ಮದುವೆಗೂ ಮುನ್ನ ಒಟ್ಟಿಗೆ ವಾಸಿಸುವುದರಿಂದ ವಿಚ್ಛೇದನದ ಪ್ರಮಾಣ ಕಡಿಮೆಯಾಗುವುದೇ; ಲೀವಿಂಗ್‌ ರಿಲೇಷನ್‌ಶಿಪ್‌ ಬಗ್ಗೆ ಅಧ್ಯಯನ ಹೇಳುವುದಿಷ್ಟು
ಕನ್ನಡ ಸುದ್ದಿ  /  ಜೀವನಶೈಲಿ  /  ಮದುವೆಗೂ ಮುನ್ನ ಒಟ್ಟಿಗೆ ವಾಸಿಸುವುದರಿಂದ ವಿಚ್ಛೇದನದ ಪ್ರಮಾಣ ಕಡಿಮೆಯಾಗುವುದೇ; ಲೀವಿಂಗ್‌ ರಿಲೇಷನ್‌ಶಿಪ್‌ ಬಗ್ಗೆ ಅಧ್ಯಯನ ಹೇಳುವುದಿಷ್ಟು

ಮದುವೆಗೂ ಮುನ್ನ ಒಟ್ಟಿಗೆ ವಾಸಿಸುವುದರಿಂದ ವಿಚ್ಛೇದನದ ಪ್ರಮಾಣ ಕಡಿಮೆಯಾಗುವುದೇ; ಲೀವಿಂಗ್‌ ರಿಲೇಷನ್‌ಶಿಪ್‌ ಬಗ್ಗೆ ಅಧ್ಯಯನ ಹೇಳುವುದಿಷ್ಟು

ಹಿಂದೆ ವಿಚ್ಛೇದನ ಎಂದರೆ ಕಳಂಕ, ಸಾಮಾಜಿಕ ನಿಷೇಧ, ಅಪರಾಧ ಎಂಬ ಭಾವನೆ ಇತ್ತು. ಆದರೆ ಈಗೆಲ್ಲಾ ಡಿವೋರ್ಸ್ ಎನ್ನುವುದು ಸಾಮಾನ್ಯ ಸಂಗತಿ. ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದಲೇ, ಪ್ರೀತಿಸುವ ವ್ಯಕ್ತಿಯೊಂದಿಗೆ ಬಾಳುವುದು ಅಂದರೆ ಲೀವಿಂಗ್ ಟುಗೇದರ್‌ನಲ್ಲಿರುವುದು ವಿ‌ಚ್ಛೇದನ ತಡೆಗಟ್ಟಲು ಸಹಕಾರಿಯೇ, ಈ ಬಗ್ಗೆ ಅಧ್ಯಯನ ಹೇಳುವುದೇನು ನೋಡಿ. (ಬರಹ: ಪ್ರೀತಿ ಮೊದಲಿಯಾರ್‌)

ಮದುವೆಗೂ ಮುನ್ನ ಒಟ್ಟಿಗೆ ವಾಸಿಸುವುದರಿಂದ ವಿಚ್ಛೇದನದ ಪ್ರಮಾಣ ಕಡಿಮೆಯಾಗುವುದೇ?
ಮದುವೆಗೂ ಮುನ್ನ ಒಟ್ಟಿಗೆ ವಾಸಿಸುವುದರಿಂದ ವಿಚ್ಛೇದನದ ಪ್ರಮಾಣ ಕಡಿಮೆಯಾಗುವುದೇ?

