮೂಲಕ ತಮ್ಮ ಉಪವಾಸವನ್ನು ಮುರಿಯುತ್ತಾರೆ. ರಂಜಾನ್ ಸಮಯದಲ್ಲಿ ಅಥವಾ ವರ್ಷದ ಯಾವುದೇ ದಿನಗಳಲ್ಲಿ ಖರ್ಜೂರ ಸೇವನೆ ಮಾಡುವುದರಿಂದ ನಾವು ನಮ್ಮ ಪ್ರವಾದಿಗಳಿಗೆ ಹಾಗೂ ನಮ್ಮ ಧರ್ಮಕ್ಕೆ ಇನ್ನಷ್ಟು ಹತ್ತಿರವಾಗುತ್ತೇವೆ ಎನ್ನುವುದು ಇಸ್ಲಾಂ ಧರ್ಮದಲ್ಲಿರುವ ನಂಬಿಕೆಯಾಗಿದೆ. ಹೀಗಾಗಿ ಮುಸ್ಲಿಮರು ತಮ್ಮ ಧರ್ಮದಲ್ಲಿ ಖರ್ಜೂರಕ್ಕೆ ವಿಶೇಷ ಸ್ಥಾನ ನೀಡಿದ್ದಾರೆ. ಇದೊಂದು ರೀತಿಯಲ್ಲಿ ಸಾಂಪ್ರದಾಯಿಕ ಡ್ರೈಫ್ರೂಟ್ ಆಗಿದೆ.

ವೈಜ್ಞಾನಿಕ ಕಾರಣವೇನು?

ಇನ್ನು ವೈಜ್ಞಾನಿಕ ರೀತಿಯಲ್ಲಿ ನೋಡುವುದಾದರೆ ಖರ್ಜೂರದಲ್ಲಿ ಪ್ರೋಟೀನ್, ವಿವಿಧ ಜೀವಸತ್ವಗಳು ಹಾಗೂ ಖನಿಜಾಂಶಗಳು ಅಗಾಧ ಪ್ರಮಾಣದಲ್ಲಿ ಇರುತ್ತದೆ. ಖರ್ಜೂರದಲ್ಲಿ ಪಾಲಿಫಿನಾಲ್, ಮ್ಯಾಂಗನೀಸ್, ಪೊಟ್ಯಾಷಿಯಂ ಹಾಗೂ ಕಬ್ಬಿಣಾಂಶ ಕೂಡ ಇದೆ. ದಿನವಿಡೀ ಖಾಲಿ ಹೊಟ್ಟೆಯಿಂದ ಇರುವವರು ಒಮ್ಮೆಲೆ ಸಿಕ್ಕಿದ್ದೆಲ್ಲ ತಿಂದರೆ ಅಜೀರ್ಣ ಹಾಗೂ ಆಸಿಡಿಟಿ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಖರ್ಜೂರ ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಯಾವುದೇ ರೀತಿಯ ಆರೋಗ್ಯ ಸಮಸ್ಯೆಯನ್ನು ನೀಡದೆಯೇ ದೇಹಕ್ಕೆ ಹೆಚ್ಚಿನ ಶಕ್ತಿ ಕೊಡುತ್ತದೆ.

ಖರ್ಜೂರವು ನೈಸರ್ಗಿಕ ಸಕ್ಕರೆಯಂತೆ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ 6, ಹಾಗೂ ಕಬ್ಬಿಣಾಂಶ ಹಾಗೂ ಫೈಬರ್ ದೇಹವನ್ನು ಹೆಚ್ಚು ಸಮಯಗಳ ಕಾಲ ಹಸಿವೆಯಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಜನರಿಗೆ ಹೆಚ್ಚುಕಾಲ ಹೊಟ್ಟೆ ತುಂಬಿದಂತಹ ಅನುಭವ ಕೂಡ ನೀಡುತ್ತದೆ. ಆದ್ದರಿಂದ ಮುಸ್ಲಿಂಮರು ಖರ್ಜೂರ ಸೇವಿಸುವ ಮೂಲಕ ರಂಜಾನ್ ಉಪವಾಸ ಮುರಿಯುತ್ತಾರೆ.