ಗಂಡಿಗಾಗಿ ಹೆಣ್ಣು ಹೆಣ್ಣಿಗಾಗಿ ಗಂಡು ಎಂಬಂತಿರುವುದು, ಮನುಷ್ಯರಾಗುವುದು ಇಂದಿನ ತುರ್ತು ಸಿದ್ಧಾಂತವಾಗಬೇಕಿದೆ; ಮಧು ವೈಎನ್‌ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಗಂಡಿಗಾಗಿ ಹೆಣ್ಣು ಹೆಣ್ಣಿಗಾಗಿ ಗಂಡು ಎಂಬಂತಿರುವುದು, ಮನುಷ್ಯರಾಗುವುದು ಇಂದಿನ ತುರ್ತು ಸಿದ್ಧಾಂತವಾಗಬೇಕಿದೆ; ಮಧು ವೈಎನ್‌ ಬರಹ

ಗಂಡಿಗಾಗಿ ಹೆಣ್ಣು ಹೆಣ್ಣಿಗಾಗಿ ಗಂಡು ಎಂಬಂತಿರುವುದು, ಮನುಷ್ಯರಾಗುವುದು ಇಂದಿನ ತುರ್ತು ಸಿದ್ಧಾಂತವಾಗಬೇಕಿದೆ; ಮಧು ವೈಎನ್‌ ಬರಹ

ಮಧು ವೈಎನ್‌ ಬರಹ: ರೋಗಗ್ರಸ್ತ ಮದುವೆಗಳಿಗೆ ಡಿವೋರ್ಸ್‌ ಅತ್ಯುತ್ತಮ ಮದ್ದು. ಹುಳಗಳು ಒಳಗೊಳಗೇ ಕಾಂಡವನ್ನು ಕೊರೆದು ಮರವನ್ನು ಬೀಳಿಸಿದಂತೆ ಇಂತಹ ಮದುವೆಗಳು ಮನುಷ್ಯನನ್ನು ಕೊರೆದು ಬೀಳಿಸಿಬಿಡುತ್ತವೆ. ಜನ ಎಷ್ಟು ಸಾಧ್ಯವೋ ಅಷ್ಟು ಬೇಗ ಅದರಿಂದ ಬಿಡಿಸಿಕೊಂಡು ಹೊರಬರಬೇಕು. ಆದರೆ ಬೇರೆಯಾದ ನಂತರವೂ ದ್ವೇಷ, ಜಿದ್ದನ್ನು ಮುಂದುವರೆಸಿದರೆ ಬೇರೆಯಾಗಿದ್ದರ ಪ್ರಯೋಜನವೇನು?

ಅತುಲ್ ಸುಭಾಷ್
ಅತುಲ್ ಸುಭಾಷ್

ಕಳೆದೊಂದು ವಾರದಿಂದ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಪ್ರಕರಣ ಎಲ್ಲೆಡೆ ಸದ್ದು ಮಾಡುತ್ತಿದೆ. ಹೆಂಡತಿಯ ಕಿರುಕುಳದಿಂದ ಬೇಸತ್ತ ಆತ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋಟಿಗಟ್ಟಲೆ ಪರಿಹಾರ ನೀಡಬೇಕು ಎಂದು ಆಕೆ ಅತುಲ್‌ನನ್ನು ಪೀಡಿಸಿದ್ದಾಗಿ ಆತ ಸಾಯುವ ಮುಂಚೆ ಮಾಡಿದ್ದ ವಿಡಿಯೊ, ಡೆತ್‌ನೋಟ್‌ನಲ್ಲಿ ತಿಳಿಸಿದ್ದಾನೆ. ಈ ಪ್ರಕರಣದಲ್ಲಿ ಅತುಲ್ ಪತ್ನಿ ವರದಕ್ಷಿಣೆ ಕಿರಕುಳ ತಡೆ ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾಗಿಯೂ ಚರ್ಚೆ ಶುರುವಾಗಿದೆ. ಅತುಲ್ ಕೂಡ ತಾವು ಮಾಡಿರುವ ವಿಡಿಯೊದಲ್ಲಿ ಪತ್ನಿಗೆ ಶಿಕ್ಷೆಯಾಗಬೇಕು ಎಂಬಂತೆ ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಂಸಾರ, ಮದುವೆ, ಡಿವೋರ್ಸ್‌, ಬದುಕು ಈ ಎಲ್ಲದರ ಬಗ್ಗೆ ಬಹಳ ಸುಂದರವಾಗಿ ಬರೆದಿದ್ದಾರೆ ಲೇಖಕ ಮಧು ವೈಎನ್‌. ಅವರ ಬರಹವನ್ನು ನೀವೂ ಓದಿ.

