ಮೆಟೀರಿಯಲಿಸ್ಟಿಕ್ ಬದುಕಿನ ನಡುವೆ ಮರೆಯಾದ ಆತ್ಮೀಯತೆ, ಸಂಬಂಧಗಳ ಮೌಲ್ಯ, ಬದಲಾಗಿದ್ದು ಸಮಾಜವಲ್ಲ, ಮನುಷ್ಯರು; ಗೋಪಾಲಕೃಷ್ಣ ಕುಂಟಿನಿ ಬರಹ
ಹಿಂದಿನ ಕಾಲ ಚೆಂದ, ಮಕ್ಕಳ ಮಾತು ಅಂದ ಎಂದು ಮನೆಯಲ್ಲಿ ಹಿರಿಯರು ಹೇಳುತ್ತಿದ್ದರು. ಆ ಕಾಲದಲ್ಲಿ ಬಹುಶಃ ಸಂಬಂಧಗಳಿಗೆ ಕೊಡುತ್ತಿದ್ದಷ್ಟು ಮೌಲ್ಯ ಬೇರಾಗುವುದಕ್ಕೂ ಕೊಡುತ್ತಿರಲಿಲ್ಲವಿರಬೇಕು. ಆದರೆ ಇಂದಿನ ಮೆಟೀರಿಯಲಿಸ್ಟಿಕ್ ಬದುಕಿನಲ್ಲಿ ಸಂಬಂಧಗಳ ಮೌಲ್ಯವೇ ಮರೆಯಾಗಿದೆ. ಈ ಬಗ್ಗೆ ಲೇಖಕ ಪತ್ರಕರ್ತ, ಲೇಖಕ ಗೋಪಾಲ ಕೃಷ್ಣ ಕುಂಟಿನಿ ಅವರು ಬರೆದ ಬರಹವಿದು.
![ಗೋಪಾಲಕೃಷ್ಣ ಕುಂಟಿನಿ (ಬಲಚಿತ್ರ) ಗೋಪಾಲಕೃಷ್ಣ ಕುಂಟಿನಿ (ಬಲಚಿತ್ರ)](https://images.hindustantimes.com/kannada/img/2024/04/18/550x309/Gopal_1713426661659_1713426665590.jpg)
ಹಿಂದೆಲ್ಲಾ ಮನೆಗೆ ನೆಂಟರು ಬಂದರು ಎಂದರೆ ಅದೇನೋ ಸಂಭ್ರಮ, ಸಡಗರ, ಉಪಚಾರ. ಆದರೆ ಇಂದು? ಉಪಚಾರ ಮಾಡುವುದಿರಲಿ ಸರಿಯಾಗಿ ಮುಖಕ್ಕೆ ಮುಖ ಕೊಟ್ಟು ಮಾತನಾಡುವವರೂ ಇಲ್ಲ. ಈಗಿನ ಯುವಜನಾಂಗಕ್ಕೆ ಸಂಬಂಧಗಳ ಮೌಲ್ಯ ಮೊದಲೇ ತಿಳಿದಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಅಳವಡಿಸಿಕೊಂಡ ಮೆಟೀರಿಯಲಿಸ್ಟಿಕ್ ಬದುಕು ಸಂಬಂಧ, ಆತ್ಮೀಯತೆ, ಆಪ್ತಭಾವವನ್ನೇ ಮರೆಯಾಗಿಸಿದ್ದು ಸುಳ್ಳಲ್ಲ. ಈ ಬಗ್ಗೆ ಆಪ್ತವಾಗಿ ಬರೆದಿದ್ದಾರೆ ಲೇಖಕ, ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ. ಅವರ ಬರಹ ಇಲ್ಲಿದೆ ನೀವು ಓದಿ.
