ಸದೃಢ ಸಮಾಜ ರೂಪಿಸುವಲ್ಲಿ ತಾಯಿ ಮಕ್ಕಳಿಗೆ ಗುರುವಾಗಬೇಕು, ಗುರಿ ತೋರಬೇಕು; ಅಮ್ಮನಲ್ಲವೇ ಮೊದಲ ಶಿಕ್ಷಕಿ? - ನಂದಿನಿ ಟೀಚರ್ ಅಂಕಣ
ನಂದಿನಿ ಟೀಚರ್ ಅಂಕಣ: ಸದೃಢ ಸಮಾಜ ನಿರ್ಮಾಣವಾಗಲು ಸಮಾಜದಲ್ಲಿರುವ ನಾವು ಸಮಾಜಕ್ಕಾಗಿ ಮರಳಿ ನೀಡಬೇಕೆಂಬ ಭಾವನೆ ವಿಕಸಿತವಾಗಬೇಕಾದ ಅಗತ್ಯವಿದೆ. ತಾಯಂದಿರು ತಮ್ಮ ಸಂಪನ್ಮೂಲಗಳನ್ನು ಕ್ರೋಢೀಕರಿಸಿದರೆ, ಮನೆಗಳಲ್ಲಿ ಹದಿಹರೆಯದ ಮಕ್ಕಳಲ್ಲಿ ಕಾಣಿಸುತ್ತಿರುವ ಅದೆಷ್ಟೋ ಸಮಸ್ಯೆಗಳಿಗೆ ಸಂಘಟನಾತ್ಮಕವಾಗಿ ಉತ್ತರ ನೀಡಬಹುದು.

ಮೇ ತಿಂಗಳ ಎರಡನೇ ಭಾನುವಾರ ವಿಶ್ವದಾದ್ಯಂತ ʼಮದರ್ಸ್ ಡೇʼ ಆಚರಿಸಲಾಯಿತು. ತನ್ನೊಳಗೆ ಉದಯಿಸುವ ಮತ್ತೊಂದು ಜೀವಕ್ಕೆ ಜೀವ ನೀಡುವ ಶಕ್ತಿ ಇರುವ ಹೆಣ್ಣಿಗೆ ಮತ್ತು ಅವಳ ತ್ಯಾಗಕ್ಕೆ ನಮಿಸುವ ಉದ್ದೇಶದಿಂದ ವಿಶ್ವದಾದ್ಯಂತ ʼಮದರ್ಸ್ ಡೇʼಯನ್ನು ಆಚರಿಸಲಾಗುತ್ತದೆ. 'ಮಾತೃ ದೇವೋ ಭವ' ಎಂದು ತಾಯಿಯನ್ನು ದೇವರ ಸಮಾನವಾಗಿಸುವ ಹೇಳಿಕೆ ತೈತರೀಯ ಉಪನಿಷತ್ತಿನಲ್ಲಿ ಭಾರತದಲ್ಲಿ ನಮಗೆ ದೊರೆವಂತೆ, ಗ್ರೀಕರು ʼದೇವತೆಗಳ ತಾಯಿಯಾಗಿ 'ರಿಯಾ' ಎಂಬ ದೇವತೆಯನ್ನು ಪೂಜಿಸುತ್ತಾರೆ. ರೋಮನ್ನರು ‘ಹಿಲರಿಯಾ’ ಎಂಬ ಉತ್ಸವವನ್ನು ಆಚರಿಸುತ್ತಿದ್ದ ಬಗ್ಗೆ ಮಾಹಿತಿ ದೊರಕುತ್ತದೆ. ಈ ಆಧುನಿಕ ಯುಗದ ʼಮದರ್ಸ ಡೇ' ಯನ್ನು ‘ಅನ್ನ ಜರ್ವಿಸ್’ ಎನ್ನುವಾಕೆ ಮೊದಲ ಬಾರಿಗೆ ಪಶ್ಚಿಮ ವರ್ಜಿನೀಯಾ ಭಾಗದಲ್ಲಿ ತನ್ನ ತಾಯಿಗೆ ಮತ್ತು ಎಲ್ಲ ತಾಯಂದಿರು ತಮ್ಮ ಮಕ್ಕಳಿಗಾಗಿ ಮಾಡುವ ತ್ಯಾಗಕ್ಕೆ ಗೌರವ ಸೂಚಿಸುವ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ಆಚರಿಸಿದರು. ಈ ಆಚರಣೆಯ ಉದ್ದೇಶದಿಂದ ಪ್ರಭಾವಿತರಾದ ಅಮೆರಿಕದಲ್ಲಿ ಒಂದು ಕಾಲದಲ್ಲಿ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಸನ್ ಪ್ರತಿವರ್ಷದ ಮೇ ತಿಂಗಳ ಎರಡನೇ ಭಾನುವಾರವನ್ನು ʼಮದರ್ಸ ಡೇʼ ಆಚರಣೆಯಾಗಲಿ ಎಂದು ಅಧೀಕೃತವಾಗಿ ಘೋಷಿಸಿದರು. 1914ರಲ್ಲಿ ಅಮೆರಿಕದಲ್ಲಿ ಆರಂಭಗೊಂಡ ಈ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ.
