Breakup Day: ವ್ಯಾಲೆಂಟೈನ್ಸ್ ಡೇ ಆಯ್ತು, ಬಂತು ಬ್ರೇಕ್‌ಅಪ್ ಡೇ; ಪ್ರೇಮಿಗೆ ಗುಡ್‌ಬೈ ಹೇಳುವ ಮುನ್ನ ಈ ದಿನದ ಉದ್ದೇಶ ತಿಳಿಯಿರಿ
ಪ್ರೇಮಿಗಳಿಗೆ ಮಾತ್ರವಲ್ಲ, ಬ್ರೇಕ್ ಅಪ್ ಮಾಡ್ಕೊಳ್ಳೋರಿಗೂ ಒಂದು ದಿನವಿದೆ. ಪ್ರೇಮಿಗಳ ದಿನಕ್ಕೆ ಸರಿಯಾಗಿ ಒಂದು ವಾರದ ನಂತರ ಬ್ರೇಕ್‌ಅಪ್ ಡೇ ಆಚರಿಸಲಾಗುತ್ತದೆ. ಈ ದಿನ ಇರೋದು ಭಗ್ನಪ್ರೇಮಿಗಳಿಗೆ ಅಂತಲೇ ಹೇಳಬಹುದು. ಏನಿದು ಬ್ರೇಕ್ ಅಪ್ ಡೇ? ಈ ದಿನದ ಆಚರಣೆಯ ಉದ್ದೇಶವೇನು ತಿಳಿಯಿರಿ.
ಪ್ರೀತಿ ಮಧುರ, ತ್ಯಾಗ ಅಮರ... ಈ ಮಾತನ್ನು ಬಹುತೇಕ ಎಲ್ಲರೂ ಕೇಳಿರುತ್ತಾರೆ. ಪ್ರೀತಿ ಮಾಡಿದವರೆಲ್ಲರೂ ಒಂದಾಗುತ್ತಾರೆ ಎಂದೇನಿಲ್ಲ. ಪ್ರೀತಿ ಎಂಬ ಮಧುರ ಲೋಕದಲ್ಲಿ ನೋವು ಇಲ್ಲವೇ ಇಲ್ಲ ಎಂದೇನಿಲ್ಲ. ಕೆಲವರ ಪಾಲಿಗೆ ಪ್ರೀತಿ ಮುಳ್ಳಾಗುವುದು ಸುಳ್ಳಲ್ಲ. ಅದೆಲ್ಲಾ ಇರ್ಲಿ, ಇದ್ಯಾಕೆ ಪ್ರೇಮಿಗಳ ದಿನ ಕಳೆದ ಒಂದು ವಾರಕ್ಕೆ ದೂರಾಗುವ ಮಾತು ಅಂತೀರಾ, ಖಂಡಿತ ಅದಕ್ಕೆ ಕಾರಣವಿದೆ. ನಾಳೆ (ಫೆ. 21) ಬ್ರೇಕ್‌ಅಪ್ ಡೇ. ಪ್ರೇಮಿಗಳ ದಿನ ಕಳೆದ ಒಂದು ವಾರಕ್ಕೆ ಬ್ರೇಕ್‌ಅಪ್ ಡೇ ಆಚರಿಸಲಾಗುತ್ತದೆ.
ಪ್ರೇಮ ಸಂಬಂಧದಿಂದ ನೊಂದ ಜೀವಗಳು ಈ ದಿನ ದೂರಾಗುವ ನಿರ್ಧಾರ ಮಾಡುತ್ತಾರೆ. ಇದು ಪಾಶ್ಚಾತ್ಯ ಸಂಸ್ಕೃತಿಯಾದರೂ ಕೂಡ ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ರೂಢಿಯಲ್ಲಿದೆ.
