Marriage Mistakes: ವೈವಾಹಿಕ ಜೀವನದಲ್ಲಿ ಸದಾ ಖುಷಿಯಾಗಿರಬೇಕು ಅಂದ್ರೆ ಈ 7 ತಪ್ಪುಗಳನ್ನು ಮಾಡಲೇಬೇಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Marriage Mistakes: ವೈವಾಹಿಕ ಜೀವನದಲ್ಲಿ ಸದಾ ಖುಷಿಯಾಗಿರಬೇಕು ಅಂದ್ರೆ ಈ 7 ತಪ್ಪುಗಳನ್ನು ಮಾಡಲೇಬೇಡಿ

Marriage Mistakes: ವೈವಾಹಿಕ ಜೀವನದಲ್ಲಿ ಸದಾ ಖುಷಿಯಾಗಿರಬೇಕು ಅಂದ್ರೆ ಈ 7 ತಪ್ಪುಗಳನ್ನು ಮಾಡಲೇಬೇಡಿ

ಮದುವೆ ಎನ್ನುವ ಸುಂದರ ಸಂಬಂಧದ ಕೊಂಡಿ ಬಲವಾಗಿರಬೇಕು ಎಂದರೆ ಕೆಲವು ಅಂಶಗಳ ಮೇಲೆ ಗಮನ ಹರಿಸಬೇಕು. ವೈವಾಹಿಕ ಜೀವನದಲ್ಲಿ ಸದಾ ಸಂತೋಷ, ನೆಮ್ಮದಿ, ಖುಷಿ ಇರಬೇಕು ಅಂದ್ರೆ ಈ 7 ತಪ್ಪುಗಳನ್ನು ಎಂದಿಗೂ ಮಾಡಬಾರದು. (ಬರಹ: ಪ್ರೀತಿ ಮೊದಲಿಯಾರ್‌)

ವೈವಾಹಿಕ ಜೀವನದಲ್ಲಿ ಸದಾ ಖುಷಿಯಾಗಿರಬೇಕು ಅಂದ್ರೆ ಈ 7 ತಪ್ಪುಗಳನ್ನು ಮಾಡಲೇಬೇಡಿ
ವೈವಾಹಿಕ ಜೀವನದಲ್ಲಿ ಸದಾ ಖುಷಿಯಾಗಿರಬೇಕು ಅಂದ್ರೆ ಈ 7 ತಪ್ಪುಗಳನ್ನು ಮಾಡಲೇಬೇಡಿ (PC: Canva)

ವೈವಾಹಿಕ ಜೀವನವೆಂದರೆ ಎರಡು ಜೀವಗಳನ್ನು ಬೆಸೆಯುವ ಪವಿತ್ರ ಬಂಧ. ಇದು ಮನಸ್ಸನ್ನು ಮಾತ್ರವಲ್ಲ, ಎರಡು ಕುಟುಂಬಗಳನ್ನು ಬೆಸೆಯುತ್ತದೆ. ಮದುವೆ ಎಂಬುದು ಜೀವನಪೂರ್ತಿ ಜೊತೆಯಾಗಿ ಸಾಗುವ ಪಯಣ. ಆದರೆ ಸಾಮಾನ್ಯವಾಗಿ ಮದುವೆಯಾದ ಹೊಸತರಲ್ಲಿ ಇದ್ದ ಹೊಂದಾಣಿಕೆ, ಖುಷಿ, ಆಕರ್ಷಣೆ ನಂತರದ ದಿನಗಳಲ್ಲಿ ಇರುವುದಿಲ್ಲ. ದಾಂಪತ್ಯದಲ್ಲಿ ಉಂಟಾಗುವ ವೈಮನಸ್ಸು ದಂಪತಿಗಳ ಮೇಲೆ ಮಾತ್ರವಲ್ಲ ಎರಡು ಕುಟುಂಬಗಳ ಮೇಲೂ ಪರಿಣಾಮ ಬೀರುತ್ತದೆ.

ಹಾಗಂತ ವೈವಾಹಿಕ ಜೀವನದಲ್ಲಿ ಸದಾ ಖುಷಿಯಿಂದ ಇರಲು ಸಾಧ್ಯವೇ ಇಲ್ಲ ಅಂತಲ್ಲ. ಅದಕ್ಕಾಗಿ ಕೆಲವು ಸೂತ್ರಗಳನ್ನು ಅನುಸರಿಸಬೇಕು. ವೈವಾಹಿಕ ಜೀವನದಲ್ಲಿ ಸದಾ ಖುಷಿ ಇರಬೇಕು ಅಂದ್ರೆ ಈ ಕೆಲವು ತಪ್ಪುಗಳನ್ನು ಎಂದಿಗೂ ಮಾಡಬಾರದು.