ನಮ್ಮ ಜೀವಕ್ಕೊಂದು ರೂಪ ಕೊಟ್ಟು, ನಾವು ಕೊಟ್ಟ ತೊಂದರೆಗಳನ್ನೆಲ್ಲಾ ನಗುನಗುತ್ತಲೇ ಸಹಿಸಿಕೊಂಡು, ನಮ್ಮ ಕೈ ಹಿಡಿದೆತ್ತಿ, ಸುಖ-ದುಃಖಗಳೆರಡರಲ್ಲೂ ಜೊತೆ ನಿಂತು ನಮಗಾಗಿ ಮಿಡಿವ ಜೀವದೊಂದಿಗೆ ಒಂದಿಷ್ಟು ಸಕಾರಾತ್ಮಕ ಸಮಯವನ್ನು ಕಳೆಯುವ ಅಥವಾ ಅವರ ತ್ಯಾಗವನ್ನು ಸ್ಮರಿಸುವುದು 'ಮದರ್ಸ್ ಡೇ' ಯ ಮೂಲ ಉದ್ದೇಶ. ನಮ್ಮನ್ನು ಕಳಕಳಿಯಿಟ್ಟು ರೂಪಿಸುವ ಮಾತೃ ಹೃದಯ ಕೇವಲ ಹೆತ್ತಮ್ಮನ್ನದ್ದೇ ಆಗಿರಬೇಕು ಎಂದೇನಿಲ್ಲ. ಅಕ್ಕ, ಗುರುಗಳು, ಅಜ್ಜಿ, ಮಾತ್ರವಲ್ಲದೇ ಮಾತೃ ಹೃದಯದ ತಂದೆ-ಸಹೋದರರೂ ಕೂಡ ಆಗಿರಬಹುದು. ಭಾರತದಲ್ಲಿ ಮನೆಯನ್ನು ಮೊದಲ ಶಾಲೆಯನ್ನಾಗಿ ಕಂಡು ಜನನಿಗೆ ಮೊದಲ ಗುರುವಿನ ಸ್ಥಾನ ನೀಡಿ ಗೌರವಿಸಿದ್ದೇವೆ. ಕುಟುಂಬ ಪದ್ಧತಿಯಲ್ಲಿ ಅಪಾರ ನಂಬಿಕೆಯಿರುವ ನಾವು ಹೆತ್ತವರನ್ನು ಬೇರೆಯಾಗಿರುಸುವುದೇ ಇಲ್ಲ. ಅವರನ್ನು ಸ್ಮರಿಸದೇ, ಅವರಿಗೆ ನಮಿಸದೇ ಯಾವುದೇ ಕಾರ್ಯವನ್ನು ಕೈಗೆತ್ತಿಕೊಳ್ಳೆವು. ಹೀಗಾಗಿ ನಮಗೆ ಪ್ರತಿ ದಿನವೂ 'ಮದರ್ಸ ಡೇ'. ಮೇ ಎರಡನೇ ಭಾನುವಾರವನ್ನೇಕೆ ನಾವು ಆಚರಿಸಬೇಕು ಎನ್ನುವ ಚರ್ಚೆಗೆ ಇಳಿಯುವ ಉದ್ದೇಶ ಈ ಲೇಖನಕ್ಕಿಲ್ಲ. ವಿಶ್ವದ ಯಾವುದೇ ಭಾಗವಾಗಲಿ ಮಾತೆಯ ತ್ಯಾಗಕ್ಕೆ ಬೆಲೆಕಟ್ಟಲಾಗದು. ನಾವು ನಮಿಸುವ ಅಪಾರವಾಗಿ ಪ್ರೀತಿಸಿ ಗೌರವಿಸುವ ಮಾತೃಶಕ್ತಿ ಯಾವ ದಿಕ್ಕಿನಲ್ಲಿ ಪ್ರವಾಹಿಸಿದರೆ ಇನ್ನೂ ಹೆಚ್ಚು ಪ್ರಭಾವಿಯಾಗಬಲ್ಲದು ಎನ್ನುವ ಚಿಂತನೆ ಮಾಡುವ ಸಮಯವಿದು.
ಮಾತೃಶಕ್ತಿ ಸಮಾಜಮುಖಿಯಾಗಬೇಕಿದೆ
ಮಾತೃಶಕ್ತಿಯ ಮಾದರಿಯಾಗಿ ನಮ್ಮ ಮನಸ್ಸಿಗೆ ಬರುವುದು ಭಾರತದ ಮೊದಲ ಛತ್ರಪತಿಯನ್ನು ರೂಪಿಸಿದ ಜೀಜಾಮಾತೆ. ಉತ್ಸಾಹದ ಚಿಲುಮೆ ಶಿವಾಜಿಯನ್ನು ಧೀರನಾಗಿ, ದೇಶಪ್ರೇಮಿಯಾಗಿ, ಬದಲಾವಣೆ ತರುವ ನಾಯಕನಾಗಿ ರೂಪಿಸಿದ ಹೆಮ್ಮೆ ಜೀಜಾಮಾತೆಯದು. ದೇಶಪ್ರೇಮಿ ಮಾತೆಯ ಮಾರ್ಗದರ್ಶನದಲ್ಲಿ ಬೆಳೆದ ಶಿವಾಜಿ ಪ್ರಬಲನೂ ಬಲಶಾಲಿಯಾದ ಮೊಘಲ್ ಸಾಮ್ರಾಜ್ಯದ ಭದ್ರ ಕೋಟೆಯನ್ನೂ ಭೇದಿಸಿದ. ಇತ್ತೀಚಿನ ಘಟನೆಗಳನ್ನು ಗಮನಿಸಿದಾಗ ಪ್ರತಿ ಮಾತೆಯೂ ಜೀಜಾಬಾಯಿಯ ರೂಪ ಪಡೆಯಬೇಕೆನ್ನಿಸುತ್ತದೆ. ತನ್ನ ಕೆಲಸ, ಮನೆ ಮತ್ತು ಮಕ್ಕಳ ನಡುವೆ ಅನವರತ ತೊಡಗಿಕೊಳ್ಳುವ ಮಾತೃಶಕ್ತಿಯನ್ನು ಸಮಾಜಮುಖಿಯಾಗಿಸುವುದೆಂತು ಎಂದು ನಾವೀಗ ಯೋಚಿಸಬೇಕಿದೆ.
