ಕನ್ನಡ ಸುದ್ದಿ  /  ಜೀವನಶೈಲಿ  /  ಕೆಲವೊಂದು ವ್ಯಕ್ತಿಗಳತ್ತ ಬೇಗ ಆಕರ್ಷಿತರಾಗುವುದೇಕೆ? ಸಂಬಂಧ ಬೆಸೆಯುವ ಮುನ್ನ ಗಮನದಲ್ಲಿರಲಿ ಈ ವಿಚಾರ

ಕೆಲವೊಂದು ವ್ಯಕ್ತಿಗಳತ್ತ ಬೇಗ ಆಕರ್ಷಿತರಾಗುವುದೇಕೆ? ಸಂಬಂಧ ಬೆಸೆಯುವ ಮುನ್ನ ಗಮನದಲ್ಲಿರಲಿ ಈ ವಿಚಾರ

ಕೆಲವೊಂದು ಸಂಬಂಧಗಳು ಯಾವಾಗ ಶುರುವಾಯ್ತು ಯಾವಾಗ ಕೊನೆಯಾಯ್ತು ಎನ್ನುವುದೇ ತಿಳಿಯುವುದಿಲ್ಲ. ಅಷ್ಟು ವೇಗದಲ್ಲಿ ಕೆಲವೊಂದು ಸಂಬಂಧಗಳು ಅಂತ್ಯ ಕಂಡು ಬಿಡುತ್ತವೆ. ಆದರೆ ಯಾಕೆ ಹೀಗೆ ಆಗುತ್ತೆ? ನಾವೇಕೆ ಕೆಲವೊಂದು ಸಂಬಂಧಗಳಿಗೆ ಬೇಗ ಆಕರ್ಷಿತರಾಗಿ ಬಿಡುತ್ತೇವೆ? ಈ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ

ಸಂಬಂಧ ಬೆಸೆಯುವ ಮುನ್ನ ಗಮನದಲ್ಲಿರಲಿ ಈ ವಿಚಾರ
ಸಂಬಂಧ ಬೆಸೆಯುವ ಮುನ್ನ ಗಮನದಲ್ಲಿರಲಿ ಈ ವಿಚಾರ (Pixabay)

ಜೀವನದಲ್ಲಿ ಎಲ್ಲರ ಜೊತೆಯೂ ಉತ್ತಮ ಬಾಂಧವ್ಯ ಬೆಸೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಕೆಲವರ ಜೊತೆ ಬಾಂಧವ್ಯ ಎಷ್ಟು ಬಿಗಿಯಾಗುತ್ತೆ ಎಂದರೆ ಅವರನ್ನು ಬಿಟ್ಟಿರಲು ಆಗದಷ್ಟರ ಮಟ್ಟಿಗೆ ಅವರನ್ನು ಹಚ್ಚಿಕೊಂಡು ಬಿಡುತ್ತೇವೆ. ನಿಮಗೂ ಈ ರೀತಿಯ ಅನುಭವ ಆಗಿರಬಹುದು. ಅವರೊಬ್ಬರು ನಿಮ್ಮ ಜೊತೆಯಿದ್ದರೆ ಸಾಕು ಜೀವನವೇ ಸುಂದರ ಎನಿಸುತ್ತದೆ. ಅವರು ನಿಮ್ಮ ಮಾತುಗಳನ್ನೆಲ್ಲ ಕೇಳುತ್ತಾರೆ. ನಿಮ್ಮ ಸಣ್ಣ ಸಣ್ಣ ವಿಚಾರದ ಬಗ್ಗೆಯೂ ಗಮನ ಹರಿಸುತ್ತಾರೆ. ನಿಮ್ಮನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ ಹಾಗೂ ನೀವೇ ಅವರ ಜಗತ್ತೇನೋ ಎಂಬಂತೆ ಬದುಕಿಬಿಡುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಜೀವನದಲ್ಲಿ ಇಂಥಾ ಅನುಭವಗಳೆಲ್ಲ ಆದ ಬಳಿಕ ಈ ವ್ಯಕ್ತಿಯೇ ನಿಮ್ಮ ಜೀವನಕ್ಕೆ ಬೇಕು ಎಂದು ನೀವು ಗ್ಯಾರಂಟಿ ಕೊಟ್ಟುಕೊಳ್ಳಬಹುದು.ಆದರೆ ಒಬ್ಬ ವ್ಯಕ್ತಿಯನ್ನು ಅರಂಭಿಕ ಹಂತದಲ್ಲೇ ಅಳೆಯುವುದೇ ನಿರ್ಣಾಯಕವಾಗಿದೆ. ಯಾರನ್ನೇ ಆದರೂ ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುವುದು ಕೂಡ ತುಂಬಾ ಮುಖ್ಯ.

