ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತದಲ್ಲಿ ಬದಲಾಗುತ್ತಿದೆ ಕೌಟುಂಬಿಕ ವಾತ್ಸಲ್ಯದ ಪರಿಕಲ್ಪನೆ; ಪೋಷಕರಿಂದ ದೂರವಾಗುವ ಮುನ್ನ ಯೋಚಿಸಿ

ಭಾರತದಲ್ಲಿ ಬದಲಾಗುತ್ತಿದೆ ಕೌಟುಂಬಿಕ ವಾತ್ಸಲ್ಯದ ಪರಿಕಲ್ಪನೆ; ಪೋಷಕರಿಂದ ದೂರವಾಗುವ ಮುನ್ನ ಯೋಚಿಸಿ

ಅಪ್ಪ-ಅಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಆದರೆ ಮಕ್ಕಳು ರೆಕ್ಕೆ ಬಲಿತ ಮೇಲೆ ಗೂಡು ಬಿಟ್ಟು ಹಾರಿ ಹೋಗುತ್ತಾರೆ. ಹೀಗೆ ಹೋಗುವ ಮಕ್ಕಳು ಒಮ್ಮೆ ಪೋಷಕರ ಬಗ್ಗೆ ಯೋಚಿಸಬೇಕು. ಪೋಷಕರಿಂದ ಶಾಶ್ವತವಾಗಿ ದೂರವಾಗುವ ನಿರ್ಧಾರ ಎಷ್ಟು ತಪ್ಪು ಎಂದು ಮನನ ಮಾಡಿಕೊಳ್ಳಬೇಕು. ಸಂಬಂಧಗಳನ್ನು ಕಡಿದುಕೊಳ್ಳುವ ಮುನ್ನ ಹಿಂದಿನ ದಿನಗಳನ್ನೊಮ್ಮೆ ನೆನೆಸಿಕೊಳ್ಳಿ.

ಭಾರತದಲ್ಲಿ ಬದಲಾಗುತ್ತಿದೆ ಕೌಟುಂಬಿಕ ವಾತ್ಸಲ್ಯದ ಪರಿಕಲ್ಪನೆ; ಪೋಷಕರಿಂದ ದೂರವಾಗುವ ಮುನ್ನ ಯೋಚಿಸಿ
ಭಾರತದಲ್ಲಿ ಬದಲಾಗುತ್ತಿದೆ ಕೌಟುಂಬಿಕ ವಾತ್ಸಲ್ಯದ ಪರಿಕಲ್ಪನೆ; ಪೋಷಕರಿಂದ ದೂರವಾಗುವ ಮುನ್ನ ಯೋಚಿಸಿ

ಭಾರತ ಕೂಡು ಕುಟುಂಬಗಳ ದೇಶ. ಭಾರತೀಯರು ಸಂಬಂಧಕ್ಕೆ ಕೊಡುವಷ್ಟು ಬೆಲೆ ಬೇರೆ ದೇಶಗಳಲ್ಲಿ ಕೊಡುವುದಿಲ್ಲ. ಅಪ್ಪ-ಅಮ್ಮ, ಅಜ್ಜಿ-ತಾತ, ಅಣ್ಣ-ತಮ್ಮ ಹೀಗೆ ಕೌಟುಂಬಿಕ ಸಾಮರಸ್ಯ ಇರುವುದು ಭಾರತದಲ್ಲಿ ಮಾತ್ರ ಎಂಬ ಕಾಲವೊಂದಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ, ಎಲ್ಲವೂ ಸಂಪೂರ್ಣ ಬದಲಾಗಿದೆ. ಕುಟುಂಬ ವ್ಯವಸ್ಥೆಯೊಂದಿಗೆ ಸಂಬಂಧಗಳ ನಡುವಿನ ಬಾಂಧವ್ಯವೂ ಬದಲಾಗಿದೆ. ಮಕ್ಕಳಿಗೆ ತಂದೆ-ತಾಯಿಗಳ ಮೇಲೆ ಪ್ರೀತಿಯೂ ಕಡಿಮೆಯಾಗಿದೆ. ಪೋಷಕರನ್ನು ಪಾಕೆಟ್‌ ಮನಿ ನೀಡುವ ಎಟಿಎಂಗಳಂತೆ ಮಕ್ಕಳು ಭಾವಿಸುತ್ತಿರುವುದು ಸುಳ್ಳಲ್ಲ. ಅದರಲ್ಲೂ ಒಂದು ವಯಸ್ಸಿಗೆ ಬಂದ ನಂತರ ಮಕ್ಕಳು ತಮ್ಮ ಸ್ವಂತ ನಿರ್ಧಾರ ತೆಗೆದುಕೊಂಡು ಪೋಷಕರಿಂದ ದೂರಾಗುತ್ತಿದ್ದಾರೆ. ಪೋಷಕರ ಅಭಿಪ್ರಾಯಗಳಿಗೆ ಬೆಲೆಯೂ ಇಲ್ಲದಂತೆ ಮಕ್ಕಳ ವರ್ತನೆ ಇರುವುದು ನಿಜಕ್ಕೂ ಬೇಸರದ ಸಂಗತಿ. ತಮ್ಮ ಬದುಕನ್ನ ಕಟ್ಟಿಕೊಟ್ಟುವ ಭರದಲ್ಲಿ ಮಕ್ಕಳು ತಂದೆ-ತಾಯಿಯರನ್ನು ಏಕಾಂಗಿಯನ್ನಾಗಿಸುತ್ತಿರುವುದು ಸುಳ್ಳಲ್ಲ.

