Relationship: ನಿಮ್ಮ ಸಂಗಾತಿಯಲ್ಲಿ ಈ ಗುಣಗಳಿದ್ದರೆ ನಿಮ್ಮದು ಖಂಡಿತವಾಗಿಯೂ ಆರೋಗ್ಯಕರ ಸಂಬಂಧವಲ್ಲ
ಪ್ರೀತಿಯ ಮೇಲೆ ನಿಂತಿರುವ ಸಂಬಂಧಗಳಲ್ಲಿ ನಂಬಿಕೆ, ಗೌರವ ಹಾಗೂ ಪ್ರಾಮಾಣಿಕತೆಗಳೇ ಆಧಾರ ಸ್ತಂಭಗಳಾಗಿರುತ್ತದೆ. ಆದರೆ ಕೆಲವು ಸಂಬಂಧಗಳಲ್ಲಿ ಪ್ರೀತಿಗಿಂತ ಜಾಸ್ತಿ ಅಧಿಕಾರವೇ ಮಾತನಾಡುತ್ತಿರುತ್ತದೆ. ನಿಮ್ಮ ಸಂಗಾತಿ ಅಥವಾ ಪ್ರೇಮಿಯಲ್ಲಿಯೂ ಇಂತಹ ಗುಣಗಳು ಇದ್ದರೆ ಅಂತಹ ಸಂಬಂಧಗಳು ಖಂಡಿತವಾಗಿಯೂ ಆರೋಗ್ಯಕರವಾಗಿರಲು ಸಾಧ್ಯವಿಲ್ಲ.
ದಾಂಪತ್ಯ ಜೀವನವೇ ಆಗಿರಲಿ, ಪ್ರೇಮ ಸಂಬಂಧವೇ ಆಗಿರಲಿ ಪರಸ್ಪರ ನಂಬಿಕೆ ಹಾಗೂ ಒಬ್ಬರೊನ್ನಬರು ಅರ್ಥ ಮಾಡಿಕೊಳ್ಳುವ ಗುಣವಿಲ್ಲದೇ ಹೋದರೆ ಅದಕ್ಕಿಂತ ದುರಂತ ಇನ್ನೊಂದು ಇರಲು ಸಾಧ್ಯವಿಲ್ಲ. ಆದರೆ ಕೆಲವೊಂದು ಸಂಬಂಧ ಎಷ್ಟು ಹಳಸಿರುತ್ತವೆ ಎಂದರೆ ಅವುಗಳು ಇನ್ನೂ ರಿಪೇರಿ ಆಗದಂತಹ ಸ್ಥಿತಿಗೆ ಬಂದಿರುತ್ತದೆ. ಆದರೆ ಇದು ನಮಗೆ ಅರ್ಥವಾಗುವಾಗ ತುಂಬಾನೇ ತಡವಾಗಿರುತ್ತದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಸೂಕ್ತ ಸಮಯಕ್ಕೆ ಅಂತಹ ಸಂಬಂಧಗಳಿಂದ ದೂರ ಬಂದರೇನೇ ಮಾನಸಿಕ ನೆಮ್ಮದಿ ಸಿಗಲು ಸಾಧ್ಯ.
ಹೆಚ್ಚಿನ ಸಂದರ್ಭಗಳಲ್ಲಿ ನೀವು ನಿಮ್ಮ ಸಂಗಾತಿಯ ನಕಾರಾತ್ಮಕ ನಡವಳಿಕೆಗಳನ್ನು ಗುರುತಿಸುವಲ್ಲಿಯೇ ಎಡವಿರುತ್ತೀರಿ. ಆದರೆ ಈ ತಪ್ಪನ್ನು ನೀವು ಮಾಡಬಾರದು. ನಿರ್ಲಕ್ಷಿಸಲೂಬಾರದು. ಈಗ ನೀವಿರುವ ಸಂಬಂಧದಲ್ಲಿಯೂ ನೀವು ಈ ಕೆಳಗಿನ ಲಕ್ಷಣಗಳನ್ನು ಗಮನಿಸಿದ್ದರೆ ಖಂಡಿತವಾಗಿಯೂ ಅಂತಹ ಸಂಬಂಧಗಳಿಂದ ನೀವು ಹಿಂದೆ ಸರಿಯುವುದು ನಿಮಗೆ ಒಳ್ಳೆಯದು. ಆರೋಗ್ಯಕರ ಸಂಬಂಧದಲ್ಲಿ ಪರಸ್ಪರ ಗೌರವ, ನಂಬಿಕೆ ಹಾಗೂ ಉತ್ತಮ ಸಂವಹನಕ್ಕೆ ಯಾವುದೇ ಬರಗಾಲ ಇರುವುದಿಲ್ಲ.
ನಿಯಂತ್ರಿಸುವುದು
ನಿಮ್ಮ ನಿರ್ಧಾರಗಳು, ನಿಮ್ಮ ನಡವಳಿಕೆಗಳು ಹಾಗೂ ನಿಮ್ಮ ಇತರೆ ಸ್ನೇಹಿತರ ಬಗ್ಗೆ ನಿಯಂತ್ರಣವನ್ನು ತೋರಿಸುವುದನ್ನು ಟಾಕ್ಸಿಕ್ ರಿಲೇಷನ್ಶಿಪ್ ಎಂದು ಕರೆಯಬಹುದು. ಆರೋಗ್ಯಕರ ಸಂಬಂಧಗಳಲ್ಲಿ ನಂಬಿಕೆ ಹಾಗೂ ಗೌರವ ಇರುತ್ತದೆ, ನಿಯಂತ್ರಣ ಇರುವುದಿಲ್ಲ.
