Relationship: ಸಂಗಾತಿಯ ಬಳಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸುವುದು ಹೇಗೆ..? ಇಲ್ಲಿವೆ ಸಿಂಪಲ್​ ಸೂತ್ರಗಳು
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಸಂಗಾತಿಯ ಬಳಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸುವುದು ಹೇಗೆ..? ಇಲ್ಲಿವೆ ಸಿಂಪಲ್​ ಸೂತ್ರಗಳು

Relationship: ಸಂಗಾತಿಯ ಬಳಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸುವುದು ಹೇಗೆ..? ಇಲ್ಲಿವೆ ಸಿಂಪಲ್​ ಸೂತ್ರಗಳು

ಸಂಬಂಧಗಳಲ್ಲಿ ಮನಸ್ತಾಪಗಳು ಬರುವುದು ಸಹಜ. ಆದರೆ ಮಾಡಿದ ತಪ್ಪನ್ನು ಅರಿತು ಕ್ಷಮೆ ಕೇಳುವುದು ಸಹ ದಾಂಪತ್ಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾಡಿದ ತಪ್ಪಿಗೆ ಕ್ಷಮೆ ಕೋರಿ ಸಂಗಾತಿಯ ಮನವೊಲಿಸಲು ನೀವು ಏನೇನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಸಲಹೆಗಳು.

ಸಂಗಾತಿಯ ಬಳಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸುವುದು ಹೇಗೆ..? ಇಲ್ಲಿವೆ ಸಿಂಪಲ್​ ಸೂತ್ರಗಳು
ಸಂಗಾತಿಯ ಬಳಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸುವುದು ಹೇಗೆ..? ಇಲ್ಲಿವೆ ಸಿಂಪಲ್​ ಸೂತ್ರಗಳು

ಪ್ರೀತಿ ಎಂದಮೇಲೆ ಅಲ್ಲಿ ಜಗಳ ಹಾಗೂ ಮನಸ್ತಾಪಗಳು ಸಹಜ. ಹಾಗಂತ ಇವುಗಳೇ ಹೆಚ್ಚಾಗಬಾರದು. ಪ್ರೀತಿಯಲ್ಲಿ ಯಾವಾಗ ಪರಸ್ಪರ ಸೋಲುವುದು ಇರುತ್ತದೆಯೋ ಆಗ ಮಾತ್ರ ಆ ಸಂಬಂಧ ದೀರ್ಘಾವಧಿಯವರೆಗೆ ಮುಂದುವರಿಯುತ್ತದೆ. ಇದು ಆರೋಗ್ಯಕರ ಸಂಬಂಧದ ಲಕ್ಷಣ ಕೂಡ ಹೌದು. ಏನೋ ಒಂದು ಮನಸ್ತಾಪ ಉಂಟಾದಾಗ ಅಷ್ಟಕ್ಕೆ ಮಾತುಬಿಟ್ಟು ಅದನ್ನು ಇನ್ನೂ ದೊಡ್ಡ ಮಾಡುವ ಬದಲು ಕ್ಷಮೆ ಕೇಳಲು ಮಾರ್ಗ ಹುಡುಕುವುದು ಒಳ್ಳೆಯ ಆಯ್ಕೆಯಾಗಿದೆ.

ಸಂಗಾತಿಯು ಕ್ಷಮೆಯನ್ನು ಬಾಯಿಯಿಂದ ಕೇಳಬೇಕು ಎಂದೇನಿಲ್ಲ. ತನ್ನ ವಿವಿಧ ಕ್ರಿಯೆಗಳ ಮೂಲಕವೂ ಕ್ಷಮೆಯ ನಿವೇದನೆ ಮಾಡಬಹುದಾಗಿದೆ. ನಿಮ್ಮ ಸಂಗಾತಿ ಕ್ಷಮೆ ಕೇಳುತ್ತಿದ್ದಾರೆ ಎಂಬುದು ನಿಮಗೆ ಅರ್ಥವಾಗಬೇಕಷ್ಟೇ. ಈ ರೀತಿ ನಿಮ್ಮ ಕ್ರಿಯೆಗಳ ಮೂಲಕವೇ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರೆ ಅದಕ್ಕಿಂತ ಸುಂದರ ಸಂಬಂಧ ಇನ್ನೊಂದಿರಲು ಸಾಧ್ಯವೇ ಇಲ್ಲ. ಹಾಗಾದರೆ ನೀವು ಯಾವೆಲ್ಲ ರೀತಿಯಲ್ಲಿ ನಿಮ್ಮ ಕ್ಷಮೆಯನ್ನು ವ್ಯಕ್ತಪಡಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ :

ವಿಷಾದ ವ್ಯಕ್ತಪಡಿಸುವುದು

ಕೆಲವರು ತಾವು ಮಾಡಿದ ತಪ್ಪಿಗೆ ನೇರವಾಗಿ ಕ್ಷಮೆ ಕೇಳುತ್ತಾರೆ. ಅಂತಹ ಸಂದರ್ಭಗಳಲ್ಲಿ ನೀವು ನೇರವಾಗಿ ನನ್ನನ್ನು ಕ್ಷಮಿಸಿ ಎನ್ನಬಹುದು. ಆದರೆ ನಿಮ್ಮ ಮಾತು ನಿಮ್ಮ ಸಂಗಾತಿಗೆ ಆಳವಾಗಿ ನಾಟಿದ್ದಾಗ ಅಂತಹ ಸಂದರ್ಭಗಳಲ್ಲಿ ನಿಮ್ಮ ನಡವಳಿಕೆಯನ್ನು ಸಮರ್ಥಿಸಿಕೊಳ್ಳದೇ ನೀವಾಡಿದ ಮಾತಿಗೆ ಪಶ್ಚಾತಾಪ ಪಡುವ ಮೂಲಕ ಕ್ಷಮೆಯಾಚಿಸಬಹುದಾಗಿದೆ.

