Honeymoon Tips: ಈಗಷ್ಟೇ ಮದುವೆ ಆಗಿದೀರಾ, ಹನಿಮೂನ್‌ಗೆ ಹೋಗೋ ಮುಂಚೆ ಈ ವಿಷ್ಯ ತಿಳ್ಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Honeymoon Tips: ಈಗಷ್ಟೇ ಮದುವೆ ಆಗಿದೀರಾ, ಹನಿಮೂನ್‌ಗೆ ಹೋಗೋ ಮುಂಚೆ ಈ ವಿಷ್ಯ ತಿಳ್ಕೊಳ್ಳಿ

Honeymoon Tips: ಈಗಷ್ಟೇ ಮದುವೆ ಆಗಿದೀರಾ, ಹನಿಮೂನ್‌ಗೆ ಹೋಗೋ ಮುಂಚೆ ಈ ವಿಷ್ಯ ತಿಳ್ಕೊಳ್ಳಿ

ಮದುವೆ ಆದ ಬಳಿಕ ನೆಕ್ಸ್ಟ್‌ ಏನು ಅಂದ್ರೆ ಹನಿಮೂನ್‌. ಇದು ದಂಪತಿಗಳಿಬ್ಬರು ಜೊತೆಯಾಗಿ ಹೋಗುವ ಅಧಿಕೃತ ಪ್ರವಾಸ ಕೂಡ ಹೌದು. ಹನಿಮೂನ್‌ ಬಗ್ಗೆ ಪತಿ, ಪತ್ನಿ ಇಬ್ಬರೂ ಸಾಕಷ್ಟು ಎಕ್ಸೈಟ್‌ ಆಗಿರುತ್ತಾರೆ. ಇದು ಅವರ ಜೀವನದ ಅತ್ಯುತ್ತಮ ಹಾಗೂ ರೋಮ್ಯಾಂಟಿಕ್‌ ಗಳಿಗೆಯೂ ಹೌದು. ಈ ಸುಮಧುರ ಗಳಿಗೆಯನ್ನು ಜೊತೆಯಾಗಿ ಕಳೆಯುವ ಮುನ್ನ ಈ ಕೆಲವು ವಿಷಯಗಳು ನಿಮಗೆ ತಿಳಿದಿರಬೇಕು.

ಹನಿಮೂನ್‌ ಟಿಪ್ಸ್‌
ಹನಿಮೂನ್‌ ಟಿಪ್ಸ್‌

ಮದುವೆ ಸಂದರ್ಭ ವಿವಿಧ ಕಾರ್ಯಕ್ರಮಗಳು, ಸಂಪ್ರದಾಯ, ನಡವಳಿಕೆ, ಮದುವೆಯ ದಿನ ನಿಂತುಕೊಂಡೇ ಇರುವುದು ಇದರಿಂದ ಸಾಕಷ್ಟು ಬಳಲಿಕೆ ಇರುತ್ತದೆ. ಆ ಕಾರಣಕ್ಕಾಗಿ ಮಾನಸಿಕ, ದೈಹಿಕ ವಿಶ್ರಾಂತಿ ಬೇಕು ಎನ್ನುವ ಉದ್ದೇಶದಿಂದ ಹನಿಮೂನ್‌ ಟ್ರಿಪ್‌ ಆಯೋಜಿಸುತ್ತಾರೆ. ಆದರೆ ಹನಿಮೂನ್‌ಗೆ ಹೋಗುವಾಗ ಪ್ಯಾಕಿಂಗ್‌, ಪ್ರಯಾಣ, ನಿಮ್ಮ ಗಮ್ಯಸ್ಥಾನ ತಲುಪುವುದು ಇದೆಲ್ಲದರಿಂದ ಇನ್ನಷ್ಟು ಸಮಯ ಹಾಗೂ ಸುಸ್ತು ಕಾಡಬಹುದು. ಇಂತಹ ಸಮಯದಲ್ಲಿ ವಿಶ್ರಾಂತಿ, ಶಾಂತ ಮತ್ತು ಒತ್ತಡ-ಮುಕ್ತ ಹನಿಮೂನ್‌ ಯೋಜಿಸುವುದು ಅತ್ಯಗತ್ಯ.

