ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಬ್ರೇಕಪ್​ ಆದ ಬಳಿಕವೂ ಮಾಜಿ ಸಂಗಾತಿಯೊಂದಿಗೆ ಗೆಳೆತನ ಮುಂದುವರೆಸುವುದು ಸರಿಯೇ?

Relationship: ಬ್ರೇಕಪ್​ ಆದ ಬಳಿಕವೂ ಮಾಜಿ ಸಂಗಾತಿಯೊಂದಿಗೆ ಗೆಳೆತನ ಮುಂದುವರೆಸುವುದು ಸರಿಯೇ?

Relationship: ರಿಲೇಷನ್​ಶಿಪ್​ನಲ್ಲಿ ಬ್ರೇಕಪ್​ ಆದಾಗ ಬಹುತೇಕರು ತಮ್ಮ ಮಾಜಿ ಪ್ರಿಯಕರ ಅಥವಾ ಪ್ರಿಯತಮೆಯ ನಂಬರ್​ ಬ್ಲಾಕ್​ ಮಾಡಿಬಿಡುತ್ತಾರೆ. ಆದರೆ ಇನ್ನೂ ಕೆಲವರು ಬ್ರೇಕಪ್​ ಆದ ಬಳಿಕವೂ ಒಂದು ಸ್ನೇಹ ಸಂಬಂಧವನ್ನು ಮುಂದುವರಿಸುವ ಪ್ರಯತ್ನ ಮಾಡುತ್ತಾರೆ. ಈ ರೀತಿ ಮಾಡುವುದು ಸರಿಯೇ..? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಬ್ರೇಕಪ್​ ಆದ ಬಳಿಕವೂ ಮಾಜಿ ಸಂಗಾತಿಯೊಂದಿಗೆ ಗೆಳೆತನ ಮುಂದುವರೆಸುವುದು ಸರಿಯೇ?
ಬ್ರೇಕಪ್​ ಆದ ಬಳಿಕವೂ ಮಾಜಿ ಸಂಗಾತಿಯೊಂದಿಗೆ ಗೆಳೆತನ ಮುಂದುವರೆಸುವುದು ಸರಿಯೇ?

Relationship: ಜೀವನಪರ್ಯಂತ ಒಟ್ಟಾಗಿ ಬಾಳಬೇಕು ಎಂಬ ಗುರಿಯನ್ನಿಟ್ಟುಕೊಂಡೇ ಬಹುತೇಕ ಎಲ್ಲಾ ಪ್ರೀತಿಗಳು ಆರಂಭವಾಗುತ್ತದೆ. ಆದರೆ ಎಲ್ಲರ ಪ್ರೀತಿಗೂ ಜಯ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪರಸ್ಪರ ಇಷ್ಟಪಟ್ಟು ಒಂದಾದ ಜೀವಗಳು ಕಾಲ ಕಳೆದಂತೆ ಒಬ್ಬರಿಗೊಬ್ಬರು ಹೊರೆ ಎಂಬಂತೆ ಭಾಸವಾಗಿಬಿಡಬಹುದು. ಇಬ್ಬರ ನಡುವೆ ಸರಿಪಡಿಸಲು ಸಾಧ್ಯವಾಗದಷ್ಟರ ಮಟ್ಟಿಗೆ ಕಂದಕಗಳು ಉಂಟಾಗಿಬಿಡಬಹುದು.

ಟ್ರೆಂಡಿಂಗ್​ ಸುದ್ದಿ

ಇದೆಲ್ಲದರ ಬಳಿಕ ಇಬ್ಬರ ನಡುವಿನ ಪ್ರೀತಿಯನ್ನು ಅಂತ್ಯಗೊಳಿಸುವ ಬಗ್ಗೆ ಪರಸ್ಪರ ನಿರ್ಧಾರ ಮಾಡಿದ ಬಳಿಕ ಉಳಿದುಕೊಳ್ಳುವ ಪ್ರಶ್ನೆ ಏನೆಂದರೆ ನಾವಿನ್ನು ಸ್ನೇಹಿತರಾಗಿ ಉಳಿದುಕೊಳ್ಳಲು ಸಾಧ್ಯವೇ ಎಂಬುದು. ಪರಸ್ಪರ ಪ್ರೀತಿಸಿದ ಜೋಡಿಯೊಂದು ತಮ್ಮ ಪ್ರೇಮ ಸಂಬಂಧವನ್ನು ಕೊನೆಗಾಣಿಸಿಕೊಂಡ ಬಳಿಕ ಅವರು ಸ್ನೇಹಿತರಾಗಿ ಮುಂದುವರಿಯಬಹುದೇ ಎಂಬ ಪ್ರಶ್ನೆಗೆ ಇಂದಿನಿವರೆಗೆ ಯಾರಲ್ಲಿಯೂ ಸ್ಪಷ್ಟವಾದ ಉತ್ತರಗಳಿಲ್ಲ.

