ವೈರಲ್ ಆಯ್ತು ಪ್ರೇತಕ್ಕೆ ಮದುವೆ ಮಾಡಿಸಲು ವರ ಬೇಕಾಗಿದೆ ಜಾಹೀರಾತು, ಏನಿದು ಪ್ರೇತ ಮದುವೆ?; ಪ್ರತಿಭಾ ಕುಡ್ತಡ್ಕ ಬರಹ
ಕರಾವಳಿ ಭಾಗದಲ್ಲಿ ಪ್ರೇತಗಳಿಗೆ ಮದುವೆ ಮಾಡಿಸುವುದು ಹೊಸ ವಿಷಯವಲ್ಲ. ಮದುವೆಯಾಗದೇ ಸತ್ತವರಿಗೆ ಹೆಣ್ಣು ಅಥವಾ ಗಂಡು ನೋಡಿ ಶಾಸ್ತ್ರಬದ್ಧವಾಗಿದೆ ಮದುವೆ ಮಾಡುತ್ತಾರೆ. ಆದರೆ ಹೊಸ ವಿಷ್ಯಾ ಎಂದರೆ ಪ್ರೇತದ ಮದುವೆಗಾಗಿ ವರ ಹುಡುಕಲು ಜಾಹೀರಾತು ನೀಡಿರುವುದು. ಈ ಕುರಿತು ಪ್ರತಿಭಾ ಕುಡ್ತಡ್ಕ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡು ಬರಹ ಇಲ್ಲಿದೆ

ಕಳೆದೊಂದು ವಾರದಿಂದ ಜಾಹೀರಾತೊಂದು ಎಲ್ಲರ ಗಮನ ಸೆಳೆದಿದೆ, ಮಾತ್ರವಲ್ಲ ಇದರ ಮೇಲೆ ಭಾರಿ ಚರ್ಚೆಯೂ ನಡೆಯುತ್ತಿದೆ. ಕರಾವಳಿ ಭಾಗದವರಿಗೂ ವಿಚಿತ್ರ ಎನ್ನಿಸಿರುವ ಈ ಜಾಹೀರಾತು ಪ್ರೇತದ ಮದುವೆಗೆ ಸಂಬಂಧಿಸಿದ್ದಾಗಿ. ವರ ಬೇಕಾಗಿದ್ದಾನೆ, ವಧು ಬೇಕಾಗಿದ್ದಾಳೆ ಎಂಬ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲಿರುವುದು ಪ್ರೇತಗಳ ಮದುವೆಗೆ ವರ ಬೇಕಾಗಿದ್ದಾನೆ ಎಂಬ ಜಾಹೀರಾತು. ಈ ಜಾಹೀರಾತಿನ ಬಗ್ಗೆ ಪ್ರತಿಭಾ ಕುಡ್ತಡ್ಕ ಅವರು ಫೇಸ್‌ಬುಕ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.
ಪ್ರತಿಭಾ ಕುಡ್ತಡ್ಕ ಅವರ ಬರಹ
ಬಹುಶಃ ಇದು ನಮಗೆ ತುಳುವರಿಗೆ ಮಾತ್ರ ಅರ್ಥ ಆಗುವ ಒಂದು ಜಾಹೀರಾತು
ಬೇರೆ ಯಾವುದೇ ಜನಾಂಗ/ ಪ್ರದೇಶದಲ್ಲಿ ಇಂಥದ್ದೊಂದು ಇದೆಯಾ ಗೊತ್ತಿಲ್ಲ, ಆದರೆ ನಮ್ಮಲ್ಲಿದೆ.
ಮನೆಯ ಮಗಳ ಮದುವೆಗೆ ನೂರಾರು ವಿಘ್ನಗಳು, ಕೈಗೆ ಬಂದದ್ದು ಬಾಯಿಗೆ ಬರ್ತಾ ಇಲ್ಲ. ಏನು ಕಾರಣ ಅಂತ ಪ್ರಶ್ನೆ ಇಟ್ಟಾಗ ಕುಟುಂಬದಲ್ಲಿ ಅವಿವಾಹಿತರಾಗಿ ತೀರಿಕೊಂಡ ಪೂರ್ವಜರ ಚರಿತ್ರೆ ತೆರೆಯಲಾಗುತ್ತದೆ.
ಓ... 30 ವರ್ಷಗಳ ಹಿಂದೆ ಸಣ್ಣ ಅಜ್ಜಿಯ ದೊಡ್ಡ ಮಗಳ ಐದನೇ ಹೆಣ್ಣುಮಗುವೊಂದು ವಿವಾಹಿತಳಾಗುವ ಮೊದಲೇ ಅಪಮೃತ್ಯುವಿಗೆ ಈಡಾಗಿದ್ದ ಕತೆ ಯಾರೋ ಒಬ್ಬರಿಗೆ ಆಗ ನೆನಪಾಗ್ತದೆ. ಮತ್ತೆ ಕೇಳ್ಳಿಕ್ಕೆ ಉಂಟಾ? ಇದು ಅದೇ ಕುಲೆ (ಪ್ರೇತ)ಯ ಉಪದ್ರ ಅಂತಾಯ್ತು. ಸರಿ ಇದಕ್ಕೀಗ ಪಿರಿ ಎಂತದ್ದು?
ತನಗೂ ಒಂದು ಮದುವೆ ಮಾಡಿಸ್ತಾರೆ ಎಂಬ ಆಸೆಯಲ್ಲಿ ಅಲೆಯುತ್ತಿರುವ ಅವಳ ಕುಲೆಗೆ ಇವರು ನನ್ನನ್ನು ಮರ್ತೇ ಬಿಟ್ಟಿದ್ದಾರೆ ಎಂಬುದು ಈಗ ಗೊತ್ತಾಗಿದೆ. ಅದಕ್ಕೇ ಕುಟುಂಬದ ಹೆಣ್ಣುಮಕ್ಕಳ ಮದುವೆಗೆ ಕಲ್ಲು ಹಾಕ್ತಾ ಇದ್ದಾಳೆ. ಹೀಗೇ ಬಿಟ್ರೆ ಇನ್ನು ಕುಟುಂಬದ ಯಾವ ಹೆಣ್ಣಿಗೂ ಮದುವೆ ಡೌಟು. ಮೊದಲು ಅವಳಿಗೊಂದು ಮದುವೆ ಮಾಡಿ ಅಂಥ ಫರ್ಮಾನು ಆಗ್ತದೆ.
ಆಗ ಶುರು ಆಗ್ತದೆ ಈ ಹುಡುಕಾಟ. ಸತ್ತವಳಿಗೆ ಜೀವಂತ ಗಂಡ ಆಗ್ತದಾ? ಸತ್ತವನೇ ಆಗ್ಬೇಕು, ಜಾತಿಯವ ಆಗ್ಬೇಕು, ಸ್ವಂತ ಬರಿಯವ ಆಗಕೂಡದು, ಸಮಪ್ರಾಯದವ ಆಗ್ಬೇಕು...
ತುಳುನಾಡಿನ ಇನ್ಯಾವುದೋ ಮೂಲೆಯಲ್ಲಿ ಇಂಥದ್ದೇ ಸಮಸ್ಯೆಯ ಕುಟುಂಬವೊಂದು ಗಂಡಿನ ಹುಡುಕಾಟದಲ್ಲಿರ್ತದೆ. ಅವರು ಪರಸ್ಪರ ಕಂಡು ಮುಟ್ಟಿದರೆ ಆಯಿತು. ಮುಂದಕ್ಕೆ ಕುಲೆತ ಮದಿಮೆ.
ಮದುವೆ ಅಂದರೆ ಮದುವೆಯೇ. ಏನೋ ಬಾಯಿ ಮಾತಲ್ಲಿ ಮುಗಿಸುವಂಥದ್ದಲ್ಲ.
