ಅಪ್ಪ-ಅಮ್ಮನ ಖಾಸಗಿ ಕ್ಷಣದ ಬಗ್ಗೆ ಕೆಟ್ಟ ಮಾತು ಆಡುವ ಯುಟ್ಯೂಬ್ ಸ್ಟಾರ್ ರಣವೀರ್ ಥರದವರ ಮನಸ್ಸಿನಲ್ಲಿ ಏನೆಲ್ಲ ನಡೆಯುತ್ತಿರುತ್ತೆ? ಕಾಳಜಿ ಅಂಕಣ
ಡಾ ರೂಪಾ ರಾವ್ ಬರಹ: ಯುಟ್ಯೂಬ್ ಸ್ಟಾರ್ ರಣವೀರ್ ಅಲಹಾಬಾದಿಯಾ ಅಪ್ಪ-ಅಮ್ಮನ ಲೈಂಗಿಕತೆಯನ್ನೇ ಹಾಸ್ಯದ ವಸ್ತುವಾಗಿಸಿ ಈದ ಇಡೀ ಭಾರತದ ಜನಾಕ್ರೋಶ ಎದುರಿಸುತ್ತಿದ್ದಾನೆ. ಆದರೆ ಇಂಥ ಕೆಟ್ಟ ಹಾಸ್ಯವನ್ನು ತಮಾಷೆ ಎಂದುಕೊಳ್ಳುವವರ ಮನಸ್ಥಿತಿ ಹೇಗಿರುತ್ತದೆ?

ಯುಟ್ಯೂಬ್‌ನಲ್ಲಿ ಜನಪ್ರಿಯರಾಗಿರುವ ಕಂಟೆಂಟ್ ಕ್ರಿಯೆಟರ್ ರಣವೀರ್ ಅಲಹಾದಾಬಾದಿಯಾ ಅವರು ತಾಯಿ-ತಂದೆಯ ಲೈಂಗಿಕ ಕ್ರಿಯೆಯ ಬಗ್ಗೆ ಡಾರ್ಕ್ ಮತ್ತು ಡರ್ಟಿ ಕಾಮಿಡಿ (ಕರಾಳ ಮತ್ತು ಕೆಟ್ಟ ಹಾಸ್ಯ) ಮಾಡಿದ್ದು ವಿವಾದಕ್ಕೀಡಾಯಿತು. ಇದು ಈಗಲೂ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಲೇ ಇದೆ. ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಈ ವಿಷಯವೂ ಹಳಸಾಗಿಬಿಡಬಹುದು. ನನಗೆ ಈ ಮಾತುಗಳನ್ನಾಡಿದ ರಣವೀರ್‌ಗಿಂತ ಅವನ ಮಾತಿಗೆ ಚಪ್ಪಾಳೆ ಚಟ್ಟಿದ ಪ್ರೇಕ್ಷಕರ ಬಗ್ಗೆಯೂ ಕುತೂಹಲ ಹೆಚ್ಚಾಯಿತು. ನನ್ನಲ್ಲಿ ಒಂದೆರೆಡು ಕುತೂಹಲಕಾರಿ ಪ್ರಶ್ನೆಯನ್ನೂ ಹುಟ್ಟುಹಾಕಿತು.
'ಒಂದು ತಮಾಷೆಯು ನೈತಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ದಾಟಿದರೂ ಜನರು ಅದನ್ನು ಏಕೆ ಆನಂದಿಸುತ್ತಾರೆ? ಪ್ರೋತ್ಸಾಹಿಸುತ್ತಾರೆ' -ಇದು ನನ್ನ ಪ್ರಶ್ನೆಯೂ ಹೌದಾದರೂ, ಮೂಲದಲ್ಲಿ ಈ ಪ್ರಶ್ನೆ ಕೇಳಿದವರು ತತ್ವಜ್ಞಾನಿ ಅರಿಸ್ಟಾಟಲ್. ಹಾಸ್ಯವು ನಾವು ಅನುಭವಿಸಿದ ಆಘಾತ ಅಥವಾ ದುರಂತದಿಂದ ಉಂಟಾದ ನಕಾರಾತ್ಮಕ ಭಾವನೆಗಳನ್ನು ಬಿಡುಗಡೆ ಮಾಡುವ ಒಂದು ಮಾರ್ಗ ಎನ್ನುವುದು ಲಭ್ಯವಿರುವ ಒಂದು ವಿವರಣೆ. ಆದರೆ ಹಾಸ್ಯವೇ ದುರಂತವಾಗುವುದಾದರೆ ಅದು ಹಾಸ್ಯ ಹೇಗಾಗುತ್ತೆ?