ಟ್ರೆಂಡಿಂಗ್​ ಸುದ್ದಿ

ಮಕ್ಕಳು ಹದಿ ವಯಸ್ಸಿಗೆ ಬಂದ ಕೂಡಲೇ ಪೋಷಕರ ಮಾತು ಕೇಳುವುದು ನಿಲ್ಲಿಸುತ್ತಾರೆ. ಹದಿ ವಯಸ್ಸಿಗೆ ಬಂದ ಕೂಡಲೇ ತಮಗೆ ಸ್ವಾತಂತ್ರ್ಯ ಸಿಕ್ಕಿತು ಎಂದುಕೊಳ್ಳುವವರೇ ಹಲವರು. ಇತ್ತೀಚಿನ ದಿನಗಳಲ್ಲಿ ಹದಿ ವಯಸ್ಸಿನ ಮಕ್ಕಳು ತಮ್ಮ ಪೋಷಕರನ್ನು ಇತರರೊಂದಿಗೆ ಹೋಲಿಸಿ ನೋಡುವ ಕೆಟ್ಟ ಚಾಳಿಯೂ ಬಂದಿದೆ. ತಮ್ಮ ತಂದೆ-ತಾಯಿ ಪಾಶ್‌ ಆಗಿರಬೇಕು ಎಂಬ ಪಾಶ್‌ ಮನೋಭಾವದಿಂದ ಪೋಷಕರನ್ನು ಅಲ್ಲಗೆಳೆಯುತ್ತಿದ್ದಾರೆ. ಇನ್ನು ಪೋಷಕರು ಬುದ್ಧಿಮಾತು ಹೇಳಿದರೆ ಇವರ್ಯಾರು ನಮಗೆ ಹೇಳಲು ಎಂಬ ಧಿಮಾಕಿನ ಭಾವವು ಇಂದಿನ ಮಕ್ಕಳಲ್ಲಿ ಸಹಜವಾಗಿದೆ. ಹೆತ್ತಮ್ಮ, ಅಪ್ಪನ ಮಾತು ಕೇಳದ ಮಕ್ಕಳು ಬೇರೆಯವರ ಮಾತಿನ ಬಗ್ಗೆ ಹೇಗೆ ಗಮನ ಹರಿಸುತ್ತಾರೆ ಅಲ್ವಾ? ಹಿಂದೆಲ್ಲಾ ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸಬೇಕು ಎಂದರೆ ಪೋಷಕರು ಹರ ಸಾಹಸ ಪಡುತ್ತಿದ್ದರು, ಆದರೆ ಈಗ ಮಕ್ಕಳೇ ತಮಗೆ ಪೋಷಕರ ಜೊತೆ ಇದ್ದರೆ ಫ್ರೀಡಂ ಇರುವುದಿಲ್ಲ ಎಂಬ ಕಾರಣಕ್ಕೆ ಹಾಸ್ಟೆಲ್‌ ಪಿಜಿಗಳಲ್ಲಿ ವಾಸಿಸುತ್ತಿದ್ದಾರೆ. ಮನೆ, ಮನೆಯವರ ಅಭಿಪ್ರಾಯಕ್ಕಿಂತ ಹೆತ್ತವರ ಪ್ರೀತಿಗಿಂತ ವೈಯಕ್ತಿಕ ಸ್ವಾತಂತ್ರ್ಯವೇ ಮುಖ್ಯ ಎನ್ನುವುದು ಇಂದಿನ ಮಕ್ಕಳ ಅಭಿಪ್ರಾಯ. 

