ಬಂಡವಾಳ ಹಾಕಿ ಹೋಟೆಲ್ ತೆಗೆಯುವ ಶಕ್ತಿ ಇರುವರಿಗೆ ಹೆಸರಿಡುವ ಶಕ್ತಿ ಏಕಿಲ್ಲ, ಕಾಪಿ ಮಾಡುವುದೇಕೆ? ರಂಗಸ್ವಾಮಿ ಮೂಕನಹಳ್ಳಿ ಬರಹ
ಕಷ್ಟಪಟ್ಟು ಜನ ಬ್ರಾಂಡ್ ಬಿಲ್ಡ್ ಮಾಡಿದರೆ ಅದನ್ನು ಕಾಪಿ ಮಾಡುವವರಿಗೆ ಕ್ಷಣ ಸಾಕು. ನಾಚಿಕೆ,ಸ್ವಂತಿಕೆ ಬಿಟ್ಟ ಪರಾವಲಂಬಿ ಜೀವಿಗಳನ್ನು ಏನನ್ನಬೇಕು ತಿಳಿಯುತ್ತಿಲ್ಲ. ಸ್ವಲ್ಪವಾದರೂ ಆತ್ಮ ಗೌರವ ಇರುವ ಜನ ಕಾಪಿ ಮಾಡುವುದಿಲ್ಲ. ಬಂಡವಾಳ ಹಾಕಿ ಹೋಟೆಲ್ ತೆಗೆಯುವ ಶಕ್ತಿ ಇರುವರಿಗೆ ಹೆಸರಿಡುವ ಶಕ್ತಿ ಏಕಿಲ್ಲ ? ಎಂದು ರಂಗಸ್ವಾಮಿ ಮೂಕನಹಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ಒಬ್ಬರು ಏಳಿಗೆಯಾಗುವುದನ್ನು ನೋಡಿ ಅವರ ಬಗ್ಗೆ ಸಂತೋಷಪಡುವುದಕ್ಕಿಂದ ಹೆಚ್ಚಾಗಿ, ಅವರ ಬಗ್ಗೆ ಅಸೂಯೆ ಪಡುವವರರೇ ಹೆಚ್ಚು. ಅವರು ಸಕ್ಸಸ್ ಆಗಲು ಎಷ್ಟು ಸಾಧ್ಯವೋ ಅಷ್ಟು ಅಡ್ಡಿಯಾಗುತ್ತಾರೆ. ಯಾರಾದರೋ ಒಂದು ಬ್ರ್ಯಾಂಡ್ ಹೆಸರಿನಲ್ಲಿ ಖ್ಯಾತಿ ಪಡೆದರೆ, ಅದೇ ಬ್ರ್ಯಾಂಡ್ ಹೆಸರು ಕಾಪಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಎಷ್ಟೋ ಜನರು ಕಾಯುತ್ತಿರುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಂಗಸ್ವಾಮಿ ಮೂಕನಹಳ್ಳಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಇಂಗ್ಲಿಷ್‌ನ ಒಂದು ಮಾತು “It is better to fail in originality than to succeed in imitation.” ಎನ್ನುತ್ತದೆ. ನಾವು ಅವರಂತಾಗಬೇಕು ಎನ್ನುವ ಆತುರದಲ್ಲಿ ನಮ್ಮತನವನ್ನು ಬಿಡುವುದು ಬೇಡ. ನಾವು ಅವರಿವರಂತಾಗುವ ಮೊದಲು ನಾವಾಗಿರುವುದನ್ನು ಕಲಿಯೋಣ.
ಬ್ರ್ಯಾಂಡ್ ಹೆಸರನ್ನು ನಕಲು ಮಾಡುವ ಜನರು
ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಪ್ರಸಿದ್ಧವಾಗುವುದಕ್ಕೆ ಮುಂಚೆ ಒಂದಷ್ಟು ಹೋಟೆಲ್‌ಗಳು ಪ್ರಸಿದ್ದಿ ಪಡೆದುಕೊಂಡಿದ್ದವು. ಉದಾಹರಣೆಗೆ ಕಾಫಿ ಕಟ್ಟೆ ಪ್ರಸಿದ್ಧವಾಯ್ತು. ನಮ್ಮ ಜನ ಗೊತ್ತಲ್ಲ, ಕಷ್ಟಪಟ್ಟು ಜನ ಬ್ರಾಂಡ್ ಬಿಲ್ಡ್ ಮಾಡಿದರೆ ಅದನ್ನು ಕಾಪಿ ಮಾಡುವವರಿಗೆ ಕ್ಷಣ ಸಾಕು. ನಾಚಿಕೆ , ಸ್ವಂತಿಕೆ ಬಿಟ್ಟ ಪರಾವಲಂಬಿ ಜೀವಿಗಳನ್ನು ಏನನ್ನಬೇಕು ತಿಳಿಯುತ್ತಿಲ್ಲ. ಕಟ್ಟೆ ಕಾಫಿ ಹೆಸರಿನ ನಕಲು ಶುರುವಾಗಿತ್ತು ! ಕೇಳಿದರೆ ಕಾಫಿ ಕಟ್ಟೆಗೂ , ಕಟ್ಟೆ ಕಾಫಿಗೂ ವ್ಯತ್ಯಾಸವಿಲ್ಲವಾ ಗುರು ? ಅದು ಕಾಪಿ ಹೇಗಾಯ್ತು ಎನ್ನುವ ತೇಲುವಿಕೆಯ ಮಾತು. ಬೈ ಟು ಕಾಫಿ ಕಥೆ ಕೂಡ ಸೇಮ್ , ಎಂಡಿಪಿ ಯನ್ನು ಎಂಪಿಪಿ ಎಂದೂ ನಕಲು ಮಾಡಿದ್ದರು. ಬೈಟು ಕಾಫಿ ಹೆಸರಿನ ಮುಂದೆ ೧೦೦% ಸೇರಿಸಿ , ೧೦೦% ಬೈ ಟು ಕಾಫಿ ಎಂದು ಹಾಕಿಕೊಂಡಿದ್ದ ಭೂಪ !