ಡಾರ್ಕ್ ಕಾಮಿಡಿ ಎಂದರೇನು?
ಡಾರ್ಕ್ ಕಾಮಿಡಿಯು ನಿಷಿದ್ಧ ವಿಷಯಗಳು (ಟ್ಯಾಬೂ), ಅತಿವಾಸ್ತವ, ದುರಂತ ಅಥವಾ ನೈತಿಕವಾಗಿ ಅಹಿತಕರ ವಿಷಯಗಳನ್ನು ಮುನ್ನೆಲೆಗೆ ತಂದು ಲೇವಡಿ ಮಾಡುವ ಹಾಸ್ಯದ ಒಂದು ವಿಭಾಗ. ಇದು ಸೂಕ್ತವಲ್ಲ ಎಂದು ಗೊತ್ತಿದ್ದರೂ ಜನರು ಅದನ್ನು ಏಕೆ ಮನರಂಜನೆಯಾಗಿ ಭಾವಿಸುತ್ತಾರೆ?
ಸಾಮಾನ್ಯ ಜನರಿಗೆ ಸುಲಭವಾಗಿ ಸಿಗದ ಇಂಟರ್ನೆಟ್ ಕರಾಳ ಪ್ರಪಂಚವನ್ನು ಡಾರ್ಕ್ ವೆಬ್ ಎನ್ನುತ್ತಾರೆ. ಇಲ್ಲಿ ವಿಕೃತಿಯನ್ನು ಆನಂದಿಸುವ, ಹಸಿಹಸಿ ಹಿಂಸೆ, ಹೆಣ್ಣಿನ ಮೇಲೆ ವಿಚಿತ್ರ ರೀತೀಯ ಲೈಂಗಿಕ ದೌರ್ಜನ್ಯ ನಡೆಸುವುದು ಹಾಗೂ ಇನ್ಸಿಸ್ಟ್ (ತಾಯಿ, ಅಕ್ಕ, ತಂಗಿ) ಈ ರೀತಿಯ ಲೈಂಗಿಕತೆಯನ್ನು ಆಸ್ವಾದಿಸುವ ಮನಸ್ಥಿತಿಯ ಜನರಿದ್ದಾರೆ. ಇವರಿಗೆಲ್ಲಾ ವಿಕೃತ ಮನಸ್ಥಿತಿಯೇ ಅಥವಾ ಇವರೆಲ್ಲ ಸ್ಯಾಡಿಸ್ಟ್ ಗಳೇ?
ಅದಿರಲಿ ಸಾಮಾನ್ಯ ವೆಬ್‌ಸೈಟ್‌ಗಳಲ್ಲಿಯೇ ಅದೆಷ್ಟೊಂದು ಬ್ಲಾಗ್‌ಗಳು, ಯುಟ್ಯೂಬ್ ಚಾನೆನ್‌ಗಳಲ್ಲಿ ತಾಯಿಯನ್ನು, ಅಕ್ಕ, ಚಿಕ್ಕಮ್ಮಂದಿರನ್ನು ಲೈಂಗಿಕವಾಗಿ ಅನುಭವಿಸುವ ಬರಹ ಪ್ರಕಟಿಸುವ ಮೂಲಕ ವಿಕೃತಿ ತೋರುವ ಜನರಿದ್ದಾರೆ. ಅಂಥದ್ದೇ ಮನಸ್ಥಿತಿ ಡಾರ್ಕ್ ಕಾಮಿಡಿಗಳಲ್ಲಿಯೂ ಕಂಡುಬರುತ್ತದೆ.