ಓದಿನ ವಿಚಾರದಲ್ಲೂ ತಮ್ಮದೇ ಆಯ್ಕೆ

ಹಿಂದೆಲ್ಲಾ ಮಕ್ಕಳು ಏನು ಓದಬೇಕು, ಯಾವ ಕೋರ್ಸ್‌ ಮಾಡಬೇಕು ಎಂದು ಪೋಷಕರು ನಿರ್ಧಾರ ಮಾಡುತ್ತಿದ್ದರು. ಆದರೆ ಈಗ ಪೋಷಕರಿಗೆ ಅವಕಾಶವೇ ಇಲ್ಲದಂತೆ ಮಕ್ಕಳು ತಾವು ಇಷ್ಟ ಬಂದ ಕೋರ್ಸ್‌ ಅನ್ನು ಪೋಷಕರು ಒಪ್ಪಿಕೊಳ್ಳಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಎಷ್ಟೇ ದೂರ ಹೋಗಿ ಓದಲು ಅವರು ರೆಡಿ ಇರುತ್ತಾರೆ. ಅಮ್ಮ-ಅಪ್ಪನಿಂದ ದೂರಾಗಬೇಕು ಎನ್ನುವ ಫೀಲ್‌ ಕೂಡ ಅವರಲ್ಲಿ ಇರುವುದಿಲ್ಲ. ಒಟ್ಟಾರೆ ಈಗಿನ ಕಾಲದಲ್ಲಿ ಮಕ್ಕಳಿಗೆ ಅಪ್ಪ-ಅಮ್ಮ, ಮನೆ ಎನ್ನುವ ಭಾವನೆ ಇಲ್ಲದಂತಿರುವುದು ಸುಳ್ಳಲ್ಲ. ಇದರಿಂದ ತಮಗೆ ನೋವಾದರೂ ಮಕ್ಕಳ ಖುಷಿಗಾಗಿ ಪೋಷಕರು ಮರು ಮಾತನಾಡುತ್ತಿಲ್ಲ. ಆದರೆ ಓದು, ಉದ್ಯೋಗ ಹಿನ್ನೆಲೆಯಲ್ಲಿ ಮಕ್ಕಳು ತಮ್ಮಿಂದ ದೂರಾಗುವ ನೋವನ್ನು ಯಾವ ಪೋಷಕರು ಸಹಿಸುವುದಿಲ್ಲ. ಆದರೆ ಇದು ಅನಿವಾರ್ಯ ಎಂಬ ಕಾರಣಕ್ಕೆ ಸುಮ್ಮನಾಗುತ್ತಾರೆ. 