ಪ್ರೀತಿಸುವ ವ್ಯಕ್ತಿಯೊಂದಿಗೆ ಜಗಳ, ಮುನಿಸು, ಕೋಪ, ಮನಸ್ತಾಪಗಳು ಸಹಜ ಸಂಗತಿ. ಇದ್ಯಾವುದು ಇಲ್ಲದಿದ್ದರೆ ಜೀವನವೇ ಬೇಸರವಾಗುತ್ತದೆ. ಬದುಕಿನಲ್ಲಿ ಒಟ್ಟಾಗಿ ಬಾಳಿ ಬದುಕಿದ ಅದೆಷ್ಟೋ ದಂಪತಿಗಳು ‘ನೀವು ಹೀಗೆ ಅಂತ ಗೊತ್ತಿದ್ರೆ ನಿಮ್ಮನ್ನ ಮದುವೆನೇ ಆಗ್ತಾ ಇರ್ಲಿಲ್ಲ‘ ಎಂದು ತಮಾಷೆಗೆ ಹೇಳಿ ರೇಗಿಸಿದರೆ, ಇನ್ನೂ ಕೆಲವೊಬ್ಬರು ಈ ಚಿಕ್ಕ ಚಿಕ್ಕ ಬಿರುಕುಗಳನ್ನೇ ದೊಡ್ಡದಾಗಿಸಿಕೊಂಡು, ಪರಸ್ಪರ ಹೊಂದಾಣಿಕೆಯಾಗದೇ ಬೇಸತ್ತು ವಿಚ್ಛೇದನ ಪಡೆಯುವ ಮೂಲಕ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ.

ಆದರೆ, ತಾವು ಪ್ರೀತಿಸುತ್ತಿರುವ ಅಥವಾ ಮದುವೆಯಾಗುವ ವ್ಯಕ್ತಿಯೊಂದಿಗೆ ಯಾವುದೇ ಒಪ್ಪಂದ, ಬಂಧನಗಳಿಗೆ ಒಳಗಾಗದೆ ಸ್ವತಂತ್ರವಾಗಿ ಬಾಳಲು ಇಚ್ಛಿಸುವ ಸಾಕಷ್ಟು ಯುವ ಜನರಿಗೆ ಈ ಲಿವಿಂಗ್ ಟುಗೆದರ್ ಎನ್ನುವ ಪರಿಕಲ್ಪನೆ ತುಂಬಾ ಇಷ್ಟವಾಗುತ್ತದೆ. ತಮ್ಮ ಸಂಗಾತಿಯ ಕುರಿತು ಮತ್ತಷ್ಟು ತಿಳಿದುಕೊಳ್ಳಲು, ಹೊಂದಾಣಿಕೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ನಿಜಕ್ಕೂ ಈ ಲಿವಿಂಗ್ ಟುಗೆದರ್ ರಿಲೆಷನ್‌ಶಿಪ್ ಮೂಲಕ ವಿಚ್ಛೇದನ/ ಬಿರುಕುಗಳನ್ನು ತಪ್ಪಿಸಿ ಸಂತಸಮಯವಾದ ಜೀವನ ಸಾಗಿಸಲು ಸಾಧ್ಯವೇ?

ಲಿವಿಂಗ್ ಟುಗೆದರ್ ಕುರಿತು ಅಧ್ಯಯನಗಳು ಏನು ಹೇಳಿವೆ?

ಕೆಲವು ಅಧ್ಯಯನಗಳ ಪ್ರಕಾರ ಈ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಪಾಸಿಟಿವ್ ಅಂಶಗಳಷ್ಟೆ ನೆಗೆಟಿವ್ ಕೂಡ ಇದೆ. ಇದರಲ್ಲಿ ಪರಸ್ಪರ ಅರ್ಥೈಸಿಕೊಂಡು ಯಾವುದೇ ಭಿನ್ನಾಭಿಪ್ರಾಯ ಅಥವಾ ದುರಾಲೋಚನೆಗಳಿಲ್ಲದೇ ಒಟ್ಟಾಗಿ ಒಂದೇ ಮನೆಯಲ್ಲಿ ವಾಸಿಸುವುದಾಗಿದೆ. ಈ ಸಂಬಂಧದಲ್ಲಿ ವಿವಾಹವಾದ ನಂತರ ವಿಚ್ಛೇದನ ಪಡೆಯುವ ಸಂಖ್ಯೆ ಕಡಿಮೆಯಾದರೂ, ವಿವಾಹಕ್ಕಿಂತ ಮೊದಲೇ ಬಹಳಷ್ಟು ಸಂಬಂಧಗಳು ಬೇರೆಯಾಗಿವೆ. ಈ ನಿಟ್ಟಿನಲ್ಲಿ ಲಿವಿಂಗ್ ಟುಗೆದರ್ ಸಂಬಂಧದಲ್ಲೂ ಒಳ್ಳೆಯ ಮತ್ತು ಕೆಟ್ಟ ಅಂಶಗಳು ಎರಡೂ ಇವೆ.