ಗೋಪಾಲಕೃಷ್ಣ ಅವರ ಬರಹ
ನಾವು ಚಿಕ್ಕ ಮಕ್ಕಳಿದ್ದಾಗ ಮನೆಗೆ ಯಾರೇ ಬರಲಿ, ಅಪ್ಪ ಅಮ್ಮ ನಮ್ಮನ್ನು ಕೂಗಿ ಕರೆಯೋರು. ಇಲ್ಲಿ ಬಾ, ಯಾರು ಬಂದಿದ್ದಾರೆ ನೋಡು ಎನ್ನೋರು. ಇವರು ಯಾರು ಗೊತ್ತೇನು? ಎಂದು ಕೇಳೋರು. ನಾವು ಗೊತ್ತಿಲ್ಲ ಎಂದು ತಲೆ ಅಡ್ಡಡ್ಡ ಅಡಿಸಿದಾಗ ಇವರು ಇಂಥವರು, ಸ್ನೇಹಿತ, ಬಂಧು, ನೆಂಟ, ನೆರೆಯವರು ಎಂದೆಲ್ಲಾ ಪರಿಚಯಿಸೋರು. ನಮ್ಮ ಅವರ ಸಂಬಂಧ ವಿವರಿಸೋರು.
ಮುಂದಿನ ಬಾರಿ ಅವರು ಬಂದಾಗ ನಾವೇ ಎದ್ದು ಹೋಗಿ ಬರಮಾಡಿಕೊಳ್ಳೋರು.
ಹೀಗೇ ಮನುಷ್ಯ ಪ್ರೀತಿ ಮತ್ತು ಮನುಷ್ಯ ಸಂಬಂಧಗಳನ್ನು ನಮಗೆ ಎಳೆಯಲ್ಲೇ ಗಟ್ಟಿ ಪಾಠ ಮಾಡಿಕೊಡಲಾಗಿತ್ತು.
ಮನೆಗೆ ಬಂದವನಿಗೆ ಯಾಕಾದರೂ ಬಂದೆ ಎಂದು ಅನಿಸುತ್ತಿರಲೇ ಇಲ್ಲ. ಬಂದವರು ಯಾಕಾದರೂ ಬಂದರು ಎಂದು ನಮಗೂ ಅನಿಸುತ್ತಿರಲಿಲ್ಲ.
ಕಾಲ ಬದಲಾಗಿದೆಯೋ ಗೊತ್ತಿಲ್ಲ. ಮನುಷ್ಯರಂತೂ ಬದಲಾಗಿದ್ದಾರೆ. ಈಗೀಗ ಯಾರ ಮನೆಗೇ ಹೋಗಿ, ಹಳೆಯ ತಲೆಮಾರಿನವರ ಹೊಸ ಚಿಗುರುಗಳು ಬಿಲ್ಕುಲ್ ಮಾತನಾಡುವುದಿಲ್ಲ, ಮಾತು ಹಾಳಾಗಿ ಹೋಗಲಿ, ನಗೋದು ಇಲ್ಲ. ಮುಖವನ್ನೇ ನೋಡದವರು ನಗುವುದು ಹೇಗೆ?
ಬಂದವರು ಇವರು ಎಂದು ಹಳೆತಲೆಗಳು ಅವರ ಪೀಳಿಗೆಗೆ ಪರಿಚಯಿಸುವುದೂ ಇಲ್ಲ. ಹಿಂದೆಲ್ಲಾ ದೂರದೂರುಗಳಲ್ಲಿ ಉದ್ಯೋಗಸ್ಥರಾಗಿದ್ದವರು ಊರಿಗೆ ಬಂದಾಗ ಮನೆಗೆ ಬಂದವರ ಜೊತೆ ಗಂಟೆಗಟ್ಟಲೆ ಹರಟುತ್ತಿದ್ದರು. ಬಿಡುವಾಗಿದ್ದಾಗ ನೆರೆಹೊರೆಯವರ ಮನೆಗಳಿಗೆ ಭೇಟಿ ನೀಡಿ ಕುಶಲೋಪರಿ ಹಂಚುತ್ತಿದ್ದರು. ಮನೆಯ ಸಮಾರಂಭಗಳಲ್ಲಿ ಬಂದವರು ಪರವೂರಿನ ಕತೆ ಕೇಳಲು ಕಾತರರಾಗಿರುತ್ತಿದ್ದರು ಮತ್ತು ತಮ್ಮ ನಗರ ಜೀವನದ ಕತೆ ಹೇಳಲು ಅವರು ಉತ್ಸುಕರೂ ಇದ್ದರು. ಈಗ ಹೇಳುವುದಕ್ಕೂ ಕೇಳುವುದಕ್ಕೂ ಯಾರೂ ಇಲ್ಲ. ಹೀಗಾಗಿ ಈಗೀಗ ಎಲ್ಲರೂ ಮಲಗಿದಲ್ಲೇ ಮಂಚಕ್ಕೆ ಕಟ್ಟಿಬಿದ್ದವರು. ಖಿನ್ನತೆ ಎಂಬ ಸುಳಿಯಲ್ಲಿ ಸೀದುಹೋಗುತ್ತಿರುವವರು.
