Relationship: ರಿಲೇಷನ್‌ಶಿಪ್ ಬೋರ್ ಆದ್ರೆ ಬ್ರೇಕ್‌ಅಪ್ ಬೇಡ ಬ್ರೇಕ್ ತಗೊಳ್ಳಿ; ಆದ್ರೆ ಈ ರೂಲ್ಸ್ ಫಾಲೋ ಮಾಡೋದು ಮಾತ್ರ ಮರಿಬೇಡಿ
ಸಂಬಂಧದಲ್ಲಿ ಬ್ರೇಕ್ ಬೇಕು ಅನ್ನಿಸುವುದು ಸಹಜ. ಹಾಗಂತ ಬ್ರೇಕ್ ಅಂದ್ರೆ ಬ್ರೇಕ್‌ಅಪ್ ಅಂತ ಅರ್ಥ ಅಲ್ಲ. ಒಂದಿಷ್ಟು ದಿನಗಳ ಕಾಲ ಕಾಲ್, ಮೆಸೇಜ್, ಮೀಟ್‌ಅಪ್ ಏನೂ ಇಲ್ದೆ ದೂರ ಇದ್ದು ಬಿಡೋದು. ಸಂಬಂಧ ಇನ್ನಷ್ಟು ಗಟ್ಟಿಯಾಗಲು ಬ್ರೇಕ್ ತಗೋಬೇಕು ಅಂತಾರೆ ತಜ್ಞರು, ಆದರೆ ಈ ರೂಲ್ಸ್‌ಗಳನ್ನ ಫಾಲೋ ಮಾಡೋದು ಮಾತ್ರ ಖಂಡಿತ ಮರಿಬಾರ್ದು.

ಎಲ್ರೂ ಪ್ರೀತಿ ಮಾಡ್ತಾರೆ, ಆದ್ರೆ ಮಾಡಿದ ಪ್ರೀತಿ ಉಳಿಸ್ಕೊಂಡು ಹೋಗೋದು ಒಂದಿಷ್ಟು ಮಂದಿ ಮಾತ್ರ. ಕೆಲವೊಮ್ಮೆ ಸಂಬಂಧದಲ್ಲಿ ಬೇಸರ ಮೂಡುವುದು ಸಹಜ. ಇದೇನಪ್ಪಾ ಹೀಗಿದೆ ನಮ್ಮ ಜೀವನ ಅನ್ನಿಸಬಹುದು. ಕೆಲವೊಮ್ಮೆ ಸಂಗಾತಿಯ ವರ್ತನೆಗಳು ರೋಸಿ ಹೋಗುವಂತೆ ಮಾಡಬಹುದು, ಅದಕ್ಕಾಗಿ ಬ್ರೇಕ್‌ಅಪ್ ಮಾಡ್ಕೊಳ್ಳೊ ಅಗತ್ಯ ಇಲ್ಲ. ಒಂದಿಷ್ಟು ಸಮಯ ಬ್ರೇಕ್ ತಗೋಬೋದು. ಇದು ಭವಿಷ್ಯದ ದೃಷ್ಟಿಯಿಂದಲೂ ಉತ್ತಮ. ಆದ್ರೆ ಇದು ಖಂಡಿತ ಶಾಶ್ವತ ಬ್ರೇಕ್ ಅಲ್ಲ ಅಥವಾ ಸಂಬಂಧಕ್ಕೆ ಎಳ್ಳುನೀರು ಬಿಡೋದು ಅಂತಾನೂ ಅಲ್ಲ. ತಾತ್ಕಾಲಿಕ ಸಮಯದವರೆಗೆ ದೂರ ಇರೋದು ಅಷ್ಟೇ ಈ ಬ್ರೇಕ್‌ನ ಅರ್ಥ. ನಂಗೆ ಸ್ಪೇಸ್ ಬೇಕು ಅನ್ನೋದು ಇದಕ್ಕೆ. ಆದ್ರೆ ಈ ಬ್ರೇಕ್ ತಗೊಳೊ ಮುನ್ನ ಈ ಕೆಲವು ರೂಲ್ಸ್‌ಗಳ ಬಗ್ಗೆ ಖಂಡಿತ ನೀವು ತಿಳಿದಿರಬೇಕು, ಮಾತ್ರವಲ್ಲ ಅದನ್ನ ತಪ್ಪದೇ ಪಾಲಿಸಬೇಕು ಕೂಡ.