ನಿರಂತರ ಟೀಕೆ
ನಿಮ್ಮ ಸಂಗಾತಿಯು ನಿಮ್ಮ ಆಯ್ಕೆ, ನಿಮ್ಮ ನೋಟ ಅಥವಾ ನಿಮ್ಮ ಸಾಧನೆಗಳನ್ನು ಹೊಗಳುವುದನ್ನು ಬಿಟ್ಟು ನಿರಂತರ ಟೀಕೆ ಮಾಡುತ್ತಿದ್ದರೆ ಇದರಿಂದ ನಿಮ್ಮ ಅತ್ಮ ವಿಶ್ವಾಸವೇ ಕುಗ್ಗಿ ಹೋಗಬಹುದು. ಹೀಗಾಗಿ ಇಂತಹ ಸಂಬಂಧಗಳಿಂದ ಅಂತರ ಕಾಯ್ದುಕೊಳ್ಳುವುದೇ ಒಳ್ಳೆಯದು.
ಇತರರಿಂದ ನಿಮ್ಮನ್ನು ಪ್ರತ್ಯೇಕಿಸುವ ತಂತ್ರ
ನಿಮ್ಮ ಸಂಗಾತಿಯು ನಿಮ್ಮಿಂದ ನಿಮ್ಮ ಕುಟುಂಬಸ್ಥರನ್ನು ಅಥವಾ ಸ್ನೇಹಿತರನ್ನು ದೂರ ಮಾಡಲು ಯತ್ನಿಸುತ್ತಿದ್ದರೆ ಇಂಥವರನ್ನು ನಂಬಲೇಬೇಡಿ. ಇವರು ಭಾವನಾತ್ಮಕವಾಗಿ ಕೇವಲ ನೀವು ಅವರೊಂದಿಗೆ ಮಾತ್ರ ಸಂಬಂಧ ಹೊಂದಿರಬೇಕು ಎಂಬ ಸ್ವಾರ್ಥ ಬುದ್ಧಿಯನ್ನು ಹೊಂದಿರುತ್ತಾರೆ.
ಇದನ್ನೂ ಓದಿ: Viral News: ಇಡೀ ದಿನ ನಾನೇನು ಮಾಡಿಲ್ಲ ಎಂದ ಗೃಹಿಣಿ: ಇದಕ್ಕೆ ಪತಿ ನೀಡಿದ ಉತ್ತರ ನೆಟ್ಟಿಗರ ಮನಗೆದ್ದಿತು
ಮರಳು ಮಾಡುವುದು
ಕೆಲವರು ತಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ಪದೇ ಪದೇ ಬ್ಲಾಕ್ ಮೇಲ್ ಮಾಡುತ್ತಾರೆ. ಇದು ಖಂಡಿತವಾಗಿಯೂ ಆರೋಗ್ಯಕರ ಸಂಬಂಧದ ಸಾಲಿನಲ್ಲಿ ಸೇರಲು ಸಾಧ್ಯವೇ ಇಲ್ಲ. ಆರೋಗ್ಯಕರ ಸಂಬಂಧದಲ್ಲಿ ಪ್ರಾಮಾಣಿಕತೆ ಇರುತ್ತದೆ. ವಂಚನೆಯಿಂದ ಇರುವ ಸಂಬಂಧವನ್ನು ಪ್ರೇಮ ಎಂದು ಕರೆಯಲು ಸಾಧ್ಯವಿಲ್ಲ.
ಅಸೂಯೆ
ಅತಿಯಾದ ಅಸೂಯೆ ಅಭದ್ರತೆಯ ಸಂಕೇತವಾಗಿದೆ. ನೀವು ಸ್ನೇಹಿತರು ಅಥವಾ ಸಂಬಂಧಿಗಳ ಜೊತೆ ಖುಷಿಯಿಂದ ಇರುವುದನ್ನು ಇವರು ಸಹಿಸಲಾರರು. ಕೇವಲ ತಮ್ಮಿಂದ ಮಾತ್ರ ನೀವು ಖುಷಿಪಡಬೇಕು ಎಂಬ ಸ್ವಾರ್ಥ ಭಾವ ಇರುತ್ತದೆ. ಇದು ಆರೋಗ್ಯಕರ ಸಂಬಂಧವಂತೂ ಖಂಡಿತ ಅಲ್ಲ.
ಎಲ್ಲಾ ವಿಚಾರಕ್ಕೂ ನಿಮಗೆ ಬೌಂಡರಿ ಹಾಕುವುದು
ನಿಮ್ಮ ಸಂಗಾತಿಯು ನಿಮಗೆ ಏನೇ ಕೆಲಸಗಳನ್ನು ಮುಕ್ತವಾಗಿ ಮಾಡಲು ಅವಕಾಶ ನೀಡದಿದ್ದರೆ, ಎಲ್ಲದಕ್ಕೂ ನಿಮಗೆ ಗಡಿ ಹಾಕಿದರೆ ಇದನ್ನು ನೀವು ಸಹಿಸಿಕೊಳ್ಳಬಾರದು. ಮುಕ್ತವಾಗಿ ಬದುಕುವ ಅಧಿಕಾರ ಎಲ್ಲರಿಗೂ ಇರುತ್ತದೆ. ಒಬ್ಬರಿಗೊಬ್ಬರು ಬೌಂಡರಿ ಹಾಕಿ ಬದುಕುವುದು ಒಳ್ಳೆಯ ಸಂಬಂಧವಲ್ಲ.
ವಿಭಾಗ