ಕೇವಲ ದಂಪತಿಗಳಾಗದೆ, ಸ್ನೇಹಿತರಾಗಿರಿ

ಮದುವೆ ಎಂದರೆ ಗಂಡ –ಹೆಂಡತಿಯ ಸಂಬಂಧವಲ್ಲ ಅಥವಾ ಪ್ರಣಯದಿಂದ ತುಂಬಿದ ಜೀವನಕ್ಕೆ ಸೀಮಿತವಾಗಿರುವುದಿಲ್ಲ. ಗಂಡ-ಹೆಂಡತಿ ಎಂದರೆ ‘ದಿ ಬೆಸ್ಟ್ ಫ್ರೆಂಡ್ಸ್‘ ಕೂಡ ಆಗಿರುತ್ತಾರೆ. ತಮ್ಮೊಳಗೆ ಅಡಗಿರುವ ಚಿಕ್ಕ ಮಕ್ಕಳ ಮನಸ್ಸು, ಮುಕ್ತ ನಗು, ಕಾಮಿಡಿ ಹೀಗೆ ಎಲ್ಲಾ ರೀತಿಯ ಭಾವನೆಗಳನ್ನು ಒಬ್ಬರಿಗೊಬ್ಬರು ಅರಿತುಕೊಂಡು ಒಗ್ಗಟ್ಟಾಗಿ ಬಾಳುವುದಾಗಿದೆ. ಪ್ರೀತಿಯನ್ನೂ ಮೀರಿದ ಸ್ನೇಹ ಸಂಬಂಧ ಇದ್ದಾಗಲೇ ಮದುವೆಯ ಸಂಬಂಧ ಚೆನ್ನಾಗಿರಲು ಸಾಧ್ಯ.

ವಯಸ್ಸು ಅಥವಾ ಸಾಮಾಜಿಕ ಒತ್ತಡದಿಂದ ಮದುವೆಯಾಗಬೇಡಿ

ಹೌದು, ನಿಮಗೆ ವಯಸ್ಸಾಗಿದೆ ಎಂದೋ ಅಥವಾ ಕುಟುಂಬ, ಸ್ನೇಹಿತರ ಒತ್ತಡಗಳಿಗೆ ಮಣಿದೋ ಮದುವೆಯಾದರೆ ಮುಂದೊಂದು ದಿನ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆಗಳು ಎದುರಾಗುತ್ತವೆ. ಮದುವೆ ಎಂದರೆ ಅದೊಂದು ಸುಂದರ ಅನುಭವ. ಪ್ರೀತಿ, ಪ್ರಣಯ, ಅನುಭೂತಿಯಿಂದ ಕೂಡಿದ ವೈವಾಹಿಕ ಬದುಕು ಹೆಚ್ಚು ಸಂತಸವಾಗಿರುತ್ತದೆ.

ಅತಿಯಾದ ಪೊಸೆಸಿವ್‌ನೆಸ್ ಒಳ್ಳೆಯದಲ್ಲ

ಮದುವೆಯಾದ ನಂತರ ತೋರುವ ಅತಿಯಾದ ಪೊಸೆಸಿವ್‌ನೆಸ್ ಸಂಗಾತಿಯನ್ನು ಉಸಿರುಗಟ್ಟಿಸಬಹುದು. ನಂಬಿಕೆ ಮತ್ತು ಸ್ವಾತಂತ್ಯ್ರ ಜೀವನದ ಪ್ರಮುಖ ಅಂಶಗಳಾಗಿರುವ ಕಾರಣ ಅದನ್ನು ಮುಕ್ತವಾಗಿ ನೀಡಿ. ಒಬ್ಬರಿಗೊಬ್ಬರು ಅನುಸರಿಸಿಕೊಂಡು ಬೆಳೆಯಲು ಅವಕಾಶ ಮಾಡಿಕೊಡಿ.

ಸಂಗಾತಿಯನ್ನು ಗೌರವಿಸಿ

ವೈವಾಹಿಕ ಜೀವನ ಚೆನ್ನಾಗಿರಬೇಕೆಂದರೆ ಸಂಗಾತಿಯನ್ನು ಗೌರವಿಸುವುದು ಮತ್ತು ಅವರಿಗೆ ಪ್ರಾಮುಖ್ಯತೆ ನೀಡುವುದು ತುಂಬ ಮುಖ್ಯ. ಇದರಿಂದ ನಿಮ್ಮ ಸಂಬಂಧ ಬಲಗೊಳ್ಳುತ್ತದೆ. ಇದರಿಂದ ಸಮಾಜದಲ್ಲೆಡೆ ನೀವು ಕೂಡ ಗೌರವವನ್ನು ಸಂಪಾದಿಸುತ್ತೀರಿ.

ಸಂವಹನದ ಕೊರತೆ ಸಲ್ಲ

ಪರಸ್ಪರ ಹೊಂದಾಣಿಕೆಯಿಂದಿರಲು ಸಂವಹನ ತುಂಬಾ ಮುಖ್ಯ. ಅತಿಯಾದ ಮಾತು ಕಾದಾಟಕ್ಕೆ ಎಡೆ ಮಾಡಿಕೊಟ್ಟರೆ, ಅತಿಯಾದ ಮೌನ ಇಬ್ಬರ ನಡುವಿನ ಅಂತರಕ್ಕೆ ದಾರಿ ಮಾಡಿಕೊಡುತ್ತದೆ. ಯಾವುದೇ ಸಮಸ್ಯೆಗಳಾದರೂ ಪರಸ್ಪರ ಕೂತು ಸಾವಧಾನದಿಂದ ಚರ್ಚಿಸಿ ಪರಿಹರಿಸಿಕೊಳ್ಳಿ. ಇದರಿಂದ ಸಮಸ್ಯೆ ದೊಡ್ಡದಾಗುವುದಿಲ್ಲ ಹಾಗೂ ಇಬ್ಬರ ನಡುವಿರುವ ನಂಬಿಕೆಯು ಬಲಗೊಳ್ಳುತ್ತದೆ.

ಸಂಗಾತಿಯ ಕಾಳಜಿ ಮುಖ್ಯ

ಹೌದು, ಮದುವೆಯ ಕೆಲ ವರ್ಷಗಳ ಬಳಿಕ ಒಬ್ಬರಿಗೊಬ್ಬರು ಪ್ರೇಮಿಸುವುದನ್ನೇ ಬಿಟ್ಟುಬಿಡುತ್ತಾರೆ. ಒಂದು ಐ ಲವ್ ಯು ಸಂದೇಶ ನಿಮ್ಮ ಸಂಗಾತಿಯ ಮನಃಸ್ಥಿತಿಯನ್ನೇ ಬದಲಾಯಿಸಬಹುದು. ಸರ್ಪೈಸ್ ಗಿಫ್ಟ್‌ಗಳು, ಟ್ರಿಪ್‌ಗಳನ್ನು ಮಾಡುತ್ತಿರಿ. ಹೆಚ್ಚು ಸಂತೋಷವಾಗಿಡಲು ಪ್ರಯತ್ನಿಸಿ. ಹಾಗೆಯೇ ಕಾಳಜಿಯೊಂದಿಗೆ ಸುರಕ್ಷತೆಯತ್ತ ಗಮನಹರಿಸಿ. ಪ್ರಾಮಾಣಿಕರಾಗಿರಿ.

ಅತೃಪ್ತಿ ಮತ್ತು ಒತ್ತಡದಿಂದ ಸಂತಸದ ಜೀವನ ಅಸಾಧ್ಯ

ಒತ್ತಡ, ಅತೃಪ್ತಿ ಮತ್ತು ಅಡೆತಡೆಗಳಿಂದ ಕೂಡಿರುವ ಸಂಬಂಧದಲ್ಲಿ ಅಸಮಾಧಾನ ಹೆಚ್ಚಿರುತ್ತದೆ. ಸಂಗಾತಿಗಳ ನಡುವೆ ನಿಜ ಪ್ರೀತಿ ಇದ್ದರೇನೆ ಸಮರ್ಪಣಾ ಭಾವ ಮೂಡುತ್ತದೆ. ಮುಕ್ತ ಮನಸ್ಸಿನಿಂದ ಪ್ರೀತಿ ಇರಬೇಕೇ ಹೊರತು ಪ್ರೀತಿ ಇರುವವರ ರೀತಿ ನಟಿಸಬಾರದು. ಪ್ರೀತಿಯ ನಾಟಕವಾಡಬಾರದು.

Whats_app_banner