Relationship: ಹಿರಿಯರ ಕಾಳಜಿಯ ಮೇಲೂ ಇರಲಿ ನಿಗಾ; ವಯಸ್ಸಾದವರನ್ನು ನೋಡಿಕೊಳ್ಳಲು ಹಿಂದೇಟು ಹಾಕದಿರಿ
Taking Care of Parents After 60: 60 ನಂತರ ಪೋಷಕರು ಮಕ್ಕಳಂತಾಗುತ್ತಾರೆ. ಅವರಿಗೆ ಮಕ್ಕಳಂತೆ ಕಾಳಜಿ ಮಾಡಬೇಕು. ಆದರೆ ವೃತ್ತಿ, ಸಂಸಾರ, ಉದ್ಯಮದ ನಡುವೆ ಮಕ್ಕಳು ಪೋಷಕರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ಪೋಷಕರು ಅನಾಥರಾಗುತ್ತಿದ್ದಾರೆ. ಆದರೆ ಪೋಷಕರನ್ನು ಕಾಳಜಿ ಮಾಡುವುದು ಬಹಳ ಅವಶ್ಯ. 60 ನಂತರ ಹೀಗಿರಲಿ ಪೋಷಕರ ಕಾಳಜಿ.
ʼನನಗೆ ಏನು ಮಾಡುವುದು ತಿಳಿಯುತ್ತಿಲ್ಲ. ಆದರೂ ವಯಸ್ಸಾದ ಅಪ್ಪ, ಅಮ್ಮನನ್ನು ಬಿಟ್ಟು ಬೇರೆ ಊರಿಗೆ ಬರುವ ಮನಸ್ಸಿಲ್ಲ. ಲಕ್ಷ ಸಂಪಾದನೆಗಿಂತ ವಯಸ್ಸಾದವರ ಜೊತೆಯೇ ಇದ್ದು ಸಾವಿರ ಸಂಪಾದಿಸಿ ಅದರಲ್ಲೇ ಬದುಕೋಣ ಅನಿಸುತ್ತಿದೆʼ ಇದು ಯೋಗೀಶ್ ಎಂಬುವರ ಗೊಂದಲದ ಹೇಳಿಕೆ.
ಇದು ಎಂಜಿನಿಯರ್, ಡಾಕ್ಟರ್ ಅಥವಾ ಯಾವುದೇ ಉನ್ನತ ಹುದ್ದೆಯಲ್ಲಿ ಇಲ್ಲದ ಸಾಮಾನ್ಯ ತರುಣನೊಬ್ಬನ ಪ್ರಸ್ತುತದ ಸಮಸ್ಯೆ. ಅಪ್ಪ, ಅಮ್ಮನ ವಯಸ್ಸು 60 ದಾಟುತ್ತಿದ್ದಂತೆ ತಮ್ಮ ಮಕ್ಕಳನ್ನೇ ತಂದೆ, ತಾಯಿಯಾಗಿ ಕಾಣುತ್ತಿದ್ದಾರೆ ಇಂದಿನ ಪೋಷಕರು. ಇದಕ್ಕೆ ತಕ್ಕಂತೆ ಮಕ್ಕಳು ಪೋಷಕರಿಗೆ ಆಸರೆಯಾಗುತ್ತಿರುವುದನ್ನೂ ಕಾಣಬಹುದಾಗಿದೆ.
ಇತ್ತೀಚೆಗೆ ವೃತ್ತಿಯ ಸಲುವಾಗಿ ಮಕ್ಕಳು ಬೆಂಗಳೂರು ಸೇರಿದಂತೆ ಮಹಾನಗರಗಳಿಗೆ ತೆರಳುತ್ತಿರುವುದು ಸಾಮಾನ್ಯವಾಗಿದೆ. ಪ್ರತಿ ಮನೆಯಲ್ಲೂ ಮಕ್ಕಳು ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ಕುಟುಂಬದಲ್ಲಿ ಕೇವಲ ವಯಸ್ಸಾದ ಪೋಷಕರಷ್ಟೇ ಉಳಿಯುತ್ತಿದ್ದಾರೆ. ಆದರೆ, ಇಲ್ಲಿ ನಿಜವಾದ ಸಮಸ್ಯೆ ಹುಟ್ಟುತ್ತಿದೆ. ವಯಸ್ಸಾದ ಪೋಷಕರಿಗೆ ಬೇಕಾಗಿರುವ ಆಸರೆ, ಜೊತೆ ನೇಪಥ್ಯಕ್ಕೆ ಸರಿಯುತ್ತಿದೆ.