ಕೌಟುಂಬಿಕ ವ್ಯವಸ್ಥೆ ಎನ್ನುವುದು ಮನೆಗಷ್ಟೇ ಸೀಮಿತ ಮಾಡಿದ್ದಲ್ಲ. ಕುಟುಂಬದಲ್ಲಿ ಅವರು ಇವರು ನಾನು ನೀವು ಎಲ್ಲವೂ ಸೇರಿ ಕುಟುಂಬ. ಮನೆಯಷ್ಟೇ ಸೇರಿದರೆ ಸಾಕೇ? ಮನಸ್ಸೂ ಸೇರಬೇಕು ತಾನೇ? ಆ ಮನಸ್ಸನ್ನು ವಿಘಟಿಸಿದ್ದು ಏನು? ಅದೊಂದು ಡಿಸ್ಸಾರ್ಡರಾ? ಹೌದಾದರೆ ಆ ಮಾನಸಿಕ ಕಾಯಿಲೆಗೆ ಏನು ಹೆಸರು?ಮತ್ತು ಈ ಕಾಯಿಲೆ ಮುಂದೊಂದು ದಿನ ಇಡೀ ಸಾಮಾಜಿಕ ವ್ಯವಸ್ಥೆಯನ್ನು ನಾಶಪಡಿಸಲಿದೆಯಾ?.
ಮದುವೆಯಂಥ ಸಾಮಾಜಿಕ ಸಮಾರಂಭಗಳಲ್ಲಿ ಈಗೀಗ ಈ ಕಾಯಿಲೆ ಸಾಂಕ್ರಾಮಿಕ. ಕರೆದ ಕಾರಣಕ್ಕೆ ಹೋದರೆ ಅಲ್ಲಿ ಹೋದವನು ಅಪರಿಚಿತ. ತನಗೆ ತಾನೇ ಒಂಟಿ. ಕರೆಸಿಕೊಂಡವರು ಹೂನಗೆ ಬೀರಿದರೆ ಅದು ಹೋದವನ ಪುಣ್ಯ.
ಸಮಾರಂಭದಲ್ಲಿ ಜನನಿಬಿಡತೆ, ಕರೆದವರಿಗೆ ಮಾತನಾಡಿಸಲು ಆಗಲಿಲ್ಲ ಬಿಡಿ ಎಂಬ ಸಮಾಧಾನವನ್ನೂ ಷರಾವನ್ನೂ ಹೋದವನೇ ಹಾಕಿಕೊಂಡು ಬಂದರಾಯಿತು.