ಮದುವೆಯ ವಿಚಾರದಲ್ಲೂ ಅಪ್ಪ-ಅಮ್ಮನ ಅಭಿಪ್ರಾಯಕ್ಕಿಲ್ಲ ಬೆಲೆ

ಪ್ರತಿ ಪೋಷಕರಿಗೂ ತಮ್ಮ ಮಕ್ಕಳ ಮದುವೆಯನ್ನು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂಬ ಕನಸಿರುವುದು ಸಹಜ. ಆದರೆ ಇಂದಿನ ಮಕ್ಕಳು ಮದುವೆಯ ವಿಚಾರದಲ್ಲೂ ಪೋಷಕರಿಗೆ ಆಯ್ಕೆ ನೀಡುತ್ತಿಲ್ಲ. ಹಿಂದೆಲ್ಲಾ ಧಾರೆ ಎರೆಯಲು ಪೋಷಕರು ಇರಬೇಕು ಎಂಬ ಸಂಪ್ರದಾಯವಿತ್ತು. ಆದರೆ ಈಗ ರಿಜಿಸ್ಟರ್‌ ಮದುವೆ ಕಾಲ. ತಮ್ಮ ಮನಸ್ಸಿಗೆ ಇಷ್ಟವಾದರ ಜೊತೆ ರಿಜಿಸ್ಟರ್‌ ಮದುವೆಯಾಗುವ ಮೂಲಕ ಮಕ್ಕಳು ಅಪ್ಪ-ಅಮ್ಮನನ್ನು ಕರೆಯುವುದನ್ನು ಮರೆಯುತ್ತಾರೆ. ಇನ್ನು ಕೆಲವೊಮ್ಮೆ ಪೋಷಕರು ಮಕ್ಕಳ ಮದುವೆಗೆ ವಿರೋಧ ವ್ಯಕ್ತಪಡಿಸುವುದೂ ಇದೆ. ಅಂತಹ ಸಂದರ್ಭದಲ್ಲಿ ಮಕ್ಕಳಿಗೆ ಹುಟ್ಟಿದಾಗಿನಿಂದ ಸಾಕಿ ಸಲಹಿದ ಪೋಷಕರಿಗಿಂತ ತಾವು ಇಷ್ಟಪಟ್ಟ ವ್ಯಕ್ತಿಯೇ ಹೆಚ್ಚಾಗುತ್ತಾರೆ. ಹೀಗೆ ಈ ವಿಚಾರದಲ್ಲೂ ಮಕ್ಕಳು ಪೋಷಕರಿಗೆ ದೂರಾಗುತ್ತಾರೆ. ಇನ್ನೂ ವಿದೇಶದಲ್ಲೇ ಮದುವೆಯಾಗಿ ವಿಡಿಯೊ ಕಾಲ್‌ನಲ್ಲಿ ಪೋಷಕರಿಗೆ ತೋರಿಸುವ ಕಾಲವಿದು. 

ಮಕ್ಕಳ ಈ ಎಲ್ಲಾ ಆಸೆಗಳಿಗೂ ಅಡ್ಡಿಬಾರದ ಪೋಷಕರಿಗೆ ತಮ್ಮ ಇಳಿ ವಯಸ್ಸಿನಲ್ಲಾದರೂ ತಮ್ಮನ್ನು ನೋಡಿಕೊಳ್ಳಲಿ ಎಂಬ ಕನಸಿರುತ್ತದೆ. ಆದರೆ ಈಗ ಕಾಲ ಹಾಗಿಲ್ಲ. ಮಕ್ಕಳು ಹದಿ ವಯಸ್ಸಿಗೆ ಬಂದ ನಂತರ ಒಂಟಿಯಾಗುವ ಪೋಷಕರು ತಾವು ಸಾಯುವವರೆಗೂ ಒಂಟಿಯಾಗಿಯೇ ಇರುತ್ತಾರೆ. ಬದುಕೆಲ್ಲಾ ಮಕ್ಕಳಿಗಾಗಿ ಜೀವ ಸವೆಸುವ ಪೋಷರಿಗೆ ಇಳಿ ವಯಸ್ಸಿನಲ್ಲಿ ನೀರು ಕೊಡುವವರು ಇಲ್ಲದ ಕಾಲವಿದು. ಹಾಗಾಗಿ ಪೋಷಕರು ಮಕ್ಕಳಿಗೆ ಖರ್ಚು ಮಾಡುವ ಜೊತೆಗೆ ತಮಗೆಂದೇ ಒಂದಿಷ್ಟು ಹಣವನ್ನು ಕೂಡಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಗೂಡು ಬಿಟ್ಟ ಹಕ್ಕಿಗಳು ಪೋಷಕರ ಆರೈಕೆ ಮಾಡುವುದು ಕಷ್ಟ. ಸ್ವಾತಂತ್ರ್ಯವಾಗಿರಲು ಬಯಸುವ ಮಕ್ಕಳು ಒಂದೇ ಊರಿನಲ್ಲಿದ್ದರೂ ಬೇರೆ ಮನೆ ಮಾಡಿ ವಾಸಿಸುವ ಮೂಲಕ ಪೋಷಕರನ್ನು ದೂರ ಇಡುವುದು ಹೊಸತೇನಲ್ಲ. ಹಣ, ತಂತ್ರಜ್ಞಾನ ಹೀಗೆ ಹಲವು ಕಾರಣಗಳಿಂದ ಪ್ರೀತಿ, ವಾತ್ಸಲ್ಯ, ಮಮಕಾರ ಇದ್ಯಾವುದಕ್ಕೂ ಅರ್ಥವಿಲ್ಲದಂತಾಗಿದೆ. 