ದೊಮ್ಮಸಂದ್ರದ ವಿದ್ಯಾಭಾರತಿಯ ಶಾಲೆಯಲ್ಲಿ ಹೆಚ್ಚು ಓದಿಲ್ಲದ ತಾಯಿಯೊಬ್ಬರು, ಕುಡುಕ ಗಂಡನ ಬೆಂಬಲವೂ ಇಲ್ಲದೇ ಮಕ್ಕಳ ವಿದ್ಯಾಭ್ಯಾಸದ ಶುಲ್ಕವನ್ನು ಕಟ್ಟಲು ಎಲ್ಲರ ಮುಂದೆ ಕೈಚಾಚುವ ಪರಿಸ್ಥಿತಿಯಲ್ಲಿದ್ದರು. ಆ ಶಾಲೆಯ ಮಾತೃಭಾರತಿಯ ನೆರವಿನೊಂದಿಗೆ ಸೀರೆಗೆ ಕುಚ್ಚು ಹಾಕುವುದನ್ನು ಕಲಿತರು. ಇಂದು ಕುಶಲತೆಯನ್ನೇ ಜೀವನೋಪಾಯವನ್ನು ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿದ್ದಾರೆ. ಅಂದ ಹಾಗೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಮಾತೃಭಾರತಿಯ ನೆರವಿನಿಂದ ಬಗೆ ಬಗೆಯಾಗಿ ಕುಚ್ಚು ಹಾಕುವುದನ್ನು ಕಲಿತ ಅವರಿಂದು ತನ್ನಂತೆ ಕಷ್ಟದಲ್ಲಿರುವವರಿಗೆ ಉಚಿತವಾಗಿ ಹೇಳಿ ಕೊಡಲು ಮುಂದೆ ಬಂದಿರುವುದು ಮಾತೃ ಶಕ್ತಿಯ ವಿಶೇಷತೆ. ವಿದ್ಯಾಭಾರತಿ ತನ್ನ ಪ್ರತಿ ಶಾಲೆಯಲ್ಲೂ ಮಾತೃಭಾರತಿಯ ಟೋಳಿಯೊಂದನ್ನು ಕಟ್ಟಲು ಪ್ರೋತ್ಸಾಹಿಸುತ್ತದೆ. ಇನ್ನೊಂದು ಉದಾಹರಣೆಯಾಗಿ ಥಣಿಸಂದ್ರದ ರಾಷ್ಟ್ರೋತ್ಥಾನ ಶಾಲೆಯ ಮಾತೆಯರು ತಮ್ಮ ಬಿಡುವಿನ ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ಹೋಗಿ ಅಲ್ಲಿ ಮಕ್ಕಳಿಗೆ ಗಣಿತ, ಇಂಗ್ಲೀಷ್, ಸಂಸ್ಕೃತ ಹೀಗೆ ತಮಗೆ ಪರಿಣಿತಿಯಿರುವ ವಿಷಯವನ್ನು ಉಚಿತವಾಗಿ ಪಾಠ ಮಾಡುತ್ತಾರೆ. ಶಾಲೆಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ, ಮಕ್ಕಳ ಬೆಳವಣಿಗೆಯಲ್ಲಿ ಶಾಲೆಯೊಂದಿಗೆ ನಿಲ್ಲುತ್ತಾರೆ. ತಮ್ಮ ಸಮಯ, ಬುದ್ದಿಯ ಸದುಪಯೋಗ ಮಾಡುತ್ತ ಸಮಾಜಮುಖಿಯಾಗುತ್ತಾರೆ. ತಮ್ಮ ಕೆಲಸದ ಮೂಲಕ ಮಕ್ಕಳ ಮುoದೆ ಮಾದರಿಯಾಗಿ ನಿಲ್ಲುತ್ತಾರೆ.
ಶಾಲೆಗಳಲ್ಲಿ ಮಾತೃ ಸಂಘಟನೆಗಳು
ಶಾಲೆಗಳಲ್ಲಿ ಮಾತೃಸಂಘಟನೆಗಳನ್ನು ರಚಿಸುವುದು ಸುಲಭ. ಶಾಲೆಯ ಎಲ್ಲ ಮಾತೆಯರೂ ಸದಸ್ಯರಾಗುವ ಈ ವೇದಿಕೆಯಲ್ಲಿ, ಪ್ರತಿ ತರಗತಿಯಿಂದ ಇಬ್ಬರು ತಾಯಂದಿರು ಸ್ವಇಚ್ಛೆಯಿಂದ ಶಾಲೆಯ ಮಾತೃಭಾರತಿಯ ಕೇಂದ್ರ ತಂಡದ ಸದಸ್ಯರಾಗುತ್ತಾರೆ. ಹತ್ತನೇ ತರಗತಿಯ ಮಕ್ಕಳು ಶಾಲೆ ಬಿಡುವ ವೇಳೆಗೆ ತಾಯಂದಿರೂ ಈ ವೇದಿಕೆಯಿಂದ ನಿರ್ಗಮಿಸುತ್ತಾರೆ, ಹೊಸ ಪಾಲಕರು ಸದಸ್ಯರಾಗುತ್ತಾರೆ. ಆಸಕ್ತಿ ಮತ್ತು ಅನುಭವವಿರುವ ಮಾತೆಯರು ಶಾಲೆಯ ಶಿಕ್ಷಕರ ಅನುಮತಿ ಪಡೆದು ಶಾಲೆಯ ಮಕ್ಕಳಿಗೆ ದೇಶ ಪ್ರೇಮ ಜಾಗೃತಗೊಳಿಸುವ ಕಥೆಗಳನ್ನು ಹೇಳುವ, ಶಾಲೆಯ ಪ್ರಾರ್ಥನೆಯಲ್ಲಿ ಭಾಗವಹಿಸುವ, ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ ಬಗ್ಗೆ ತಿಳಿಸುವ ಪರಿಸರ, ಸ್ವದೇಶೀ ಜಾಗೃತಿ ಮೂಡಿಸುವ ಹೀಗೆ ಇನ್ನೂ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಇಲ್ಲವೇ ತಮ್ಮ ಕೌಶಲವನ್ನು ಇತರರೊಂದಿಗೆ ಹಂಚಿಕೊಳ್ಳಬಹುದು, ಕಲಿಯಬಹುದು, ಕಲಿಸಬಹುದು.