ಇದು ಯಾಕೆ ಹೀಗಾಗಿದೆ ಎಂದರೆ ಯಾರೂ ಯಾರಿಗೂ ಅಗತ್ಯವಿಲ್ಲ ಎಂಬ ಮೆಟೀರಿಯಲಿಸ್ಟಿಕ್ ಗುಣ. ಇದು ಬಂದಿದ್ದು ವೆಸ್ಟರ್ನ್‌ನಿಂದ. ಅಲ್ಲಿ ಎಲ್ಲರೂ ಎಲ್ಲರಿಗೂ ಅಪರಿಚಿತರು. ಮಹಾನಗರಗಳಲ್ಲಿ ಢಾಳಾಗಿ ಇದ್ದ ಈ ಅಲಿಪ್ತಭಾವ ಈಗ ಕಟ್ಟಿದ ಮನೆ ತಪ್ಪದಂತೆ ನುಗ್ಗಿದೆ. ಜಾಗತೀಕರಣದ ಫಲದಿಂದ ಮನೆಯಷ್ಟೇ ಅಲ್ಲ, ಮನಸ್ಸೂ ವೆಸ್ಟರ್ನ್ ಆಗಿದೆ.
ಹವ್ಯಕರಲ್ಲಿ ಒಂದು ಪದ್ಧತಿ ಇದೆ. ಮನೆಗೆ ಯಾರೇ ಬರಲಿ, ‘ಏನು?’ ಎಂದು ಕೇಳುವುದು.
ಆಗ ಅತಿಥಿ “ಒಳ್ಳೇದು”ಅಂತ ಶುಭನುಡಿಯುತ್ತಾನೆ.
ಬರೀ ‘ಏನು’ ಎಂಬಲ್ಲಿಗೆ ಇದು ಸೀಮಿತವಾಗದು. ಬಂದವರ ಸಂಬಂಧಕ್ಕೆ ಏನು ಎಂಬ ಪದ ತಳುಕು ಹಾಕಿಕೊಂಡಷ್ಟೂ ಬಂಧ ಬಿಗಿಯಾಗುವುದು. ಉದಾಹರಣೆಗೆ ‘ಏನು ಮಾವ?’ ‘ಏನು ಚಿಕ್ಕಪ್ಪಾ?’ ‘ಏನು ಅತ್ತೆ?’ ‘ಏನು ಅತ್ತಿಗೆ?’ ‘ಏನು ಭಾವಾ?’
ಇನ್ನು ಸಂಬಂಧವೇ ಇಲ್ಲದವರಿಗೆ ಹೆಸರು ಹಿಡಿದೇ ಏನು ಎಂಬ ಆದರ.
ಕೈಗೂಸಿಗೂ ‘ಏನು ಮುದ್ದೂ?’ ಎಂಬ ಸತ್ಕಾರ.
ಹೀಗೇ…
ಮಗಳು ತವರಿಗೆ ಬಂದಾಗಲೂ ಅಪ್ಪ ಅಮ್ಮ, ‘ಏನು ಮಗಳೋ?’ ಎಂದು ಕೇಳುವ ಉತ್ಕಟತೆ ಹವ್ಯಕರಲ್ಲಿದೆ.
ಅಪ್ಪ ಅಮ್ಮ ಮನೆಗೆ ಬಂದಾಗ ಮಗಳು ‘ಏನಪ್ಪಾ? ಏನಮ್ಮಾ?’ ಎಂದು ಕೇಳುವ ಸಂಪ್ರದಾಯವಿದೆ.
ಮಾತಿನ ಆತಿಥ್ಯದ ಈ ಸಂಪ್ರದಾಯ ಇತರ ಜನಾಂಗದಲ್ಲೂ ಹೀಗೇ ಇರಬಹುದು ಮತ್ತು ಇದೆ. ‘ಏನು’ ಎಂಬ ಪದವೇ ಏಕೆ?
ಏನು ಎಂಬ ಪದದಲ್ಲಿ ಹೇಗಿದ್ದೀಯಾ ಎಂಬ ಸ್ವಾದವಷ್ಟೇ ಅಲ್ಲ, ಇನ್ನೇನೇನೋ ಇವೆ. ಅದನ್ನು ಆ ಕ್ಷಣದ ಭಾವದಲ್ಲಷ್ಟೇ ಅರ್ಥೈಸಿಕೊಳ್ಳಲು ಸಾಧ್ಯ. ಮಹಾಭಾರತದಲ್ಲಿ ಒಂದು ಸಂದರ್ಭವಿದೆ. ಅದು ಕೃಷ್ಣ ರಾಯಭಾರಕ್ಕೆ ಹಸ್ತಿನಾವತಿಗೆ ಹೋಗುವ ಸಂದರ್ಭ.
