ಜಗಳವೂ ಅಲ್ಲ, ನಂಬಿಕೆ ದ್ರೋಹವೂ ಅಲ್ಲ; ಮದುವೆಗಳು ಮುರಿದು ಬಿದ್ದು, ವಿಚ್ಛೇದನ ಪ್ರಕರಣಗಳು ಹೆಚ್ಚಲು ಇದೇ ಮೂಲ ಕಾರಣ
ಇತ್ತೀಚಿನ ದಿನಗಳಲ್ಲಿ ಮದುವೆಯಾದಷ್ಟೇ ಬೇಗ ಸಂಬಂಧವು ಮುರಿದು ಬೀಳುತ್ತಿದೆ. ವಿಚ್ಛೇದನದ ಹೆಸರಿನಲ್ಲಿ ದಂಪತಿಗಳು ಸಂಬಂಧ ಕಡಿದುಕೊಳ್ಳುತ್ತಿದ್ದಾರೆ. ಇದಕ್ಕೆ ಜಗಳ, ದ್ರೋಹ ಕಾರಣವಲ್ಲ, ಮೂಲ ಕಾರಣ ಹೀಗಿದೆ ಎನ್ನುತ್ತಾರೆ ರಿಲೇಷನ್‌ಶಿಪ್ ಕೋಚ್.

ಮದುವೆ ಎಂಬುದು ಎರಡು ಜೀವಗಳು, ಮನಸ್ಸುಗಳನ್ನು ಬೆಸೆಯುವ ಅಪರೂಪ ಸಂಗಮ. ಗಂಡ–ಹೆಂಡತಿ ಏಳೇಳು ಜನ್ಮದಲ್ಲೂ ಜೊತೆಯಾಗಿರಬೇಕು ಎಂದು ಸಪ್ತಪದಿ ತುಳಿಯಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಯ ಬಂಧನ 7 ವರ್ಷವೂ ಗಟ್ಟಿಯಾಗಿರುವುದಿಲ್ಲ. ಗಂಡ–ಹೆಂಡತಿ ಇಬ್ಬರು ಜೊತೆಗೆ ಬಾಳಲು ಸಾಧ್ಯವೇ ಇಲ್ಲ ಎನ್ನುವ ಹಂತಕ್ಕೆ ತಲುಪಿದಾಗ ಎದುರಿಗೆ ಬರುವುದು ವಿಚ್ಛೇದನ.
ಹಲವರು ಹೆಚ್ಚುತ್ತಿರುವ ವಿಚ್ಛೇದನಕ್ಕೆ ಜಗಳ, ಮನಸ್ತಾಪ, ನಂಬಿಕೆ ದ್ರೋಹ ಕಾರಣ ಎನ್ನುತ್ತಾರೆ. ಅವು ಪ್ರಸ್ತುತದಲ್ಲಿರುವ ಹಾಗೂ ಮೇಲ್ನೋಟಕ್ಕೆ ಕಾಣುವ ಕಾರಣವಾಗಿದೆ. ಆದರೆ ವಿಚ್ಛೇದನದ ಸಮಸ್ಯೆ ಹೆಚ್ಚಲು ಮೂಲ ಕಾರಣ ನಾವೆಲ್ಲರೂ ಭಾವಿಸಿದ್ದಕ್ಕಿಂತಲೂ ಸೂಕ್ಷ್ಮವಾಗಿದೆ. ಸಂಬಂಧದಲ್ಲಿನ ಬಿರುಕು ಯಾವಾಗಲೂ ಸ್ಫೋಟಕ ಕಾರಣದಿಂದ ಬರುವುದಿಲ್ಲ, ಆದರೆ ಕಾರ್ಪೆಟ್ ಅಡಿಯಲ್ಲಿ ತಳ್ಳಲ್ಪಟ್ಟ ವಿಷಯಗಳಿಂದ ಬರಬಹುದು ಎಂಬುದನ್ನು ಹಲವರು ಊಹಿಸಿಯೂ ಇರುವುದಿಲ್ಲ.