ತಾಯಂದಿರು ಸಮಾಜಮುಖಿಯಾಗಬೇಕು ಎಂದಾಕ್ಷಣ ನಿಮ್ಮ ಸಂಪನ್ಮೂಲವನ್ನೆಲ್ಲಾ ಸಮಾಜಕ್ಕಾಗಿಯೇ ಬಳಸಿ ಎಂದೇನು ಇಲ್ಲಿ ಹೇಳುತ್ತಿಲ್ಲ. ತಮ್ಮ ಸಮಯ, ಶಕ್ತಿ ಹಾಗೂ ಇತರೆಲ್ಲ ಸಂಪನ್ಮೂಲಗಳನ್ನು ಕುಟುಂಬ ಹಾಗೂ ಸಂಬಂಧಿಕರಿಗಾಗಿಯೇ ವ್ಯಯಿಸುವುದು ಸಾಮಾನ್ಯ ಭಾವ. ಆದರೆ ಒಂದು ಸದೃಢ ಸಮಾಜ ನಿರ್ಮಾಣವಾಗಲು ಸಮಾಜದಲ್ಲಿರುವ ನಾವು ಸಮಾಜಕ್ಕಾಗಿ ಮರಳಿ ನೀಡಬೇಕೆಂಬ ಭಾವನೆ ವಿಕಸಿತವಾಗಬೇಕಾದ ಅಗತ್ಯವಿದೆ. ತಾಯಂದಿರು ತಮ್ಮ ಸಂಪನ್ಮೂಲಗಳನ್ನು ಕ್ರೋಢೀಕರಿಸಿದರೆ, ಮನೆಗಳಲ್ಲಿ ಹದಿಹರೆಯದ ಮಕ್ಕಳಳಲ್ಲಿ ಕಾಣಿಸುತ್ತಿರುವ ಅದೆಷ್ಟೋ ಸಮಸ್ಯೆಗಳಿಗೆ ಸಂಘಟನಾತ್ಮಕವಾಗಿ ಉತ್ತರ ನೀಡಬಹುದು. ಜೊತೆಗೆ ಸಮಾಜದಿಂದ ಪಡೆದುಕೊಳ್ಳುವ ನಾವು ಮರಳಿ ಸಮಾಜಕ್ಕೆ ಕೊಟ್ಟ ಧನ್ಯತಾ ಭಾವ. ನಾವು ಜನ್ಮಿಸಿದ ದೇಶವನ್ನೂ ತಾಯಿಯೆಂದು ಭಾವಿಸುವ ನಮಗೆ, ಸಮಾಜಕ್ಕೆ ನಮ್ಮ ಸಂಪನ್ಮೂಲದ ಒಂದು ಪಾಲು ಮೀಸಲಿಡುವ ಮೂಲಕ ಅಭಿನಂದಿಸಬಹುದು ಅಲ್ಲವೇ? ನಮ್ಮ ಮಕ್ಕಳು ನಮ್ಮನ್ನು ಗಮನಿಸಿ ದೇಶದತ್ತ ತಮ್ಮ ಕರ್ತವ್ಯವೇನೆಂದು ಕಲಿಯುತ್ತಾರೆ. ದೀಪದಿಂದ ತಾನೇ ಮತ್ತೊಂದು ದೀಪವನ್ನು ಹಚ್ಚಲು ಸಾಧ್ಯ. ಕೇವಲ ಹೆತ್ತ ಕಾರಣದಿಂದ ಮಾತ್ರವಲ್ಲದೇ ನಿಜಾರ್ಥದಲ್ಲಿ ಮಕ್ಕಳ ಗುರುಗಳಾಗೋಣ.
