ಸಂಸಾರದಲ್ಲಿ ಎಂದಿಗೂ ವಿರಸ ಮೂಡದೇ, ಸದಾ ಪ್ರೀತಿ–ಖುಷಿ ತುಂಬಿರಬೇಕು ಅನ್ನೋ ಆಸೆ ಇದ್ಯಾ, ಹಾಗಿದ್ರೆ 2–2–2 ನಿಯಮ ಪಾಲಿಸಿ
ನೀವು ಸಂತೋಷದ ದಾಂಪತ್ಯ ಜೀವನವನ್ನು ಹೊಂದಲು ಬಯಸುತ್ತೀರಾ, ನೀವಿಬ್ಬರೂ ಗಂಡ–ಹೆಂಡತಿಯ ನಡುವೆ ಜಗಳ, ಮನಸ್ತಾಪ ಬರೋದು ನಿಮಗೆ ಇಷ್ಟ ಇಲ್ವಾ, ವಾದ ಮಾಡದೇ ದಾಂಪತ್ಯ ಮುಂದೆ ಸಾಗಬೇಕಾ, ಹಾಗಾದರೆ 2–2–2 ನಿಯಮ ಅನುಸರಿಸಿ. ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗ್ತಿದೆ ಈ ರೂಲ್ಸ್.

ದಾಂಪತ್ಯ ಜೀವನದಲ್ಲಿ ಜಗಳ, ಮನಸ್ತಾಪ ಬಾರದಂತೆ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವುದು ನಿಜಕ್ಕೂ ಸವಾಲು. ಸಂಗಾತಿಯ ಅತಿಯಾದ ನಿರೀಕ್ಷೆಯು ಗಂಡ ಅಥವಾ ಹೆಂಡತಿಗೆ ದಾಂಪತ್ಯವನ್ನು ಸರಿಯಾದ ಸರಿಯಾಗಿ ಸಾಗಿಸಿಕೊಂಡು ಹೋಗಲು ಕಷ್ಟವಾಗಬಹುದು. ಆದರೆ ಮದುವೆ ಎಂಬುದು ಎರಡು ದೇಹಗಳನ್ನಷ್ಟೇ ಅಲ್ಲ, ಮನಸ್ಸನ್ನು ಬದುಕನ್ನು ಬೆಸೆಯುವಂಥದ್ದು. ಮದುವೆಯಾದ ಮೇಲೆ ನಮಗಾಗಿ ಇರುವ ಏಕೈಕ ವ್ಯಕ್ತಿ ಎಂದರೆ ಅದು ಗಂಡ ಅಥವಾ ಹೆಂಡತಿ ಎನ್ನುವ ಮನೋಭಾವ ನಮ್ಮಲ್ಲಿ ಇರಬೇಕು. ಆ ಕಾರಣಕ್ಕಾಗಿ ಅವರಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಅವಶ್ಯ, ಇದರಿಂದ ಸಂಬಂಧ ಬಿಗಿಯಾಗುತ್ತದೆ.
ಆದರೆ ಗಂಡ ಅಥವಾ ಹೆಂಡತಿ ಸಮಯ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಹಲವು ಸಂಸಾರಗಳು ಮುರಿದು ಬೀಳುತ್ತಿವೆ. ದಂಪತಿಗಳ ನಡುವೆ ಮನಸ್ತಾಪ ಹೆಚ್ಚಲು ಕಾರಣವಾಗುತ್ತಿದೆ. ಜಗಳ, ಕಿರಿಕಿರಿ ಹೆಚ್ಚಾಗಿ ಕೊನೆಗೆ ವಿಚ್ಛೇದನದ ಹಂತಕ್ಕೆ ತಲುಪುತ್ತದೆ. ಆದರೆ ಸಂಸಾರದಲ್ಲಿ ಮನಸ್ತಾಪ ಬಾರದಂತೆ ತಡೆದು, ಸುಖ ಸಂಸಾರ ನಿಮ್ಮದಾಗಲು ಈ ಒಂದೇ ಒಂದು ನಿಯಮ ಪಾಲಿಸಿದರೆ ಸಾಕು, ಈ ನಿಯಮ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಅದುವೆ 2–2–2.
ಈ 2–2–2 ನಿಯಮವು ನವದಂಪತಿಗಳಿಂದ ವಯಸ್ಸಾದ ದಂಪತಿಗಳವರೆಗೆ ಎಲ್ಲರಿಗೂ ಅನ್ವಯವಾಗುತ್ತದೆ ಹಾಗೂ ಇದು ದಂಪತಿಗಳಿಗೆ ಪ್ರಯೋಜನಕಾರಿ ಕೂಡ. ಈ ನಿಯಮ ಅನುಸರಿಸುವ ಮೂಲಕ ದಾಂಪತ್ಯ ಜೀವನದಲ್ಲಿ ಸಂತೋಷ ತುಂಬಿರುತ್ತದೆ ಎಂಬ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ನಿಯಮವನ್ನು ಜಾರಿಗೆ ತರುವುದರಿಂದ ದಾಂಪತ್ಯ ಜೀವನದಲ್ಲಿ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ಸಂತೋಷ ಹೆಚ್ಚಾಗುತ್ತದೆ ಎಂದು ಎಲ್ಲರೂ ನಂಬುತ್ತಾರೆ. ನಿಮ್ಮ ಸಂಗಾತಿಗೂ ನೀವು ಸಮಯ ನೀಡದ ಕಾರಣ ಅವರು ಅತೃಪ್ತರಾಗಿದ್ದರೆ, 2-2-2 ನಿಯಮದ ಬಗ್ಗೆ ತಿಳಿದುಕೊಳ್ಳಿ ಮತ್ತು ಅದನ್ನು ನೀವೇ ಕಾರ್ಯಗತಗೊಳಿಸಿ.
ಪ್ರತಿ ಎರಡು ವಾರಗಳಿಗೊಮ್ಮೆ ಹೀಗೆ ಮಾಡಿ
ಇತ್ತೀಚಿನ ಜೀವನಶೈಲಿ ಹೇಗೆಂದರೆ ಗಂಡ–ಹೆಂಡತಿ ಇಬ್ಬರೂ ದುಡಿಯುವವರು. ಒಬ್ಬರು ದುಡಿಯುತ್ತಿದ್ದರೂ ಕೂಡ ದಿನವಿಡೀ ಕೆಲಸ, ರಾತ್ರಿ ಮನೆಗೆ ಬಂದು ಸುಸ್ತಾಗಿ ಮಲಗುವುದು. ರಜಾದಿನಗಳಲ್ಲಿ ಮನೆಕೆಲಸ ಹಾಗೂ ಇತರ ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುವುದು. ಹೀಗಿರುವಾಗ ಗಂಡ ಅಥವಾ ಹೆಂಡತಿಗೆ ನೀಡಲು ಸಮಯ ಎಲ್ಲಿರುತ್ತದೆ. ಇದು ಹೀಗೆ ಮುಂದುವರಿದರೆ ದಂಪತಿಗಳ ನಡುವೆ ಅಂತರ ಹೊರತುಪಡಿಸಿ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಇದು ತುಂಬಾ ಅಪಾಯಕಾರಿ. ಇದನ್ನು ಸಂಭವಿಸದಂತೆ ತಡೆಯಲು 2-2-2 ರಲ್ಲಿ ಮೊದಲ 2 ನಿಯಮಗಳನ್ನು ಅನುಸರಿಸಬೇಕು. ಅಂದರೆ ಪ್ರತಿ ಎರಡು ವಾರಗಳಿಗೊಮ್ಮೆ ನಿಮ್ಮ ಸಂಗಾತಿಯೊಂದಿಗೆ ಡಿನ್ನರ್ ಅಥವಾ ಲಂಚ್ ಡೇಟ್‌ಗೆ ಹೋಗುವುದು. ಸಿನಿಮಾಕ್ಕೆ ಹೋಗುವುದು ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಒಟ್ಟಿಗೆ ಸ್ವಲ್ಪ ಸಮಯ ಕಳೆಯುವುದರಿಂದ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮತ್ತು ಯಾವುದೇ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸಹಾಯವಾಗುತ್ತದೆ.
ಪ್ರತಿ ಎರಡು ತಿಂಗಳಿಗೊಮ್ಮೆ..