ಯಾವುದೇ ಒಂದು ಸಂಬಂಧ ನಿಧಾನವಾಗಿ ಬೆಳೆದಾಗ ಮಾತ್ರ ಪರಸ್ಪರ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಈ ನಿಧಾನಗತಿಯ ಬೆಳವಣಿಗೆಯು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯಾವಕಾಶವನ್ನು ನೀಡುತ್ತದೆ.

ಆದರೆ ನಮ್ಮಲ್ಲಿ ಕೆಲವರು ಒಬ್ಬರ ಜೊತೆ ತುಂಬಾ ವೇಗವಾಗಿ ನಿಕಟ ಸಂಬಂಧ ಬೆಳೆಸಿಕೊಂಡುಬಿಡುತ್ತಾರೆ. ಕೊನೆಯಲ್ಲಿ ನಿರಾಸೆ ಅನುಭವಿಸುತ್ತಾರೆ. ಈ ರೀತಿ ಅತ್ಯಂತ ವೇಗವಾಗಿ ಬೆಳೆದ ಸಂಬಂಧವು ಕೇವಲ ನೋವಿಗೆ ದಾರಿ ಮಾಡುತ್ತದೆಯೇ ವಿನಃ ಇನ್ಯಾವುದೇ ಪ್ರಯೋಜನ ನೀಡುವುದಿಲ್ಲ. ಇದು ಮಾನಸಿಕವಾಗಿ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. ಅಲ್ಲದೇ ಈ ನೋವಿನಿಂದ ಹೊರಬರುವುದು ಕೂಡ ಅಷ್ಟೊಂದು ಸುಲಭವಂತೂ ಖಂಡಿತ ಅಲ್ಲವೇ ಅಲ್ಲ.

ಇದನ್ನೂ ಓದಿ | Parenting: ಮಕ್ಕಳಲ್ಲಿ ಕೀಳರಿಮೆ ಏಕೆ ಉಂಟಾಗುತ್ತೆ? 5 ಮುಖ್ಯ ಕಾರಣಗಳಿವು

ಕೆಲವರು ಕೆಲವೊಂದು ಸಂಬಂಧಗಳಿಗೆ ಎಷ್ಟು ಸುಲಭವಾಗಿ ಕೈ ಚಾಚಿ ಬಿಡುತ್ತಾರೆ ಎಂದರೆ, ಆ ವ್ಯಕ್ತಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಯೋಚನೆ ಕೂಡ ಮಾಡುವುದಿಲ್ಲ. ಆದರೆ ನೀವು ಯಾವುದೇ ಸಂಬಂಧವನ್ನು ಅತ್ಯಂತ ಗಾಢವಾಗಿ ಮನಸ್ಸಿಗೆ ತೆಗೆದುಕೊಳ್ಳುವ ಮುನ್ನ ಕೆಲವೊಂದು ವಿಚಾರಗಳ ಬಗ್ಗೆ ಗಮನ ಹರಿಸುವುದು ತುಂಬಾ ಮುಖ್ಯವಾಗಿರುತ್ತದೆ.

ಯಾವುದೇ ವ್ಯಕ್ತಿಯೊಂದಿಗೆ ತ್ವರಿತವಾಗಿ ಸಂಬಂಧವನ್ನು ಬೆಳೆಸಲು ಕಾರಣವಾಗುವ ಮಾನಸಿಕ ಕಾರ್ಯವಿಧಾನಗಳು ಯಾವುವು?

ಈ ರೀತಿಯ ಅಚಾನಕ್ ಬಾಂಧವ್ಯಗಳಿಗೆ ಸಾಕಷ್ಟು ವಿಚಾರಗಳು ಕಾರಣವಾಗುತ್ತವೆ. ಇವುಗಳಲ್ಲಿ ಅತ್ಯಂತ ಮುಖ್ಯವಾಗಿರುವುದು ಎಂದರೆ ನೀವು ದೈಹಿಕವಾಗಿ, ಭಾವನಾತ್ಮಕವಾಗಿ ಹಾಗೂ ಬೌದ್ಧಿಕವಾಗಿ ಒಬ್ಬ ವ್ಯಕ್ತಿಯ ಬಗ್ಗೆ ಆಕರ್ಷಣೆಗೆ ಒಳಗಾಗುವುದಾಗಿದೆ.