ಯೋಗೀಶ್ ಚಿಕ್ಕದಾದ ಊರನಲ್ಲಿ ಸಣ್ಣ ಬ್ಯುಸಿನೆಸ್ ಮಾಡುತ್ತಿದ್ದಾರೆ. ಕಳೆದ ವರ್ಷವಷ್ಟೇ ಅವರ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಅಪ್ಪನಿಗೀಗ ಯೋಗೀಶ್ ಒಬ್ಬರೇ ಆಧಾರ. ಆದರೆ, ಯೋಗೀಶ್‌ಗೆ ಮಹಾನಗರದಲ್ಲಿ ಉದ್ಯೋಗ ಮಾಡಿ ಬದುಕಿನಲ್ಲಿ ಸೆಟಲ್ ಆಗುವ ಯೋಚನೆ. ಆದರೆ, ತಂದೆಯನ್ನು ಬಿಟ್ಟು ಹೋಗುವುದು ಹೇಗೆ ಎಂಬುದು ಚಿಂತೆ. ಇನ್ನೂ ಆತನ ತಂದೆ ಮನೆ ಮತ್ತು ಊರನ್ನು ಬಿಟ್ಟು ಎಲ್ಲಿಗೂ ಬರಲು ಸಿದ್ಧವಿಲ್ಲ. ಹೀಗಾಗಿ, ಯೋಗೀಶ್ ಗೊಂದಲಕ್ಕೀಡಾಗಿದ್ದರು. ತುಂಬಾ ಯೋಚನೆ ಮಾಡಿ ಕೊನೆಗೂ ಒಂದು ನಿರ್ಧಾರಕ್ಕೆ ಬಂದ ಯೋಗೀಶ್, ಅಪ್ಪನೊಂದಿಗೆ ಊರಲ್ಲೇ ಉಳಿದು ಲಕ್ಷ ಸಂಪಾದಿಸುವ ಆಸೆಯನ್ನು ಕೈಬಿಟ್ಟರು.
ಹೌದು, ಇದು ಒಬ್ಬರೇ ಮಕ್ಕಳಿರುವವರ ಕಥೆಯಾಗಿದೆ. ಕೆಲವೊಮ್ಮೆ ಭಾವನಾತ್ಮಕ ಸಮಸ್ಯೆಗಳಿಗೆ ಸಿಲುಕುವ ಮಕ್ಕಳು ತಮ್ಮ ಭವಿಷ್ಯವನ್ನು ಕಟ್ಟಿ ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ.
ವಯಸ್ಸಾದವರು ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶೇ 90 ರಷ್ಟು ಆರೈಕೆಯನ್ನು ಕುಟುಂಬದವರಿಂದ ಬಯಸುತ್ತಾರೆ. ಸಂಬಂಧಿಕರು, ಸ್ನೇಹಿತರು ಹಾಗೂ ನೆರೆಹೊರೆಯವರಿಂದ ಮಾನಸಿಕ ಉಲ್ಲಾಸಕ್ಕೆ ಬಯಸುತ್ತಾರೆ ಎಂಬುದು ಸಂಶೋಧನೆ.
ವಯಸ್ಸಾದವರಿಗೆ ಮಕ್ಕಳ ಆಸರೆ ಹೀಗಿರಲಿ
* ವಯಸ್ಸಾದವರನ್ನು ಮಕ್ಕಳಂತೆ ನೋಡಿಕೊಳ್ಳುವುದು ಮುಖ್ಯ. ಗಂಟೆಗೆ ಸರಿಯಾಗಿ ಅವರಿಗೆ ಊಟ ನೀಡುವುದು, ಅವರ ಬೇಕು, ಬೇಡಗಳನ್ನು ಕೇಳಬೇಕು ಎಂದು ಹಿರಿಯರು ಬಯಸುತ್ತಾರೆ.
* ಪ್ರತಿ ದಿನ ಮಕ್ಕಳು ಅವರ ಆರೋಗ್ಯ ವಿಚಾರಿಸುವುದು, ಅವರಿಗೆ ಬೇಕಾದ ವಸ್ತುಗಳನ್ನು ತಂದುಕೊಡುವುದು.
* ಆರೋಗ್ಯದ ಸಮಸ್ಯೆಗಳಿದ್ದರೆ ನಿಯಮಿತವಾಗಿ ವೈದ್ಯರ ಬಳಿ ಕರೆದುಕೊಂಡು ಹೋಗುವುದು, ಔಷಧಿಗಳನ್ನು ಕೊಡಿಸುವುದನ್ನು ಮಾಡಬೇಕು.
* ದಿನ ಕಳೆಯಲು ಜೊತೆಗಾರರೊಂದಿಗೆ ಇರಲು ಬಿಡುವುದು. ಸುತ್ತಮುತ್ತಲಿನ ಪಾರ್ಕ್‌ಗಳಲ್ಲಿ ವಯಸ್ಸಾದವರು ಒಟ್ಟಿಗೆ ಸೇರಿ ಮಾತನಾಡುವುದು, ವ್ಯಾಯಾಮ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಹೀಗಾಗಿ, ಅವರಿಗೆ ಓಡಾಡಲು ಹೆಚ್ಚು ಪ್ರೇರೇಪಿಸಬೇಕು.
* ಹೊಸ ಕೌಶಲಗಳನ್ನು ಕಲಿಯಲು ತಾಂತ್ರಿಕ ನೆರವು, ಕೌನ್ಸಿಲಿಂಗ್ ಸೇವೆಗಳು ಮತ್ತು ಕುಟುಂಬ ಮಾನಸಿಕ ಆರೋಗ್ಯ ಸೇವೆಗಳ ಬಗ್ಗೆ ಅರಿವು ಮೂಡಿಸುವುದು. ಮೊಬೈಲ್‌ನಲ್ಲಿ ಹೊಸ ಫೀಚರ್‌ಗಳನ್ನು ಬಳಸುವುದು, ಸ್ನೇಹಿತರೊಂದಿಗೆ ವಿಡಿಯೋ ಕಾಲ್ ಮಾಡುವುದು, ಯೂಟ್ಯೂಬ್ ನೋಡುವುದನ್ನು ಹೇಳಿಕೊಡಬೇಕು. ಇದರಿಂದ ಅವರಿಗೆ ಸಮಯ ಕಳೆಯುತ್ತದೆ.
* ಮನರಂಜನೆ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವುದು. ಇದರಿಂದ ಸ್ವಲ್ಪ ಮಟ್ಟಿಗೆ ಬದಲಾವಣೆ ಕಾಣುತ್ತಾರೆ. ಒಂದೇ ಕಡೇ ಇದ್ದು ಬೇಜಾರಾಗಿರುವಾಗ ಹೀಗೆ ಹೊರಗೆ ಹೋಗುವುದು, ಸಿನಿಮಾ ನೋಡುವುದು ಮತ್ತು ಸ್ಥಳಗಳಿಗೆ ಭೇಟಿ ನೀಡಿದರೆ ಮನಸ್ಸಿಗೆ ಉಲ್ಲಾಸವಾಗಲಿದೆ.
* ಮೊಮ್ಮಕ್ಕಳನ್ನು ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಿಡಬೇಕು. ಇದರಿಂದ ಮಕ್ಕಳು ಕೂಡ ಹೆಚ್ಚು ಹೊಂದುಕೊಳ್ಳುವ ಗುಣವನ್ನು ಬೆಳೆಸಿಕೊಳ್ಳುತ್ತಾರೆ. ಮಕ್ಕಳನ್ನು ಹಿರಿಯರು ನೋಡಿಕೊಂಡು ಅವರಿಗೆ ಕಥೆ ಹಾಗೂ ತಮ್ಮ ಅನುಭವಗಳನ್ನು ಹೇಳುವುದರಿಂದ ಮಕ್ಕಳಿಗೆ ಸಮಯ ಕಳೆಯುತ್ತದೆ.
* ಹಿರಿಯರೊಂದಿಗೆ ಕುಳಿತು ಮನೆಯ ಎಲ್ಲಾ ಸದಸ್ಯರು ಒಟ್ಟಿಗೆ ಊಟ ಮಾಡುವುದು. ಮೊದಲೆಲ್ಲಾ ಮನೆಯವರೆಲ್ಲಾ ಮನೆ ಸೇರುವ ತನಕ ಯಾರೊಬ್ಬರೂ ಊಟ ಮಾಡುತ್ತಿರಲಿಲ್ಲ. ಆದರೀಗ ಒಬ್ಬೊಬ್ಬರಿಗೆ ಒಂದು ಸಮಯದಲ್ಲಿ ಕೆಲಸ. ಹೀಗಾಗಿ, ಜೊತೆಯಲ್ಲಿ ಕುಳಿತು ಊಟ ಮಾಡುವುದು ಕಡಿಮೆಯಾಗುತ್ತಿದೆ. ಆದರೂ ಸಮಯ ಮಾಡಿಕೊಂಡು ಒಟ್ಟಾಗಿ ಊಟ ಮಾಡಿದರೆ ವಯಸ್ಸಾದವರ ಮನಸ್ಸಿಗೂ ಹಿತ.