ಸಂಬಂಧ ಮತ್ತು ಸಾಂಸಾರಿಕ ಜೀವನಕ್ಕೆ ಸಂಬಂಧಿಸಿ ನಿಯಮಿತವಾಗಿ ಸಲಹೆಗಳನ್ನು ಹಂಚಿಕೊಳ್ಳುವ ಸಂಬಂಧ ತರಬೇತುದಾರ ಜಾನ್ ಡಬಾಚ್, ಇನ್‌ಸ್ಟಾಗ್ರಾಂನಲ್ಲಿ ವಿಚ್ಛೇದನಕ್ಕೆ ಕಾರಣವಾಗುವ ಮೂಲ ಅಂಶ ಯಾವುದು ಎಂಬುದನ್ನು ವಿವರಿಸಿದ್ದಾರೆ.
ಮದುವೆ ಮುರಿದು ಬೀಳಲು ಮೂಲ ಕಾರಣವಿದು
‘13 ವರ್ಷಗಳ ಕಾಲ ಕಪಲ್ಸ್ ಕೌನ್ಸಿಲರ್ ಆಗಿ ಕೆಲಸ ಮಾಡಿದ ನಂತರ ನಾನು ಕಂಡುಕೊಂಡ ವಿಚಾರವೆಂದರೆ ನಿರಂತರ ಜಗಳ, ಅನ್ಯೋನ್ಯತೆಯ ಕೊರತೆ, ಕೆಲ ವರ್ಷಗಳ ನಂತರ ಆಕರ್ಷಣೆ ಕಡಿಮೆಯಾಗುವುದು ಆ ಎಲ್ಲಾ ವಿಷಯಗಳು ದಾಂಪತ್ಯ ಬದುಕಿಗೆ ಹಾನಿ ಮಾಡಬಹುದು. ಆದರೆ ದಾಂಪತ್ಯವು ವಿಚ್ಛೇದನದವರೆಗೆ ಸಾಗಲು ಅವು ಮೂಲ ಕಾರಣವಲ್ಲ. ಪರಸ್ಪರ ಹೇಳಿಕೊಳ್ಳದ ನಿರೀಕ್ಷೆಗಳು, ಮೌನ ಹಾಗೂ ಹೇಳಿಕೊಳ್ಳದೇ ಉಳಿದ ನಿರೀಕ್ಷೆಗಳು ಪೂರೈಕೆಯಾಗದೇ ಇರುವುದು ದಾಂಪತ್ಯದಲ್ಲಿ ದಂಪತಿಗಳಿಗೆ ಅರಿವಾಗದಂತೆ ಬಿರುಕು ಮೂಡಲು ಪ್ರಮುಖ ಕಾರಣವಾಗುತ್ತದೆ.
ದಂಪತಿಗಳು ಪರಸ್ಪರ ನಿರೀಕ್ಷಿಸುವುದು, ಸಂವಹನ ಮಾಡುವುದು ನಿಲ್ಲಿಸುವುದರಿಂದ ಸಂಬಂಧದಲ್ಲಿ ಬಿರುಕು ಮೂಡಬಹುದು.