ಮಧು ವೈಎನ್‌ ಬರಹ

ಈ ಅತುಲ್‌ ಸುಭಾಷ್‌ ಅನ್ನುವ ಹುಡುಗನದ್ದು ಬಹಳ ದಾರುಣವಾಗಿದೆ. ನಾನು ವಿವರಗಳನ್ನು ಓದ್ತಾ ಹೋದೆ. ಮೇಲ್ನೋಟಕ್ಕೆ ಬಹಳಾನೆ ಸುಳ್ಳು ಕೇಸುಗಳನ್ನು ಹಾಕಿದ್ದಾಳೆ ಆ ಹೆಂಗಸು ಅನ್ನಿಸ್ತಿದೆ. ಮೇಲಾಗಿ ತಿಂಗಳಿಗೆ ಎರಡು ಲಕ್ಷ ಮೇಂಟೆನೆನ್ಸು, ಮೂರು ಕೋಟಿ ಪರಿಹಾರ ಕೇಳಿರುವುದರಲ್ಲೇ ಆತನಿಗೆ ಕಿರಕುಳ ಕೊಡಲೇಬೇಕೆಂದು ಹಠ ತೊಟ್ಟ ಉದ್ದೇಶ ಕಾಣ್ಸುತ್ತೆ. ಯಾಕಂದ್ರೆ ಅಷ್ಟು ಆದಾಯ ಇರಲಿಕ್ಕಿಲ್ಲ ಅವನದ್ದು. ಇನ್ನೂ 34 ವರ್ಷದವನು.

ಅಸ್ಘರ್‌ ಫರ್ಹಾದಿಯ ʼಅಬೌಟ್‌ ಎಲ್ಲಿʼ ಸಿನಿಮಾದಲ್ಲಿ ಒಂದು ಡೈಲಾಗ್‌ ಬರುತ್ತೆ- bitter ending is better than endless bitterness ಅಂತ. ಗಂಡು ಹೆಣ್ಣು ಎಂದಿಗೂ ಈ ಎಂಡ್ಲೆಸ್‌ ಬಿಟರ್ನೆಸ್‌ನಲ್ಲಿ ಸಿಗಾಕ್ಕೊಬಾರದು. ಇರೋದೊಂದೇ ಜೀವನ, ಯಾಕೆ ಅದನ್ನು ತನಗೆ ಒಗ್ಗದ ವ್ಯಕ್ತಿಯೊಂದಿಗಿನ ಜಿದ್ದಿನ ಮೇಲೆ ಹಾಳುಮಾಡಿಕೊಳ್ಳಬೇಕು? ಒಂದು ಕಾಲದಲ್ಲಿ ಇಬ್ಬರೂ ಒಪ್ಪಿ ಮದುವೆ ಆಗಿರ್ತೀರಲ್ಲವೇ? ಅಷ್ಟೇ ಸರಳವಾಗಿ ಒಪ್ಪಿ ಬೇರೆಯಾಗಬಹುದಲ್ಲವೇ?

