ಅಂಬೆ ದಾಲ್, ಅಂಬೆ ಉಪ್ಕರಿ, ಮಾವು ಸಿಗಡಿ ಸಾಂಬಾರ್: ಮಾವಿನಕಾಯಿ ಬಳಸಿ ತಯಾರಿಸುವ ಕೊಂಕಣಿ ಶೈಲಿಯ ಪ್ರಸಿದ್ಧ ಭಕ್ಷ್ಯಗಳಿವು
Mango Dishes: ಪ್ರಸಿದ್ಧ ಪಾಕ ಪದ್ಧತಿಗಳ ಪೈಕಿ ಕೊಂಕಣಿ ಶೈಲಿಯ ಪಾಕ ಪದ್ಧತಿಯೂ ಒಂದು. ಕೊಂಕಣಿಯರಿಗೂ ಮಾವಿಗೂ ಎಲ್ಲಿಲ್ಲದ ನಂಟು. ಮಾವಿನ ಕಾಯಿಯಿಂದ ಕೊಂಕಣಿ ಶೈಲಿಯಲ್ಲಿ ತಯಾರಿಸುವ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮಾಲ್ವಣಿ ಪಾಕಪದ್ಧತಿ ಅಥವಾ ಕೊಂಕಣಿ ಪಾಕ ಪದ್ಧತಿ ಎನ್ನುವುದು ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ಭಾಗಗಳಲ್ಲಿ ಹೆಚ್ಚು ಪ್ರಚಲಿತದಲ್ಲಿ ಇರುವ ಪಾಕ ಪದ್ಧತಿಯಾಗಿದೆ. ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಕೊಂಕಣಿ ಶೈಲಿ ಪಾಕಪದ್ಧತಿಯು ಹೆಚ್ಚು ಜನಪ್ರಿಯವಾಗಿರುವುದರಿಂದ ಇವರ ಅಡುಗೆಗಳು ಹೆಚ್ಚಾಗಿ ಸಮುದ್ರದೊಂದಿಗೆ ನಂಟನ್ನು ಹೊಂದಿರುತ್ತದೆ. ಕರಾವಳಿ ಭಾಗದಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಕೊಂಕಣಿ ಪಾಕ ಪದ್ಧತಿಯಲ್ಲಿ ಹೆಚ್ಚು ಬಳಸಿಕೊಳ್ಳಲಾಗುತ್ತದೆ. ಸಮುದ್ರ ಜೀವಿಗಳಿಂದ ತಯಾರಿಸುವ ಆಹಾರ ಪದಾರ್ಥಗಳು ಇವರಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿವೆ. ಆದರೂ ಸಹ ಕೊಂಕಣಿ ಜನತೆ ಮಾವಿನ ಹಣ್ಣು ನೋಡಿದರೆ ಸುಮ್ಮನೆ ಬಿಡುವವರಂತೂ ಖಂಡಿತ ಅಲ್ಲ. ಕೊಂಕಣಿ ಶೈಲಿಯ ಮಾವಿನ ಹಣ್ಣಿಯ ವಿವಿಧ ಅಡುಗೆಯ ಪ್ರಕಾರಗಳನ್ನು ತಿಳಿದುಕೊಳ್ಳೋಣ.
ಅಂಬೆ ದಾಲ್
ಹೆಸರು ಕೇಳಿದಾಗ ಇದು ಯಾವುದರಿಂದ ತಯಾರಿಸುವ ಭಕ್ಷ್ಯ ಎಂದು ತಿಳಿಯದೇ ಹೋಗಬಹುದು. ಆದರೆ ಇದು ಮಹಾರಾಷ್ಟ್ರದ ಸಾಂಪ್ರದಾಯಿಕ ಮಾವಿನ ಕಾಯಿ ಚಟ್ನಿಯಾಗಿದೆ. ಈ ಚಟ್ನಿ ಎಷ್ಟು ಸುವಾಸನೆಯಿಂದ ಕೂಡಿರುತ್ತದೆ ಎಂದರೆ ಇದನ್ನು ಸವಿಯದೇ ಇರಲು ಸಾಧ್ಯವೇ ಇಲ್ಲ. ಇದನ್ನು ತಯಾರಿಸುವುದು ಕೂಡ ಬಲು ಸುಲಭ. ಕಡ್ಲೆ ಬೇಳೆಯನ್ನು ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಿ ಇಡಬೇಕು. ಬಳಿಕ ಕಡ್ಲೆಬೇಳೆಯೊಂದಿಗೆ ಮಾವಿನ ಕಾಯಿಯ ತಿರುಳನ್ನು ಸೇರಿಸಿ ರುಬ್ಬಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಬೇಕು. ಕೊನೆಯಲ್ಲಿ ಸಾಸಿವೆ ಕಾಳು, ಜೀರಿಗೆ, ಕೆಂಪು ಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಯೊಂದಿಗೆ ಒಗ್ಗರಣೆ ಮಾಡಿ ಹಾಕಬೇಕು. ಈ ಚಟ್ನಿ ಅತ್ಯಂತ ಸುಲಭದಲ್ಲಿ ತಯಾರಾಗುತ್ತದೆ.