ಮನೆಕೆಲಸಗಳು, ಕಚೇರಿ ಕೆಲಸಗಳು ಮತ್ತು ವ್ಯಾಪಾರ ವಹಿವಾಟುಗಳಲ್ಲಿ ನಿರಂತರವಾಗಿ ಮುಳುಗಿರುವುದು ಯಾವುದೇ ವ್ಯಕ್ತಿಯಲ್ಲಿ ಕಿರಿಕಿರಿ ಮತ್ತು ಕೋಪವನ್ನು ಹೆಚ್ಚಿಸಬಹುದು. ಜಗಳಗಳು ಪ್ರಾರಂಭವಾಗುತ್ತವೆ. ಹಾಗಾಗಿ, ಇದೆಲ್ಲದರಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಎರಡು ತಿಂಗಳಿಗೊಮ್ಮೆ ವಾರಾಂತ್ಯದ ಪ್ರವಾಸವನ್ನು ಯೋಜಿಸಿ. ದೂರದ ಸ್ಥಳಗಳಿಗೆ ಹೋಗಲು ಸಾಧ್ಯವಾಗದಿದ್ದರೂ, ನಗರದ ಸುತ್ತಮುತ್ತ ಇರುವ ತಾಣಗಳಿಗೆ ಹೋಗಿ ಬನ್ನಿ. ಬೇರೆಲ್ಲವನ್ನೂ ಮರೆತು, ಇತರ ಆಲೋಚನೆಗಳು ಮತ್ತು ಕೆಲಸದ ಒತ್ತಡಗಳಿಂದ ಮುಕ್ತವಾಗಿ, ಶಾಂತಿಯುತವಾಗಿ ಪರಸ್ಪರ ಸಮಯ ಕಳೆಯಿರಿ. ಹೀಗೆ ಮಾಡುವುದರಿಂದ, ತಪ್ಪು ಕಲ್ಪನೆಗಳಿಗೆ ನಿಮ್ಮಲ್ಲಿ ಯಾವುದೇ ಅವಕಾಶವಿರುವುದಿಲ್ಲ. ದಂಪತಿಗಳಿಬ್ಬರ ನಡುವೆ ಪ್ರೀತಿಯು ಹೆಚ್ಚುತ್ತದೆ.
ಪ್ರತಿ ಎರಡು ವರ್ಷಗಳಿಗೊಮ್ಮೆ..
ವರ್ಷ ಕಳೆದಂತೆ, ದಾಂಪತ್ಯದಲ್ಲಿ ಬೇಸರ ಮೂಡಲು ಆರಂಭವಾಗುವುದು ಸಹಜ. ಒಬ್ಬರಿಗೊಬ್ಬರು ಕಳೆಯುವ ಸಮಯ ಕರಗುತ್ತಿರುವಂತೆ ತೋರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಮರೆಯಲಾಗದ ನೆನಪುಗಳನ್ನು ಸೃಷ್ಟಿಸಲು, ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದು ವಾರ ಪೂರ್ತಿ ಒಟ್ಟಿಗೆ ಕಳೆಯಿರಿ. ಕುಟುಂಬ, ವ್ಯವಹಾರ, ವೃತ್ತಿ, ಮಕ್ಕಳು ಮುಂತಾದ ಎಲ್ಲಾ ಚಿಂತೆಗಳನ್ನು ಬದಿಗಿಟ್ಟು ನಿಮಗಾಗಿ ಸಮಯ ಮೀಸಲಿಡಿ, ನೀವಿಬ್ಬರು ಮಾತ್ರ. ಪರಸ್ಪರರ ಆಸಕ್ತಿಗಳು ಮತ್ತು ಹವ್ಯಾಸಗಳ ಬಗ್ಗೆ ಚರ್ಚಿಸಿ. ಹೀಗೆ ಮಾಡುವುದರಿಂದ ಸಂತೋಷದ ದಾಂಪತ್ಯ ಜೀವನ ನಡೆಸುವುದು ಸುಲಭವಾಗುತ್ತದೆ. ಪರಸ್ಪರ ಪ್ರೀತಿ ದುಪ್ಪಟ್ಟಾಗುತ್ತದೆ.

ವಿಭಾಗ