ಮದುವೆಯಾದ ಬಳಿಕ ನಿಮ್ಮ ಸಂಗಾತಿಯೊಂದಿಗಿನ ಮೊದಲ ಅಧಿಕೃತ ಪ್ರವಾಸ ಮಧುಚಂದ್ರ. ಈ ಪ್ರವಾಸವು ಬಹಳ ಸ್ಮರಣೀಯವಾಗಿರುತ್ತದೆ. ಇದು ನಿಮ್ಮಿಬ್ಬರ ಬಂಧವನ್ನು ಬಲಪಡಿಸುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಗಂಡ ಹೆಂಡತಿಯಾಗಿ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಈ ಸಂದರ್ಭ ಪರಸ್ಪರ ಉತ್ಸಾಹ ಮತ್ತು ಥ್ರಿಲ್ ಅನುಭವಿಸುವ ರೀತಿಯಲ್ಲಿ ಇಬ್ಬರ ವರ್ತನೆಯೂ ಇರಬೇಕು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಹಳೆಯ ಕಹಿ ನೆನಪುಗಳ ಬಗ್ಗೆ ಮಾತು ಬೇಡ

ಹಳೆಯ ಕಹಿ ನೆನಪುಗಳ ಬಗ್ಗೆ ಮಾತನಾಡಬೇಡಿ. ನಿಮ್ಮ ಮಾತುಗಳು ಸಾಧ್ಯವಾದಷ್ಟು ಭವಿಷ್ಯದ ಜೀವನಕ್ಕೆ ಸಂಬಂಧಿಸಿದ್ದೇ ಆಗಿರಲಿ. ದಾಂಪತ್ಯದಲ್ಲಿ ಸಣ್ಣ ಪುಟ್ಟ ತಪ್ಪುಗಳಾದರೆ ಅದರ ಬಗ್ಗೆಯೇ ಚರ್ಚೆ, ವಾದ ಮಾಡುತ್ತಿರಬೇಡಿ. ನೀವೀಗ ಒಬ್ಬರಲ್ಲ, ಇಬ್ಬರು, ನಿಮ್ಮ ಬಗ್ಗೆ ಮಾತ್ರ ಯೋಚಿಸಿದೇ ಇಬ್ಬರಿಗೂ ಅನುಕೂಲವಾಗುವ ರೀತಿಯಲ್ಲಿ ನಿಮ್ಮ ಯೋಚನೆಗಳಿರಬೇಕು. ಸಂಗಾತಿಯ ಸಣ್ಣ ಪುಟ್ಟ ವಿಷಯಗಳಿಗೂ ಆದ್ಯತೆ ನೀಡಿ. ಉದಾಹರಣೆಗೆ ನಿಮ್ಮ ಹೆಂಡತಿಗೆ ರಸ್ತೆ ದಾಟಲು ತೊಂದರೆಯಾದರೆ ನೀವು ಕೈ ಹಿಡಿದು ದಾಟಿಸಬೇಕು. ಅವರಿಗೆ ಇಷ್ಟದ ತಿನಿಸುಗಳನ್ನು ತಂದು ತಿನ್ನಿಸಬಹುದು. ಇದು ಅವರಿಗೆ ಖುಷಿ ನೀಡುತ್ತದೆ.

ರೊಮ್ಯಾಂಟಿಕ್‌ ಆಗಿರಿ

ಮದುವೆಯ ಹೊಸತರಲ್ಲಿ ರೊಮ್ಯಾಂಟಿಕ್‌ ಆಗಿದ್ದರೆ ನಂತರದ ಜೀವನದ ಚೆನ್ನಾಗಿರುತ್ತದೆ. ಖಾಸಗಿ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ. ಮದುವೆ ಎಂದರೆ ಸೆಕ್ಸ್‌ ಎಂದಲ್ಲ. ಅದು ದಾಂಪತ್ಯ ಜೀವನದ ಭಾಗವಷ್ಟೇ. ಹನಿಮೂನ್‌ನ ಖಾಸಗಿ ಸಮಯದಲ್ಲಿ ನೇರವಾಗಿ ಸೆಕ್ಸ್‌ ವಿಚಾರಗಳನ್ನೇ ಮಾತನಾಡದಿರಿ. ಮೊದಲು ನಿಮ್ಮ ಸಂಗಾತಿಯ ಆದ್ಯತೆ, ಇಷ್ಟಕಷ್ಟದ ಬಗ್ಗೆ ಮಾತನಾಡಿ. ಸ್ನಾನದ ನಂತರ ನಿಮ್ಮ ಹೆಂಡತಿಯ ಹಣೆಗೆ ಮುತ್ತು ನೀಡಿ, ಕೈಗಳಿಗೆ ಮುತ್ತು ನೀಡಿ. ಗಂಡ ಸ್ನಾನ ಮಾಡಲು ಹೊರಟಾಗ ಹಿಂದಿನಿಂದ ತಬ್ಬಿಕೊಳ್ಳಿ. ಈ ರೀತಿಯ ಪ್ರೇಮ ಪರಿಭಾಷೆಗಳು ಆರಂಭಿಕ ದಿನಗಳಲ್ಲಿ ಇರಲಿ. ಈ ರೀತಿಯ ರೊಮ್ಯಾಂಟಿಕ್‌ ಕ್ಷಣಗಳು ದಾಂಪತ್ಯದ ಬಾಂಧವ್ಯವನ್ನು ಹೆಚ್ಚಿಸಬಹುದು.