ಲಿವಿಂಗ್ ಟುಗೆದರ್: ಧನಾತ್ಮಕ ಅಂಶಗಳು

1. ಪರಸ್ಪರ ಹೊಂದಾಣಿಕೆ

2. ಹಣಕಾಸು, ಭಾವನೆ, ಗೌರವ ಹೀಗೆ ಎಲ್ಲಾದರಲ್ಲೂ ತನ್ನ ಸಂಗಾತಿಯ ಇಷ್ಟ-ಕಷ್ಟಗಳು, ನಡವಳಿಕೆಗಳನ್ನು ಅರ್ಥಮಾಡಿಕೊಳ್ಳುವುದು

3. ಸಂಗಾತಿಯ ಏಕಾಂತವನ್ನು ಗೌರವಿಸುವುದು

4. ಸಂವಹನದಲ್ಲಿ ಏರ್ಪಡುವ ಏರಿಳಿತಗಳನ್ನು ಇತ್ಯರ್ಥ ಮಾಡುವುದು

5. ಯಾವುದೇ ಕಲಹಗಳನ್ನ ತಮ್ಮ ನಡುವೆಯೇ ಪರಿಹರಿಸಿಕೊಳ್ಳುವುದು

6. ಯಾರ ಬಲವಂತಕ್ಕೆ, ಸಾಮಾಜಿಕ ಮತ್ತು ಕುಟುಂಬದ ಒತ್ತಡಕ್ಕೆ ಹೆದರದೇ, ವಿಚ್ಛೇದನಗಳಿಗೆ ಆಸ್ಪಾದನೆ ನೀಡದೆ ಸ್ವತಂತ್ಯ್ರವಾಗಿ ಬದುಕು ನಡೆಸಲು ಮುಂದಾಗುತ್ತಾರೆ

ಲಿವಿಂಗ್ ಟುಗೆದರ್‌ನ ಅಪಾಯಗಳು

1. ಸಂಘರ್ಷಗಳು ಹೆಚ್ಚು

2. ಸ್ವತಂತ್ಯ್ರಕ್ಕೆ ಮಹತ್ವ ಕೊಡಲು ಹೋಗಿ ಪರಸ್ಪರ ಹೊಂದಾಣಿಕೆಯಾಗುವಲ್ಲಿ ಎಡವುವುದು

3. ಸಂವಹನದ ಕೊರತೆ ಹೆಚ್ಚಾಗಿರುತ್ತದೆ

4. ಅಹಂ ಹೆಚ್ಚಾಗಿರುತ್ತದೆ

5. ಹಣ, ಗೌರವ, ಪ್ರತಿಷ್ಠೆಗಳು ಹೆಚ್ಚಾಗಿರುತ್ತದೆ

6. ಮದುವೆಗೂ ಮುನ್ನವೇ ಸಂಬಂಧಗಳು ಬೇರ್ಪಡುವ ಸಂದರ್ಭಗಳು ಹೆಚ್ಚಾಗಿರುತ್ತದೆ. 

ಲೀವಿಂಗ್ ರಿಲೇಷನ್‌ಶಿಪ್‌ನಿಂದ ವಿಚ್ಛೇದನ ಕಡಿಮೆಯಾಗುತ್ತದೆಯೇ?

ಲೀವಿಂಗ್ ರಿಲೇಷನ್‌ಶಿಪ್‌ನಿಂದ ವಿಚ್ಛೇದನ ಕಡಿಮೆಯಾಗಬಹುದೇ ಹೆಚ್ಚಬಹುದೇ ಎಂಬ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಅಧ್ಯಯನಗಳು ಮದುವೆಗೆ ಮೊದಲು ಒಟ್ಟಿಗೆ ವಾಸಿಸುವ ದಂಪತಿಗಳು ಹೆಚ್ಚಿನ ತೃಪ್ತಿ, ತಿಳುವಳಿಕೆ ಮತ್ತು ಸ್ಥಿರತೆಯನ್ನು ಹೊಂದಿರುತ್ತಾರೆ. ಇದರಿಂದ ವಿಚ್ಛೇದನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಹೆಚ್ಚು ವರದಿ ಮಾಡುತ್ತವೆ. ಆದರೆ ಕೆಲವು ಅಧ್ಯಯನಗಳ ಪ್ರಕಾರ ಲೀವಿಂಗ್ ಟುಗೇದರ್ ಎನ್ನುವುದು ಇದು ದೀರ್ಘಕಾಲ ಮುಂದುವರಿದರೆ ಸಂಬಂಧದಲ್ಲಿ ಬೇಸರ ಮೂಡಲು ಕಾರಣವಾಗುತ್ತದೆ. ಅಂತಹ ಸಂದರ್ಭದಲ್ಲಿ ಸಂಗಾತಿಗಳು ಹೊಂದಾಣಿಕೆಗಿಂತ ತನ್ನ ಅನುಕೂಲದ ಕಾರಣಕ್ಕಾಗಿ ಮದುವೆ ಎಂಬ ಬಂಧನಕ್ಕೆ ಕಟ್ಟು ಬೀಳುತ್ತಾರೆ. ಅದು ಮದುವೆ ಬೇಗ ಮುರಿದು ಬೀಳಲು ಕಾರಣವಾಗುತ್ತದೆ ಎಂದು ಹೇಳುತ್ತವೆ. ವಿಚ್ಛೇದನ ತಡೆಯಲು ಮದುವೆಗಿಂತ ಮೊದಲು ಒಟ್ಟಿಗೆ ವಾಸಿಸುವುದು ಅಂದರೆ ಲೀವಿಂಗ್ ರಿಲೇಷನ್‌ಶಿಪ್‌ ಒಂದೇ ಪರಿಹಾರವಲ್ಲ. ಆದರೆ ಇದು ಸಂಗಾತಿಗಳು ಪರಸ್ಪರರ ಅಭ್ಯಾಸಗಳನ್ನು ತಿಳಿಯಲು, ಹೊಂದಾಣಿಕೆ ಮಾಡಿಕೊಳ್ಳಲು ಮತ್ತು ಸಂಘರ್ಷಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಲೀವ್‌ ಇನ್ ಸಂಬಂಧ ಒಬ್ಬರನ್ನೊಬ್ಬರ ಪರಸ್ಪರ ಆಳವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಸಂಬಂಧದಲ್ಲಿ ಮುಂದುವರಿಯಬೇಕೇ ಬೇಡವೇ ಎಂಬುದು ಸ್ಪಷ್ಟವಾಗುತ್ತದೆ.

ಸಂಸ್ಕೃತಿಯ ಬೀಡಾಗಿರುವ ಭಾರತದಲ್ಲಿ ಲಿವಿಂಗ್ ಟುಗೆದರ್ ಪರಿಕಲ್ಪನೆಯ ಕುರಿತು ವಿರೋಧಗಳು ಹೆಚ್ಚಾಗಿದ್ದರೂ, ನಗರ ಪ್ರದೇಶಗಳಲ್ಲಿ ಈ ಸಂಬಂಧಗಳನ್ನು ನಾವು ಕಾಣಬಹುದು. ಮದುವೆಗೂ ಮೊದಲೇ ಒಟ್ಟಿಗೆ ಬಾಳುವ ಜೋಡಿಯನ್ನು ನೋಡುವ ರೀತಿಯೇ ಬೇರೆ. ಅದೇನೇ ಆದರೂ, ನಮ್ಮ ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ತಮ್ಮ ಸಂಗಾತಿಯನ್ನು ಆಯ್ದುಕೊಳ್ಳುವ ಸಂಪೂರ್ಣ ಹಕ್ಕು ಇದೆ. ಹಾಗೆಯೇ ಅವರೊಂದಿಗೆ ಮದುವೆಗೂ ಮೊದಲೇ ಅವರೊಂದಿಗೆ ಬದುಕುವ ಆಯ್ಕೆಯು ಅವರಿಗೆ ಬಿಟ್ಟದ್ದು.

Whats_app_banner