ಫೆಬ್ರುವರಿ ತಿಂಗಳು ಬಂತೆಂದರೆ ಪ್ರೇಮಿಗಳ ದಿನದ ಸಂಭ್ರಮ. ಪ್ರೇಮಿಗಳ ದಿನಕ್ಕೆ ಒಂದು ವಾರ ಇರುವಾಗ ವ್ಯಾಲೆಂಟೈನ್ಸ್ ವೀಕ್ ಎಂದು ಆಚರಿಸಲಾಗುತ್ತದೆ. ರೋಸ್ ಡೇ, ಪ್ರಪೋಸ್ ಡೇ, ಟೆಡ್ಡಿ ಡೇ, ಹಗ್ ಡೇ ಹೀಗೆ ಪ್ರತಿ ದಿನವೂ ಪ್ರೇಮ ಸಲ್ಲಾಪದ ದಿನಗಳಾಗಿವೆ. ಆದರ ಪ್ರೇಮಿಗಳ ದಿನ ಮುಗಿದ ಒಂದು ವಾರವನ್ನು ಆಂಟಿ ವಾಲೈಂಟೈನ್ಸ್ ವೀಕ್ ಎಂದು ಆಚರಿಸಲಾಗುತ್ತದೆ. ಇದು ಹಲವರಿಗೆ ತಿಳಿದಿರದ ವಿಚಾರ. ಮೊದಲ ವಾರ ಪೂರ್ತಿ ಪ್ರೇಮಿಗಳಿಗೆ ಮೀಸಲಾದರೆ, ಈ ಆಂಟಿ ವ್ಯಾಲೆಂಟೈನ್ಸ್ ವೀಕ್ ಭಗ್ನ ಪ್ರೇಮಿಗಳಿಗೆ ಮೀಸಲು ಅಂತಲೇ ಹೇಳಬಹುದು. ಟಾಕ್ಸಿಕ್ ರಿಲೇಷನ್‌ಶಿಪ್‌ನ ಬೇಗುದಿಯಲ್ಲಿ ಬೇಯುತ್ತಿರುವವರು ಆಂಟಿ ವ್ಯಾಲೆಂಟೈನ್ಸ್ ಡೇ ಆಚರಿಸುತ್ತಾರೆ. ಅಲ್ಲದೇ ಬ್ರೇಕ್‌ಅಪ್ ಡೇಯಂದು ತಮ್ಮ ಸಂಬಂಧಕ್ಕೆ ಗುಡ್‌ಬೈ ಹೇಳುವ ಮೂಲಕ ದೂರಾಗುತ್ತಾರೆ.
ಆಂಟಿ-ವ್ಯಾಲೆಂಟೈನ್ಸ್ ವೀಕ್ ಸ್ಲ್ಯಾಪ್ ಡೇ, ಕಿಕ್ ಡೇ, ಪರ್ಫ್ಯೂಮ್ ಡೇ, ಫ್ಲರ್ಟ್ ಡೇ, ಕನ್ಫೆಷನ್ ಡೇ, ಮಿಸ್ಸಿಂಗ್ ಡೇ ಮತ್ತು ಬ್ರೇಕಪ್ ಡೇ ಅನ್ನು ಒಳಗೊಂಡಿದೆ. ಬ್ರೇಕ್ ಅಪ್ ಡೇಯನ್ನು ಪ್ರೇಮಿಗಳ ವಿರೋಧಿ ದಿನದ ವಾರದ ಕೊನೆಯ ದಿನ ಆಚರಿಸಲಾಗುತ್ತದೆ. ನೀವು ನಿಮ್ಮ ಪ್ರೇಮಿಯಿಂದ ದೂರಾಗಲು ಬಯಸುವವರಾಗಿದ್ರೆ ಈ ದಿನ ಇತಿಹಾಸ, ಮಹತ್ವ ತಿಳಿಯಿರಿ.
ದಿನಾಂಕ
ಪ್ರತಿವರ್ಷ ಫೆಬ್ರುವರಿ 21 ರಂದು ಬ್ರೇಕ್ ಅಪ್ ಡೇ ಆಚರಿಸಲಾಗುತ್ತದೆ. ಈ ವರ್ಷ ಬುಧವಾರ ಅಂದರೆ ನಾಳೆ ಬ್ರೇಕ್ ಅಪ್ ಡೇ ಇದೆ.