ಸಂಪ್ರದಾಯ ಪ್ರಕಾರ ಗಂಡಿ ಕಡೆಯವರು ಮಾವ, ಭಾವಂದಿರನ್ನೆಲ್ಲ ಸೇರಿಸ್ಕೋಂಡೇ ಮಾತುಕತೆಗೆ ಬರ್ಬೇಕು. ಚಾ, ಸಜ್ಜಿಗೆ, ಶೀರ ತಿಂದು ಹೆಣ್ಣನ್ನು ಒಪ್ಪಿ ಹೋಗ್ಬೇಕು. ಹೆಣ್ಣಿನ ಕಡೆಯವರು ಗಂಡಿನ ಮನೆ ನೋಡುವ ಶಾಸ್ತ್ರ ಮಾಡ್ಬೇಕು. ನಿಶ್ಚಿತಾರ್ಥದ ತಾಂಬೂಲ ಕೈ ಬದಲಾಯಿಸಬೇಕು.
ಬಳಿಕ ದಿನ, ಮುಹೂರ್ತ ನಿರ್ಧರಿಸಿ, ಕರುಳುಬಳ್ಳಿಯ ಎಲ್ಲರಿಗೂ ಆಮಂತ್ರಣ ಹೋಗ್ಬೇಕು. ಕರಿಮಣಿ, ಮದುವೆ ಜವುಳಿ ಶಾಪಿಂಗ್ ಆಗ್ಬೇಕು. ದಾರೆದ ಮದಿಮೆ ಸಂಪನ್ನಗೊಳ್ಬೇಕು. ಊಟ, ಪಾಯಸ ಮೆಲ್ಲಬೇಕು.
ಪ್ರಸ್ತವೂ ಆಗ್ಬೇಕು. ಆಟಿಯ ಮಾಮಿಸಿಕೆ ಆಗ್ಬೇಕು, ಆಟಿ ಕುಲ್ಲೆರೆ ಮಗಳನ್ನು ತವರಿಗೆ ಕರೆದೊಯ್ಯಬೇಕು. ವಾಪಾಸು ಬಿಡಬೇಕು.
ಜೀವಂತ ಮನುಷ್ಯರ ಬದಲು ವಧೂವರರಿಗೆ ಅಂತ ಇಡುವ ಮಣೆಯ ಮೇಲೆ ಸೀರೆ, ಕರಿಮಣಿ, ಹೂವು, ಬಳೆ, ವೇಸ್ಟಿ, ಷರ್ಟುಗಳನ್ನು ಇಡುವುದು. ಅದರ ಎದುರಿಗೆ ಎಲೆ ಹಾಕಿ ಬಡಿಸುವುದು... ಹೀಗೆ.
ಬ್ರಾಹ್ಮಣ ವಟು ಮದುವೆಯಾಗದೆ ಸತ್ರೆ ಬ್ರಹ್ಮರಾಕ್ಷಸ ಆಗ್ತಾನೆ, ಅವನು ಇನ್ನೂ ಖತರ್ ನಾಕ್ ಅಂತ ನಮ್ಮಜ್ಜ ಹೇಳ್ತಿದ್ರು. ಅವನಿಗೆ ಪಿರಿ ಎಂತದು? ಹೇಗೇಂತ ನನಗೆ ಮಾಹಿತಿ ಇಲ್ಲ. ನಾನು ನೋಡಿಯೂ ಇಲ್ಲ.
ಇದೆಲ್ಲ ನಮಗೆ ಹೊಸತಲ್ಲ. ಹೊಸತು ಅಂತ ಕಂಡದ್ದು ಈ ಜಾಹೀರಾತು. ಪ್ರೇತದ ಮದುವೆಯಲ್ಲೂ ಇಷ್ಟು ಇಂಪ್ರೂಮೆಂಟ್ ಆಗಿದೆ. ನನ ರಗಾಲೆ ಇಜ್ಜಿ