ಹಲವು ವರ್ಷಗಳ ಕಾಲ ಸ್ನೇಹಿತರಾಗಿದ್ದ ಇಬ್ಬರು ಅದನ್ನು ಪ್ರಣಯವಾಗಿ ಬದಲಾಯಿಸಿಕೊಂಡ ಬಳಿಕ ಇಬ್ಬರಲ್ಲಿ ಭಿನ್ನಾಭಿಪ್ರಾಯಗಳು ಬರುತ್ತಿದೆ ಎಂಬುದು ಗಮನಕ್ಕೆ ಬಂದ ಬಳಿಕ ಅಥವಾ ತಮ್ಮಿಬ್ಬರ ನಡುವೆ ಸ್ನೇಹವಿದ್ದಿರಬಹುದು ಆದರೆ ಪ್ರೇಮದ ಹೂವು ಅರಳಲು ಸಾಧ್ಯವಿಲ್ಲವೆಂಬುದು ಮನವರಿಕೆಯಾದ ಬಳಿಕ ಅವರು ಮತ್ತೆ ಮೊದಲಿನಂತೆಯೇ ಸ್ನೇಹಿತರಾಗಿ ಉಳಿದಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ.

ಪ್ರೇಮ ಸಂಬಂಧದಲ್ಲಿದ್ದ ಇಬ್ಬರೂ ಪ್ರ್ಯಾಕ್ಟಿಕಲ್​ ಜೀವಿಗಳಾಗಿದ್ದು ಆ ಸಂಬಂಧದಲ್ಲಿ ಇಬ್ಬರೂ ಭಾವನಾತ್ಮಕವಾಗಿ ಕಳೆದು ಹೋಗದೇ ಹೋಗಿದ್ದರೆ ಬ್ರೇಕಪ್​ ಆದ ಬಳಿಕ ಅವರು ತಮ್ಮ ಸಂಬಂಧವನ್ನು ಸ್ನೇಹದ ರೂಪದಲ್ಲಿ ಖಂಡಿತ ಮುಂದುವರಿಸಬಹುದಾಗಿದೆ. ಆದರೆ ಎಲ್ಲರಿಗೂ ಪ್ರೀತಿಯನ್ನು ಮರೆಯುವುದು ಇಷ್ಟೊಂದು ಸುಲಭವಲ್ಲ. ಕೆಲವರು ಭಾವನಾತ್ಮಕವಾಗಿ ಕಳೆದು ಹೋಗಿರುತ್ತಾರೆ. ತಾವು ಕಟ್ಟಿಕೊಂಡಿದ್ದ ಸುಂದರ ಕ್ಷಣಗಳನ್ನು ಮರೆಯುವುದು ತುಂಬಾ ಕಠಿಣ ಎನಿಸಬಹುದು. ಭವಿಷ್ಯ ಏನು ಎಂಬ ಚಿಂತೆ ಅತಿಯಾಗಿ ಕಾಡಬಹುದು. ತಮ್ಮ ಎಕ್ಸ್​ ಇವರಿಗೆ ದೊಡ್ಡ ಖಳ ನಾಯಕ ಅಥವಾ ಖಳ ನಾಯಕಿಯಂತೆ ಕಾಣಬಹುದು. ಮಾಜಿ ಪ್ರೇಮಿಯ ಬಗ್ಗೆ ಬಲವಾದ ದ್ವೇಷ ಹುಟ್ಟಿಕೊಳ್ಳುವಂತಹ ಘಟನೆಯೇನಾದರೂ ಘಟಿಸಿ ಹೋಗಬಹುದು. ಇಂಥವರು ಖಂಡಿತವಾಗಿಯೂ ತಮ್ಮ ಹಳೆ ಪ್ರೇಮಿಯ ಜೊತೆ ಸ್ನೇಹ ಬೆಳೆಸುವುದು ಖಂಡಿತವಾಗಿಯೂ ಯೋಗ್ಯವಲ್ಲ.