ಇತಿಹಾಸ
ಎಲ್ಲರ ಬದುಕಿನಲ್ಲೂ ಪ್ರೀತಿ-ಪ್ರೇಮ ಎನ್ನುವುದು ಅರಳಿದ ಗುಲಾಬಿಯಲ್ಲ. ಇದು ಕಾಮನಬಿಲ್ಲಿನ ರಂಗು ಹರಡಿರುವ ಆಕಾಶದಷ್ಟು ಸುಂದರವೂ ಅಲ್ಲ. ಕೆಲವರಿಗೆ ಬದುಕಿನಲ್ಲಿ ಪ್ರೀತಿ ಎಂಬುದು ನೋವು, ನಿರಾಸೆಯನ್ನೂ ಉಂಟು ಮಾಡಿರುತ್ತದೆ. ಇಬ್ಬರು ವ್ಯಕ್ತಿಗಳು ಅಥವಾ ಪ್ರೇಮಿಗಳ ನಡುವೆ ಹೊಂದಾಣಿಕೆ ಇಲ್ಲದೇ ಇದ್ದಾಗ ಬ್ರೇಕ್‌ಅಪ್‌ಗಳಾಗುವುದು ಸಹಜ. ಪ್ರೇಮ ಸಂಬಂಧದಲ್ಲಿದ್ದು, ಸಂತೋಷವಾಗಿರದೇ ದುಃಖ ಹಾಗೂ ಅಸಮಾಧಾನದಿಂದ ಇರುವವರಿಗಾಗಿ ಬ್ರೇಕ್ ಡೇ ಯನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಹಿಂದೆ ನಿರ್ದಿಷ್ಟ ಇತಿಹಾಸವಿಲ್ಲ. ಆದ್ರೆ ಪಾಶ್ಚಾತ್ಯ ದೇಶಗಳಲ್ಲಿ ತಮ್ಮ ಪ್ರೇಮಿಗೆ ಗುಡ್‌ಬೈ ಹೇಳಿ, ಅವರ ಬದುಕಿನಿಂದ ದೂರಾಗಲು ಈ ದಿನವನ್ನು ಆರಿಸಿಕೊಳ್ಳುತ್ತಾರೆ.
ಮಹತ್ವ
ಬ್ರೇಕ್ ಡೇ ಆಚರಿಸುವ ಮಹತ್ವ ಎಂದರೆ ನಿಮ್ಮ ಸಂಕೀರ್ಣ ಸಂಬಂಧದಿಂದ ಬಿಡುಗಡೆಗೊಳ್ಳಲು ಒಂದು ಅವಕಾಶ ನೀಡುವುದು. ಹಳೆಯ ನೆನಪುಗಳೆನ್ನಲ್ಲಾ ಮೂಟೆ ಕಟ್ಟಿ ಎಸೆದು ಹೊಸ ಬದುಕಿನತ್ತ ಸಾಗಲು ಇದೊಂದು ಉತ್ತಮ ದಿನ. ಪ್ರೀತಿಯೇ ಬದುಕು, ಪ್ರೇಮಿಯೇ ಜೀವನ ಎಂದುಕೊಂಡವರೂ ಕೂಡ ದೂರವಾಗಿರುವ ಅದೆಷ್ಟೋ ಉದಾಹರಣೆಗಳಿವೆ. ಬ್ರೇಕ್ ಅಪ್ ಡೇ ನಿಮ್ಮನ್ನು ನೀವು ಪ್ರೀತಿಸಿಕೊಳ್ಳಲು ಆರಂಭಿಸುವ ದಿನ ಎಂದು ಹೇಳಬಹುದು. ಸಂಬಂಧದಲ್ಲಿ ಮುಂದುವರಿಯಲು ಸಾಧ್ಯವೇ ಇಲ್ಲ, ಪ್ರೇಮ ಸಂಬಂಧದಿಂದ ಸಂತೋಷ, ನೆಮ್ಮದಿ ಎಲ್ಲವೂ ಹಾಳಾಗುತ್ತಿದೆ ಎಂದುಕೊಳ್ಳುವವರು ಪ್ರೇಮಿಗಳ ದಿನವಾಗಿ ಒಂದು ವಾರದ ನಂತರ ಬರುವ ಬ್ರೇಕ್ ಅಪ್ ಡೇಯಂದು ಪ್ರೇಮಿಗೆ ಬಾಯ್ ಹೇಳುವ ಮೂಲಕ ಹೊಸ ಜೀವನ ಆರಂಭಿಸುತ್ತಾರೆ.