ಗಂಡನಾಗಲಿ, ಹೆಂಡತಿಯಾಗಲಿ ಈ ಹೊತ್ತಿನಲ್ಲಿ ತನಗೆ ಏನು ಬೇಕು ಎಂಬುದನ್ನು ತಾನು ಹೇಳದೇ ಸಂಗಾತಿ ಅರ್ಥಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ. ಆದರೆ ಗಂಡನಿಗಾಗಲಿ ಹೆಂಡತಿಗಾಗಲಿ ಸಂಗಾತಿಯ ಮನಸ್ಸಿನಲ್ಲಿ ಏನು ಓಡುತ್ತಿದೆ ಎಂಬುದು ಅರ್ಥವಾಗದೇ ಎಲ್ಲವೂ ಸರಿಯಾಗಿದೆ ಎಂದು ಭಾವಿಸುತ್ತಾರೆ. ಒಂದೇ ಸೂರಿನಡಿ ಬದುಕುವ ಇಬ್ಬರೂ ಸಮಾನಾಂತರ ಜೀವನ ಪ್ರಾರಂಭಿಸುವವರೆಗೂ ಭಾವನಾತ್ಮಕ ಅಂತರ ಬೆಳೆಯುತ್ತಲೇ ಇರುತ್ತದೆ. ಸಂಭಾಷಣೆಗಳು ಸಂಪೂರ್ಣವಾಗಿ ವಹಿವಾಟಿನಂತಾಗುವುದು. ದಂಪತಿ ತಮ್ಮ ಭರವಸೆ, ಹತಾಶೆ ಮತ್ತು ಕನಸುಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುವುದು ಒಂದು ಪ್ರಮುಖ ಎಚ್ಚರಿಕೆಯ ಸಂಕೇತವಾಗಿದೆ ಎಂದು ಜಾನ್ ಹೇಳುತ್ತಾರೆ.
ಸಂಬಂಧ ಸುಧಾರಿಸಲು ಏನು ಮಾಡಬೇಕು?
ನೀವು ಸಂಗಾತಿಯ ಬಳಿ ನಿಮ್ಮ ಮನದ ಮಾತನ್ನು ಹೇಳದೇ ಅವರಿಗೆ ಎಲ್ಲವೂ ಅರ್ಥವಾಗಬೇಕು ಎನ್ನುವ ನಿರೀಕ್ಷೆ ಇರಿಸಿಕೊಳ್ಳುವುದು ಬಹಳ ತಪ್ಪು. ಆ ಕಾರಣಕ್ಕೆ ನೀವು ಮೊದಲು ಮುಕ್ತ ಸಂವಹನಕ್ಕೆ ಆದ್ಯತೆ ನೀಡಿ. ಮನ ಬಿಚ್ಚಿ ಮಾತನಾಡುವುದರಿಂದ ಸಂಬಂಧವು ಸರಿಯಾದ ಹಳಿಯಲ್ಲಿ ಸಾಗುವಂತೆ ಮಾಡಬಹುದು.
ಜಾನ್ ದಬಾಚ್ ಅವರು ‘ನಿಮ್ಮ ಮನಸ್ಸನ್ನು ಸಂಗಾತಿ ಅರಿಯಬೇಕು ಎನ್ನುವ ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಆದರೆ ಎಲ್ಲವನ್ನೂ ಅವರೇ ಅರಿಯಬೇಕು, ಅವರು ಅರಿತು ಮಾಡಬೇಕು ಎನ್ನುವ ಉದ್ದೇಶ ಸರಿಯಲ್ಲ. ನಿಮ್ಮ ಮನಸ್ಸಿಗೆ, ನಿಮಗೆ ಬೇಕು ಎಂಬುದನ್ನು ಮುಕ್ತವಾಗಿ ತಿಳಿಸುವುದು ಬಹಳ ಮುಖ್ಯವಾಗುತ್ತದೆ. ಮನಸ್ಸನ್ನು ಅರಿತು ಸಂಗಾತಿ ನಡೆಯಬೇಕು ಎನ್ನುವ ನಿರೀಕ್ಷೆಯು ನಿಮಗೆ ಅರಿವಾಗದಂತೆ ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಹೇಳಿಕೊಳ್ಳಲು ಆಗದಷ್ಟು ಆಳವನ್ನು ಸೃಷ್ಟಿಸುತ್ತದೆ ನೆನಪಿರಲಿ‘ ಎನ್ನುತ್ತಾರೆ.
(ಗಮನಿಸಿ: ಈ ಲೇಖನವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ವೃತ್ತಿಪರರ ಸಲಹೆ ಪಡೆಯಿರಿ)
ವಿಭಾಗ