ಅದುಮಿಟ್ಟ ಭಾವನೆಗಳನ್ನು ಹೊರಚೆಲ್ಲುವ ವಿಧಾನ
ಡೆಲ್ಲಿ ಬೆಲ್ಲಿ ಅಥವಾ ಬ್ಯಾಂಗಳೂರ್ ಡೇಸ್ ಎಂಬ ಡಾರ್ಕ್ ಕಾಮಿಡಿ ಚಿತ್ರ ನೋಡಿ ಅಲ್ಲಿ ಒಬ್ಬನ ಮಲವನ್ನೇ ಇಡೀ ಚಿತ್ರದ ತುಂಬಾ ಚೆಲ್ಲಾಡಿದ್ದಾರೆ. ಆದರೂ ಜನ ಅದನ್ನು ಇಷ್ಟಪಟ್ಟರು. ಇದರ ಮಾನಸಿಕ ಹಿನ್ನಲೆಯನ್ನು ಸಿಗ್ಮಂಡ್ ಫ್ರಾಯ್ಡ್ ಅವರ ರೀಲೀಫ್ ಥಿಯರಿ ಮೂಲಕ ನೋಡಬಹುದು. ಅದರ ಪ್ರಕಾರ ಕರಾಳ ಹಾಸ್ಯವು ಅದುಮಿಟ್ಟ ಆಲೋಚನೆಗಳು ಮತ್ತು ಭಾವನೆಗಳನ್ನು ಹೊರಚೆಲ್ಲುವ ಒಂದು ವಿಧಾನ. ಜನರಿಗೆ ಸಾಮಾನ್ಯವಾಗಿ ಅಸಹ್ಯ, ಭೀತಿ ತರಿಸಬಹುದಾದ ಅಥವಾ ನೇರವಾಗಿ ಎದುರಿಸಲಾಗದ ವಿಷಯಗಳ ಬಗ್ಗೆ ತಮಾಷೆ ಮಾಡಲು ಅವಕಾಶ ಕೊಡುವುದು ಈ ಡಾರ್ಕ್ ಕಾಮಿಡಿ.
ನಿಯಮ ಉಲ್ಲಂಘನೆಯ ಥಿಯರಿ
ಯಾವುದಾದರೂ ವಿಷಯ ನೈತಿಕ ಮತ್ತು ಸಾಮಾಜಿಕವಾಗಿ ನಿಷಿದ್ಧವಾದರೂ ಅದರ ಬಗ್ಗೆ (ಪರೋಕ್ಷವಾಗಿ) ಮಾತಾಡುವುದು ಕಾನೂನಾತ್ಮಕವಾಗಿ ಸುರಕ್ಷಿತ (ನುಣುಚಿಕೊಳ್ಳಬಹುದು) ಅನಿಸಿದಾಗ ಜನರು ಅದನ್ನು ವ್ಯಕ್ತಪಡಿಸುವುದರ ಮೂಲಕ ಅಥವಾ ಓದುವುದರ ಮೂಲಕ ಎಂಜಾಯ್ ಮಾಡುತ್ತಾರೆ.
ಉದಾಹರಣೆಗೆ ಪಕ್ಕದ ಮನೆಯವನ ಹೆಂಡತಿ ಜೊತೆ ಕೂಡುವ ಬಯಕೆಯನ್ನು ಸಾರ್ವಜನಿಕವಾಗಿ ಹೇಳಿಕೊಳ್ಳುವುದು ಅಥವಾ ಸವಿತಾ ಬಾಭಿಯೋ ಅಥವಾ ಸೀತಾ ಬೆಹೆನ್ ಅಥವಾ ಮಲ್ಲು ಹೆಣ್ಣೋ ಎಂಬೆಲ್ಲಾ ಕಲ್ಪನೆಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು. ಅಷ್ಟೇಕೆ ಸಿನಿಮಾಗಳಲ್ಲಿರಲಿ ಸಾಮಾಜಿಕ ತಾಣಗಳಲ್ಲಿ ಯಾರೋ ಹೇಳುವ ಎಳನೀರು, ನಿಂಬೆ ಹಣ್ಣುಗಳ ಬಗೆಗಿನ ಅಶ್ಲೀಲ ಜೋಕುಗಳು ಇವೆಲ್ಲವೂ ಮೇಲೆ ಹೇಳಿದ ಮನಸ್ಥಿತಿಯ ಭಾಗವೇ ಆಗಿರುತ್ತದೆ.
