Relationship: ಗಂಡ-ಹೆಂಡತಿ ಬಾಂಧವ್ಯಕ್ಕೆ ಬಿಡದಿರಿ ಎಳ್ಳು-ನೀರು: ಸುಖೀ ಸಂಸಾರಕ್ಕೆ ಈ ಏಳು ವಿಷಯಗಳನ್ನು ಎಂದಿಗೂ ಹೇಳದಿರಿ-relationship effective communication strategies for couples resolving conflicts in a relationship prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಗಂಡ-ಹೆಂಡತಿ ಬಾಂಧವ್ಯಕ್ಕೆ ಬಿಡದಿರಿ ಎಳ್ಳು-ನೀರು: ಸುಖೀ ಸಂಸಾರಕ್ಕೆ ಈ ಏಳು ವಿಷಯಗಳನ್ನು ಎಂದಿಗೂ ಹೇಳದಿರಿ

Relationship: ಗಂಡ-ಹೆಂಡತಿ ಬಾಂಧವ್ಯಕ್ಕೆ ಬಿಡದಿರಿ ಎಳ್ಳು-ನೀರು: ಸುಖೀ ಸಂಸಾರಕ್ಕೆ ಈ ಏಳು ವಿಷಯಗಳನ್ನು ಎಂದಿಗೂ ಹೇಳದಿರಿ

ಗಂಡ-ಹೆಂಡತಿ ನಡುವಿನ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಉಂಡು ಮಲಗಿದ ನಂತರವೂ ಜಗಳ ಮುಂದುವರಿದರೆ ಅದು ವಿಚ್ಛೇದನದ ಹಂತದವರೆಗೂ ಹೋಗಬಹುದು. ಪ್ರೀತಿ ಇದ್ದಲ್ಲಿ ಜಗಳ ಇರುತ್ತದೆ ಎಂಬ ಮಾತಿನಂತೆ ಕೋಪದ ಭರದಲ್ಲಿ ಆವೇಶದ ಮಾತುಗಳನ್ನಾಡಬಾರದು. ಸಂಗಾತಿ ಮಧ್ಯೆ ನಡೆಯುವ ಜಗಳದ ವೇಳೆ ಅಪ್ಪಿತಪ್ಪಿಯೂ ಈ ಮಾತುಗಳನ್ನಾಡದಿರಿ.

ದಂಪತಿಗಳು ಹತಾಶೆ, ಕೋಪದಲ್ಲಿ ಮಾತನಾಡುವಾಗ ಬಹಳ ಜಾಗರೂಕರಾಗಿರಬೇಕು.
ದಂಪತಿಗಳು ಹತಾಶೆ, ಕೋಪದಲ್ಲಿ ಮಾತನಾಡುವಾಗ ಬಹಳ ಜಾಗರೂಕರಾಗಿರಬೇಕು.

ಗಂಡ-ಹೆಂಡತಿ ನಡುವಿನ ಬಂಧ ಏಳೇಳು ಜನುಮದ ಅನುಬಂಧ ಅನ್ನೋ ಮಾತಿದೆ. ಮದುವೆಯಾದ ಹೊಸತರಲ್ಲಿ ಗಂಡ-ಹೆಂಡತಿ ಮಧ್ಯೆ ಇರುವ ಬಾಂಧವ್ಯ, ಅನ್ಯೋನ್ಯತೆ ಬರುಬರುತ್ತಾ ಕಡಿಮೆಯಾಗುತ್ತದೆ. ಇತ್ತೀಚೆಗಂತೂ ಸಣ್ಣ-ಪುಟ್ಟ ವಿಚಾರಕ್ಕೆ ಶುರುವಾಗುವ ಜಗಳ ತಾರಕಕ್ಕೇರಿ ಡಿವೋರ್ಸ್ ಹಂತಕ್ಕೆ ತಲುಪುತ್ತದೆ. ಇದಕ್ಕೆ ಪತಿ-ಪತ್ನಿ ಮಧ್ಯೆ ಮೂಡುವ ಬಿರುಕುಗಳೇ ಕಾರಣ. ತಾನೇ ಸರಿ, ನಾನು ಹೇಳಿದಂತೆಯೇ ಆಗಬೇಕು ಎಂಬಿತ್ಯಾದಿ ಇದ್ದರಂತೂ ಆ ಸಂಬಂಧ ಹೆಚ್ಚು ದಿನ ಉಳಿಯುವುದು ಕಷ್ಟವೇ. ಇನ್ನೂ ಕೆಲವೂ ಸಂಬಂಧಗಳಲ್ಲಿ ಗಂಡ-ಹೆಂಡತಿ ಮಧ್ಯೆ ಮನಸ್ತಾಪ ಇದ್ದರೂ ದೂರ ಹೋಗದೆ, ಹಾವು-ಮುಂಗುಸಿ ತರಹ ಇದ್ದು ಬಿಡುತ್ತಾರೆ. ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕೆಂದರೆ ದಂಪತಿ ಪರಸ್ಪರರನ್ನು ಗೌರವಿಸಬೇಕು. ಹತಾಶೆ, ಕೋಪದಲ್ಲಿ ಮಾತನಾಡುವಾಗ ಬಹಳ ಜಾಗರೂಕರಾಗಿರಬೇಕು. ಕೋಪದಿಂದ ಆಡುವ ಕೆಲವೊಂದು ಮಾತುಗಳು ಸಂಗಾತಿಯ ಎದೆಗೆ ಚೂರಿ ಇರಿದಂತೆ ಭಾಸವಾಗಬಹುದು. ಹೀಗಾಗಿ ಸಂಬಂಧವನ್ನು ಕಾಪಾಡಲು ನಾವು ಬಳಸುವ ಭಾಷೆಯ ಬಗ್ಗೆ ಗಮನದಲ್ಲಿರಬೇಕು. ಕೋಪದ ಭರದಲ್ಲಿ ಸಂಗಾತಿಯೊಂದಿಗೆ ಈ ಏಳು ವಿಷಯಗಳನ್ನು ಎಂದಿಗೂ ಹೇಳದಿರಿ:

ಕೋಪದ ಭರದಲ್ಲಿ ಸಂಗಾತಿಗೆ ಅಪ್ಪಿತಪ್ಪಿಯೂ ಹೇಳಬಾರದ ಏಳು ವಿಷಯಗಳು

ನಿನ್ನನ್ನು ಮದುವೆಯಾಗಿದ್ದಕ್ಕೆ ವಿಷಾದಿಸುತ್ತೇನೆ ಎಂದು ಹೇಳುವುದು: ಜಗಳವಾದಾಗ ಸಾಮಾನ್ಯವಾಗಿ ಬಹುತೇಕ ದಂಪತಿ ಈ ಮಾತುಗಳನ್ನಾಡುತ್ತಾರೆ. ತಾನು ಯಾಕಾದರೂ ನಿನ್ನನ್ನು ಮದುವೆಯಾದೆನೋ. ಇನ್ನು ಸ್ವಲ್ಪ ಸಮಯ ಕಾದಿದ್ದರೆ ಉತ್ತಮವಾದ ಹುಡುಗಿ/ಹುಡುಗ ಸಿಗುತ್ತಿದ್ದ. ನಿನ್ನನ್ನು ಮದುವೆಯಾಗಿದ್ದಕ್ಕೆ ಬಹಳ ಬೇಸರವಿದೆ ಎಂದೆಲ್ಲಾ ಹೇಳುವುದು ಸರಿಯಲ್ಲ. ಇನ್ನೂ ಕೆಲವರು, ತಾನು ನಿನಗೆ ಬಾಳು ಕೊಟ್ಟೆ ಅನ್ನೋ ಮಟ್ಟಕ್ಕೆಲ್ಲಾ ಮಾತು ಬೆಳೆಸುವವರಿದ್ದಾರೆ. ಈ ರೀತಿ ಸಂಗಾತಿಗೆ ಹೇಳುವುದರಿಂದ ಅವರ ಮನಸ್ಸಿಗೆ ತೀವ್ರ ಘಾಸಿಯುಂಟಾಗುತ್ತದೆ. ಇದರಿಂದ ಸಂಬಂಧ ಇನ್ನಷ್ಟು ಹದಗೆಡುತ್ತದೆ. ಒಂದೇಟು ಹೊಡೆಯುವುದಕ್ಕಿಂತ ಹರಿತವಾದ ಇಂತಹ ಮಾತುಗಳು ಜೀವನಪೂರ್ತಿ ಚುಚ್ಚಿ ಚುಚ್ಚಿ ಘಾಸಿ ಮಾಡಿದಂತಾಗುತ್ತದೆ. ಹೀಗಾಗಿ ಸಂಗಾತಿ ಮೇಲೆ ಜಿಗುಪ್ಸೆ, ಅತೃಪ್ತಿಗೆ ಕಾರಣವಾಗಬಹುದು.