ಸಂಗಾತಿಗಳು ಯಾವಾಗ ಬ್ರೇಕ್ ತಗೋಬೋದು
ಸಂಗಾತಿಗಳು ತಮ್ಮ ರಿಲೇಷನ್‌ಶಿಪ್‌ನಲ್ಲಿ ಬ್ರೇಕ್ ತಗೊತಾರೆ ಅಂದ್ರೆ ಹಲವರಿಗೆ ಆಶ್ಚರ್ಯ ಎನ್ನಿಸಬಹುದು. ಆದರೆ ತಾತ್ಕಾಲಿಕ ಬ್ರೇಕ್ ತಗೋಳೋದ್ರಿಂದ ಸಂಗಾತಿಗಳಿಬ್ಬರು ಇನ್ನಷ್ಟು ಹತ್ತಿರವಾಗಬಹುದು, ಅಲ್ಲದೆ ಅವರಲ್ಲಿ ಇನ್ನಷ್ಟು ಪ್ರೀತಿಯ ಬಾಂಧವ್ಯ ವೃದ್ಧಿಯಾಗಬಹುದು ಎನ್ನುತ್ತಾರೆ ರಿಲೇಷನ್‌ಶಿಪ್ ತಜ್ಞರು. ಇಷ್ಟೇ ಅಲ್ಲದೆ ಈ ಸಮಯದಲ್ಲಿ ಅವರು ವೈಯಕ್ತಿಕ ಬೆಳವಣಿಗೆಯ ಮೇಲೆ ಹೆಚ್ಚು ಗಮನ ಹರಿಸಬಹುದು.
ಬ್ರೇಕ್ ತೆಗೆದುಕೊಳ್ಳುವುದರಿಂದ ಸಂಗಾತಿಗಳೇನು ಲಾಭ?
ನೀವು ಬಯಸಿದ ಸ್ಪೇಸ್ ಸಿಗುತ್ತೆ: ಬ್ರೇಕ್ ತೆಗೆದುಕೊಳ್ಳುವುದರಿಂದ ಇಬ್ಬರಿಗೂ ತಾವು ಬಯಸುವ ಸ್ಪೇಸ್ ಸಿಗುತ್ತದೆ. ದೀರ್ಘಾವಧಿಯ ಸಂಬಂಧ ನಿಮ್ಮದಾಗಿದ್ದರೆ ಖಂಡಿತ ನಿಮಗೆ ಈ ಪರಿಸ್ಥಿತಿ ಉಸಿರುಗಟ್ಟಿದಂತೆ ಅನ್ನಿಸಬಹುದು. ಈ ಸ್ಪೇಸ್ ಅಥವಾ ಬ್ರೇಕ್ ಎನ್ನುವುದು ನೀವು ನಿಮ್ಮ ಸಂಗಾತಿಯ ಜೊತೆ ಇದ್ದಾಗ ಆರಾಮವಾಗಿ ಇದ್ದೀರಾ ಅಥವಾ ಅವರ ಇಲ್ಲದೇ ಇದ್ದಾಗ ಆರಾಮವಾಗಿ ಇದ್ದೀರಾ ಎಂಬುದನ್ನು ತಿಳಿಯಲು ಅವಕಾಶ ಒದಗಿಸುತ್ತದೆ. ಈ ಸಮಯದಲ್ಲೇ ನಿಮಗೆ ವಿ ಟೈಮ್ ಹಾಗೂ ಮೀ ಟೈಮ್‌ನ ವ್ಯತ್ಯಾಸ ಅರ್ಥ ಆಗೋದು.
ಬ್ರೇಕ್ ತಗೋಳೋದ್ರಿಂದ ಲೈಫ್‌ನ ಗುರಿ ಹಾಗೂ ಪ್ರಾಮುಖ್ಯಗಳು ಅರ್ಥ ಆಗುತ್ತೆ: ಸಂಬಂಧದಲ್ಲಿ ಬ್ರೇಕ್ ತೆಗೆದುಕೊಳ್ಳುವುದರಿಂದ ಜೀವನದಲ್ಲಿ ನಿಮಗೇನು ಬೇಕು ಎಂಬುದು ನಿಮಗೆ ಚೆನ್ನಾಗಿ ಅರ್ಥ ಆಗುತ್ತದೆ. ನಿಮ್ಮಿಬ್ಬರಿಗೂ ಒಂದೇ ರೀತಿಯ ಪ್ರಾಮುಖ್ಯಗಳು ಹಾಗೂ ಜೀವನದ ಗುರಿ ಇಲ್ಲದೇ ಇದ್ದಾಗ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಆಗ ಇದು ನಿಮ್ಮದಲ್ಲದ ಜೀವ ಎಂಬುದು ಅರ್ಥವಾಗುತ್ತದೆ.
ವಿರಾಮದಿಂದ ಹೊಂದಾಣಿಕೆಯ ಮಹತ್ವ ಅರಿವಾಗುತ್ತದೆ: ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಹಲವು ವ್ಯತ್ಯಾಸಗಳು ಇದ್ದಿರಬಹುದು. ಆದರೆ ಇದರ ಅರ್ಥ ನಿಮ್ಮ ನಡುವೆ ಹೊಂದಾಣಿಕೆ ಇಲ್ಲ ಎಂದಲ್ಲ. ಹೊಂದಾಣಿಕೆಯ ಬಗ್ಗೆ ತಿಳಿದುಕೊಳ್ಳಲು ಬ್ರೇಕ್ ಅವಶ್ಯ.