ಇನ್ನೂ ಪ್ರಮುಖ ವಿಚಾರಗಳು ಯಾವುವು ಎಂದರೆ; ಸಾಮಾನ್ಯವಾಗಿ ಎಲ್ಲರಿಂದ ನಿರ್ಲಕ್ಷ್ಯಕ್ಕೆ ಒಳಗಾದ ವ್ಯಕ್ತಿಗೆ ಒಮ್ಮೆಲೆ ಯಾರಿಂದಲೋ ಪ್ರೀತಿ ಹಾಗೂ ಬೆಂಬಲ ಸಿಗಲು ಆರಂಭಗೊಂಡಾಗ ಆ ವ್ಯಕ್ತಿಯು ಹಿಂದು ಮುಂದು ನೋಡದೆ ಆ ಸಂಬಂಧಕ್ಕೆ ಕೈಚಾಚಿ ಬಿಡಬಹುದು.

ಒಂದು ವಯಸ್ಸಿಗೆ ಬಂದಾಕ್ಷಣ ಪ್ರತಿಯೊಬ್ಬರಿಗೂ ಮದುವೆ ಆಗಬೇಕು, ಮಕ್ಕಳು ಬೇಕು ಎನ್ನುವ ಯೋಚನೆ ಶುರುವಾಗುತ್ತದೆ. ಸಮಾಜ ಕೂಡ ಇದಕ್ಕೆ ಒತ್ತಡವನ್ನು ಹಾಕಲು ಆರಂಭಿಸುತ್ತದೆ. ಈ ಒತ್ತಡವು ಪೋಷಕರ ಮೇಲೂ ಬೀಳುತ್ತದೆ. ಇಂಥಹ ಸಂದರ್ಭದಲ್ಲಿಯೂ ಕೂಡ ನಾವು ಇನ್ಯಾರದ್ದೋ ಬಾಯಿ ಮುಚ್ಚಿಸಲು ಒಂದು ಸಂಬಂಧಕ್ಕೆ ನಮ್ಮನ್ನು ನಾವು ಬೆಸೆದುಕೊಂಡು ಬಿಡುತ್ತೇವೆ .

ಆರೋಗ್ಯಕರ ಸಂಬಂಧವನ್ನು ಬೆಳೆಸುವ ಮುನ್ನ ನಾವು ಗಮನಹರಿಸಬೇಕಾದ ವಿಷಯಗಳು ಯಾವುವು?

ಯಾವುದೋ ಒಂದು ಸಂಬಂಧವನ್ನು ಬೆಳೆಸುವ ಮುನ್ನ ನೀವು ನಿಮಗೆ ಯಾವ ರೀತಿಯ ವ್ಯಕ್ತಿತ್ವ ಇಷ್ಟವಾಗುತ್ತದೆ, ಎಂಥಹ ವ್ಯಕ್ತಿಗಳೊಂದಿಗೆ ನೀವು ಸಂತಸವಾಗಿ ಇರಬಲ್ಲಿರಿ ಎಂಬೆಲ್ಲ ವಿಚಾರದ ಬಗ್ಗೆ ಮೊದಲು ಸ್ಪಷ್ಟನೆ ಹೊಂದಿರಬೇಕು. ಈ ರೀತಿಯ ಸ್ಪಷ್ಟನೆ ಇದ್ದಾಗ ಮಾತ್ರ ನೀವು ನಿಮಗೆ ಯೋಗ್ಯವಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿದೆ.

ಇದೆಲ್ಲವನ್ನು ನೋಡಿ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡ ಬಳಿಕವೂ ನಿಮ್ಮ ಸಂಬಂಧದಲ್ಲಿ ಏನೋ ಸಮಸ್ಯೆ ಕಂಡು ಬರುತ್ತಿದೆ ಎಂದರೆ ನೀವು ಮೊದಲು ತಾಳ್ಮೆಯಿಂದ ಆ ಸಮಸ್ಯೆಯ ಮೂಲ ಯಾವುದು ಎಂಬುದನ್ನು ಹುಡುಕಬೇಕು. ಇದಕ್ಕೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳಬೇಕು. ಇದು ನಿಮ್ಮ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ನೆರವಾಗುತ್ತದೆ ಮಾತ್ರವಲ್ಲದೇ ನಿಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಪ್ರಬುದ್ಧವಾಗುವಂತೆ ನೋಡಿಕೊಳ್ಳುತ್ತದೆ.

ವಿಭಾಗ