ಮಳೆಗಾಲದ ಸಂಜೆಗೆ ಸಖತ್‌ ಕಾಂಬಿನೇಷನ್‌ ಚುರುಮುರಿ: ಕಡ್ಲೆಪುರಿಯಿಂದ ತಯಾರಿಸಬಹುದು ಇಷ್ಟೆಲ್ಲಾ ರುಚಿಕರ ಸ್ನ್ಯಾಕ್ಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  ಮಳೆಗಾಲದ ಸಂಜೆಗೆ ಸಖತ್‌ ಕಾಂಬಿನೇಷನ್‌ ಚುರುಮುರಿ: ಕಡ್ಲೆಪುರಿಯಿಂದ ತಯಾರಿಸಬಹುದು ಇಷ್ಟೆಲ್ಲಾ ರುಚಿಕರ ಸ್ನ್ಯಾಕ್ಸ್‌

ಮಳೆಗಾಲದ ಸಂಜೆಗೆ ಸಖತ್‌ ಕಾಂಬಿನೇಷನ್‌ ಚುರುಮುರಿ: ಕಡ್ಲೆಪುರಿಯಿಂದ ತಯಾರಿಸಬಹುದು ಇಷ್ಟೆಲ್ಲಾ ರುಚಿಕರ ಸ್ನ್ಯಾಕ್ಸ್‌

Chat Recipes: ನಿಮ್ಮ ಸಂಜೆಯ ಚಹಾದೊಂದಿಗೆ ಏನನ್ನಾದರೂ ಸವಿಯಬೇಕೆಂಬ ಕಡುಬಯಕೆ ಶುರುವಾಗಿದ್ಯಾ? ಹಾಗಿದ್ದರೆ ಕಡ್ಲೆಪುರಿ ಅಥವಾ ಮಂಡಕ್ಕಿಯಿಂದ ತಯಾರಿಸಬಹುದಾದ ಈ ಚಾಟ್‍ಗಳನ್ನು ತಯಾರಿಸಿ, ಸವಿಯಿರಿ. ತಿನ್ನಲು ಟೇಸ್ಟಿಯಾಗಿರುವುದು ಮಾತ್ರವಲ್ಲದೆ, ತಯಾರಿಸುವುದು ಕೂಡ ತುಂಬಾನೇ ಸಿಂಪಲ್. (ಬರಹ: ಪ್ರಿಯಾಂಕಾ ಗೌಡ)

ಮಳೆಗಾಲದ ಸಂಜೆಯ ತಿಂಡಿಗೆ ಆಹಾ ಚುರುಮುರಿ: ಕಡ್ಲೆಪುರಿಯಿಂದ ತಯಾರಿಸಿ ಈ ರುಚಿಕರವಾದ ಸ್ನಾಕ್ಸ್
ಮಳೆಗಾಲದ ಸಂಜೆಯ ತಿಂಡಿಗೆ ಆಹಾ ಚುರುಮುರಿ: ಕಡ್ಲೆಪುರಿಯಿಂದ ತಯಾರಿಸಿ ಈ ರುಚಿಕರವಾದ ಸ್ನಾಕ್ಸ್ (Image: Slurrp)

ಕಡ್ಲೆಪುರಿ ಅಥವಾ ಮಂಡಕ್ಕಿ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತೀಯ ಸ್ಟ್ರೀಟ್ ಫುಡ್‍ಗಳಲ್ಲಿ ಇದೊಂದು ಬಹಳ ಜನಪ್ರಿಯವಾಗಿದ್ದು ಮಾತ್ರವಲ್ಲದೆ ಕೈಗೆಟಕುವ ತಿಂಡಿಯಾಗಿದೆ. ಅತ್ಯಂತ ಕಡಿಮೆ ಬೆಲೆಗೆ ಇದು ದೊರಕುವುದರಿಂದ ಬಹುತೇಕ ಮಂದಿಯ ನೆಚ್ಚಿನ ಚಾಟ್ ಆಹಾರವಾಗಿದೆ. ಬಂಗಾಳದ ಮಸಾಲೆಯುಕ್ತ ಜಲ್ಮುರಿಯಿಂದ ಹಿಡಿದು ಮುಂಬೈನ ಭೇಲ್ಪುರಿಯವರೆಗೆ, ದೇಶದ ವಿವಿಧ ಪ್ರದೇಶಗಳಲ್ಲಿ ಮಂಡಕ್ಕಿಯ ಹಲವು ಬಗೆಯ ಚಾಟ್‍ಗಳನ್ನು ತಯಾರಿಸಲಾಗುತ್ತದೆ.

ಭೇಲ್ಪುರಿ ಒಂದು ಜನಪ್ರಿಯ ಭಾರತೀಯ ಬೀದಿ ತಿನಿಸಾಗಿದೆ. ಸಂಜೆಯಾಗುತ್ತಲೇ ಭೇಲ್ಪುರಿ ಸವಿಯಲೆಂದೇ ಜನರು ಸ್ಟ್ರೀಟ್‍ ಫುಡ್‍ಗಳಿರುವತ್ತ ಜಮಾಯಿಸುತ್ತಾರೆ. ತಿನ್ನಲು ರುಚಿಕರವಾಗಿರುವುದಲ್ಲದೆ, ನೋಡಲೂ ಆಕರ್ಷಕವಾಗಿ ಕಾಣುತ್ತದೆ. ಇದನ್ನು ತ್ವರಿತವಾಗಿ ತಯಾರಿಸಬಹುದಾಗಿದೆ. ಸರಳವಾಗಿ, ಆದಷ್ಟು ಬೇಗನೆ ತಯಾರಿಸಬಹುದಾದ ಭೇಲ್ಪುರಿ ತರಹದ ಚಾಟ್‍ಗಳನ್ನು ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಜಲ್ಮುರಿ ಭೇಲ್

ಜಲ್ಮುರಿ ಬಂಗಾಳದ ಅತ್ಯಂತ ಜನಪ್ರಿಯ ಬೀದಿ ತಿಂಡಿಯಾಗಿದೆ. ಇದು ಚಟ್ನಿಗಳಿಲ್ಲದ ಭೇಲ್ ಪುರಿಯಾಗಿದೆ. ಜಲ್ಮುರಿಯನ್ನು ಅರಿಶಿನ, ಜೀರಿಗೆ ಮತ್ತು ಮೆಣಸಿನ ಪುಡಿ ಸೇರಿದಂತೆ ಮಸಾಲೆ ಪುಡಿಗಳಿಂದ ತಯಾರಿಸಲಾಗುತ್ತದೆ. ಇತರ ಪದಾರ್ಥಗಳೆಂದರೆ ಸಾಸಿವೆ ಎಣ್ಣೆ, ಬೇಯಿಸಿದ ಆಲೂಗಡ್ಡೆ, ನಿಂಬೆ ರಸ, ಕಡಲೆಕಾಯಿಗಳು, ಹಸಿರು ಮೆಣಸಿನಕಾಯಿಗಳು ಮತ್ತು ತೆಂಗಿನತುರಿ. ಇದಕ್ಕೆ ಕಡ್ಲೆಪುರಿ ಸೇರಿಸಿ ಮಸಾಲೆ ಪುಡಿಯನ್ನು ಮಿಶ್ರಣ ಮಾಡಿದರೆ ಸವಿಯಲು ರುಚಿಕರವಾದ ಜಲ್ಮುರಿ ಭೇಲ್ ಸಿದ್ಧ.