ಒಂದು ವೇಳೆ ನೀವು ನಿಮ್ಮ ಮಾಜಿ ಪ್ರೇಮಿಯೊಂದಿಗೆ ಸ್ನೇಹ ಮುಂದುವರಿಸಿದ್ದರೆ ನೀವು ಯಾವೆಲ್ಲಾ ಷರತ್ತುಗಳನ್ನು ವಿಧಿಸಿಕೊಳ್ಳಬೇಕು ..?

ಹೋಲಿಕೆ ಬೇಡ

ಹಳೆಯ ಪ್ರೇಮಕ್ಕೆ ತಿಲಾಂಜಲಿ ಹಾಡಿರುವ ನಿಮ್ಮ ಬಾಳಲ್ಲಿ ಹೊಸ ಪ್ರೇಮದ ಉದಯವಾಗಿದೆ ಎಂದುಕೊಳ್ಳೋಣ. ಹಳೆ ಪ್ರೇಮಿ ನಿಮ್ಮ ಸ್ನೇಹಿತರಾಗಿ ಮುಂದುವರಿದಿದ್ದಾರೆ ಎಂದುಕೊಳ್ಳಿ , ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಹಳೆಯ ಹಾಗೂ ಹೊಸ ಪ್ರೇಮವನ್ನು ನೀವು ತಕ್ಕಡಿಯಲ್ಲಿಟ್ಟು ತೂಗಬಾರದು. ಒಬ್ಬೊಬ್ಬ ವ್ಯಕ್ತಿಗೆ ಅನುಗುಣವಾಗಿ ಸಂಬಂಧಗಳು ಬದಲಾಗುತ್ತವೆ ಎಂಬ ಪ್ರಬುದ್ಧತೆಯನ್ನು ನೀವು ಹೊಂದಿರಬೇಕು.

ಕದ್ದು ಮುಚ್ಚಿ ಭೇಟಿ

ಹೊಸ ಸಂಬಂಧವೊಂದು ನಿಮ್ಮ ಜೀವನದಲ್ಲಿ ಆರಂಭಗೊಂಡಿದೆ ಎಂದಮೇಲೆ ನಿಮ್ಮ ಎಕ್ಸ್​ನೊಂದಿಗೆ ಕದ್ದುಮುಚ್ಚಿ ಭೇಟಿಯಾಗುವುದು, ನಿಮ್ಮ ಹೊಸ ಪ್ರೇಮಿಯೊಂದಿಗೆ ಈ ವಿಷಯಗಳನ್ನು ಮುಚ್ಚಿಡುವುದು. ಇವೆಲ್ಲ ನಿಜಕ್ಕೂ ಒಳ್ಳೆಯ ಬೆಳವಣಿಗೆಗಳಲ್ಲ. ನಿಮ್ಮ ಪ್ರೇಮ ಸಂಬಂಧಕ್ಕೆ ಅಭದ್ರತೆ ಮೂಡುವಷ್ಟರ ಮಟ್ಟಿಗೆ ಮಾಜಿ ಪ್ರೇಮಿಯೊಂದಿಗೆ ಸ್ನೇಹ ಬೇಡ.

ಹೊಸ ಪ್ರೇಮಿಯ ಬಗ್ಗೆ ಮಾಜಿ ಪ್ರೇಮಿ ಜೊತೆ ಚರ್ಚೆ

ನಿಮಗೆ ಹೊಸ ಪ್ರೀತಿ ಮೂಡಿದೆ ಎಂದುಕೊಳ್ಳಿ. ನಿಮ್ಮ ಮಾಜಿ ಪ್ರಿಯಕರನೋ ಅಥವಾ ಪ್ರಿಯತಮೆಯೋ ಇನ್ನೂ ನಿಮ್ಮ ಸಂಪರ್ಕದಲ್ಲಿದ್ದರೆ ಅವರೊಂದಿಗೆ ನಿಮ್ಮ ಹೊಸ ಪ್ರೇಮ ಜೀವನದ ಬಗ್ಗೆ ಚರ್ಚೆ ಬೇಡ. ಏಕೆಂದರೆ ಇದು ಪುನಃ ನಿಮ್ಮಿಬ್ಬರ ನಡುವೆ ಹಳೆಯ ನೆನಪುಗಳ ಹಸನಾಗಲು ನೀವೇ ದಾರಿ ಮಾಡಿಕೊಟ್ಟಂತೆ ಆಗಬಹುದು.

ವಿಭಾಗ