ಸುಡು ಬೇಸಿಗೆಯಲ್ಲಿ ತಣ್ಣನೆಯ ನೀರು ಕುಡಿಯಲು ಕೆಂಪು, ಕಪ್ಪು ಮಡಿಕೆಗಳಲ್ಲಿ ಯಾವುದು ಒಳ್ಳೆಯದು: ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  ಸುಡು ಬೇಸಿಗೆಯಲ್ಲಿ ತಣ್ಣನೆಯ ನೀರು ಕುಡಿಯಲು ಕೆಂಪು, ಕಪ್ಪು ಮಡಿಕೆಗಳಲ್ಲಿ ಯಾವುದು ಒಳ್ಳೆಯದು: ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಸುಡು ಬೇಸಿಗೆಯಲ್ಲಿ ತಣ್ಣನೆಯ ನೀರು ಕುಡಿಯಲು ಕೆಂಪು, ಕಪ್ಪು ಮಡಿಕೆಗಳಲ್ಲಿ ಯಾವುದು ಒಳ್ಳೆಯದು: ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಬೇಸಿಗೆಯ ಧಗೆಯಲ್ಲಿ ಎಲ್ಲರೂ ಬೇಯುತ್ತಿದ್ದಾರೆ. ಹೀಗಾಗಿ ಬಹುತೇಕರು ಸೆಖೆಯಿಂದ ಪಾರಾಗಲು ಮಡಿಕೆಯ ಮೊರೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ಕೆಂಪು, ಕಪ್ಪು ಬಣ್ಣದ ಮಡಿಕೆಯಲ್ಲಿ ಯಾವುದು ಒಳ್ಳೆಯದು ಎಂಬುದು ಇಲ್ಲಿದೆ.

ಸುಡು ಬೇಸಿಗೆಯಲ್ಲಿ ತಣ್ಣನೆಯ ನೀರು ಕುಡಿಯಲು ಕೆಂಪು, ಕಪ್ಪು ಮಡಿಕೆಗಳಲ್ಲಿ ಯಾವುದು ಒಳ್ಳೆಯದು
ಸುಡು ಬೇಸಿಗೆಯಲ್ಲಿ ತಣ್ಣನೆಯ ನೀರು ಕುಡಿಯಲು ಕೆಂಪು, ಕಪ್ಪು ಮಡಿಕೆಗಳಲ್ಲಿ ಯಾವುದು ಒಳ್ಳೆಯದು (PC: HT File)

ಈಗಾಗಲೇ ಬೇಸಿಗೆಯ ಧಗೆಯಲ್ಲಿ ಎಲ್ಲರೂ ಬೇಯುತ್ತಿದ್ದಾರೆ. ನೆತ್ತಿಯ ಮೇಲೆ ನಿಗಿ ನಿಗಿ ಕೆಂಡಕಾರುವ ಸೂರ್ಯ ಎಲ್ಲರಿಗೂ ನೀರು ಕುಡಿಸುತ್ತಿದ್ದಾನೆ. ಫ್ರಿಡ್ಜ್​ಗಳಲ್ಲಿ ತಣ್ಣನೆಯ ನೀರು ಸಿಕ್ಕರೂ ಸಹ ಆರೋಗ್ಯದ ದೃಷ್ಟಿಯಿಂದ ಮಡಿಕೆಯಲ್ಲಿ ತಂಪಾಗಿರುವ ನೀರು ಕುಡಿಯುವುದು ಒಳ್ಳೆಯದು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಜನರು ಎಷ್ಟೇ ಆಧುನಿಕ ಸಂಸ್ಕೃತಿಗೆ ಒಗ್ಗಿಕೊಂಡಿದ್ದರೂ ಸಹ ಬೇಸಿಗೆಯ ಸೆಖೆಯಿಂದ ಪಾರಾಗಲು ಮಡಿಕೆಯ ಮೊರೆ ಹೋಗುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ನಿಮಗೆ ಕೆಂಪು ಹಾಗೂ ಕಪ್ಪು ಬಣ್ಣದ ಮಡಿಕೆಗಳು ಕಾಣ ಸಿಕ್ಕಿರಬಹುದು. ಇವೆರಡರಲ್ಲಿ ಯಾವ ಮಡಿಕೆ ಖರೀದಿಸಿದರೆ ಒಳ್ಳೆಯದು ಎಂಬ ಗೊಂದಲ ನಿಮ್ಮನ್ನು ಕಾಡಿದೆಯೇ? ಇದಕ್ಕುತ್ತರ ಹೌದು ಎಂದಾದರೆ ಇಲ್ಲಿದೆ ನಿಮ್ಮ ಗೊಂದಲಕ್ಕೆ ಸೂಕ್ತ ಉತ್ತರ:

ಕಪ್ಪು ಮಡಿಕೆಯ ವೈಶಿಷ್ಟ್ಯತೆ

ಕೆಂಪು ಹಾಗೂ ಕಪ್ಪು ಮಡಿಕೆಗಳ ಪೈಕಿ ತಂಪಾದ ನೀರು ಕುಡಿಯಲು ಯಾವ ಮಡಿಕೆ ಸೂಕ್ತ ಎಂಬುದಕ್ಕೆ ತಜ್ಞರು ವೈಜ್ಞಾನಿಕ ಉತ್ತರವನ್ನು ನೀಡಿದ್ದಾರೆ. ಕಪ್ಪು ಮಡಿಕೆಗಳನ್ನು ಜೇಡಿಮಣ್ಣಿನಿಂದ ತಯಾರಿಸಲಾಗಿರುತ್ತದೆ. ಕಪ್ಪು ಬಣ್ಣದ ಮಡಿಕೆಯು ಸಣ್ಣ ರಂಧ್ರಗಳನ್ನು ಹೊಂದಿರುವುದರಿಂದ ಬಾಷ್ಪೀಕರಣ ಪ್ರಕ್ರಿಯೆಯ ಮೂಲಕ ನೀರನ್ನು ದೀರ್ಘಕಾಲದವರೆಗೆ ತಂಪಾಗಿ ಇರಿಸುತ್ತದೆ. ಅಲ್ಲದೆ ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ಆರೋಗ್ಯಕ್ಕೂ ಹೆಚ್ಚಿನ ಲಾಭವನ್ನು ನೀಡುತ್ತದೆ. ಜೊತೆಯಲ್ಲಿ ಬ್ಯಾಕ್ಟೀರಿಯಾಗಳು ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗಲು ಕಪ್ಪು ಮಡಿಕೆಗಳು ಅವಕಾಶ ಮಾಡಿಕೊಡುವುದಿಲ್ಲ. ಬಾಷ್ಪೀಕರಣ ಪ್ರಕ್ರಿಯೆಯು ಕಪ್ಪು ಮಡಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಗುವುದರಿಂದ ಕಪ್ಪು ಮಡಿಕೆಯಲ್ಲಿರುವ ನೀರು ದೀರ್ಘಕಾಲದವರೆಗೆ ತಂಪಾಗಿ ಇರುತ್ತದೆ.

ಇನ್ನು ಆಯುರ್ವೇದದ ಪ್ರಕಾರ ಕಪ್ಪು ಮಡಿಕೆಯಲ್ಲಿರುವ ನೀರಿನ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಲಾಭವಿದೆ ಎಂದು ಉಲ್ಲೇಖಿಸಲಾಗಿದೆ. ಕಪ್ಪು ಮಡಿಕೆಯಲ್ಲಿರುವ ನೀರಿನಲ್ಲಿ ಖನಿಜಾಂಶಗಳು ಜಾಸ್ತಿ ಪ್ರಮಾಣದಲ್ಲಿ ಇರುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದಾಗಿದೆ. ಬ್ಯಾಕ್ಟೀರಿಯಾಗಳ ಬೆಳವಣಿಗೆಯ ಪ್ರಮಾಣ ಕೂಡ ಈ ನೀರಿನಲ್ಲಿ ಕಡಿಮೆ ಇರುವುದರಿಂದ ಸ್ವಚ್ಛವಾದ ನೀರು ನಿಮಗೆ ಸಿಗುತ್ತದೆ. ಆರರಿಂದ ಎಂಟು ಗಂಟೆಗಳ ಕಾಲ ನೀರು ತಂಪಾಗಿ ಇರಬೇಕು ಎಂದು ಬಯಸಿದರೆ ಕಪ್ಪು ಮಡಿಕೆಗಳನ್ನು ಖರೀದಿ ಮಾಡಬಹುದಾಗಿದೆ.

ಕೆಂಪು ಮಡಿಕೆಯ ವೈಶಿಷ್ಟ್ಯತೆ

ಕೆಂಪು ಮಡಿಕೆಗಳನ್ನು ಸಾಮಾನ್ಯವಾಗಿ ಜೇಡಿಮಣ್ಣಿನಿಂದ ತಯಾರಿಸಲಾಗುತ್ತದೆ. ಇದನ್ನು ನೀರನ್ನು ಅತ್ಯಂತ ವೇಗವಾಗಿ ತಂಪಾಗಿಸುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಕಪ್ಪು ಮಡಿಕೆಗಳಂತೆ ದೀರ್ಘಕಾಲದವರೆಗೆ ನೀರನ್ನು ತಂಪಾಗಿ ಇರಿಸುವ ಸಾಮರ್ಥ್ಯ ಈ ಮಡಿಕೆಗಳಿಗೆ ಇರುವುದಿಲ್ಲ. ಹೀಗಾಗಿ ತ್ವರಿತವಾಗಿ ನಿಮಗೆ ನೀರು ತಂಪಾಗಬೇಕೆಂಬ ಆಶಯವಿದ್ದರೆ ನೀವು ಕೆಂಪು ಮಡಿಕೆಯನ್ನು ಖರೀದಿ ಮಾಡಬಹುದಾಗಿದೆ. ಅಲ್ಲದೆ ಕಪ್ಪು ಮಡಿಕೆಗಳಿಗೆ ಹೋಲಿಕೆ ಮಾಡಿದರೆ ಕೆಂಪು ಮಡಿಕೆಗಳು ಅಗ್ಗದ ದರದಲ್ಲಿ ಲಭ್ಯವಿದೆ.

ಮಡಿಕೆ ಯಾವುದೇ ಬಣ್ಣದ್ದಾಗಿರಲಿ ಅದರಿಂದ ಆರೋಗ್ಯ ಪ್ರಯೋಜನ ಸಾಕಷ್ಟಿದೆ. ಇವುಗಳು ನೀರನ್ನು ನೈಸರ್ಗಿಕವಾಗಿ ತಂಪಾಗಿಸುವ ಸಾಮರ್ಥ್ಯ ಹೊಂದಿರುವುದರಿಂದ ಯಾವುದೇ ದುಷ್ಪರಿಣಾಮ ಇರುವುದಿಲ್ಲ. ದೇಹದಲ್ಲಿನ ಪಿಎಚ್​ ಮಟ್ಟವನ್ನು ಸಮತೋಲನಗೊಳಿಸುವ ಸಾಮರ್ಥ್ಯ ಮಡಿಕೆ ನೀರಿನಲ್ಲಿದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಫ್ರಿಡ್ಜ್​ ನೀರು ಸೇವನೆಗಿಂತ ಮಡಿಕೆಯಲ್ಲಿನ ನೀರು ಸೇವನೆ ಒಳ್ಳೆಯದು.

Priyanka Gowda

eMail