BDA News: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ವಿಲಾಸಿ ವಿಲ್ಲಾ, ಪುನೀತ್‌ ರಾಜ್‌ಕುಮಾರ್‌ ವಸತಿ ಸಮುಚ್ಚಯದ ಸಮಗ್ರ ವಿವರ
ಕನ್ನಡ ಸುದ್ದಿ  /  ಜೀವನಶೈಲಿ  /  Bda News: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ವಿಲಾಸಿ ವಿಲ್ಲಾ, ಪುನೀತ್‌ ರಾಜ್‌ಕುಮಾರ್‌ ವಸತಿ ಸಮುಚ್ಚಯದ ಸಮಗ್ರ ವಿವರ

BDA News: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ವಿಲಾಸಿ ವಿಲ್ಲಾ, ಪುನೀತ್‌ ರಾಜ್‌ಕುಮಾರ್‌ ವಸತಿ ಸಮುಚ್ಚಯದ ಸಮಗ್ರ ವಿವರ

Bengaluru BDA Property: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಪುನೀತ್ ರಾಜಕುಮಾರ್ ವಸತಿ ಸಮುಚ್ಚಯ ಅಥವಾ ಬಿಡಿಎ ಲಗ್ಷುರಿ ವಿಲ್ಲಾವನ್ನು ಕೆಲವೇ ತಿಂಗಳಲ್ಲಿ ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಮಾಡಬಹುದು. ಬಿಡಿಎ ವಿಲ್ಲಾ ದರ, ಬಿಡಿಎ ವಿಲ್ಲಾ ಸೌಕರ್ಯಗಳ ವಿವರ ಇಲ್ಲಿದೆ.

ಪುನಿತ್‌ ರಾಜ್‌ಕುಮಾರ್‌ ವಸತಿ ಸಮುಚ್ಚಯದ ಸಮಗ್ರ ವಿವರ
ಪುನಿತ್‌ ರಾಜ್‌ಕುಮಾರ್‌ ವಸತಿ ಸಮುಚ್ಚಯದ ಸಮಗ್ರ ವಿವರ (Photo Credit: Google local guide Photo - Manish Singh)

ಬೆಂಗಳೂರು: ಉದ್ಯಾನ ನಗರ ಬೆಂಗಳೂರಿನಲ್ಲಿ ಖಾಸಗಿ ರಿಯಲ್‌ ಎಸ್ಟೇಟ್‌ ವಲಯ ಹೆಚ್ಚು ಜನಪ್ರಿಯ. ವಿಶೇಷವಾಗಿ ನಿವೇಶನ ಅಭಿವೃದ್ಧಿ, ಫ್ಲಾಟ್‌, ವಿಲ್ಲಾಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಆದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಪಾರ್ಟ್‌ಮೆಂಟ್‌ ಮತ್ತು ನಿವೇಶನ ಅಭಿವೃದ್ಧಿಗೆ ಸೀಮಿತವಾಗಿತ್ತು. ಕೆಲವೊಂದು ವಿಲ್ಲಾಗಳನ್ನೂ ರಚಿಸಿದೆ. ಆದರೆ, ಬಿಡಿಎ ಖಾಸಗಿ ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ಪೈಪೋಟಿ ನೀಡುವಂತೆ ಆಕರ್ಷಕ ವಿಲ್ಲಾ ಕೂಡ ಅಭಿವೃದ್ಧಿಪಡಿಸುತ್ತಿದೆ. ಪುನೀತ್‌ ರಾಜ್‌ಕುಮಾರ್‌ ವಸತಿ ಸಮುಚ್ಚಯ ಹೆಸರಿನ ಲಗ್ಷುರಿ ವಿಲ್ಲಾ (BDA Luxury Villas)ಗಳು ಇನ್ನೇನೂ ಪೂರ್ಣಗೊಳ್ಳುವ ಹಂತದಲ್ಲಿದೆ. ಬಿಡಿಎ ಮೂಲಗಳ ಪ್ರಕಾರ ಇನ್ನೆರಡು ತಿಂಗಳಲ್ಲಿ ಈ ಲಗ್ಷುರಿ ವಿಲ್ಲಾಗಳು ಪೂರ್ಣಗೊಳ್ಳಲಿವೆ.

ಬಿಡಿಎ ಲಗ್ಷುರಿ ವಿಲ್ಲಾ

ಪುನೀತ್‌ ರಾಜ್‌ಕುಮಾರ್‌ ಹೌಸಿಂಗ್‌ ಕಾಂಪ್ಲೆಕ್ಸ್‌ ಅಥವಾ ಪುನಿತ್‌ ರಾಜ್‌ಕುಮಾರ್‌ ವಸತಿ ಸಮುಚ್ಚಯ ಹೆಸರಿನ ಈ ಮಹಾತ್ವಕಾಂಕ್ಷಿ ಪ್ರಾಜೆಕ್ಟ್‌ ಅನ್ನು ಬಿಡಿಎ 2018ರಲ್ಲಿ ಆರಂಭಿಸಿತ್ತು. ಇದೀಗ ಈ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ಕನ್ನಡ ರಾಜ್ಯೋತ್ಸವದ ದಿನದಂದು ಈ ಯೋಜನೆ ಉದ್ಘಾಟನೆಗೊಳ್ಳಲಿದೆ. ಸುಮಾರು 31 ಎಕರೆ ಭೂಮಿಯಲ್ಲಿ ಸರಿಸುಮಾರು 271 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ನಿರ್ಮಾಣಗೊಳ್ಳುತ್ತಿದೆ.

ಬಿಡಿಎ ವಿಲಾಸಿ ವಿಲ್ಲಾ ಹೇಗಿದೆ?

ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಲಾದ ಈ ಬಿಡಿಎ ವಿಲಾಸಿ ವಿಲ್ಲಾದಲ್ಲಿ ಒಂದು ಪಾರ್ಕ್‌ ಇರಲಿದೆ. ಐದು ಲಕ್ಷ ಚದರಡಿ ಪ್ರದೇಶದಲ್ಲಿ ಸುಂದರ ಪಾರ್ಕ್‌ ಇರಲಿದೆ. ಕ್ರೀಡಾ ಪ್ರಿಯರಿಗಾಗಿ ಒಂದು ಬಾಸ್ಕೆಟ್‌ಬಾಲ್‌ ಕೋರ್ಟ್‌ ಇರಲಿದೆ. ಕ್ರಿಕೆಟ್‌ ಗ್ರೌಂಡ್‌ ಇರಲಿದೆ. ಮಕ್ಕಳಿಗೆ ಆಡಲು ಪ್ರತ್ಯೇಕ ಪ್ಲೇ ಗ್ರೌಂಡ್‌ ಇರಲಿದೆ. ಈ ಪುನಿತ್‌ ರಾಜ್‌ಕುಮಾರ್‌ ವಸತಿ ಸಮುಚ್ಚಯದಲ್ಲಿ ಕ್ಲಬ್‌ಹೌಸ್‌ ಕೂಡ ಇರಲಿದೆ. 44,000 ಚದರಡಿ ಸ್ಥಳದಲ್ಲಿ ಕ್ಲಬ್‌ಹೌಸ್‌ ನಿರ್ಮಾಣಗೊಳ್ಳುತ್ತಿದೆ. ಈ ಕ್ಲಬ್‌ ಹೌಸ್‌ನೊಳಗೆ ಪಾರ್ಟಿ ಹಾಲ್‌, ವಾಣಿಜ್ಯ ಮಳಿಗೆ, ಹೆಲ್ತ್‌ ವಿಭಾಗ, ಮನರಂಜನೆ ವಿಭಾಗ, ಯೋಗ ಧ್ಯಾನಕ್ಕೆ ಸ್ಥಳ ಇತ್ಯಾದಿಗಳು ಇರಲಿವೆ. ಇದರೊಂದಿಗೆ ಹಲವು ಒಳಾಂಗಣ ಆಟಗಳು ಕ್ಲಬ್‌ಹೌಸ್‌ನಲ್ಲಿ ಇರಲಿವೆ.

ಈ ವಿಲ್ಲಾಗಳು ಭಾರತೀಯ ವಿನ್ಯಾಸ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಪ್ರತಿಯೊಂದು ವಿಲ್ಲಾದ ಮುಂದೆಯು ಪುಟಾಣಿ ಪಾರ್ಕ್‌ ಇರಲಿದೆ. ಮಳೆ ನೀರು ಕೊಯ್ಲು, ಸೋಲಾರ್‌ ವಿದ್ಯುತ್‌, ಪಾರ್ಕಿಂಗ್‌ ವ್ಯವಸ್ಥೆ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ವಿಲ್ಲಾಗಳು ಹೊಂದಿರುತ್ತವೆ.

ಬಿಡಿಎ ಪ್ರಾಪರ್ಟಿ ಎಂದರೆ ಗುಣಮಟ್ಟ ಅಷ್ಟಾಗಿ ಇರುವುದಿಲ್ಲ ಎನ್ನುವುದು ಸಾಮಾನ್ಯ ನಂಬಿಕೆ. ಈಗಾಗಲೇ ಇರುವ ಬಿಡಿಎ ಫ್ಲಾಟ್‌ಗಳನ್ನು ನೋಡುವಾಗ ಇಂತಹ ಅಭಿಪ್ರಾಯವನ್ನು ಬಹುತೇಕರು ವ್ಯಕ್ತಪಡಿಸುತ್ತಾರೆ. ಆದರೆ, ಈ ಬಿಡಿಎ ವಿಲ್ಲಾ ಅಂತಹ ಎಲ್ಲಾ ದೂರುಗಳಿಂದ ದೂರವುಳಿಯುವ ನಿರೀಕ್ಷೆಯಿದೆ. ಖಾಸಗಿ ವಿಲ್ಲಾಗಳಿಗೆ ಸೆಡ್ಡು ಹೊಡೆಯುವ ರೀತಿ ಇದನ್ನು ನಿರ್ಮಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲಿದೆ ಬಿಡಿಎ ವಿಲ್ಲಾಸಿ ವಿಲ್ಲಾ?

ಬೆಂಗಳೂರಿನಲ್ಲಿ ಬಿಡಿಎ ಅಭಿವೃದ್ಧಿಪಡಿಸುತ್ತಿರುವ ಈ ವಿಲಾಸಿ ವಿಲಾವು ಉತ್ತರ ಬೆಂಗಳೂರಿನ ದಾಸನಪುರ ಸಮೀಪ ಹುಣ್ಣಿಗೆರೆ ಗ್ರಾಮದಲ್ಲಿದೆ. ಬೆಂಗಳೂರಿನ ಹೊರವಲಯದಲ್ಲಿ ವಸತಿ ಹೊಂದಬೇಕೆಂದು ಬಯಸುವವರಿಗೆ ಇದು ಸೂಕ್ತವಾಗಿದೆ.

ಬಿಡಿಎ ವಿಲ್ಲಾ ದರ ವಿವರ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 4 ಬಿಎಚ್‌ಕೆಯ 170 ವಿಲ್ಲಾಗಳನ್ನು ಮತ್ತು 4 ಬಿಎಚ್‌ಕೆಯ 152 ವಿಲ್ಲಾಗಳನ್ನು ಹೊಂದಿದೆ. ಈ ವಿಲ್ಲಾಗಳು 1,500-2,300 ಚದರಡಿ ಕಾರ್ಪೆಟ್‌ ಪ್ರದೇಶ ಹೊಂದಿರಲಿದೆ. ಇದರ ದರ 75 ಲಕ್ಷ ರೂಪಾಯಿಯಿಂದ 1.1 ಕೋಟಿ ರೂ.ವರೆಗೆ ಇರಬಹುದು. ಮೂಲಗಳ ಪ್ರಕಾರ ಮಾರಾಟದ ಸಮಯದಲ್ಲಿ ಈ ದರವು ಶೇಕಡ 10ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದೇ ಪ್ರದೇಶದಲ್ಲಿ 1 ಬಿಎಚ್‌ಕೆಯ 320 ಫ್ಲ್ಯಾಟ್‌ಗಳನ್ನೂ ಬಿಡಿಎ ನಿರ್ಮಿಸುತ್ತಿದೆ. ಇದರ ದರ 14 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ. ವಿಲ್ಲಾದಲ್ಲಿ ವಾಸಿಸುವವರು ತಮ್ಮ ಮನೆ ಕೆಲಸಗಾರರಿಗೆ ಅಥವಾ ಇತರೆ ಸಿಬ್ಬಂದಿಗಳಿಗಾಗಿ ಈ 1 ಬಿಎಚ್‌ಕೆ ಮನೆಯನ್ನು ಖರೀದಿಸಬಹುದಾಗಿದೆ.

ಬಿಡಿಎ ವಿಲ್ಲಾ ಬುಕ್ಕಿಂಗ್‌ ಹೇಗೆ?

ನವೆಂಬರ್‌ 1ರಿಂದ ಈ ನೂತನ ಬಿಡಿಎ ವಿಲ್ಲಾ ಬುಕ್ಕಿಂಗ್‌ ಆರಂಭವಾಗುವ ಸೂಚನೆಯಿದೆ. ಆನ್‌ಲೈನ್‌ನಲ್ಲಿ ಮಾತ್ರ ಬುಕ್ಕಿಂಗ್‌ ಮಾಡಲು ಅವಕಾಶವಿದೆ. ಬಿಡಿಎ ವೆಬ್‌ಸೈಟ್‌ಗೆ ಹೋಗಿ ಪುನೀತ್‌ ರಾಜ್‌ಕುಮಾರ್‌ ವಸತಿ ಸಮುಚ್ಚಯದ ವಿಲ್ಲಾಗಳನ್ನು ಬುಕ್ಕಿಂಗ್‌ ಮಾಡಿಕೊಳ್ಳಬಹುದಾಗಿದೆ. ಬಿಡಿಎ ವೆಬ್‌ಸೈಟ್‌ ವಿಳಾಸ: https://bda.karnataka.gov.in/en

HT Kannada Realty: ಕನ್ನಡದಲ್ಲಿ ರಿಯಲ್‌ ಎಸ್ಟೇಟ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Whats_app_banner