ಕೃಷ್ಣ ಬರುತ್ತಿರುವ ಸುದ್ದಿ ಹಸ್ತಿನಾವತಿಗೆ ತಲುಪಿತ್ತು. ಧೃತರಾಷ್ಟ್ರನ ಸೂಚನೆಯಂತೆ ದುರ್ಯೋಧನ ಕೃಷ್ಣನ ಸ್ವಾಗತಕ್ಕೆ ದಾರಿಯುದ್ದಕ್ಕೂ ರಮ್ಯ ಸಭಾಭವನಗಳನ್ನು ಕಟ್ಟಿಸಿದ. ಬಣ್ಣದ ಆಸನಗಳನ್ನಿಟ್ಟ. ಹೆಣ್ಮಕ್ಕಳು ಸುಗಂಧ ಅಲಂಕಾರಗಳನ್ನು ಹಿಡಿದುಕೊಂಡರು. ಬಗೆಬಗೆಯ ಅನ್ನಪಾನೀಯಗಳ ಭೋಜನ ಸಿದ್ಧವಾಯಿತು.
ಧೃತರಾಷ್ಟ್ರ ವಿಧುರನನ್ನು ಕರೆಸಿದ. ಕೃಷ್ಣನ ಸತ್ಕಾರಕ್ಕೆ ತಾನು ಏನೆಲ್ಲಾ ವ್ಯವಸ್ಥೆ ಮಾಡುತ್ತಿದ್ದೇನೆ ಎಂದು ವಿವರಿಸಿದ. ಕೃಷ್ಣನಿಗೆ ಹದಿನಾರು ರಥಗಳನ್ನು, ಎಂಟು ಆನೆಗಳನ್ನು, ಬಂಗಾರದ ಬಣ್ಣದ ನೂರು ಸುಂದರ ದಾಸಿಯರನ್ನೂ, ನೂರು ದಾಸರನ್ನೂ, ಹದಿನೆಂಟು ಸಾವಿರ ಮೃದು ಕಂಬಳಿಗಳನ್ನು, ವಿಮಲ ಮಣಿಯನ್ನು ಕೊಡುತ್ತೇನೆ. ಅವನ ಜೊತೆ ಬಂದವರಿಗೆ ಭೂರಿಭೋಜನ ಹಾಕಿಸುತ್ತೇನೆ. ಅವನು ಬರುವ ದಾರಿಯಲ್ಲಿ ಧೂಳು ಹಾರದಂತೆ ನೀರು ಸಿಂಪಡಿಸಲಾಗುತ್ತದೆ ಎಂದೆಲ್ಲಾ ಹೇಳಿದ.
ಆಗ ವಿದುರ ಹೇಳುವುದು, ಅಯ್ಯಾ, ನೀನು ಏನೇ ಕೊಡಲು ಬಯಸುವೆಯೋ ಅದಕ್ಕಿಂತ ಹೆಚ್ಚಿನದು ಕೃಷ್ಣ. ಇದೆಲ್ಲಾ ತೋರ್ಪಡಿಕೆ ಎಂದು ನನಗೆ ಗೊತ್ತು... ಕೃಷ್ಣನಿಗೆ ಬೇಕಾಗಿರುವುದು ಒಂದು ಬಿಂದಿಗೆ ನೀರು ಮತ್ತು ಕುಶಲವೇ ಎಂಬ ಮಾತು. ಅದನ್ನು ಮಾಡು. ಸಾಕು. ಏನು ಚಂದದ ಮಾತಿದು! ಒಂದು ಬಿಂದಿಗೆ ನೀರು ಮತ್ತು ಕುಶಲವೇ ಎಂಬ ಮಾತು!
![Whats_app_banner Whats_app_banner](https://kannada.hindustantimes.com/static-content/1y/wBanner.png)
ವಿಭಾಗ