ಸಂಗಾತಿಯನ್ನು ಅವರ ಹೆತ್ತವರೊಂದಿಗೆ ಹೋಲಿಸುವುದು: ಸಂಗಾತಿಯನ್ನು ಅವರ ಹೆತ್ತವರೊಂದಿಗೆ ಹೋಲಿಸುವುದರಿಂದ ಪತಿ-ಪತ್ನಿ ಮಧ್ಯೆ ಇರುವ ಕಲಹ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ನೀನು ಸರಿಯಿಲ್ಲ, ನಿಮ್ಮಪ್ಪ-ಅಮ್ಮನೂ ಸರಿಯಿಲ್ಲ ಎಂಬಂತಹ ಮಾತುಗಳನ್ನಾಡುವುದು. ನಿಮ್ಮಪ್ಪ ಅಮ್ಮ ಬೆಳೆಸಿದ ರೀತಿ ಸರಿಯಿಲ್ಲ ಎನ್ನುವುದು ಇತ್ಯಾದಿ ಮಾತುಗಳನ್ನು ಹೇಳುವುದರಿಂದ ಸಂಗಾತಿ ಮೇಲೆ ಮತ್ತಷ್ಟು ರೋಷ ಹೆಚ್ಚಾಗುತ್ತದೆ. ಪ್ರತಿಯೊಬ್ಬರೂ ಕೂಡ ತಮ್ಮ ತಂದೆ-ತಾಯಿಯನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಹೀಗಾಗಿ ಕುಟುಂಬದ ಹೆಸರೆತ್ತದೆ, ಏನಾದರೂ ವಿಷಯವನ್ನು ಪತಿ-ಪತ್ನಿ ಇಬ್ಬರೂ ಕುಳಿತು ಸಮಾಧಾನದಿಂದ ಬಗೆಹರಿಸಿಕೊಳ್ಳಬೇಕು.

ನಾನು ಇನ್ನು ಮುಂದೆ ನಿನ್ನನ್ನು ಪ್ರೀತಿಸುವುದಿಲ್ಲ ಎಂದು ಹೇಳುವುದು: ಈ ರೀತಿ ಸಂಗಾತಿಗೆ ಹೇಳುವುದು ಕೋಪದ ಭರದಲ್ಲಿ ಕೊಡಲಿ ತೆಗೆದುಕೊಂಡಂತೆ. ಇದು ಸಂಬಂಧದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಇದರಿಂದ ಸಂಗಾತಿಯನ್ನು ತಿರಸ್ಕರಿಸುವುದು ಅವರಿಗೆ ಅಪನಂಬಿಕೆಯನ್ನುಂಟು ಮಾಡುತ್ತದೆ. ಸಂಬಂಧವನ್ನು ಉತ್ತಮ ಹಂತಕ್ಕೆ ಕೊಂಡೊಯ್ಯಲು ಇಬ್ಬರೂ ಕೌನ್ಸಿಲಿಂಗ್ ತೆಗೆದುಕೊಳ್ಳಬಹುದು.

ತಾನು ಬೇರೊಬ್ಬರನ್ನು ಮದುವೆಯಾಗಬೇಕಿತ್ತು ಎಂದು ಹೇಳುವುದು: ನಿಮ್ಮನ್ನು ಹೊರತುಪಡಿಸಿ ತಾನು ಯಾರನ್ನಾದರೂ ಬೇರೆ ಮದುವೆಯಾಗಬೇಕಿತ್ತು ಎಂದು ಹೇಳುವುದು ಸಂಬಂಧವನ್ನು ಗಾಢವಾಗಿ ಹಾನಿಗೊಳಿಸಬಹುದು. ಈ ಹೇಳಿಕೆಯು ಅತೃಪ್ತಿ ಮತ್ತು ವಿಷಾದವನ್ನು ಸೂಚಿಸುತ್ತದೆ. ಇದು ಸಂಗಾತಿಗೆ ತಿರಸ್ಕಾರದ ಭಾವನೆ ಮೂಡಲು ಕಾರಣವಾಗಬಹುದು.

ಮಕ್ಕಳನ್ನು ಪೋಷಣೆ ಮಾಡಲು ಆಗುವುದಿಲ್ಲ ಎಂದು ಟೀಕಿಸುವುದು: ದಂಪತಿ ಮಧ್ಯೆ ಎಂತಹ ಕಲಹಗಳಿದ್ದರೂ ಮಕ್ಕಳೆಂದರೆ ಇಬ್ಬರಿಗೂ ಪ್ರಪಂಚವೇ ಆಗಿರುತ್ತಾರೆ. ಆದರೆ, ಮಕ್ಕಳನ್ನು ಸರಿಯಾಗಿ ಪೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ನೀನೇಂಥ ತಂದೆ/ತಾಯಿ ಎಂದೆಲ್ಲಾ ಹೀಗಳೆಯುವುದರಿಂದ ಸಂಗಾತಿಯ ಮನಸ್ಸು ಮತ್ತಷ್ಟು ನೋಯಿಸಲ್ಪಡುತ್ತದೆ. ತಾನೆಷ್ಟೇ ಚೆನ್ನಾಗಿ ನೋಡಿಕೊಂಡರು ತನ್ನ ಸಂಗಾತಿ ತಪ್ಪು ಹುಡುಕುತ್ತಾರೆ ಎಂದು ಬೇಸರವಾಗುತ್ತದೆ ಹಾಗೂ ಸಿಟ್ಟೂ ಬರಬಹುದು. ಮಕ್ಕಳ ವಿಚಾರದಲ್ಲೂ ಜಗಳ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಮಾತುಗಳನ್ನು ಆಡದಿರುವುದು ಒಳ್ಳೆಯದು. ಮಕ್ಕಳ ಜವಾಬ್ದಾರಿ ಇಬ್ಬರದ್ದೂ ಆಗಿರುವುದರಿಂದ ಹೊಂದಿಕೊಂಡು, ಸಾಮರಸ್ಯದಿಂದ ಬಾಳ್ವೆ ನಡೆಸುವುದು ಉತ್ತಮ.