ಇನ್ನು ರಾಮೇಶ್ವರಂ ಹೋಟೆಲ್ ಪ್ರಸಿದ್ದವಾದ ಮೇಲೆ ಥೇಟ್ ಅದೇ ಲೋಗೋ , ಅದೇ ಸೆಟ್ ಅಪ್, ಹೆಸರುಗಳಲ್ಲಿ ಕೂಡ ಅದೇ ರಂ ! ಮೊನ್ನೆ ಕೆಲಸದ ನಿಮಿತ್ತ ಸಿರಸಿ ಹೋಗಿದ್ದರೆ ಅಂತಹ ಊರಿನಲ್ಲೂ ಉತ್ಕೃಷ್ಟ೦ ಹೆಸರಿನ ರಾಮೇಶ್ವರಂ ಹೋಲುವ ಹೋಟೆಲ್ ಸಿಗಬೇಕೇ ? ಏನಾಗಿದೆ ನಮ್ಮ ಸಮಾಜಕ್ಕೆ ? ಸ್ವಲ್ಪವೂ ಆತ್ಮ ಗೌರವವಿಲ್ಲದ ಜನ. ಗಂಡಾಗುಂಡಿ ಮಾಡಿಯಾದರೂ ಸರಿ ಗಡಿಗೆ ತುಪ್ಪ ಕುಡಿಯಬೇಕು ಎನ್ನುವ ಹಪಹಪಿಕೆ.
ನೈತಿಕತೆ ಇಲ್ಲದಂತಾಗಿದೆ
ಸಮಾಜ ಯಾವ ಮಟ್ಟಕ್ಕೆ ಬಂದು ನಿಂತಿತು ? ನೈತಿಕತೆ ಎನ್ನುವುದೇ ಇಲ್ಲವಾಗಿದೆ. ಯಾರೋ ಒಬ್ಬರು ಒಂದು ಹೆಸರಿನಲ್ಲಿ ಏನಾದರು ಶುರು ಮಾಡಿ ಸ್ವಲ್ಪ ಪ್ರಸಿದ್ಧವಾದರೆ ಸಾಕು ! ಬಕಪಕ್ಷಿಗಳು ಕಾಯುತ್ತಿರುತ್ತವೆ. 100 % ಕಾಪಿ ಮಾಡುತ್ತವೆ. ನಿಮ್ಮ ಹೋಟೆಲ್ ಹೆಸರು ಕಾಫಿ ಕಟ್ಟೆ ಕಣ್ರೀ ನಮ್ಮ ಹೋಟೆಲ್ ಹೆಸರು ಕಾಫಿ ೧೦೦% ಕಟ್ಟೆ ಅಂತ ಇಟ್ಟಿದ್ದೇವೆ ಎನ್ನುವ ದಾಢಸಿತನ ಬೇರೆ.
ಸ್ವಲ್ಪವಾದರೂ ಆತ್ಮ ಗೌರವ ಇರುವ ಜನ ಕಾಪಿ ಮಾಡುವುದಿಲ್ಲ. ಬಂಡವಾಳ ಹಾಕಿ ಹೋಟೆಲ್ ತೆಗೆಯುವ ಶಕ್ತಿ ಇರುವರಿಗೆ ಹೆಸರಿಡುವ ಶಕ್ತಿ ಏಕಿಲ್ಲ ? ಅಥವಾ ಬೇರೆ ಹೆಸರಿಟ್ಟರೆ ಹೋಟೆಲ್ ಯಶಸ್ವಿ ಆಗುವುದಿಲ್ಲ ಎನ್ನುವ ಅಪನಂಬಿಕೆಯೇ ? ಒಟ್ಟಾರೆ ಸಮಾಜವಾಗಿ ನಾವು ಉದ್ದಾರವಾಗುವುದು ಎಂದು ?