ಅಂಬೆ ಉಪ್ಕರಿ
ಕೊಂಕಣಿ ಶೈಲಿಯ ಮತ್ತೊಂದು ಜನಪ್ರಿಯ ತಿನಿಸುಗಳಲ್ಲಿ ಅಂಬೆ ಉಪ್ಕರಿ ಕೂಡ ಒಂದು. ಊಟದ ಜೊತೆಯಲ್ಲಿ ಇದೊಂದು ಇದ್ದುಬಿಟ್ಟರೆ ಆ ಊಟದ ಮಜವೇ ಬೇರೆ. ಸಿಹಿ ಸಿಹಿಯಾಗಿ, ಖಾರ ಖಾರವಾಗಿ ಊಟದ ಜೊತೆ ಏನಾದರೂ ಬೇಕು ಎಂದು ಬಯಸುವವರಿಗೆ ಇದು ಉತ್ತಮ ಆಯ್ಕೆ. ಇದನ್ನು ಮಾಗಿದ ರಸಭರಿತ ಮಾವಿನ ಹಣ್ಣಿನಿಂದ ತಯಾರಿಸಲಾಗುತ್ತದೆ. ಈ ಖಾದ್ಯದ ರುಚಿಯನ್ನು ಇನ್ನಷ್ಟು ಹೆಚ್ಚಿಸಲು ಬೆಲ್ಲದ ಪುಡಿ ಹಾಗೂ ಹಸಿರು ಮೆಣಸಿನಕಾಯಿಯನ್ನು ಮಾವಿನ ಹಣ್ಣಿನ ತಿರುಳಿನೊಂದಿಗೆ ಸೇರಿಸಬೇಕು. ಬಿಸಿ ಬಿಸಿಯಾದ ಅನ್ನಕ್ಕೆ ತುಪ್ಪ ಸೇರಿಸಿ ಅದರ ಜೊತೆಗೆ ಉಪ್ಕರಿ ಹಾಕಿಕೊಂಡು ತಿಂದರೆ ಯಾವ ಮೃಷ್ಟಾನ್ನ ಭೋಜನಕ್ಕೂ ಕಡಿಮೆ ಇರುವುದಿಲ್ಲ.
ಗೋಡ್ ಅಂಬಾ ಲೋಂಚೆ
ಇದನ್ನು ನೀವು ಕೊಂಕಣಿ ಶೈಲಿಯ ಉಪ್ಪಿನಕಾಯಿ ಎಂದು ಕರೆಯಬಹುದು. ಇದು ಭಾರತೀಯರು ಹೆಚ್ಚು ಇಷ್ಟಪಡುವ ಉಪ್ಪಿನಕಾಯಿಯ ಪ್ರಕಾರಗಳಲ್ಲಿ ಒಂದು. ತಾಜಾ ಮಾವಿನಕಾಯಿಯನ್ನು ತೆಗೆದುಕೊಂಡು ಅವುಗಳಿಗೆ ಸಾಸಿವೆ, ಬೆಲ್ಲ, ನಿಂಬೆ ರಸ, ಇಂಗು, ಲವಂಗ ಸೇರಿದಂತೆ ಇತರೆ ಕೆಲವು ಸ್ಥಳೀಯ ಮಸಾಲೆ ಪದಾರ್ಥಗಳನ್ನು ಸೇರಿಸಿ ಈ ಉಪ್ಪಿನಕಾಯಿಯನ್ನು ತಯಾರಿಸುತ್ತಾರೆ. ಕಡು ಕಂದು ಬಣ್ಣದ ಈ ಉಪ್ಪಿನಕಾಯಿಯು ಊಟಕ್ಕೆ ಹೊಸ ರುಚಿ ತಂದುಕೊಂಡುವುದರಲ್ಲಿ ಯಾವುದೇ ಸಂದೇಹವಿಲ್ಲ.
ಮಾವು ಸಿಗಡಿ ಸಾಂಬಾರ್
ಇದು ಕೂಡ ಕೊಂಕಣಿ ಶೈಲಿಯ ಅತ್ಯಂತ ಪ್ರಚಲಿತ ಭಕ್ಷ್ಯಗಳಲ್ಲಿ ಒಂದಾಗಿದೆ. ಕೊಂಕಣಿ ಶೈಲಿಯ ಅಡುಗೆಯ ವಿಶೇಷವೇ ಅದರ ಸುವಾಸನೆ. ಸಾಮಾನ್ಯ ಸಿಗಡಿ ಸಾಂಬಾರ್ ಮಾಡುವ ಬದಲಿಗೆ ಅದಕ್ಕೆ ಮಾವಿನ ಕಾಯಿಯ ಜೊತೆ ಸೇರಿಸಿದರೆ ಆ ಸವಿಯೇ ಬೇರೆ. ತಾಜಾ ಮಾವಿನಕಾಯಿ , ಟೊಮೆಟೋ ಹಾಗೂ ಕೊತ್ತಂಬರಿ ಪುಡಿಗಳನ್ನು ಬಳಸಿ ಜೊತೆಗೆ ಸಮುದ್ರದ ಸಿಗಡಿಯನ್ನು ಹಾಕಿ ಸಾಂಬಾರ್ ಮಾಡಿದರೆ ಬಾಯಲ್ಲಿ ನೀರು ಬರೋದೊಂದು ಬಾಕಿ. ಅನ್ನದೊಂದಿಗೆ ಈ ಸಾಂಬಾರ್ ತಿನ್ನುವ ಮಜವೇ ಬೇರೆ.
ಸಾವ್
ಮಂಗಳೂರು ಹಾಗೂ ಗೋವಾದಲ್ಲಿ ಕೊಂಕಣಿ ಭಾಷಿಕರು ಹೆಚ್ಚಾಗಿ ಮಾಡುವ ಮಾವಿನ ಭಕ್ಷ್ಯಗಳಲ್ಲಿ ಇದೂ ಒಂದು. ಸಾವ್ ಎಂದರೆ ಕನ್ನಡ ಭಾಷೆಯಲ್ಲಿ ಸಾಸಿವೆ ಎಂದರ್ಥ. ಈ ಪದಾರ್ಥವನ್ನು ತಯಾರಿಸೋಕೆ ಮುಖ್ಯವಾಗಿ ಬೇಕಾಗಿರುವ ಪದಾರ್ಥ ಇದೇ ಆಗಿರೋದ್ರಿಂದ ಇದಕ್ಕೆ ಆ ಹೆಸರು ಬಂದಿದೆ. ಕನ್ನಡದಲ್ಲಿ ಇದನ್ನು ಮಾವಿನ ಹಣ್ಣಿನ ಸಾಸಿವೆ ಎಂದು ಕರೆಯುತ್ತೇವೆ. ಇದು ಒಂದು ರೀತಿಯಲ್ಲಿ ಸಿಹಿ, ಹುಳಿ, ಕಹಿ, ಖಾರ ಎಲ್ಲದರ ಮಿಶ್ರಣ ಹೊಂದಿರುವ ಗ್ರೇವಿ ಆಗಿದೆ. ಮಾವಿನ ಹಣ್ಣಿನ ಜೊತೆಯಲ್ಲಿ ಸಾಸಿವೆ ಬೀಜಗಳನ್ನು ಹಾಕಿ ರುಬ್ಬಿಕೊಂಡು ಬಳಿಕ ಖಾರ ಹಾಗೂ ಉಪ್ಪನ್ನು ಸೇರಿಸಿ ಕರಿಬೇವಿನ ಖಡಕ್ ಒಗ್ಗರಣೆ ಕೊಟ್ಟರೆ ರುಚಿ ರುಚಿಯಾದ ಸಾಸಿವೆ ತಯಾರಾಗುತ್ತದೆ.
ಇನ್ನಷ್ಟು ರೆಸಿಪಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಅತ್ಯಧಿಕ ಪೋಷಕಾಂಶ ಇರುವ ಬ್ರೇಕ್ಫಾಸ್ಟ್ ಐಟಂಗಳಿವು; ತೂಕ ಇಳಿಸೋ ಪ್ಲಾನ್ ಇರೋರಿಗು ಇದು ಬೆಸ್ಟ್

ವಿಭಾಗ