ಎಲ್ಲಾ ಸಮಸ್ಯೆಗಳಿಗೆ ನೀವೇ ಕಾರಣ ಎಂದು ಹೇಳುವುದು: ಉದ್ಯೋಗದ ಸ್ಥಳದಲ್ಲಿ ಅಥವಾ ಇನ್ನಿತರೆ ಏನೇ ಸಮಸ್ಯೆ ಬಂದರೂ ಅದನ್ನು ಸಂಗಾತಿಗೆ ದೂರುವವರು ಅನೇಕರಿದ್ದಾರೆ. ತನ್ನೆಲ್ಲಾ ಸಮಸ್ಯೆಗೆ ಪತಿ ಅಥವಾ ಪತ್ನಿಯೇ ಕಾರಣ ಎಂದು ಹೀಗಳೆಯುವುದರಿಂದ ಸಂಗಾತಿಯ ಮನಸ್ಸಿಗೆ ನೋವನ್ನುಂಟು ಮಾಡುತ್ತದೆ. ಇದರಿಂದ ಮಾತು ಬಿಡುವುದು, ಅಸಮಾಧಾನ, ತಿರಸ್ಕಾರಕ್ಕೆ ಕಾರಣವಾಗಬಹುದು. ಇಬ್ಬರೂ ಸೇರಿ ಏನು ಪರಿಹಾರ ಕಂಡುಕೊಳ್ಳುವುದು ಎಂದು ಯೋಚಿಸುವುದು ಉತ್ತಮ.

ತಾನು ನಿಮ್ಮಿಂದ ರಹಸ್ಯಗಳನ್ನು ಮುಚ್ಚಿಡುತ್ತಿದ್ದೇನೆ ಎಂದು ಹೇಳುವುದು: ಪತಿ-ಪತ್ನಿ ಸಂವಹನ ನಡೆಸುವಾಗ ಮುಕ್ತವಾಗಿ ಎಲ್ಲವನ್ನೂ ಹಂಚಿಕೊಳ್ಳಬೇಕು. ಗಂಡ-ಹೆಂಡತಿ ಮಧ್ಯೆ ಯಾವುದೇ ರಹಸ್ಯ ಇರಬಾರದು. ಆದರೆ, ತಾನು ರಹಸ್ಯವನ್ನು ಮುಚ್ಚಿಡುತ್ತಿದ್ದೇನೆ ಎಂದು ಹೇಳುವುದು ದಂಪತಿ ಮಧ್ಯೆ ಅಶಾಂತಿಗೆ ಕಾರಣವಾಗಬಹುದು. ಇದು ಇಬ್ಬರ ನಡುವಿನ ನಂಬಿಕೆಯನ್ನು ಹಾಳುಗೆಡವುತ್ತದೆ. ಅಲ್ಲದೆ, ದ್ರೋಹ ಹಾಗೂ ಅಭದ್ರತೆಯ ಭಾವನೆಗಳನ್ನು ಉಂಟು ಮಾಡುತ್ತದೆ. ಒಂದು ವೇಳೆ ರಹಸ್ಯ ಮುಚ್ಚಿಟ್ಟಿದ್ದರೆ, ತಾನು ಯಾಕಾಗಿ ರಹಸ್ಯವನ್ನು ಮುಚ್ಚಿಡಬೇಕಾಯಿತು ಎಂಬ ಬಗ್ಗೆ ಸಂದರ್ಭವನ್ನು ವಿವರಿಸಿ ತಿಳಿ ಹೇಳಿ. ಇದರಿಂದ ಸಂಗಾತಿ ಮಧ್ಯೆ ಇರುವ ಸಂಬಂಧ ಚೆನ್ನಾಗಿರಲು ಸಾಧ್ಯವಾಗುತ್ತದೆ.