ಬ್ರೇಕ್ ಸಂಗಾತಿಯ ಮೌಲ್ಯ ತಿಳಿಸುತ್ತದೆ: ಬ್ರೇಕ್ ತೆಗೆದುಕೊಂಡಾಗ ನಿಮಗೆ ನಿಮ್ಮ ಸಂಗಾತಿ ಬೆಲೆ ಹಾಗೂ ಮೌಲ್ಯ ಅರ್ಥವಾಗುತ್ತದೆ. ಅಲ್ಲದೆ ಅವರು ನಿಮ್ಮ ಜೀವನಕ್ಕೆ ಎಷ್ಟು ಅವಶ್ಯ ಎಂಬುದು ಅರ್ಥವಾಗುತ್ತದೆ. ನಾವಿಬ್ಬರ ಪ್ರೀತಿಯ ಉದ್ದೇಶವೇನು ಎಂಬುದನ್ನು ಬ್ರೇಕ್ ತಿಳಿಸುತ್ತದೆ
ಬ್ರೇಕ್ ಪ್ರೀತಿಯನ್ನು ಉಳಿಸಬಹುದು: ಇಲ್ಲ ಇನ್ನು ಮುಂದೆ ನಾವಿಬ್ಬರೂ ಜೊತೆ ಇರಲು, ನಮ್ಮಿಬ್ಬರ ನಡುವೆ ಹೊಂದಾಣಿಕೆ ಬರಲು ಸಾಧ್ಯವೇ ಎಂದಿದ್ದಾಗ ಬ್ರೇಕ್ ತಗೊಳ್ಳಿ. ಇದರಿಂದ ನಿಮಗೆ ಸಂಬಂಧ ಬೆಲೆ ಅರ್ಥವಾಗಬಹುದು. ನೀವು ನಿಮ್ಮ ಸಂಗಾತಿಯನ್ನು ನಿರ್ಲಕ್ಷ್ಯ ಮಾಡಿದ್ದೀರಾ ಅಥವಾ ಲಘುವಾಗಿ ಪರಿಗಣಿಸಿದ್ದೀರಾ ಎಂಬುದು ಆಗ ನಿಮಗೆ ಅರ್ಥವಾಗುತ್ತದೆ. ಕೆಲವೊಮ್ಮೆ ಬ್ರೇಕ್ ಸಂಬಂಧವನ್ನು ಪುನಃ ಜೋಡಿಸಲು ಸಹಾಯ ಮಾಡುತ್ತದೆ.
ರಿಲೇಷನ್‌ಶಿಪ್‌ನಲ್ಲಿ ಬ್ರೇಕ್ ತಗೊಂಡಾಗ ಪಾಲಿಸಬೇಕಾದ ಕ್ರಮಗಳಿವು
ತಾತ್ಕಾಲಿಕ ಬ್ರೇಕ್‌ಅಪ್‌ನಲ್ಲಿ ಇವು ನೆನಪಿರಲಿ
ಪ್ರಾಮಾಣಿಕವಾಗಿರಿ: ಸಂಬಂಧದಿಂದ ದೂರವಿದ್ದಾಗ ಪ್ರಾಮಾಣಿಕರಾಗಿ, ನಿಮ್ಮ ಪ್ರೀತಿಯ ಬಗ್ಗೆ ಬದ್ದತೆ ಇರಲಿ. ಈಗ ನಿಮಗೆ ನಿಮ್ಮ ಸಂಗಾತಿಯ ಬಗ್ಗೆ ಏನನ್ನಿಸುತ್ತಿದೆ, ನೀವು ಪುನಃ ಒಂದಾದಾಗ ಹೇಗಿರಬೇಕು ಎಂದು ಯೋಚಿಸಿ.
ಹೊಣೆಗಾರಿಕೆ: ನಿಮ್ಮ ಭಾವನೆಗಳು ಹಾಗೂ ಪ್ರತಿಕ್ರಿಯೆಯ ಮೇಲೆ ಹೊಣೆ ಇರಲಿ. ಇದು ಬ್ರೇಕ್ ತಗೆದುಕೊಂಡಾಗ ಹಾಗೂ ನಂತರ ಎರಡೂ ಸಂದರ್ಭಗಳಲ್ಲಿ ಬಹಳ ಮುಖ್ಯ.