ಚುರ್ಮುರಿ

ಚುರ್ಮುರಿಯು ಕರ್ನಾಟಕದಲ್ಲಿ ಬಹಳ ಪ್ರಸಿದ್ಧವಾದ ಬೀದಿ ತಿಂಡಿಯಾಗಿದೆ. ಅದರಲ್ಲೂ ವಿಶೇಷವಾಗಿ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಅಥವಾ ಕರಾವಳಿ ಪ್ರದೇಶದಲ್ಲಿ ಹಾಗೂ ಮಲೆನಾಡಿನಲ್ಲಿ ಜಾತ್ರೆಗಳ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇಲ್ಲಿ ಇದು ಬಹಳ ಜನಪ್ರಿಯವಾಗಿದ್ದು, ಕರಾವಳಿಯವರ ಅಚ್ಚುಮೆಚ್ಚಿನ ಚಂರ್ಬುರಿಯಾಗಿದೆ. ಜಾತ್ರೆಯಲ್ಲಂತೂ ಈ ಚುರ್ಮುರಿ ಇರದಿದ್ದರೆ ಅದು ಜಾತ್ರೆ ಅಂತಾ ಅನಿಸೋದೇ ಇಲ್ಲ. ಯಾಕೆಂದರೆ ಅಷ್ಟರಮಟ್ಟಿಗೆ ಇಲ್ಲಿ ಜನಪ್ರಿಯವಾಗಿದೆ. ಕಡ್ಲೆಪುರಿಗೆ ಸೇವ್, ಕಡಲೆಬೀಜ, ಬೇಯಿಸಿದ ಕಡಲೆ, ಈರುಳ್ಳಿ, ಟೊಮ್ಯಾಟೋ, ನಿಂಬೆ ರಸ, ತೆಂಗಿನ ಎಣ್ಣೆ, ಮಸಾಲೆ ಪುಡಿಗಳು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಲಾಗುತ್ತದೆ. ಮಾವಿನ ಕಾಯಿ ಸೀಜನ್‍ನಲ್ಲಿ ಇದನ್ನು ತುರಿದು ಚುರ್ಮುರಿಗೆ ಮಿಶ್ರಣ ಮಾಡಲಾಗುತ್ತದೆ. ಸಂಜೆಯ ತಂಪಾದ ಗಾಳಿಯಲ್ಲಿ ಇದನ್ನು ಸವಿಯುತ್ತಿದ್ದರೆ ಸಿಗುವ ಮಜಾವೇ ಬೇರೆ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿ, ತುರಿದ ಕ್ಯಾರೆಟ್, ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ, ಸೌತೆಕಾಯಿ, ಹಸಿರು ಮತ್ತು ಹುಣಸೆಹಣ್ಣಿನ ಸಿಹಿ ಚಟ್ನಿಯನ್ನು ಸೇರಿಸಿ ಚುರ್ಮುರಿ ತಯಾರಿಸಲಾಗುತ್ತದೆ. ರುಬ್ಬಿದ ನಿಪ್ಪಟ್ಟು ಮತ್ತು ಕೋಡುಬಳೆಯಲ್ಲಿಯೂ ಬೆರೆಸಿ ಈ ಸ್ಪೆಷಲ್ ಚುರ್ಮುರಿಯನ್ನು ತಯಾರಿಸಲಾಗುತ್ತದೆ.

ಕಚುಂಬರ್ ಭೇಲ್

ಕಚುಂಬರ್ ಭೇಲ್ ಸಾಂಪ್ರದಾಯಿಕ ಭೇಲ್ಪುರಿಯಿಂದ ಭಿನ್ನವಾಗಿದೆ. ಈ ರುಚಿಕರವಾದ ತಿಂಡಿಯು ಬೀದಿ ಸ್ಟಾಲ್‌ಗಳು, ಧಾಬಾಗಳು ಅಥವಾ ಭಾರತೀಯ ಬೀದಿ ಆಹಾರವನ್ನು ನೀಡುವ ಆಧುನಿಕ ಕೆಫೆಗಳಲ್ಲಿ ಸಿಗುತ್ತವೆ. ಕಚುಂಬರ್ ಭೇಲ್ ರುಚಿಯನ್ನು ಒಮ್ಮೆ ಸವಿದರೆ ನಿಮಗೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಸಣ್ಣಗೆ ಕತ್ತರಿಸಿದ ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಚಾಟ್ ಮಸಾಲಾ, ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇದಕ್ಕೆ ಕಡ್ಲೆಪುರಿಯನ್ನು ಮಿಶ್ರಣ ಮಾಡಿದರೆ ಸವಿಯಲು ರುಚಿಕರವಾದ ಕಚುಂಬರ್ ಭೇಲ್ ರೆಡಿ.

ಮೊಸರು ಭೇಲ್

ಮೊಸರು ಭೇಲ್ ಅನ್ನು ಹಿಂದಿಯಲ್ಲಿ ದಹಿ ಭೇಲ್ ಎಂದು ಕರೆಯುತ್ತಾರೆ. ಇದು ವಿಭಿನ್ನ ರುಚಿಯನ್ನು ಕೊಡುತ್ತದೆ. ಇದು ಕಡ್ಲೆಪುರಿ, ಸೇವ್, ಈರುಳ್ಳಿ ಮತ್ತು ಇತರ ತರಕಾರಿಗಳನ್ನು ಒಳಗೊಂಡಿರುತ್ತದೆ. ಬೇಲ್ ಮಿಶ್ರಣಕ್ಕೆ ಮೊಸರು, ಚಾಟ್ ಮಸಾಲಾ, ಹುರಿದ ಜೀರಿಗೆ ಪುಡಿ ಮತ್ತು ಖಾರದ ಮೆಣಸಿನ ಪುಡಿ ಸೇರಿಸಿದರೆ ರುಚಿಕರವಾದ ಮೊಸರು ಭೇಲ್ ಸವಿಯಬಹುದು.

ಚೈನೀಸ್ ಭೇಲ್

ಹೆಸರೇ ಸೂಚಿಸುವಂತೆ ಚೈನೀಸ್ ಭೇಲ್ ಇಂಡೋ-ಚೀನಾ ಬೀದಿ ತಿಂಡಿಯಾಗಿದೆ. ಇದರಲ್ಲಿ ಹುರಿದ ನೂಡಲ್ಸ್ ಗೆ ಸ್ಪ್ರಿಂಗ್ ಆನಿಯನ್, ಎಲೆಕೋಸು, ಕ್ಯಾಪ್ಸಿಕಂ, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಇತ್ಯಾದಿ ತರಕಾರಿಗಳನ್ನು ಬೆರೆಸಲಾಗುತ್ತದೆ. ಜೊತೆಗೆ ಟೊಮೆಟೊ ಕೆಚಪ್, ಕೆಂಪು ಚಿಲ್ಲಿ ಸಾಸ್ ಮತ್ತು ಶೆಜ್ವಾನ್ ಸಾಸ್‌ಗಳನ್ನು ಸೇರಿಸಲಾಗುತ್ತದೆ. ಇದೊಂದು ವಿಶಿಷ್ಟ ಕುರುಕುಲ ತಿನಿಸಾಗಿದ್ದು, ಕಟುವಾದ ರುಚಿಯನ್ನು ಹೊಂದಿರುತ್ತದೆ. ಈ ಚೈನೀಸ್ ಭೇಲ್ ಭಾರತೀಯ ಮಸಾಲೆಗಳು ಮತ್ತು ಚೀನಾ ಪ್ರೇರಿತ ಪದಾರ್ಥಗಳ ಸುವಾಸನೆಯ ಸಂಯೋಜನೆಯಾಗಿರುವುದರಿಂದ ವಿಭಿನ್ನ ರುಚಿಯನ್ನು ಹೊಂದಿದೆ.

ಗಿರ್ಮಿಟ್

ಗಿರ್ಮಿಟ್ ಮತ್ತೊಂದು ಭೇಲ್ ತರಹದ ಬೀದಿ ತಿಂಡಿಯಾಗಿದೆ. ಇದು ಉತ್ತರ ಕರ್ನಾಟಕದಲ್ಲಿ ಬಹಳ ಜನಪ್ರಿಯವಾಗಿದೆ. ಅದರಲ್ಲೂ ವಿಶೇಷವಾಗಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಬಹಳ ಪ್ರಸಿದ್ಧಿ ಪಡೆದಿದೆ. ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದರೆ ಖಂಡಿತಾ ನೀವು ಇದನ್ನು ಸವಿಯಲು ಮಿಸ್ ಮಾಡುವುದೇ ಇಲ್ಲ. ಬೆಂಗಳೂರಿನಲ್ಲೂ ಉತ್ತರ ಕರ್ನಾಟಕ ಭಾಗದ ಹೋಟೆಲ್‍ಗಳಲ್ಲಿ ಸಿಗುತ್ತವೆ. ಸಂಜೆ ಚಹಾ ಸಮಯದಲ್ಲಿ ಇದನ್ನು ಹೆಚ್ಚಾಗಿ ತಿನ್ನಲಾಗುತ್ತದೆ. ಇದು ಈರುಳ್ಳಿ, ಅರಿಶಿನ, ಕೊತ್ತಂಬರಿ, ಕಡ್ಲೇ ಹಿಟ್ಟು ಮತ್ತು ಇತರ ಮಸಾಲೆಗಳಿಂದ ಮಾಡಿದ ಮಸಾಲಾದೊಂದಿಗೆ ಕಡ್ಲೆಪುರಿಯನ್ನು ಬೆರೆಸಲಾಗುತ್ತದೆ. ಮಿರ್ಚಿ ಅಥವಾ ಪಕೋಡಾದೊಂದಿಗೆ ಇದನ್ನು ಬಡಿಸಲಾಗುತ್ತದೆ.

ಬರಹ: ಪ್ರಿಯಾಂಕಾ ಗೌಡ

Whats_app_banner