Relationship: ಹೆಣ್ಮಕ್ಳೇ, ಮದುವೆ ನಂತರ ಈ ತಪ್ಪುಗಳನ್ನು ಮಾಡದಿರಿ; ನಿಮ್ಮ ಸಂಬಂಧ ಬೇಗ ಹಳಸಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಹೆಣ್ಮಕ್ಳೇ, ಮದುವೆ ನಂತರ ಈ ತಪ್ಪುಗಳನ್ನು ಮಾಡದಿರಿ; ನಿಮ್ಮ ಸಂಬಂಧ ಬೇಗ ಹಳಸಬಹುದು

Relationship: ಹೆಣ್ಮಕ್ಳೇ, ಮದುವೆ ನಂತರ ಈ ತಪ್ಪುಗಳನ್ನು ಮಾಡದಿರಿ; ನಿಮ್ಮ ಸಂಬಂಧ ಬೇಗ ಹಳಸಬಹುದು

Relationship: ಎಷ್ಟೋ ವೈವಾಹಿಕ ಸಂಬಂಧಗಳು ಪುರುಷರಿಂದ ಹಾಳಾಗಿದೆ. ಮತ್ತೊಂದೆಡೆ ಮಹಿಳೆಯರು ಕೂಡಾ ಕಾರಣರಾಗುತ್ತಾರೆ. ಮಹಿಳೆಯರು ಮದುವೆ ನಂತರ ಕೆಲವೊಂದು ತಪ್ಪುಗಳನ್ನು ಸರಿಪಡಿಸಿಕೊಂಡರೆ ನಿಮ್ಮ ವೈವಾಹಿಕ ಜೀವನ ಸದಾ ಕಾಲ ಚೆನ್ನಾಗಿರುತ್ತದೆ.

 
ಮದುವೆ ನಂತರ ಮಹಿಳೆಯರು ಮಾಡುವ ಸಾಮಾನ್ಯ ತಪ್ಪುಗಳು
ಮದುವೆ ನಂತರ ಮಹಿಳೆಯರು ಮಾಡುವ ಸಾಮಾನ್ಯ ತಪ್ಪುಗಳು (PC: Unsplash)

Relationship: ಮದುವೆಗೂ ಮುನ್ನ ಸಂಗಾತಿಯೊಂದಿಗೆ ಇಷ್ಟ ಕಷ್ಟಗಳನ್ನು ಹಂಚಿಕೊಳ್ಳುವ ಎಷ್ಟೋ ಜನರ ಜೀವನ ಮದುವೆ ನಂತರ ಬದಲಾಗುತ್ತದೆ. ಇದಕ್ಕೆ ನಾನಾ ಕಾರಣಗಳಿರಬಹುದು. ಒಂದೇ ಒಂದು ಸಣ್ಣ ಬಿರುಕು ಜೀವನದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಿಮಿಸಬಹುದು. ಹಾಗಂತ ವೈವಾಹಿಕ ಜೀವನದಲ್ಲಿ ಪುರುಷರಷ್ಟೇ ತಪ್ಪು ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ.

ಮಹಿಳೆಯರು ಕೂಡಾ ಮದುವೆ ನಂತರ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಆದ್ದರಿಂದ ಈ ವಿಚಾರಗಳನ್ನು ನೀವು ಗಮನದಲ್ಲಿಡಬೇಕು.