ಬ್ರೇಕ್ ಅಂದ್ರೆ ನಿಮ್ ಅರ್ಥದಲ್ಲಿ ಏನು ಎಂಬುದು ತಿಳಿದಿರಲಿ: ಹಲವು ಕಾರಣಗಳಿಂದ ರಿಲೇಷನ್‌ನಲ್ಲಿ ಬ್ರೇಕ್ ತೆಗೆದುಕೊಳ್ಳಬೇಕು ಎನ್ನಿಸಬಹುದು. ಆದ್ರೆ ನೀವು ಯಾವ ಕಾರಣಕ್ಕೆ ಬ್ರೇಕ್ ತೆಗೆದುಕೊಳ್ಳಲು ಬಯಸುತ್ತಿದ್ದೀರಿ ಎಂಬುದು ನಿಮಗೆ ಸ್ಪಷ್ಟವಾಗಿರಬೇಕು.
ಸಮಯ ಹೊಂದಿಸಿ: ಬ್ರೇಕ್ ತೆಗೆದುಕೊಳ್ಳುವ ಮೊದಲೇ ಯಾವ ದಿನಕ್ಕೆ ನಿಮ್ಮ ಬ್ರೇಕ್ ಮುಗಿಯಬೇಕು ಎಂಬುದನ್ನು ನಿರ್ಧರಿಸಿ. ದೀರ್ಘ ಕಾಲದ ಬ್ರೇಕ್ ಅನಿಶ್ಚಿತತೆ ಆತಂಕಕ್ಕೆ ಕಾರಣವಾಗಬಹುದು.
ಸ್ಪಷ್ಟವಾದ ಗಡಿ ಹಾಗೂ ನಿರೀಕ್ಷೆಗಳಿರಲಿ: ಪಕ್ಕಾ ನಿಯಮಗಳು ಹಾಗೂ ಗಡಿ ಹೊಂದಿಸುವುದು ರಿಲೇಷನ್‌ಶಿಪ್ ಬ್ರೇಕ್‌ನಲ್ಲಿ ಬಹಳ ಮುಖ್ಯ. ಇಲ್ಲದೇ ಹೋದರೆ ನಿಮ್ಮ ಸಂಗಾತಿಯ ಮನಸ್ಸಿಗೆ ಬೇಸರ ಮೂಡಬಹುದು. ಪ್ರತಿದಿನ ಮಾತನಾಡಿಕೊಂಡು ಇದ್ದವರಿಗೆ ಬ್ರೇಕ್ ಒಂದಿಷ್ಟು ಬೇಸರ ತರಿಸಬಹುದು. ಅದಕ್ಕಾಗಿ ಸಿದ್ಧರಾಗಬೇಕು.
ಬ್ರೇಕ್ ನಡುವೆ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ
ನಿಮ್ಮ ಜವಾಬ್ದಾರಿ ಮರೆಯದಿರಿ: ಸಂಬಂಧದಲ್ಲಿ ಬ್ರೇಕ್ ತೆಗೆದುಕೊಳ್ಳುವ ಮುನ್ನ ನಿಮ್ಮ ಹಾಗೂ ಸಂಗಾತಿಯ ನಡುವಿನ ಯಾವುದೇ ಜವಾಬ್ದಾರಿಯನ್ನು ಮರೆಯದಿರಿ.
ಬ್ರೇಕ್‌ಅಪ್ ಬೇರೆ ಬ್ರೇಕ್ ಬೇರೆ ನೆನಪಿರಲಿ: ಕೆಲವೊಮ್ಮೆ ಸಮಯ ತೆಗೆದುಕೊಂಡರೆ ಸರಿಹೋಗಬಹುದು ಎನ್ನುವ ವಿಷಯಗಳಿರುತ್ತವೆ. ಅಂತಹ ವಿಷಯಕ್ಕೆ ಸಮಯ ಬೇಕು. ಹಾಗಂತ ಎಲ್ಲಾ ವಿಷಯವೂ ಸಮಯದ ತೆಗೆದುಕೊಂಡರೆ ಸರಿ ಹೋಗುವುದಿಲ್ಲ, ಅದಕ್ಕೆ ಬ್ರೇಕ್ ಪರಿಹಾರವಲ್ಲ.
ಬ್ರೇಕ್ ನಂತರ ಒಂದಾಗಬೇಕು ಎನ್ನುವ ಹಠ ಬೇಡ: ಒಂದಿಷ್ಟು ದಿನಗಳ ಅಂತರದ ನಂತರ ನಿಮಗೆ ಇವನು ಅಥವಾ ಇವಳು ನನಗೆ ಸರಿಯಾದ ಜೋಡಿ ಅಲ್ಲ ಅನ್ನಿಸಿದರೆ ಖಂಡಿತ ದೂರಾಗಿ ಅಥವಾ ಸಂಗಾತಿಗೆ ನಿಮ್ಮೊಂದಿಗೆ ಸಂಬಂಧ ಮುಂದುವರಿಸಲೇಬೇಕು ಎನ್ನುವ ಹಠ ಬೇಡ.

ವಿಭಾಗ