ಮನದ ಮಾತು: ಹೆಂಡತಿ ಗರ್ಭಿಣಿ, ಅಪ್ಪ ಆಗ್ತಿದ್ದೇನೆಂಬ ಖುಷಿಯ ಜೊತೆಗೆ ನಮ್ಮ ನಡುವೆ ಇನ್ನೊಬ್ಬರು ಬರ್ತಾರೆಂಬ ಆತಂಕ; ಭಾವಿ ಅಪ್ಪನಿಗೆ ಸಾಂತ್ವನ
Relationship Tips: ಹೆಂಡತಿ ಬಸುರಿ ಎಂದು ತಿಳಿದ ಗಂಡನ ಮನದಲ್ಲಿ ಹತ್ತಾರು ಭಾವನೆಗಳ ಏರಿಳಿತ ಸಹಜ. ಇಂಥ ಸಂದರ್ಭದಲ್ಲಿ ಕಾಡುವ ಪ್ರಶ್ನೆಗಳಿಗೆ, ಸಂಬಂಧಗಳ ಸೂಕ್ಷ್ಮಗಳಿಗೆ ಈ ಸಂಚಿಕೆಯಲ್ಲಿ ಉತ್ತರವಿದೆ. ಭಾವಿ ಅಪ್ಪನ ಮನಸ್ಸನ್ನು ಕಾಡುತ್ತಿರುವ ಪ್ರಶ್ನೆಯೊಂದಕ್ಕೆ ಈ ಸಂಚಿಕೆಯಲ್ಲಿ ಉತ್ತರಿಸಿದ್ದಾರೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್.
ಪ್ರಶ್ನೆ: ನನ್ನ ಹೆಂಡತಿ ಈಗ ಗರ್ಭಿಣಿ. ನಾನು ಅಪ್ಪ ಆಗ್ತಿದ್ದೀನಿ ಅಂತ ತಿಳಿದಾಗ ತುಂಬಾ ಖುಷಿಯಾಯ್ತು. ಆದರೆ ಅದೇ ಹೊತ್ತಿಗೆ ನನ್ನ ಸ್ವಾತಂತ್ರ್ಯ ಹೊರಟು ಹೋಗುತ್ತೆ ಅಂತ ಬೇಸರವೂ ಆಯ್ತು. ಇಷ್ಟು ದಿನ ನನ್ನ ಹೆಂಡತಿಯ ಸಂಪೂರ್ಣ ಸಮಯ, ಭಾವನೆಗಳು ನನಗೆ ಮಾತ್ರ ಸೀಮಿತವಾಗಿದ್ದವು. ಈಗ ಅದನ್ನು ಹಂಚಿಕೊಳ್ಳಲು ಇನ್ನೊಬ್ಬರು ಬರುತ್ತಿದ್ದಾರೆ ಅಂತೆಲ್ಲಾ ಅನ್ನಿಸುತ್ತೆ. ಯಾರ ಹತ್ತಿರವಾದರೂ ಹೇಳಿಕೊಳ್ಳೋಣ ಅಂದ್ರೆ ಏನಾದರೂ ಅಂದುಕೊಳ್ಳಬಹುದು ