ಚಳಿಗಾಲದಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗುತ್ತೋ? ಕಡಿಮೆ ಆಗುತ್ತೋ? ಯಾವುದು ಸತ್ಯ? -ಇಲ್ಲಿದೆ ನೀವು ತಿಳಿಯಬೇಕಾದ 10 ಅಂಶಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗುತ್ತೋ? ಕಡಿಮೆ ಆಗುತ್ತೋ? ಯಾವುದು ಸತ್ಯ? -ಇಲ್ಲಿದೆ ನೀವು ತಿಳಿಯಬೇಕಾದ 10 ಅಂಶಗಳು

ಚಳಿಗಾಲದಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗುತ್ತೋ? ಕಡಿಮೆ ಆಗುತ್ತೋ? ಯಾವುದು ಸತ್ಯ? -ಇಲ್ಲಿದೆ ನೀವು ತಿಳಿಯಬೇಕಾದ 10 ಅಂಶಗಳು

ಚಳಿಗಾಲದ ಕೂಲ್‌ ಕೂಲ್ ವಾತಾವರಣದಲ್ಲಿ ರೊಮ್ಯಾಂಟಿಕ್ ಫೀಲ್ ಬರುವುದು ಸಹಜ. ಇದರೊಂದಿಗೆ ಈ ಸಮಯದಲ್ಲಿ ಕಾಮಾಸಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಇದು ನಿಜವೇ, ಚಳಿಗಾಲದಲ್ಲಿ ಕಾಮಾಸಕ್ತಿ ಹೆಚ್ಚಾಗುತ್ತಾ, ಕಡಿಮೆ ಆಗುತ್ತಾ? ಚಳಿಗಾಲ ಹಾಗೂ ಸೆಕ್ಸ್ ಡ್ರೈವ್ ನಡುವಿನ ಸಂಬಂಧ ಏನು ಎಂಬ ವಿವರ ಇಲ್ಲಿದೆ.

ಚಳಿಗಾಲದಲ್ಲಿ ಲೈಂಗಿಕ ಆಸಕ್ತಿ
ಚಳಿಗಾಲದಲ್ಲಿ ಲೈಂಗಿಕ ಆಸಕ್ತಿ (PC: Canva)

ಚಳಿಗಾಲ ಎಂದರೆ ಎಲ್ಲರಿಗೂ ಏನೋ ಒಂಥರಾ ಖುಷಿ, ಬೆಚ್ಚಗೆ ಹೊದ್ದು ಮಲಗಿಕೊಂಡೇ ಇರುವ ಎನ್ನುವ ಭಾವ ಮೂಡಿಸುವ ಚಳಿಗಾಲದಲ್ಲಿ ಸಂಗಾತಿಗಳ ನಡುವೆ ರೊಮ್ಯಾಂಟಿಕ್ ಫೀಲ್ ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆ ಇರುವುದು ಹಾಗೂ ಉಷ್ಣತೆ ಕೂಡ ಕಡಿಮೆ ಇರುವುದು ಕಾಮಾಸಕ್ತಿ ಹೆಚ್ಚಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಕೆಲವರು ಚಳಿಗಾಲದಲ್ಲಿ ಲೈಂಗಿಕ ಆಸಕ್ತಿ ಕುಂಠಿತವಾಗುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಇದರಲ್ಲಿ ಯಾವುದು ಸತ್ಯ? ಈ ಕುರಿತ ವಿವರ ಇಲ್ಲಿದೆ.

ಚಳಿಗಾಲದಲ್ಲಿ ಕಾಮಾಸಕ್ತಿ

ಚಳಿಗಾಲದಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಕಾಮಾಸಕ್ತಿ ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಮಹಿಳೆಯರಲ್ಲಿ ಕೆಲವು ಕಾರಣಗಳಿಂದ ಶೀತ ವಾತಾವರಣದಲ್ಲಿ ಕಾಮಾಸಕ್ತಿ ಕುಂದುತ್ತದೆ. ಸಂಭೋಗದ ಸಮಯದಲ್ಲಿ ಪರಾಕಾಷ್ಠೆ, ನೋವು ಮಹಿಳೆಯರಲ್ಲಿ ಸಂಭೋಗಕ್ಕೆ ಸರಿಯಾಗಿ ಸಹಕರಿಸಲು ಸಾಧ್ಯವಾಗದೇ ಇರಬಹುದು. 2011ರಲ್ಲಿ ವುಮೆನ್‌ ಹೆಲ್ತ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಚಳಿಗಾಲದಲ್ಲಿ ಮಹಿಳೆಯರಿಗೆ ಕಾಮಾಸಕ್ತಿ ಕಡಿಮೆಯಾಗಲು ಮುಖ್ಯ ಕಾರಣ ಶೀತ ವಾತಾವರಣ ಎಂದು ಹೇಳಿದೆ.

ಚಳಿಗಾಲದಲ್ಲಿ ಲೈಂಗಿಕಾಸಕ್ತಿ ಕುಂದಲು ಕಾರಣಗಳು

ಆಹಾರದ ಆಯ್ಕೆ

ಚಳಿಗಾಲದಲ್ಲಿ ಜನರು ಬಾಯಿಗೆ ರುಚಿಸುವ, ದೇಹಕ್ಕೆ ಭಾರ ಎನ್ನಿಸುವ ಆಹಾರಗಳನ್ನು ಹೆಚ್ಚು ಸೇವಿಸುತ್ತಾರೆ. ಇದು ಅವರನ್ನು ಸೋಮಾರಿಯನ್ನಾಗಿ ಮಾಡಬಹುದು. ಇದು ಅವರಲ್ಲಿ ಲೈಂಗಿಕ ಬಯಕೆ ಕಡಿಮೆಯಾಗುವಂತೆ ಮಾಡಬಹುದು. ಚಳಿಗಾಲದಲ್ಲಿ ತಿನ್ನುವ ಆಹಾರವು ಕಾಮಾಸಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೆಲ್ತ್ ಶಾಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಡಾ ಬನ್ಸಾಲ್.

ವಿಟಮಿನ್ ಡಿ ಕಡಿಮೆಯಾಗುವುದು

ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆ ಇರುವುದರಿಂದ ವಿಟಮಿನ್ ಡಿ ಕಡಿಮೆಯಾಗುತ್ತದೆ. ಇದು ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಜನವರಿ 2024 ರಲ್ಲಿ ವೈಜ್ಞಾನಿಕ ವರದಿಗಳಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ವಿಟಮಿನ್ ಡಿ ಕೊರತೆ ಮತ್ತು ಕಡಿಮೆ ಲೈಂಗಿಕ ಬಯಕೆ ಮತ್ತು ಲೈಂಗಿಕ ತೃಪ್ತಿಯ ನಡುವೆ ಪರಸ್ಪರ ಸಂಬಂಧ ಕಂಡುಬಂದಿದೆ.

ದೈಹಿಕ ಚಟುವಟಿಕೆಯ ಕೊರತೆ

ಚಳಿಗಾಲದಲ್ಲಿ ದೈಹಿಕ ಚಟುವಟಿಕೆಯ ಕೊರತೆಯು ಕಾಮಾಸಕ್ತಿ ಕುಂದಲು ಒಂದು ಕಾರಣವಾಗಿದೆ. ಚಳಿಗಾಲದಲ್ಲಿ ನೀವು ಕೆಲಸ ಮಾಡುವುದನ್ನು ನಿಲ್ಲಿಸಬಾರದು, ಏಕೆಂದರೆ ವ್ಯಾಯಾಮವು ಕಾಮವನ್ನು ಹೆಚ್ಚಿಸಲು ಅತ್ಯಗತ್ಯ ಅಂಶವಾಗಿದೆ. "ಇದು ರಕ್ತ ಪರಿಚಲನೆ ಮತ್ತು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಲೈಂಗಿಕ ಡ್ರೈವ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ" ಎಂದು ತಜ್ಞರು ಹೇಳುತ್ತಾರೆ.

ದೈಹಿಕ ಚಿತ್ರಣ

ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಚಳಿ ಹೆಚ್ಚು. ಇದರಿಂದ ಅವರು ಚಳಿಗಾಲದಲ್ಲಿ ಜಾಕೆಟ್ ಓವರ್ ಕೋಟ್ ಅಂತೆಲ್ಲಾ ಧರಿಸುತ್ತಾರೆ. ಇದರಿಂದ ಅವರು ವಯಸ್ಸಾದವರಂತೆ ಕಾಣಬಹುದು. ತಮ್ಮ ದೇಹದ ಬಗ್ಗೆ ಕೀಳರಿಮೆ ಹೊಂದಿರುವವರಲ್ಲಿ ಕೂಡ ಕಾಮಾಸಕ್ತಿ ಕಡಿಮೆ ಇರುತ್ತದೆ.

ಮೆಲಟೊನಿನ್ ಮಟ್ಟ ಹೆಚ್ಚುವುದು

ನಿದ್ರೆ-ಎಚ್ಚರ ಚಕ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಮೆಲಟೋನಿನ್ ಎಂಬ ಹಾರ್ಮೋನ್ ಚಳಿಗಾಲ ಮತ್ತು ಲೈಂಗಿಕ ಬಯಕೆಯೊಂದಿಗೆ ಸಂಪರ್ಕವನ್ನು ಹೊಂದಿದೆ. ತಂಪಾದ ತಾಪಮಾನದಲ್ಲಿ, ಮೆಲಟೋನಿನ್ ಉತ್ಪಾದನೆಯು ಹೆಚ್ಚಾಗುತ್ತದೆ, ಇದು ಜನರನ್ನು ಸೋಮಾರಿಯನ್ನಾಗಿ ಮಾಡುತ್ತದೆ ಮತ್ತು ಕಾಮಾಸಕ್ತಿಯನ್ನು ಕಡಿಮೆ ಮಾಡುತ್ತದೆ.

ಈ ಎಲ್ಲವೂ ಚಳಿಗಾಲದಲ್ಲಿ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಂದಲು ಕಾರಣವಾಗುತ್ತದೆ. ಹಾಗಂತ ಎಲ್ಲಾ ಮಹಿಳೆಯರಿಗೂ ಚಳಿಗಾಲದಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗುತ್ತದೆ ಎಂದಲ್ಲ.

ಚಳಿಗಾಲದಲ್ಲಿ ಲೈಂಗಿಕಾಸಕ್ತಿ ಹೆಚ್ಚಲು ಕಾರಣಗಳು

ಹಾರ್ಮೋನ್ ಬದಲಾವಣೆಗಳು 

ಚಳಿಗಾಲದಲ್ಲಿ ಮೆಲಟೊನಿನ್ ಉತ್ಪಾದನೆ ಹೆಚ್ಚುವುದರಿಂದ ನಮಗೆ ನಿದ್ದೆ ಬರುತ್ತದೆ ನಿಜ. ಆದರೆ ಈ ಸಮಯದಲ್ಲಿ ಆದರೆ ಇದು ಟೆಸ್ಟೋಸ್ಟೆರಾನ್ ಅನ್ನು ಹೆಚ್ಚಿಸುತ್ತದೆ, ಇದು ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಡ್ರೈವ್ಗೆ ಕಾರಣವಾಗುವ ಹಾರ್ಮೋನ್. ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚುವುದು ಎಂದರೆ ಲೈಂಗಿಕ ಆಲೋಚನೆಗಳು ಮತ್ತು ಪ್ರಚೋದನೆಗಳು ಹೆಚ್ಚುವುದು ಎಂದರ್ಥ. ತಂಪಾದ ತಾಪಮಾನವು ಆಕ್ಸಿಟೋಸಿನ್ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದು ನಮ್ಮ ಪಾಲುದಾರರೊಂದಿಗೆ ನಿಕಟತೆ ಮತ್ತು ಅನ್ಯೋನ್ಯತೆಯ ಭಾವನೆಗಳನ್ನು ಉತ್ತೇಜಿಸುವ ‘ಪ್ರೀತಿಯ ಹಾರ್ಮೋನ್‘ಮೆಲಟೋನಿನ್ ಡೋಪಮೈನ್ ಅನ್ನು ಹೆಚ್ಚಿಸುತ್ತದೆ, ಕಾಮಾಸಕ್ತಿ ಮತ್ತು ಪ್ರಚೋದನೆಯನ್ನು ಹೆಚ್ಚಿಸುವ ಹಾರ್ಮೊನು. ಮಹಿಳೆಯರಿಗೆ, ಮೆಲಟೋನಿನ್ ಈಸ್ಟ್ರೊಜೆನ್ ಅನ್ನು ಹೆಚ್ಚಿಸಬಹುದು. ಇದು ಅವರಲ್ಲಿ ಕಾಮಾಸಕ್ತಿ ಹೆಚ್ಚಲು ಕಾರಣವಾಗುತ್ತದೆ.

ಅವಕಾಶದ ಹೆಚ್ಚಳ 

ಚಳಿಗಾಲದಲ್ಲಿ ನಾವು ಹೆಚ್ಚು ಹೊತ್ತು ಹಾಸಿಗೆಯಲ್ಲೇ ಇರುತ್ತೇವೆ. ಇದು ಸಂಗಾತಿಯೊಂದಿಗೆ ದೈಹಿಕವಾಗಿ ಆಕರ್ಷಿತರಾಗಲು ಹೆಚ್ಚು ಅವಕಾಶ ನೀಡುತ್ತದೆ. ಹೆಚ್ಚು ಸಮಯ ಹಾಸಿಗೆಯಲ್ಲಿ ಜೊತೆಗೆ ಇರುವುದು ಲೈಂಗಿಕಾಸಕ್ತಿ ಹೆಚ್ಚುವಂತೆ ಮಾಡಬಹುದು. ಇದು ಪ್ರೀತಿಯ ಹಾರ್ಮೋನು ಹೆಚ್ಚಲು ಕಾರಣವಾಗುತ್ತದೆ. ಇದರಿಂದ ಲೈಂಗಿಕಾಸಕ್ತಿ ಕೂಡ ಹೆಚ್ಚಾಗುತ್ತದೆ.

ಮಾನಸಿಕ ಅಂಶಗಳು

ಚಳಿಗಾಲದಲ್ಲಿ ಸಂಗಾತಿಯೊಂದಿಗೆ ಹಿಂದೆ ಕಳೆದು ಕ್ಷಣಗಳು ನಿಮ್ಮ ಮನಸ್ಸಿಗೆ ಬಂದಾಗ ನಿಮ್ಮಲ್ಲಿ ಲೈಂಗಿಕಾಸಕ್ತಿ ಹೆಚ್ಚಬಹುದು. ಆಹಾರ ಮತ್ತು ಲೈಂಗಿಕತೆಯು ಮೆದುಳಿನಲ್ಲಿ ಒಂದೇ ರೀತಿಯ ಆನಂದ ಕೇಂದ್ರಗಳನ್ನು ಸಕ್ರಿಯಗೊಳಿಸುವುದರಿಂದ ಇದು ಕಾಮಾಸಕ್ತಿ ಹೆಚ್ಚಲು ಕಾರಣವಾಗುತ್ತದೆ.

ಏನಿದು ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (SAD)

ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (ಎಸ್‌ಎಡಿ) ಎಂಬುದು ಋತುಗಳಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದ ಒಂದು ರೀತಿಯ ಖಿನ್ನತೆಯಾಗಿದ್ದು, ಸಾಮಾನ್ಯವಾಗಿ ಶರತ್ಕಾಲದಲ್ಲಿ ಮತ್ತು ಚಳಿಗಾಲದಲ್ಲಿ ನೈಸರ್ಗಿಕ ಸೂರ್ಯನ ಬೆಳಕಿನ ಕೊರತೆಯಿಂದ ಉಂಟಾಗುತ್ತದೆ. ಚಳಿಗಾಲದಲ್ಲಿ ಹಗಲು ಕಡಿಮೆಯಾಗುತ್ತಿದ್ದಂತೆ ದೇಹವು ಹೆಚ್ಚು ಮೆಲಟೋನಿನ್ ಅನ್ನು ಉತ್ಪಾದಿಸಬಹುದು, ಇದು ನಮ್ಮಲ್ಲಿ ನಿದ್ದೆ ಹೆಚ್ಚುವಂತೆ ಮಾಡಬಹುದು. ಸಿರೊಟೋನಿನ್ ಕಡಿಮೆಯಾಗುವುದು ಮೂಡ್‌ ವ್ಯತ್ಯಯಕ್ಕೆ ಕಾರಣವಾಗಬಹುದು. ಇದರಿಂದ ಕೆಲವರಿಗೆ ಶಕ್ತಿಯ ಕೊರತೆ, ನಿದ್ದೆಯ ಪ್ರಮಾಣ ಹೆಚ್ಚುವುದು, ತೂಕ ಹೆಚ್ಚಾಗುವುದು, ಕಿರಿಕಿರಿ ಖಿನ್ನತೆಯಂತಹ ಲಕ್ಷಣಗಳು ಕಾಣಿಸಲು ಕಾರಣವಾಗುತ್ತದೆ.  

ಕುತೂಹಲಕಾರಿಯಾಗಿ ಇನ್ನೂ ಕೆಲವರಿಗೆ ಚಳಿಗಾಲವು ಕಾಮಾಸಕ್ತಿಯ ಮೇಲೆ ವಿರುದ್ಧ ಪರಿಣಾಮವನ್ನು ಬೀರಬಹುದು. ಅಂದರೆ SAD ಗೆ ಕಾರಣವಾಗುವ ಹಾರ್ಮೋನುಗಳು ಮತ್ತು ನರಪ್ರೇಕ್ಷಕಗಳಲ್ಲಿನ ಅದೇ ಏರಿಳಿತಗಳು ಇತರರಲ್ಲಿ ಲೈಂಗಿಕ ಬಯಕೆಯನ್ನು ಹೆಚ್ಚಿಸಬಹುದು. ಚಳಿಗಾಲದಲ್ಲಿ ನೈಸರ್ಗಿಕ ಬೆಳಕಿನ ಕೊರತೆಯು ಮನಸ್ಥಿತಿ ಮತ್ತು ಪ್ರೇರಣೆಯನ್ನು ಹೆಚ್ಚಿಸುವ ಮಾರ್ಗವಾಗಿ ನಿಮ್ಮ ದೇಹವು ಆಹ್ಲಾದಕರ ಚಟುವಟಿಕೆಗಳನ್ನು ಹುಡುಕುವಂತೆ ಮಾಡುತ್ತದೆ. ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಡೋಪಮೈನ್, ಎಂಡಾರ್ಫಿನ್ ಮತ್ತು ಆಕ್ಸಿಟೋಸಿನ್ ಬಿಡುಗಡೆಗೆ ಕಾರಣವಾಗುತ್ತದೆ. 

ಒಟ್ಟಾರೆ ಹೇಳಬೇಕು ಎಂದರೆ ಚಳಿಗಾಲದಲ್ಲಿ ಕಾಮಾಸಕ್ತಿ ಕಡಿಮೆಯಾಗುತ್ತದೆ, ಹೆಚ್ಚಾಗುತ್ತದೆ ಎನ್ನುವುದು ವ್ಯಕ್ತಿಗಳ ದೈಹಿಕ ಸ್ಥಿತಿಗೆ ಅನುಗುಣವಾಗಿದ್ದು. ಈ ಸಮಯದಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುವುದೇ ಜಾಸ್ತಿ, ಇದಕ್ಕೆ ಕಾರಣ ಏನು ಎಂಬುದನ್ನು ಈ ಮೇಲೆ ವಿವರಿಸಲಾಗಿದೆ. 

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner