ಕನ್ನಡ ಸುದ್ದಿ  /  Lifestyle  /  Recipes Tasty Delicious Ennegayi Gojju Making In Different Style Brinjal Recipe Side Dish Rsm

Ennegayi Gojju: ವಿಭಿನ್ನ ರೀತಿಯ ರುಚಿಕರ ಎಣ್ಣೆಗಾಯಿ ಗೊಜ್ಜು, ಒಮ್ಮೆ ಈ ಹೊಸ ರೆಸಿಪಿ ತಯಾರಿಸಿ ನಿಮ್ಮ ಮನೆಯವರನ್ನು ಇಂಪ್ರೆಸ್‌ ಮಾಡಿ

ದೋಸೆ, ಚಪಾತಿ, ರೊಟ್ಟಿ ಮಾಡಿದಾಗ ಅದರ ಜೊತೆ ನೆಂಚಿಕೊಳ್ಳಲು ಏನು ಮಾಡೋದು ಅನ್ನೋದೆ ಗೊಂದಲ. ಪ್ರತಿದಿನ ಚಟ್ನಿ ತಿಂದರೆ ನಾಲಿಗೆಗೆ ಸಾಕು ಸಾಕಾಗಿರುತ್ತದೆ. ಆಗ್ಗಾಗ್ಗೆ ಹೊಸತನ್ನು ಟ್ರೈ ಮಾಡಿದರೆ ಹೊಸ ರುಚಿ ಟೇಸ್ಟ್‌ ಮಾಡಿದಂತೆ ಆಗುತ್ತದೆ, ಜೊತೆಗೆ ನಿಮ್ಮ ಮನೆಯವರನ್ನು ಕೂಡಾ ಇಂಪ್ರೆಸ್‌ ಮಾಡಬಹುದು.

ವಿಭಿನ್ನ ಶೈಲಿಯ, ರುಚಿಯ ಎಣ್ಣೆಕಾಯಿ ಗೊಜ್ಜು
ವಿಭಿನ್ನ ಶೈಲಿಯ, ರುಚಿಯ ಎಣ್ಣೆಕಾಯಿ ಗೊಜ್ಜು (PC: Chaitra's AbhiRuchi)

ನೀವೆಲ್ಲಾ ಎಣ್ಣೆಗಾಯಿ ಗೊಜ್ಜು ಟೇಸ್ಟ್‌ ಮಾಡಿದ್ದೀರ. ಆದರೆ ಇಂದೊಥರಾ ಹೊಸ ಶೈಲಿಯ ಎಣ್ಣೆಗಾಯಿ ಗೊಜ್ಜು. ನೀವು ಇದನ್ನು ದೋಸೆ, ಚಪಾತಿ ರೊಟ್ಟಿಗಾದರೂ ತಿನ್ನಬಹುದು, ಅನ್ನಕ್ಕಾದರೂ ಮಿಕ್ಸ್‌ ಮಾಡಿಕೊಳ್ಳಬಹುದು. ತಯಾರಿಸುವುದು ಕೂಡಾ ಸುಲಭ. ಎಣ್ಣೆಗಾಯಿ ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ಅನ್ನೋದನ್ನ ಚೈತ್ರಾಸ್‌ ಅಭಿರುಚಿ ಯೂಟ್ಯೂಬ್‌ ಚಾನೆಲ್‌ನ ಚೈತ್ರ ಹೇಳಿಕೊಡುತ್ತಿದ್ದಾರೆ.

ಬೇಕಾಗುವ ಸಾಮಗ್ರಿಗಳು

ಬದನೆಕಾಯಿ - 250 ಗ್ರಾಂ

ಕಡ್ಲೆಕಾಯಿ ಬೀಜ - 2‌ ಟೇಬಲ್‌ ಸ್ಪೂನ್‌

ಕಡ್ಲೆ- 2‌ ಟೇಬಲ್‌ ಸ್ಪೂನ್‌

ಧನಿಯಾ - 1 ಟೇಬಲ್‌ ಸ್ಪೂನ್‌

ಬಿಳಿ ಎಳ್ಳು - 1‌ ಟೇಬಲ್‌ ಸ್ಪೂನ್‌

ಕೊಬ್ಬರಿ ತುರಿ - 1 ಕಪ್

ಅಚ್ಚ ಖಾರದ ಪುಡಿ - ಖಾರಕ್ಕೆ ತಕ್ಕಷ್ಟು

ಎಣ್ಣೆ - 1 ಕಪ್

ಸಾಸಿವೆ - ಒಗ್ಗರಣೆಗೆ

ಜೀರ್ಗೆ - ಒಗ್ಗರಣೆಗೆ

ಹಿಂಗು - ಚಿಟಿಕೆ

ಹಸಿಮೆಣಸಿನಕಾಯಿ - 2

ಈರುಳ್ಳಿ - 2

ತೆಂಗಿನ ತುರಿ - 2 ಟೇಬಲ್‌ ಸ್ಪೂನ್

ಬೆಲ್ಲದ ಪುಡಿ - 1‌ ಟೀ ಸ್ಪೂನ್

ಕೊತ್ತಂಬರಿ ಸೊಪ್ಪು - ಒಂದು ಹಿಡಿ

ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಬಾಣಲೆ ಬಿಸಿ ಮಾಡಿಕೊಂಡು ಕಡ್ಲೆಕಾಯಿ ಬೀಜ, ಕಡ್ಲೆ, ಎಳ್ಳು, ಧನಿಯಾ ಸೇರಿಸಿ ಕಡಿಮೆ ಉರಿಯಲ್ಲಿಒಂದೆರಡು ನಿಮಿಷ ರೋಸ್ಟ್‌ ಮಾಡಿಕೊಳ್ಳಿ.

ನಂತರ ಜೀರ್ಗೆ ಸೇರಿಸಿ 20 ಸೆಕೆಂಡ್‌ ರೋಸ್ಟ್‌ ಮಾಡಿ ಒಂದು ಪ್ಲೇಟ್‌ಗೆ ವರ್ಗಾಯಿಸಿ ಪಕ್ಕಕ್ಕೆ ತೆಗೆದಿಡಿ.

ಮಿಶ್ರಣ ತಣ್ಣಗಾದಾಗ ಜಾರ್‌ಗೆ ಸೇರಿಸಿ.

ಅದೇ ಬಾಣಲೆಗೆ ಒಣ ಕೊಬ್ಬರಿ ಸೇರಿಸಿ ಕೆಂಬಣ್ಣ ಬರುವರೆಗೂ ಕಡಿಮೆ ಉರಿಯಲ್ಲಿ ಹುರಿದು, ಅದನ್ನೂ ಜಾರ್‌ಗೆ ಸೇರಿಸಿ.

ಪಾತ್ರೆಯಲ್ಲಿ ಒಂದೆರಡು ಸ್ಪೂನ್‌ ಎಣ್ಣೆ ಬಿಸಿ ಮಾಡಿಕೊಂಡು ಒಂದು ಚಮಚ ಅಚ್ಚ ಖಾರದ ಪುಡಿ ಸೇರಿಸಿ ಸುವಾಸನೆ ಬರುವರೆಗೂ ಹುರಿಯಿರಿ.

ಇದೆಲ್ಲದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ಗ್ರೈಂಡ್‌ ಮಾಡಿಕೊಳ್ಳಿ.

ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಜೀರ್ಗೆ, ಹಿಂಗು, ಉದ್ದಕ್ಕೆ ಸೀಳಿದ ಹಸಿಮೆಣಸಿನಕಾಯಿ, ಉದ್ದಕ್ಕೆ ಹೆಚ್ಚಿಕೊಂಡ ಈರುಳ್ಳಿ ಸೇರಿಸಿ ಬಾಡಿಸಿಕೊಳ್ಳಿ.

ಇದಕ್ಕೆ ಉದ್ದಕ್ಕೆ ಕತ್ತರಿಸಿಕೊಂಡ ಬದನೆಕಾಯಿ ಸೇರಿಸಿ ಅದನ್ನೂ ಹುರಿಯಿರಿ, ಸ್ವಲ್ಪ ಉಪ್ಪು ಸೇರಿಸಿ ಮಿಕ್ಸ್‌ ಮಾಡಿ.

ಬದನೆಕಾಯಿ ಮೆತ್ತಗಾದ ನಂತರ ರುಬ್ಬಿಕೊಂಡ ಮಿಶ್ರಣ ಸೇರಿಸಿ ಅಗತ್ಯಕ್ಕೆ ತಕ್ಕಂತೆ ನೀರು, ಉಪ್ಪು ಸೇರಿಸಿ.

ಕೊನೆಗೆ ತೆಂಗಿನತುರಿ, ಬೆಲ್ಲದ ಪುಡಿ ಸೇರಿಸಿ ಮಿಕ್ಸ್‌ ಮಾಡಿ 5 ನಿಮಿಷ ಬೇಯಿಸಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ.

ಮಿಶ್ರಣದ ಮೇಲ್ಭಾಗ ಎಣ್ಣೆ ಬಿಟ್ಟಿದೆ ಎಂದರೆ ಸ್ಪೆಷಲ್‌ ಎಣ್ಣೆಗಾಯಿ ಗೊಜ್ಜು ತಿನ್ನಲು ರೆಡಿ.

ವಿಭಾಗ