ಕೆಟ್ಟ ಸಂಬಂಧದಿಂದ ಬಿಡಿಸಿಕೊಂಡ ಮೇಲೆ ಚೇತರಿಸಿಕೊಳ್ಳುವುದು ಹೇಗೆ? ಧ್ಯಾನದ ಆಸರೆ ನೀಡುತ್ತೆ ಮನದ ನೋವಿಗೆ ಪರಿಹಾರ
ಕೆಟ್ಟ ಸಂಬಂಧದಿಂದ ಬಿಡಿಸಿಕೊಂಡ ಮೇಲೆ ಚೇತರಿಸಿಕೊಳ್ಳುವುದು ಖಂಡಿತ ಸುಲಭವಲ್ಲ, ಲವ್ ಬ್ರೇಕ್ಅಪ್ ಆದ ನಂತರ ಸುಧಾರಿಸಿಕೊಳ್ಳಲು ಧ್ಯಾನ ಮಾಡುವುದು ಸಹಾಯವಾಗಬಹುದು ನೋಡಿ.

ಪ್ರೀತಿಯಲ್ಲಿ ಬೀಳುವುದು ಸುಲಭ, ಆದರೆ ದೀರ್ಘಕಾಲ ಪ್ರೀತಿಯನ್ನು ಉಳಿಸಿಕೊಳ್ಳುವುದು ಖಂಡಿತ ಸುಲಭವಲ್ಲ. ಅದರಲ್ಲೂ ನೀವು ಕೆಟ್ಟ ಸಂಬಂಧವನ್ನು ಹೊಂದಿದ್ದರೆ ಅದರಿಂದ ಬೇಗನೆ ಹೊರ ಬರಬೇಕು, ಇಲ್ಲ ಅಂದರೆ ಬದುಕು ನರಕವಾಗಬಹುದು. ಟಾಕ್ಸಿಕ್ ರಿಲೇಷನ್‌ಶಿಪ್‌ನಿಂದ ಹೊರ ಬಂದರೂ, ಇದರಿಂದ ಚೇತರಿಸಿಕೊಳ್ಳುವುದು ಕಷ್ಟ.
ವಿಷಕಾರಿ ಸಂಬಂಧವು ನಮ್ಮನ್ನು ನಿರಾಸೆಗೆ ತಳ್ಳಬಹುದು. ಗೊಂದಲಕ್ಕೀಡು ಮಾಡಬಹುದು. ಪ್ರಪಂಚವೇ ಮುಳುಗಿದಂತಹ ಭಾವನೆ ಮೂಡುವಂತೆ ಮಾಡಬಹುದು. ಆ ಕಾರಣದಿಂದಾಗಿ ಈ ನೋವು ಮನದಲ್ಲಿ ಮಡಗಟ್ಟಿ ನಮ್ಮನ್ನು ಹತಾಶೆಗೆ ತಳ್ಳಬಹುದು. ಇದು ಮುಂದಿನ ಹಾದಿಯನ್ನು ಕಂಡುಕೊಳ್ಳಲು ಕಷ್ಟವಾಗುವಂತೆ ಮಾಡಬಹುದು. ಆದರೆ ಇದಕ್ಕೆಲ್ಲಾ ಪರಿಹಾರ ಧ್ಯಾನ, ಕೆಲವು ನಿರ್ದಿಷ್ಟ ಧ್ಯಾನದ ಮಾರ್ಗಗಳು ಕೆಟ್ಟ ಸಂಬಂಧದಿಂದ ಹೊರ ಬಂದ ನಂತರ ಚೇತರಿಸಿಕೊಳ್ಳಲು ದಾರಿಯಾಗಬಹುದು ಎನ್ನುತ್ತಾರೆ ತಜ್ಞರು. ಇದು ಬದುಕಿಗೆ ಹೊಸ ಭರವಸೆ ನೀಡುತ್ತದೆ.
ವಿಷಕಾರಿ ಸಂಬಂಧದ ಪರಿಣಾಮ ಅರ್ಥ ಮಾಡಿಕೊಳ್ಳಿ
ಕೆಟ್ಟ ಅಥವಾ ವಿಷಕಾರಿ ಸಂಬಂಧಗಳು ಹೃದಯಾಘಾತಕ್ಕಿಂತಲೂ ಹೆಚ್ಚಿನ ನೋವನ್ನು ಉಂಟು ಮಾಡುತ್ತವೆ. ಅವು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಬಹುದು. ಪ್ರೀತಿಯ ಬಗ್ಗೆ ಇನ್ನೆಂದೂ ನಂಬಿಕೆ ಬಾರದಂತೆ ಮಾಡಬಹುದು. ಇದು ನಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಬಹುದು. ಹಿಂದಿನ ಘಟನೆಗಳು ಪದೇ ಪದೇ ನೆನಪಿಗೆ ಬಂದು ಬೆಚ್ಚಿ ಬೀಳುವ ಸ್ಥಿತಿ ಎದುರಾಗಬಹುದು. ಈ ಮಾನಸಿಕ ತುಮುಲವು ಬದುಕಿನಲ್ಲಿ ಮುಂದೆ ಸಾಗದಂತೆ ಮಾಡಬಹುದು.