ಹೀಗೇ ಡಾರ್ಕ್ ಕಾಮಿಡಿ ಒಂದು ಬಗೆಯ ವಿರೋಧಾಭಾಸವೂ ಹೌದು. ಅತ್ತ ಒಳ್ಳೆಯತನ ತೋರುತ್ತಾ, ಇತ್ತ ಅವಕಾಶ ಸಿಕ್ಕಾಗ ವಾಸ್ತವಿಕತೆಯ ಹೆಸರಲ್ಲಿ ಮನಸಿನ ಬೇಗುದಿಗೊಂದು ವಿಕೃತ ರೂಪುರೇಷೆ ಕೊಟ್ಟು ನಮ್ಮ ಭಾವನೆಗಳೊಂದಿಗೆ ಇದು ಆಟ ಆಡಿಸುತ್ತದೆ
ಭಾವನೆಗಳನ್ನು ನಿಯಂತ್ರಿಸಲು ಕರಾಳ ಹಾಸ್ಯ
ದುಃಖ, ಆತಂಕ ಅಥವಾ ಯಾವುದೋ ಕಳೆದುಕೊಳ್ಳುವ ಭಯದಂತಹ ಭಾವನೆಗಳನ್ನು ನಿಭಾಯಿಸಲು ಅಥವಾ ತಪ್ಪಿಸಿಕೊಳ್ಳಲು ಅನೇಕರು 'ಕರಾಳ ಹಾಸ್ಯ'ವನ್ನು ಬಳಸುತ್ತಾರೆ. ಉದಾಹರಣೆಗೆ ಎಲ್ಲಿಯೋ ಕೊಲೆ ಅಥವಾ ದರೋಡೆ ನಡೆದಾಗ ಅಥವಾ ಯಾರೋ ಸತ್ತಾಗ ಅದರ ಬಗ್ಗೆ ತಮಾಷೆ ಮಾಡುವುದು ಇತ್ಯಾದಿ. ಸಿನಿಮಾಗಳಲ್ಲಿ ಹಾವು ಅಥವಾ ಭೂತವೋ ಅಥವಾ ಕೇಡಿಯೋ ಯಾರನ್ನೋ ಚೇಸ್ ಮಾಡುವುದನ್ನು ತಮಾಷೆಯಾಗಿ ತೋರಿಸುವುದು. ಅಂದರೆ ಇನ್ನೊಬ್ಬರ ನೋವಿನಲ್ಲಿ, ಸಾವಿನಲ್ಲಿ ನಮ್ಮ ನಗು ಕಾಣುವುದು. ಇದು ನಾಯಿಯ ಬಾಲಕ್ಕೆ ಪಟಾಕಿ ಹಚ್ಚಿ ಅದು ಭಯಕ್ಕೆ ಓಡಿ ಹೋಗುವಾಗ ಆಗುವಂತಹ ವಿಕೃತ ಖುಷಿಯ ಇನ್ನೊಂದು ರೂಪವೇ ಆಗಿರುತ್ತದೆ.
ಇದನ್ನೂ ಓದಿ: ರಣವೀರ್ ಅಲಹಾಬಾದಿಯಾ ಯಾರು?
ಒಂದೇ ಗುಂಪಿನವರಂತೆ ತೋರಿಸಿಕೊಳ್ಳಲು
ಡಾರ್ಕ್ ಕಾಮಿಡಿ ಮತ್ತು ಅನಾಹುತಕಾರಿ ತಮಾಷೆಗಳನ್ನು ಹಂಚಿಕೊಳ್ಳುವುದರಿಂದ ‘ಒಂದು ಗುಂಪಿನ ಭಾಗವಾಗಬಹುದು. ಇದರಿಂದ ಒಂದು ರೀತಿಯ ಐಡೆಂಟಿಟಿ ಸಿಗಬಹುದು. ಒಂದಷ್ಟು ಜನರು ಆರಾಧಿಸಬಹುದು ಇತ್ಯಾದಿ ಮನೋವಾಂಛೆಗಳು ಸಹ ಡಾರ್ಕ್ ಕಾಮಿಡಿಯ ಭಾಗವಾಗಲು ಕಾರಣವಾಗುತ್ತವೆ.
ಡಾರ್ಕ್ ಕಾಮಿಡಿ ಒಂದು ಹಂತದವರೆಗೆ. ಒಳ್ಳೆಯದೇ. ಅದೆಷ್ಟೋ ಕರಾಳ ಸತ್ಯಗಳನ್ನು ವ್ಯಂಗ್ಯ. ಹಾಸ್ಯದ ಮೂಲಕ ಜಗತ್ತಿಗೆ ಹಗುರವಾಗಿ ತಿಳಿಸಿಕೊಡುವ ಪ್ರಯತ್ನ ಇದು. ಆದರೆ ಹಿರಿಯರು ಮತ್ತು ಸಂಪ್ರದಾಯಗಳ ಬಗ್ಗೆ ಗೌರವವನ್ನು ಆಳವಾಗಿ ಗೌರವಿಸುವ ನಮ್ಮ ಭಾರತೀಯ ನೆಲೆಯಲ್ಲಿ, ಗಡಿ ದಾಟಿದ ಕೆಲವು ಹಾಸ್ಯದ ಹೆಸರಿನ ವಿಕೃತಿಗಳನ್ನು ಜನರು ಒಪ್ಪುವುದಿಲ್ಲ. ಇಂಥವನ್ನು ಆಕ್ರಮಣಕಾರಿ ಎಂದೇ ಪರಿಗಣಿಸಲಾಗುತ್ತದೆ.
ಈಗಾಗಲೇ 'ಜೆನ್ ಜಿ' (ಜಾಗತಿಕ ಬೆಳೌಣಿಗೆಗಳ ಅರಿವಿರುವ ವಿದ್ಯಾವಂತರು) ಹಾಗೂ ಅವರ ನಂತರದ ಪೀಳಿಗೆ ಅಂತರ್ಜಾಲ ಸಂಸ್ಕೃತಿಯೊಂದಿಗೆ ಬೆಳೆಯುತ್ತಿರುವ ಪಾಶ್ಚಿಮಾತ್ಯ ಪ್ರಭಾವವನ್ನು ಜಾಸ್ತಿಯಾಗಿಯೇ ತಮ್ಮದಾಗಿಸಿಕೊಳ್ಳುತ್ತಿದೆ. ಹಿರಿಯರನ್ನು ಗೌರವಿಸುವ ಪ್ರವೃತ್ತಿ ನಿಧಾನವಾಗಿ ಕಡಿಮೆ ಆಗುತ್ತಿದೆ. ಇಂತಹ ಸಮಯದಲ್ಲಿ ಈ ರೀತಿಯ ಡಾರ್ಕ್ ಕಾಮಿಡಿ ಹಾಸ್ಯಗಳು ಸಾಮಾನ್ಯ ಎಂದಾಗಿಬಿಟ್ಟರೆ ಭಾರತೀಯ ಸಾಮಾಜಿಕತೆ ಹಾಗೂ ಸಾಂಸ್ಕೃತಿಕತೆಗೆ ಮಾರಕವಾಗಿಬಿಡುತ್ತದೆ.
ಡಾರ್ಕ್ ಕಾಮಿಡಿಯಲ್ಲಿ ಒಪ್ಪು-ತಪ್ಪುಗಳ ರೇಖೆ
ಹಾಸ್ಯವು ವ್ಯಕ್ತಿನಿಷ್ಠವಾಗಿದ್ದರೂ, ಅದು ಜವಾಬ್ದಾರಿಯುತವಾಗಿರಬೇಕು. ಹಾಸ್ಯವು ನಿರುಪದ್ರವಿಯಾಗಿ ನಿಭಾಯಿಸುವ ಸಾಧನವಾಗಬೇಕೇ ಹೊರತು ಬಾಯಿಗೆ ಬಂದಂತೆ ಮಾತನಾಡಿ ನಮ್ಮ ಮನಸ್ಥಿತಿಯ ಅನಾವರಣ ಮಾಡುವ ಅಪಾಯಕಾರಿ ಸಾಧನವಾಗಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಉಪಯೋಗಿಸುವ ರೀತಿಯು ನಾವು ನಿಂತ ನೆಲದ ಸಂಸ್ಕೃತಿ ಹಾಗೂ ಸಾಮಾಜಿಕವಾಗಿ ಜನರನ್ನು ಬೆಸೆಯುತ್ತದೆಯೇ ಎಂದು ನೋಡಬೇಕು. ಎರಡರ ನಡುವಿನ ಸಮತೋಲನ ಬ್ಯಾಲೆನ್ಸ್ ಏರುಪೇರಾದರೆ ರಣವೀರ್ ಆಡಿದ ಮಾತಿನಂತಾಗುತ್ತದೆ.
ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990