ಡಿಜಿಟಲ್‌ ಯುಗದಲ್ಲಿ ಎಲ್ಲವೂ ತಾಂತ್ರಿಕ

ಹಿಂದೆಲ್ಲಾ ಫಾದರ್ಸ್‌ ಡೇ, ಮದರ್ಸ್‌ ಡೇ ಎಷ್ಟೊಂದು ಪ್ರಾಮುಖ್ಯ ಪಡೆದಿರಲಿಲ್ಲ. ಆದರೆ ಈ ಕೃತಕ ಪ್ರೀತಿಯ ಯುಗದಲ್ಲಿ ಮಕ್ಕಳು ಈ ದಿನಗಳೆಲ್ಲಾ ಜೋರಾಗಿ ಆಚರಿಸುವಂತೆ ಮಾಡಿವೆ. ವರ್ಷಪೂರ್ತಿ ಪೋಷಕರ ಮೇಲೆ ನಿಗಾ ವಹಿಸದ ಮಕ್ಕಳು ಆ ದಿನ ಎಲ್ಲಿಲ್ಲದ ಪ್ರೀತಿ ತೋರುತ್ತಾರೆ. ಆ ದಿನ ಕೇಕ್‌ ಕಟ್‌ ಮಾಡುವುದು, ಪೋಷಕರಿಗೆ ಇಷ್ಟದ ಸ್ವೀಟ್‌ ಮಾಡುವುದು, ಅವರ ಖುಷಿಯನ್ನು ಸ್ಟೇಟಸ್‌ನಲ್ಲಿ ಹಂಚಿಕೊಳ್ಳುವುದು ಹೀಗೆ ತಾಂತ್ರಿಕ ಪ್ರೀತಿ ತೋರುತ್ತಾರೆ. ಆದರೆ ಪೋಷಕರಿಗೆ ಮಕ್ಕಳ ಈ ಒಂದು ದಿನದ ತೋರ್ಪಡಿಕೆಯ ಪ್ರೀತಿ ಖಂಡಿತ ಬೇಕಿರುವುದಿಲ್ಲ.

ಆದರೆ ನಿಮ್ಮ ಸ್ವಾರ್ಥಕ್ಕಾಗಿ ಪೋಷಕರಿಂದ ದೂರಾಗುವ ಮುನ್ನ ಒಮ್ಮೆ ಪೋಷಕರ ಬಗ್ಗೆ ಯೋಚಿಸಿ, ಅವರು ನಿಮಗಾಗಿ ಪಟ್ಟ ಕಷ್ಟಗಳನ್ನು ನೆನೆಸಿಪಿಸಿಕೊಳ್ಳಿ. ಅವರು ಮಾಡಿದ ತ್ಯಾಗಗಳ ಬಗ್ಗೆ ಗಮನ ಹರಿಸಿ. ಕೌಟುಂಬಿಕ ಬಾಂಧವ್ಯವನ್ನು ಮರೆಯುವ ಮುನ್ನ ಬಾಲ್ಯದ ಸುಂದರ ದಿನಗಳನ್ನು ನೆನಪಿಸಿಕೊಳ್ಳಿ. ಅಪ್ಪ-ಅಮ್ಮನ ಮಮಕಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ನಿಮ್ಮಷ್ಟದ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಪೋಷಕರಿಂದ ದೂರಾಗುವ ಮುನ್ನ ಒಮ್ಮೆ ಯೋಚಿಸಿ, ನಾಳೆ ನಿಮ್ಮ ದಿನ ಹೇಗಿರಬಹುದು.

 

ವಿಭಾಗ