ಧ್ಯಾನದಲ್ಲಿದೆ ಗುಣಪಡಿಸುವ ಶಕ್ತಿ
ಧ್ಯಾನದ ಮೂಲತತ್ವವೆಂದರೆ ನಮ್ಮ ಮನಸ್ಸನ್ನು ಅರಿಯುವುದನ್ನು ಕಲಿಸುತ್ತದೆ. ಧಾನ್ಯದಿಂದ ನಮ್ಮ ಆಲೋಚನೆಗಳನ್ನು ಬದಲಿಸಲು ಸಾಧ್ಯಿವಿದೆ. ಇದು ಭಾವನೆಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ಅನುಭವಗಳು ಮತ್ತು ಪ್ರತಿಕ್ರಿಯೆ ನಡುವೆ ಜಾಗವನ್ನು ಸೃಷ್ಟಿಸುತ್ತದೆ. ಇದರಿಂದ ನಿಧಾನಕ್ಕೆ ಮನಸ್ಸಿನ ನೋವು ಕಡಿಮೆಯಾಗಲು ಪ್ರಾರಂಭವಾಗುತ್ತದೆ.
ಧ್ಯಾನ ಮಾಡುವಾಗ ನೋವಿನಿಂದ ದೂರಾಗುವ ಬದಲು, ನೋವಿನ ಜೊತೆಯಲ್ಲೇ ಬದುಕಲು ಕಲಿಯುತ್ತೇವೆ. ನೋವನ್ನು ಎದುರಿಸುವ ಧೈರ್ಯವನ್ನು ಧ್ಯಾನ ಕಲಿಸುತ್ತದೆ. ಸದ್ಯ ನಮಗಿರುವುದು ತಾತ್ಕಾಲಿಕ ಸ್ಥಿತಿ ಇದು ಶಾಶ್ವತವಲ್ಲ ಎಂಬುದು ಅರಿವಾಗುತ್ತದೆ.
ನೋವಿನಿಂದ ಭರವಸೆಯತ್ತ ಪಯಣ
ಧ್ಯಾನ ಮಾಡುವುದರಿಂದ ಕೆಟ್ಟ ಸಂಬಂಧದಲ್ಲಿನ ನೋವು ಕಡಿಮೆಯಾಗಿ ಬದುಕಿನ ಬಗ್ಗೆ ಭರವಸೆ ಮೂಡಲು ಆರಂಭವಾಗುತ್ತದೆ. ಇದು ನಾವು ಯಾರು, ನಾವು ಎಲ್ಲಿದ್ದೇವೆ, ನಾವು ಬಯಸುತ್ತಿರುವುದು ಏನು ಎಂಬುದನ್ನು ನಮಗೆ ತಿಳಿಯುವಂತೆ ಮಾಡುತ್ತದೆ.
ಧ್ಯಾನವು ನಮಗೆ ಹಿಂದಿನ ಸಂಬಂಧ ನಾವು ಎಡೆವಿದ್ದೆಲ್ಲಿ, ನಮ್ಮಿಂದ ಏನು ತಪ್ಪಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಹಳೆಯ ಅನುಭವದಿಂದ ಪಾಠ ಕಲಿಯುವಂತೆ ಮಾಡುತ್ತದೆ.
ಹೊಸ ಅಧ್ಯಾಯಕ್ಕೆ ಮುನ್ನುಡಿ
ಕೆಟ್ಟ ಸಂಬಂಧಕ್ಕೆ ಅಂತ್ಯ ಹಾಡುವುದು ಅತ್ಯಂತ ನೋವಿನಿಂದ ಕೂಡಿರುತ್ತದೆ. ಆದರೆ ಧ್ಯಾನದಿಂದ ಸ್ವಯಂ ಅನ್ವೇಷಣೆಯನ್ನು ಆರಂಭಿಸಲು ಸಾಧ್ಯವಿದೆ. ಆಂತರಿಕ ಶಾಂತಿ ಮತ್ತು ಸ್ವಯಂ-ಅರಿವನ್ನು ಬೆಳೆಸಿಕೊಂಡಂತೆ, ಭವಿಷ್ಯದ ಸಂಬಂಧಗಳಿಗೆ ನೀವು ಬಲವಾದ ಅಡಿಪಾಯವನ್ನು ರಚಿಸಲು ಸಾಧ್ಯವಿದೆ. ಪ್ರತಿ ಧ್ಯಾನದ ಅವಧಿಯು ಹೊಸ ಭರವಸೆಯನ್ನು ಹುಟ್ಟಿಸುತ್ತದೆ. ಕಾಲ ನಂತರದಲ್ಲಿ ಅತ್ಯಂತ ಘೋರ ಎಂದು ಅಂದುಕೊಂಡಿದ್ದ ಬದುಕು ಬಹಳ ಸುಂದರ ಎನ್ನಿಸುತ್ತದೆ. ಇದರಿಂದ ಹೊಸ ಸಂಬಂಧಕ್ಕೆ ಮುನ್ನುಡಿ ಬರೆಯಲು ಸೂಕ್ತ ಎನ್ನಿಸುತ್ತದೆ.
