Recipe: ತಾಜಾ ಭಕ್ಷ್ಯವಲ್ಲ , ಇವುಗಳನ್ನು ತಯಾರಿಸಿದ ಮಾರನೇ ದಿನ ಸವಿದರೆ ರುಚಿಯಾಗುತ್ತೆ ದುಪ್ಪಟ್ಟು
ಕನ್ನಡ ಸುದ್ದಿ  /  ಜೀವನಶೈಲಿ  /  Recipe: ತಾಜಾ ಭಕ್ಷ್ಯವಲ್ಲ , ಇವುಗಳನ್ನು ತಯಾರಿಸಿದ ಮಾರನೇ ದಿನ ಸವಿದರೆ ರುಚಿಯಾಗುತ್ತೆ ದುಪ್ಪಟ್ಟು

Recipe: ತಾಜಾ ಭಕ್ಷ್ಯವಲ್ಲ , ಇವುಗಳನ್ನು ತಯಾರಿಸಿದ ಮಾರನೇ ದಿನ ಸವಿದರೆ ರುಚಿಯಾಗುತ್ತೆ ದುಪ್ಪಟ್ಟು

ತಾಜಾ ಆಹಾರವನ್ನು ಸೇವಿಸುವುದು ಎಂದರೆ ಎಲ್ಲರಿಗೂ ಇಷ್ಟವೇ. ಅದು ಆರೋಗ್ಯಕ್ಕೆ ಒಳ್ಳೆಯದು ಕೂಡ. ಆದರೆ ಭಾರತೀಯ ಪಾಕ ಪದ್ಧತಿಯಲ್ಲಿ ಕೆಲವೊಂದು ಆಹಾರ ಪದಾರ್ಥಗಳು ಯಾವ ರೀತಿ ಇವೆ ಎಂದರೆ, ಅವುಗಳನ್ನು ನೀವು ಇಂದು ತಯಾರಿಸಿ ನಾಳೆ ತಿಂದಾಗ ಮಾತ್ರ ಅವುಗಳ ರುಚಿ ದುಪ್ಪಟ್ಟಾಗಿರುವುದು ನಿಮ್ಮ ಗಮನಕ್ಕೆ ಬರುತ್ತದೆ.

ಇವುಗಳನ್ನು ತಯಾರಿಸಿದ ಮಾರನೇ ದಿನ ಸವಿದರೆ ಆ ಮಜಾವೇ ಬೇರೆ
ಇವುಗಳನ್ನು ತಯಾರಿಸಿದ ಮಾರನೇ ದಿನ ಸವಿದರೆ ಆ ಮಜಾವೇ ಬೇರೆ (Pixabay)

ನೀವು ಎಷ್ಟೇ ಪಾಶ್ಚಾತ್ಯ ಆಹಾರ ಪದಾರ್ಥಗಳ ರುಚಿಯನ್ನು ಸವಿದಿರಬಹುದು. ಆದರೆ ಭಾರತೀಯ ಪಾಕ ಪದ್ಧತಿಗೆ ಸಾಟಿ ಯಾವುದೂ ಇಲ್ಲ ಎಂದರೆ ನೀವು ಒಪ್ಪಲೇಬೇಕು. ಭಾರತೀಯ ಪಾಕ ಪದ್ಧತಿಯಲ್ಲಿ ಇರುವ ವೈವಿಧ್ಯತೆಯು ಇನ್ಯಾವುದೇ ಪಾಕ ಪದ್ಧತಿಯಲ್ಲಿ ಸಿಗಲು ಸಾಧ್ಯವೇ ಇಲ್ಲ. ಭಾರತದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪಾಕ ಶೈಲಿಯು ಬದಲಾಗುತ್ತಾ ಹೋಗುತ್ತದೆ. ಅದೇ ರೀತಿ ರುಚಿ ಕೂಡ ಬದಲಾಗುತ್ತದೆ. ತರಕಾರಿ, ಮಾಂಸ, ಮಸಾಲೆ ಪದಾರ್ಥಗಳು ಒಂದೇ ಆಗಿದ್ದರೂ ಸಹ ಅವುಗಳನ್ನು ಬಳಸುವ ಪ್ರಮಾಣ ಹಾಗೂ ವಿಧಾನ ಬೇರೆ ರೀತಿ ಇರುತ್ತದೆ. ಕೆಲವೊಂದು ಆಹಾರ ಪದಾರ್ಥಗಳನ್ನು ನೀವು ದೀರ್ಘಕಾಲದವರೆಗೆ ಇಟ್ಟಷ್ಟೂ ಅದರ ರುಚಿ ಇನ್ನಷ್ಟು ಹೆಚ್ಚುತ್ತಾ ಹೋಗುತ್ತದೆ.

ಸಾಮಾನ್ಯವಾಗಿ ಯಾವುದೇ ಅಡುಗೆಗಳನ್ನು ಇಂದು ಮಾಡಿದರೆ ಅದು ನಾಳೆ ಎನ್ನುವಾಗ ಕೆಟ್ಟು ಹೋಗುತ್ತದೆ. ಆದರೆ ಭಾರತೀಯ ಪಾಕ ಪದ್ಧತಿಯ ವೈಶಿಷ್ಟ್ಯ ಏನೆಂದರೆ ಬಹುತೇಕ ಭಕ್ಷ್ಯಗಳು ದಿನ ಕಳೆದಂತೆ ರುಚಿ ಹೆಚ್ಚಿಸಿಕೊಳ್ಳುತ್ತಾ ಹೋಗುತ್ತವೆ. ದೀರ್ಘಕಾಲದವರೆಗೆ ಅಹಾರ ಪದಾರ್ಥಗಳನ್ನು ಕಡಿಮೆ ಉರಿಯಲ್ಲಿ ಬೇಯಿಸುವುದರಿಂದ ಅವುಗಳ ರುಚಿ ಹೆಚ್ಚಾಗುವುದು ಮಾತ್ರವಲ್ಲದೇ ದೀರ್ಘಕಾಲದವರೆಗೆ ಕೆಡದೇ ಇನ್ನಷ್ಟು ರುಚಿಯನ್ನು ಕೊಡುತ್ತವೆ. ಈ ರೀತಿ ಕೆಲವು ಇಂದು ಮಾಡಿದ ಅಡುಗೆಯು ನಾಳೆ ಇನ್ನಷ್ಟು ರುಚಿ ನೀಡುವಂತಹ ಭಕ್ಷ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.

ಚಿಕನ್ ಸಾಂಬಾರ್

ಮಾಂಸಾಹಾರಿಗಳ ಮನೆಯಲ್ಲಿ ಸಾಮಾನ್ಯವಾಗಿ ತಯಾರಿಸುವ ಮಾಂಸಾಹಾರಿ ಪದಾರ್ಥಗಳ ಪೈಕಿ ಚಿಕನ್ ಸಾರು ಕೂಡ ಒಂದು. ಅರಿಶಿಣ, ಜೀರಿಗೆ, ಕೊತ್ತಂಬರಿ ವಿವಿಧ ಗರಂ ಮಸಾಲ ಪದಾರ್ಥಗಳನ್ನು ಹಾಕಿ ತಯಾರಿಸುವ ಚಿಕನ್ ಸಾಂಬಾರಿನ ಪರಿಮಳ ಸವಿದವನೇ ಭಾಗ್ಯವಂತ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈರುಳ್ಳಿ, ಟೊಮೆಟೋ, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪುಗಳೊಂದಿಗೆ ಕೋಳಿ ಮಾಂಶ ಬೇಯಿಸಿ ಅದಕ್ಕೆ ಮಸಾಲೆಯನ್ನು ಸೇರಿಸಿ ಸಾಂಬಾರು ತಯಾರಿಸುವ ಮಜವೇ ಬೇರೆ. ಚಿಕನ್ ಸಾಂಬಾರ್ ತಯಾರಿಸಿದ ಕೂಡಲೇ ಸೇವಿಸುವುದಕ್ಕಿಂತಲೂ ತಯಾರಿಸಿದ ಕೆಲವು ಸಮಯಗಳ ಬಳಿಕ ಅಥವಾ ಮಾರನೇ ದಿನ ಸವಿಯಲು ಇನ್ನೂ ರುಚಿಕರವಾಗಿರುತ್ತದೆ.

ರಾಜ್ಮಾ ಗ್ರೇವಿ

ಇದು ಉತ್ತರ ಭಾರತದ ಅತ್ಯಂತ ಜನಪ್ರಿಯವಾದ ಗ್ರೇವಿ. ರಾಜ್ಮಾ ಕಾಳುಗಳಿಂದ ತಯಾರಿಸುವ ಈ ಗ್ರೇವಿಯು ರಾತ್ರಿ ವೇಳೆಯಲ್ಲಿ ತನ್ನ ರುಚಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತದೆ. ಟೊಮೆಟೋ , ಜೀರಿಗೆ, ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಗರಂ ಮಾಸಾಲೆ ಸೇರಿದಂತೆ ಇತರೆ ಮಸಾಲೆಗಳನ್ನು ಬಳಸಿ ತಯಾರಿಸುವ ರಾಜ್ಮಾ ಗ್ರೇವಿಯು ಉತ್ತಮ ಪರಿಮಳ ಹೊಂದಿರುತ್ತದೆ. ಇದನ್ನು ಕೂಡ ಕಡಿಮೆ ಉರಿಯಲ್ಲಿ ನಿಧಾನವಾಗಿ ಬೇಯಿಸಿದಷ್ಟೂ ಹೆಚ್ಚು ದಿನ ಬಾಳಿಕೆ ಬರುತ್ತದೆ. ರಾತ್ರಿ ಗ್ರೇವಿ ಮಾಡಿಟ್ಟು ಮಾರನೇ ದಿನ ಸವಿದರೆ ರಾಜ್ಮಾ ಗ್ರೇವಿ ಬಾಯಿಗೆ ಇನ್ನಷ್ಟು ಮಜಾ ಕೊಡುತ್ತದೆ.

ಪಾಲಕ್ ಪನ್ನೀರ್

ಪಾಲಕ್ ಪನ್ನೀರ್ ರುಚಿಗೆ ಮಾರು ಹೋಗದ ಭಾರತೀಯರೇ ಇಲ್ಲ. ಜೀರಿಗೆ ಕೊತ್ತಂಬರಿ, ಗರಂ ಮಸಾಲಾ, ಪಾಲಕ್ ಪ್ಯೂರಿ , ಪನ್ನೀರ್‌ ಬಳಸಿ ತಯಾರಿಸುವ ಈ ಗ್ರೇವಿಯು ಪರಾಠಾದೊಂದಿಗೆ ಸವಿಯುವ ಮಜವೇ ಬೇರೆ. ಐಷಾರಾಮಿ ಮದುವೆಗಳಲ್ಲಿ ಪಾಲಾಕ್ ಪನ್ನೀರ್ ಬೇಕೇ ಬೇಕು. ಪಾಲಾಕ್ ಪನ್ನೀರ್ ಕೂಡ ಸಮಯ ಕಳೆದಂತೆ ತನ್ನ ರುಚಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ.

ಕಢಿ

ಕಡಲೇ ಹಿಟ್ಟು, ಮೊಸರು, ಜೀರಿಗೆ ಹಾಗೂ ಅರಿಶಿಣದಂತಹ ಪದಾರ್ಥಗಳನ್ನು ಬಳಸಿ ತಯಾರಿಸುವ ಅತ್ಯಂತ ಪರಿಮಳಯುಕ್ತ ಈ ಪದಾರ್ಥ ಕೂಡ ಸವಿಯಲು ಸಖತ್ ರುಚಿಯಾಗಿರುತ್ತದೆ. ಆದರೆ ಈ ಪದಾರ್ಥವು ರಾತ್ರಿ ಕಳೆದು ಮಾರನೇ ದಿನ ತನ್ನ ಸುವಾಸನೆ ಇನ್ನಷ್ಟು ಹೆಚ್ಚಿಸಿಕೊಂಡು ಮತ್ತಷ್ಟು ರುಚಿ ನೀಡುತ್ತದೆ. ಭಾಸುಮತಿ ಅನ್ನ ಹಾಗೂ ಪಾರಾಠಾ ದೊಂದಿಗೆ ಈ ಭಕ್ಷ್ಯ ಸವಿಯಲು ರುಚಿಕರವಾಗಿರುತ್ತದೆ.

Whats_app_banner