ಸ್ವಯಂ ಕಾಳಜಿ ನಿರ್ಲಕ್ಷ್ಯ ಮಾಡುವುದು

ಕೆಲವು ಮಹಿಳೆಯರು ಮಾಡುವ ದೊಡ್ಡ ತಪ್ಪು ಎಂದರೆ ತಮ್ಮ ಸ್ವಂತ ಯೋಗಕ್ಷೇಮಕ್ಕಿಂತ ಹೆಂಡತಿಯರು ಮತ್ತು ತಾಯಂದಿರ ಸ್ಥಾನಕ್ಕೆ ಆದ್ಯತೆ ನೀಡುವುದು. ಕುಟುಂಬವು ನಿಮ್ಮ ಮೊದಲ ಆದ್ಯತೆ ಆಗಿದ್ದರೂ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸುವುದು ಬಹಳ ಅಗತ್ಯ. ವೈಯಕ್ತಿಕ ಆಸಕ್ತಿಗಳು, ಗುರಿಗಳು ಅಥವಾ ನಿಮ್ಮನ್ನು ನೀವು ಆರೈಕೆ ಮಾಡಿಕೊಳ್ಳುವುದನ್ನು ನಿರ್ಲಕ್ಷಿಸುವುದು ದಾಂಪತ್ಯದಲ್ಲಿ ಒಟ್ಟಾರೆ ತೃಪ್ತಿಯನ್ನು ಕುಗ್ಗಿಸಬಹುದು. ಆದ್ದರಿಂದ ನಿಮ್ಮ ಕುಟುಂಬದ ಕೆಲಸದಗಳೊಂದಿಗೆ ನಿಮ್ಮ ವೈಯಕ್ತಿಕ ಕಾಳಜಿಗೂ ಆದ್ಯತೆ ನೀಡಿ.

ಪತಿಯೊಡನೆ ಮುಕ್ತವಾಗಿ ಚರ್ಚಿಸದೆ ಇರುವುದು

ಮದುವೆ ನಂತರ ಹೆಣ್ಣು ಮಕ್ಕಳಿಗೆ ಸಾಕಷ್ಟು ಆಸೆ, ನಿರೀಕ್ಷೆಗಳು ಇರುತ್ತವೆ. ನಿಮ್ಮ ಮನಸ್ಸಿನಲ್ಲಿ ಏನೇ ಇದ್ದರೂ ಅದನ್ನು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಚರ್ಚಿಸಿ. ಆದರೆ ನೀವು ನಿಮ್ಮ ಪತಿಯೊಂದಿಗೆ ಏನೂ ಸಂವಹನ ನಡೆಸದೆ ನಿಮ್ಮ ಮನಸ್ಸಿನ ಭಾವನೆಗಳನ್ನು, ಇಷ್ಟ ಕಷ್ಟಗಳನ್ನು ಆತ ಅರ್ಥ ಮಾಡಿಕೊಳ್ಳಬೇಕೆಂದು ಬಯಸಬೇಡಿ. ಮತ್ತೊಬ್ಬರ ಮನಸ್ಸನ್ನು ಓದುವುದು ಯಾರಿಗೂ ಅಷ್ಟು ಸುಲಭದ ಮಾತಲ್ಲ, ಈ ರೀತಿ ಮಾಡುವುದು ಅನಗತ್ಯ ಒತ್ತಡ ಉಂಟುಮಾಡಬಹುದು. ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಮನಸ್ತಾಪಕ್ಕೆ ಕಾರಣವಾಗಬಹುದು. ಆದ್ದರಿಂದ ಮುಕ್ತ ಮತ್ತು ಪ್ರಾಮಾಣಿಕ ಸಂವಹನವು ನಿಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯಕ್ಕೆ ಕಾರಣಾಗಬಹುದು.

ಅನ್ಯೋನ್ಯತೆಗೆ ಪ್ರಾಮುಖ್ಯತೆ ಕೊಡದೆ ಇರುವುದು

ಯಾವುದೇ ಸಂಬಂಧದಲ್ಲಿ ಅನ್ಯೋನತೆ ಇರಬೇಕು. ಕೆಲವು ಮಹಿಳೆಯರು ತಮ್ಮ ದಾಂಪತ್ಯದಲ್ಲಿ ಅನ್ಯೋನ್ಯತೆಯ ಪ್ರಾಮುಖ್ಯತೆಯನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬಹುದು. ನಿಯಮಿತ ಸಂವಹನ, ಸಂಗಾತಿ ಜೊತೆಗೆ ಹಂಚಿಕೊಂಡು ಮಾಡುವ ಕೆಲಸಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವುದು ನೀವು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಉತ್ತಮ ಅವಕಾಶವಾಗಿದೆ. ಆದ್ದರಿಂದ ಈ ಅಂಶಗಳನ್ನು ಕಡೆಗಣಿಸದೆ ನಿಮ್ಮ ನಡುವಿನ ಸಂಬಂಧವನ್ನು ಇನ್ನಷ್ಟು ಬಲಗೊಳಿಸಿ.

ಸಂಗಾತಿ ನಿಮ್ಮ ಆಸೆ ಪೂರೈಸುವ ಯಂತ್ರವಲ್ಲ

ಎಲ್ಲರಿಗೂ ಆಸೆಗಳಿರುತ್ತವೆ. ಆದರೆ ನಿಮ್ಮ ಸಂಗಾತಿಯು ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸಬೇಕು ಎಂಬ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಬಹಳ ತಪ್ಪು. ಜೀವನ ಸಂಗಾತಿ ಎಂದರೆ ನಿಮ್ಮ ಕಷ್ಟಗಳಲ್ಲಿ ಮಾತ್ರವಲ್ಲ, ನಿಮ್ಮ ಸಂತೋಷದಲ್ಲೂ ಭಾಗಿಯಾಗುವ ವ್ಯಕ್ತಿ. ನಿಮ್ಮ ಪತಿಯನ್ನು ನಿಮ್ಮ ಬಯಕೆಗಳನ್ನು ಈಡೇರಿಸುವ ಯಂತ್ರ ಎಂಬ ಭಾವನೆಯನ್ನು ಮನಸ್ಸಿನಿಂದ ತೆಗೆದುಹಾಕಿ. ಮದುವೆ ನಂತರ ನಿಮ್ಮ ಪತಿಗೆ ಅವರದ್ದೇ ಆದ ಜವಾಬ್ದಾರಿ ಇರುತ್ತದೆ. ಸಾಧ್ಯವಾದರೆ ಅವರ ಜವಾಬ್ದಾರಿ, ಭವಿಷ್ಯದ ಯೋಜನೆಗಳಿಗೆ ಬೆನ್ನುಲುಬಾಗಿ.

ಅನಾವಶ್ಯಕ ಜಗಳ ತಪ್ಪಿಸಿ

ಪ್ರತಿಯೊಂದು ಸಂಬಂಧದಲ್ಲೂ ಜಗಳ, ಮುನಿಸು, ಮನಸ್ತಾಪ ಇದ್ದೇ ಇರುತ್ತದೆ. ಪತಿ-ಪತ್ನಿ ನಡುವೆ ಕೂಡಾ ಜಗಳ ಸಾಮಾನ್ಯ. ಆದರೆ ಜಗಳದ ನಂತರ ಪರಿಹಾರ ಕಂಡುಹಿಡಿಯುವ ಬದಲಿಗೆ ಜಗಳ ಬಾರದಂತೆ ತಡೆಯುವುದೇ ಉತ್ತಮ. ಒಂದು ವೇಳೆ ನಿಮ್ಮಿಂದಲೇ ತಪ್ಪಾಗಿದ್ದರೆ ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ , ಕ್ಷಮೆ ಕೇಳಿ. ನಿಮ್ಮ ಪ್ರಾಮಾಣಿಕತೆ ಖಂಡಿತ ನಿಮ್ಮ ಸಂಗಾತಿಗೆ ಇಷ್ಟವಾಗುತ್ತದೆ. ಇದರಿಂದ ಅವರಿಗೆ ನಿಮ್ಮ ಮೇಲೆ ಇನ್ನಷ್ಟು ನಂಬಿಕೆ ಹುಟ್ಟಿಸುತ್ತದೆ. ಆದರೆ ಒಮ್ಮೆ ಸಂಬಂಧದಲ್ಲಿ ದೊಡ್ಡ ಬಿರುಕು ಉಂಟಾದರೆ ಅದನ್ನು ಜೋಡಿಸುವುದು ಬಹಳ ಕಷ್ಟ.

Whats_app_banner