ರೋಗಗ್ರಸ್ತ ಮದುವೆಗಳಿಗೆ ಡಿವೋರ್ಸು ಒಂದು ಅತ್ಯುತ್ತಮ ಮದ್ದು. ಹುಳಗಳು ಒಳಗೊಳಗೇ ಕಾಂಡವನ್ನು ಕೊರೆದು ಮರವನ್ನು ಬೀಳಿಸಿದಂತೆ ಇಂತಹ ಮದುವೆಗಳು ಮನುಷ್ಯನನ್ನು ಒಳಗೊಳಗೇ ಕೊರೆದು ಬೀಳಿಸಿಬಿಡುತ್ತವೆ. ಜನ ಎಷ್ಟು ಸಾಧ್ಯವೋ ಅಷ್ಟು ಬೇಗ ಅದರಿಂದ ಬಿಡಿಸಿಕೊಂಡು ಹೊರಬರಬೇಕು. ಆದರೆ ಬೇರೆಯಾದ ನಂತರವೂ ಆ ದ್ವೇಷ, ಆ ಜಿದ್ದನ್ನು ಮುಂದುವರೆಸಿದರೆ ಬೇರೆಯಾಗಿದ್ದರ ಪ್ರಯೋಜನವೇನು?

ಇನ್ನೊಂದು ಇರಾನಿಯನ್‌ ಸಿನಿಮಾದ್ದು ಡೈಲಾಗ್‌ ನೆನಪಾಗ್ತಿದೆ. ಸಿನಿಮಾ ನೆನಪಾಗ್ತಿಲ್ಲ. ಸೀನ್‌ ನೆನಪಿದೆ. Sometimes suicides are done for revenge ಅಂತ. ತಾಳಲಾರದ ನೋವಿನ, ಸಂಕಟದ ರಿವೇಂಜ್‌ ಅನ್ನುವ ಅರ್ಥದಲ್ಲಿ ಅಥವಾ ತನಗಾದ ನಷ್ಟ/ನೋವು ಅವರಿಗೂ ಆಗಬೇಕು ಅನ್ನುವ ಅರ್ಥದಲ್ಲಿ. ಈತನ ಡೆತ್‌ ನೋಟು ಓದಿದ್ರೆ ಉದ್ದಕ್ಕೂ ಅದೇ ಟೋನ್‌ ಇದೆ. ಆಕೆಗೆ ಶಿಕ್ಷೆಯಾಗಬೇಕು ಎಂದೇ ಬರೆದಿದ್ದಾನೆ.

ಆ ಟ್ವಿಟರ್‌ನಲ್ಲಿ ನೋಡಿದರೆ ಈ ವಿಷಯಕ್ಕೂ ಗಂಡು ಹೆಣ್ಣು ಜಗಳಕ್ಕೆ ಬಿದ್ದಿದಾರೆ. ಅವನದೇ ತಪ್ಪು ಅವಳದೇ ತಪ್ಪು ಅಂತ. ಎಲ್ಲರಿಗೂ ತಾನು, ತನ್ನದು ಎಂಬುದನ್ನು ಸಾಧಿಸುವುದೇ ಮುಖ್ಯವಾಗಿದೆ.

ಇಲ್ಲಿ ಈಗ ಎಲ್ಲವೂ ಜಿದ್ದಿಗೆ ಬಿದ್ದಿದೆ. ಗಂಡು-ಹೆಣ್ಣು ಎಡ-ಬಲ ಜಾತಿ ಮತ... ಎಲ್ಲವೂ. ನಂಗೆ ಈ ಕೆಲವು ವರ್ಷಗಳಿಂದ ಈ ಯಾವ ಇಸಮ್ಮೂ ಐಡಿಯಾಲಜಿನೂ ಬೇಡಪ್ಪ. ಇಗಾಗಲೇ ಜಗತ್ತು ಒಡೆದು ಛಿಧ್ರಛಿದ್ರವಾಗಿರುವುದು ಸಾಕಾಗಿದೆ. ನಾನೇ ಒಂದೆಜ್ಜೆ ಹಿಂದೆ ಇಡೋಣ. ನಾನೇ ಒಂದು ಮಾತು ಸೋಲೋಣ. ಜಗತ್ತಿಗೆ ಪ್ರೀತಿ ಹಂಚೋಣ, ಜಗತ್ತಿಗೆ ಮತ್ತೆ ಪ್ರೀತಿಯನ್ನು ನೆನಪಿಸೋಣ ಅನ್ನಂಗಾಗಿದೆ. ನಾವೆಲ್ಲಾ ಕಲಿತ ವಿದ್ಯೆಗಳನ್ನು ಬದಿಗಿಟ್ಟು ಸಮುದಾಯದಂತೆ ಬೆರೆಯುವುದು ಭಾವಿಸುವುದು ಗಂಡಿಗಾಗಿ ಹೆಣ್ಣು ಹೆಣ್ಣಿಗಾಗಿ ಗಂಡು ಎಂಬಂತಿರುವುದು- ಮನುಷ್ಯರಾಗುವುದು ಇಂದಿನ ತುರ್ತಿನ ಸಿದ್ಧಾಂತವಾಗಬೇಕಿದೆ.