ಜವಾಬ್ದಾರಿ ತೆಗೆದುಕೊಳ್ಳುವುದು

ನೀವು ಮಾಡಿದ ತಪ್ಪನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದು ಕೂಡ ಕ್ಷಮೆ ಕೇಳುವ ಒಂದು ವಿಧಾನವೇ ಆಗಿದೆ. ಆಗಿರುವ ತಪ್ಪಿಗೆ ದೋಷಿಯ ಸ್ಥಾನದಲ್ಲಿ ನಿಂತು ಇದು ನನ್ನ ತಪ್ಪು, ನಾನು ಈ ರೀತಿ ಮಾಡಬಾರದಿತ್ತು. ಇಂತಹ ತಪ್ಪು ಮತ್ತೆ ನಡೆಯದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕವೂ ನೀವು ಕ್ಷಮೆಯ ನಿವೇದನೆ ಮಾಡಬಹುದಾಗಿದೆ.

ಉಡುಗೊರೆಗಳು

ಮಾಡಿದ ತಪ್ಪಿಗೆ ವಸ್ತುಗಳನ್ನು ನೀಡುವುದು ಸರಿಸಮವಲ್ಲದೇ ಇದ್ದರೂ ಸಹ ಉಡುಗೊರೆ ನೀಡುವ ಹಿಂದಿನ ನಿಮ್ಮ ಪ್ರಯತ್ನ ಇಲ್ಲಿ ಮುಖ್ಯವಾಗುತ್ತದೆ. ನಿಮ್ಮ ಈ ಪ್ರಯತ್ನಗಳು ಸಂಗಾತಿಗೆ ನೋವನ್ನು ಮರೆತು ಖುಷಿ ನೀಡುವಂತೆ ಮಾಡಲೂಬಹುದು. ನಿಮ್ಮ ಪ್ರೀತಿಪಾತ್ರರಿಗೆ ಇಷ್ಟವಾದ ವಸ್ತುವನ್ನು ಉಡುಗೊರೆ ನೀಡುವ ಮೂಲಕ ನೀವು ಅವರ ಬಳಿ ಕ್ಷಮೆಯಾಚಿಸಬಹುದಾಗಿದೆ.

ನಿಮ್ಮಲ್ಲಿ ಬದಲಾವಣೆ ತಂದುಕೊಳ್ಳುವುದು

ಇದು ಕ್ಷಮೆಯಾಚನೆ ಮಾತ್ರವಲ್ಲ. ನಿಮ್ಮಲ್ಲಿ ನೀವು ತಂದುಕೊಳ್ಳುವ ಬದಲಾವಣೆ ಕೂಡ ಹೌದಾಗಿದೆ. ಕೇವಲ ಬಾಯಲ್ಲಿ ಮಾತ್ರ ಕ್ಷಮೆಯಾಚಿಸಿದರೆ ಸಾಲದು ಮತ್ತೆಂದೂ ಆ ತಪ್ಪನ್ನು ಮಾಡದಂತೆ ನಿಮಗೆ ನೀವೇ ಪ್ರತಿಜ್ಞೆ ಹಾಕಿಕೊಳ್ಳಬೇಕು ಹಾಗೂ ನಿಮ್ಮ ಸಂಗಾತಿಗೆ ಈ ಭರವಸೆ ನೀಡಬೇಕು.

ಕ್ಷಮೆ ನೀಡುವಂತೆ ಬೇಡಿಕೊಳ್ಳುವುದು

ಕೆಲವೊಂದು ತಪ್ಪುಗಳಿಗೆ ಕ್ಷಮೆ ಕೇಳದೇ ಬೇರೆ ದಾರಿಯಿರುವುದಿಲ್ಲ. ನಿಮ್ಮಿಂದ ನೊಂದಿರುವ ಸಂಗಾತಿಯ ಬಳಿ ಮಂಡಿಯೂರಿ ಕ್ಷಮೆಯಾಚಿಸಬೇಕು. ಇದು ಅವರ ಭಾವನೆಗಳಿಗೆ ನೀವು ನೀಡುವ ಗೌರವ ಕೂಡ ಹೌದು . ನನ್ನ ತಪ್ಪನ್ನು ಅರ್ಥ ಮಾಡಿಕೊಂಡು ಈ ತಪ್ಪಿಗೆ ನನಗೆ ಕ್ಷಮೆ ನೀಡುತ್ತೀಯಾ ಎಂದು ಕೇಳುವ ಮೂಲಕ ನೀವು ಸಂಬಂಧದಲ್ಲಿ ಬಂದಿರುವ ಮನಸ್ತಾಪವನ್ನು ದೂರ ಮಾಡಿಕೊಳ್ಳಲು ಮೊದಲ ಹೆಜ್ಜೆ ಇಡಬಹುದಾಗಿದೆ.

Whats_app_banner