ಇಷ್ಟಾನಿಷ್ಟಗಳನ್ನು ಗೌರವಿಸಿ

ಆಹಾರದ ವಿಷಯದಲ್ಲೂ ಪರಸ್ಪರರ ಇಷ್ಟಾನಿಷ್ಟಗಳನ್ನು ಗೌರವಿಸಬೇಕು. ಒಮ್ಮೆ ನಿಮ್ಮ ಹೆಂಡತಿಗೆ ಇಷ್ಟವಾದ ತಿನಿಸನ್ನು ಇಬ್ಬರೂ ತಿನ್ನಿ. ಒಮ್ಮೆ ಗಂಡನ ಇಷ್ಟದ ಖಾದ್ಯವನ್ನು ಇಬ್ಬರೂ ಹಂಚಿಕೊಂಡು ತಿನ್ನಿ. ಕೆಲವೊಮ್ಮೆ ಇಂತಹ ವಿಚಾರದಲ್ಲಿ ಮನಸ್ತಾಪ ಬರಬಹುದು. ಆದರೆ ಅದನ್ನು ಮುಂದುವರಿಯಲು ಬಿಡಬೇಡಿ. ತಿಂಡಿ ತಿನ್ನುವಾಗ ಪರಸ್ಪರ ಒಬ್ಬರಿಗೊಬ್ಬರು ತಿನ್ನಿಸಿ, ಯಾರೂ ನೋಡದಂತೆ ಸಿಹಿಮುತ್ತನ್ನು ನೀಡಿ. ಕೈ ಹಿಡಿದು ಅಕ್ಕಪಕ್ಕ ಕುಳಿತು ತಿಂಡಿ ತಿನ್ನಿ. ಇವೆಲ್ಲವೂ ಜೀವನದುದ್ದಕ್ಕೂ ಹೊಂದಿರುವ ಸಿಹಿ ನೆನಪುಗಳಾಗಿವೆ.

ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಹನಿಮೂನ್‌ ಟ್ರಿಪ್‌ನಲ್ಲಿನ ಅನಿರೀಕ್ಷಿತ, ಅನಪೇಕ್ಷಿತ ಘಟನೆಗಳಿಗೆ ಸಿದ್ಧರಾಗಿರಬೇಕು. ಹನಿಮೂನ್‌ ಸಮಯದಲ್ಲಿ ಯಾವುದೋ ಕಾರಣದಿಂದ ಅನಾರೋಗ್ಯ ಬಾಧಿಸಬಹುದು. ಅಂತಹ ಸಮಯದಲ್ಲಿ ಸಂಗಾತಿಗೆ ನಿಮ್ಮೊಂದಿಗೆ ಸ್ಪಂದಿಸಲು ಸಾಧ್ಯವಾಗದೇ ಇರಬಹುದು. ಅದಕ್ಕಾಗಿ ಬೇಸರ ಮಾಡಿಕೊಳ್ಳದೇ ಸಂಗಾತಿ ಜೊತೆಗಿರಿ. ನಿನ್ನೊಂದಿಗೆ ನಾನಿದ್ದೇನೆ ಎಂಬ ಭರವಸೆ ನೀಡಿ. ಹನಿಮೂನ್‌ಗೆ ಹೋಗುವ ಮುಂಚೆ ಚಿಕ್ಕ ಮೆಡಿಕಲ್‌ ಕಿಟ್‌ ನಿಮಗೆ ಅವಶ್ಯ ಎನ್ನಿಸುವ ವಸ್ತುಗಳನ್ನು ಜೊತೆ ತಗೆದುಕೊಂಡು ಹೋಗಿ.

ಗಂಭೀರವಾಗಿ ಇರದಿರಿ

ನಿಮ್ಮ ವ್ಯಕ್ತಿತ್ವ ಹೇಗೆ ಇರಲಿ ಹನಿಮೂನ್‌ನಲ್ಲಿ ಸಂಗಾತಿಯ ಜೊತೆ ನಗುನಗುತ್ತಾ ಇರಿ. ಪ್ರಯಾಣ ಮಾಡುವಾಗ ಸ್ವಲ್ಪ ಕಾಮಿಡಿ ಮಾಡಿ. ನಿಮ್ಮ ಹಾಸ್ಯಪ್ರಜ್ಞೆಯನ್ನು ಸಂಗಾತಿಯು ಆನಂದಿಸಬಹುದು. ಗಂಭೀರವಾಗಿ ಇರುವುದು ಹನಿಮೂನ್‌ ಟ್ರಿಪ್‌ ಬೇಸರ ಮೂಡಲು ಕಾರಣವಾಗಬಹುದು.

Whats_app_banner