ಡಿಸೆಂಬರ್ 11 ರಂದು ಮಧು ಈ ಬರಹವನ್ನು ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಹಲವರು ಈ ಪೋಸ್ಟ್ ಅನ್ನು ನೋಡಿದ್ದು, 6 ಮಂದಿ ಶೇರ್ ಮಾಡಿದ್ದಾರೆ. 140ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು 21ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. 

ಡಿವೋರ್ಸ್ ನಂತರ ಸ್ನೇಹಿತರಾಗಿದ್ದಾರೆ

‘ಉತ್ತಮ ಲೇಖನ… ಆದರೆ ಬೆಂಗಳೂರಿನಲ್ಲಿ ಒಬ್ಬರು ಡಿವೊರ್ಸ ಆಗಿ ಎಂಟು ವರ್ಷ ಆಯಿತು. ಇಬ್ಬರೂ ಬೇರೆ ಇದ್ದಾರೆ ಅಕಸ್ಮಾತ್ ಒಬ್ಬರಿಗೊಬ್ಬರು ಸಿಕ್ಕಿದರೆ ಗೆಳೆಯರಂತೆ ಹರಟೆ ಹೊಡೆಯುತ್ತಾರೆ. ಮೆಸೇಜ್ ಮಾಡ್ಕೊಳ್ತಾರೆ ... ಕೇಳಿದರೆ "ಇಬ್ಬರೂ ಒಟ್ಟಿಗೆ ಬದುಕಲು ಆಗಲ್ಲ, ಆದರೆ ನಾವಿಬ್ಬರೂ ಉತ್ತಮ ಸ್ನೇಹಿತರು" ಎನ್ನುತ್ತಾರೆ... ವಿಚಿತ್ರ‘ ಎಂದು ಸತೀಶ್ ಕಂಕಲ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ  

ಪ್ರೀತಿ ಹಂಬಲಿಸುವವರಿಗೆ ಹಂಚಿ 

‘ಪ್ರೀತಿ ಬೇಕು ಅಂತ ಹಂಬಲಿಸುವರಿಗೆ ಹಂಚಬೇಕೆ ವಿನಃ 'ನಾನು ಹೇಳಿದಂತೆ ನೀನು ಕುಣಿಯಬೇಕು' ಎಂಬ naracisstic ಭಾವದ ಮೇಲೆ ಸದಾ ತಮ್ಮ ego ವನ್ನು satisfy ಮಾಡಿಕೊಳ್ಳುತ್ತಾ ಸಾಗೋ sadistಗಳಿಗಲ್ಲ. ಹಂಗೆ ಎಲ್ಲದಕ್ಕೂ ಸಹಿಷ್ಣು ಆದರೆ ಇದೊಂದು ಒಂದು ದಿನ ಕಟ್ಟೆ ಹೊಡೆದು ಎಲ್ಲಾ emotions ಒಟ್ಟಿಗೆ ಬರುತ್ತೆ‘ ಎಂದು ದರ್ಶನ್ ಕುಲದೀಪ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ. 

‘Family related legislationಗಳ ವಿಮರ್ಶೆ ಆಗಬೇಕು. ಈ ಕಾಯಿದೆಗಳಲ್ಲಿ ದುರ್ಬಲ ವರ್ಗ ಅಂತಾ ಏನು ಹೇಳಲ್ಪಟ್ಟಿದೆ ಅದೇ ವರ್ಗ ಈ ಕಾನೂನುಗಳ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಏರುತ್ತಿವೆ‘ ಎಂದು ಶಶಾಂಕ್ ಎಸ್‌ ಎನ್ನುವವರು ಕಾಮೆಂಟ್ ಮಾಡಿದ್ದಾರೆ. 

Whats_app_banner