ಪ್ರೊ ನಂದಿನಿ ಲಕ್ಷ್ಮೀಕಾಂತ ಪರಿಚಯ
ಪ್ರೊ ನ೦ದಿನಿ ಲಕ್ಷ್ಮೀಕಾ೦ತ ಅವರು ವೃತ್ತಿಯಿ೦ದ ಮಾಧ್ಯಮ ಅಧ್ಯಾಪಕರು. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸ೦ಸ್ಥೆಗಳ ವಿವಿಧ ಹುದ್ದೆಗಳಲ್ಲಿ ಎರಡು ದಶಕ್ಕಕ್ಕೂ ಮೀರಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿ೦ದ ಐಚ್ಛಿಕ ಸೇವಾ ನಿವೃತ್ತಿಯನ್ನು ಪಡೆದುಕೊ೦ಡ ನ೦ತರ ಸಮಾಜ ಸೇವೆ ಹಾಗೂ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮೀಸಲಿರಿಸಿದ್ದಾರೆ. ಅನುಭವಿ ಅಧ್ಯಾಪಕ ವೃತ್ತಿಯ ಜೊತೆಗೆ ಮಾಧ್ಯಮ ಸ೦ಶೋಧಕರಾಗಿಯೂ ಗುರುತಿಸಲ್ಷಟ್ಟ ಪ್ರೊ ನ೦ದಿನಿ ಪ್ರತಿಷ್ಠಿತ ಸ೦ಶೋಧನಾ ಸ೦ಸ್ಥೆ ICMR ಹಿರಿಯ ಸ೦ಶೋಧಕರಿಗೆ ಕೊಡಮಾಡುವ ಸ೦ಶೋಧನಾ ಅನುದಾನವನ್ನು ಎರಡು ಬಾರಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸ೦ವಹನ ಅದರಲ್ಲೂ ವಿಶೇಷವಾಗಿ ಮಹಿಳೆಯ ಮತ್ತು ಕಿಶೋರಾವಸ್ಥೆಯ ಆರೋಗ್ಯ ಕುರಿತ ಸ೦ವಹನ ಅವರ ಆಸತ್ತಿ ಕ್ಷೇತ್ರ. ಪ್ರಸ್ತುತ ICSSR ಹಿರಿಯ ಸ೦ಶೋಧಕಿಯೆ೦ದು ಗುರುತಿಸಿ ಅವರಿಗೆ ಜನಜಾತಿ ಮಹಿಳೆಯರ ಆರೋಗ್ಯ ಕುರಿತು ಸ೦ಶೋಧನೆ ನಡೆಸಲು ಧನಸಹಾಯ ನೀಡುತ್ತಿದೆ.
ಜರ್ಮನಿ, ಹಾಗೂ ಅಮೇರಿಕಾ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುವ ಪ್ರೊ ನ೦ದಿನಿ ಲಕ್ಷ್ಮೀಕಾ೦ತ, ಹಲವಾರು ಸ೦ಶೋಧನಾ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. Environmental Education ಅವರ ಇತ್ತೀಚಿನ ಪುಸ್ತಕ. ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಸ್ವತ೦ತ್ರ ಪತ್ರಕರ್ತೆಯಾಗಿ ಲೇಖನಗಳನ್ನು ಬರೆದಿದ್ದಾರೆ, ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊ೦ದಿರುವ ಅವರು ಬದಲಾಗುತ್ತಿರುವ ಇ೦ದಿನ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವ ಬಗ್ಗೆ ತಮ್ಮ ಅನಿಸಿಕೆಗಳನ್ನು ‘ನಂದಿನಿ ಟೀಚರ್‘ ಅಂಕಣದ ಮೂಲಕ ನಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದಾರೆ.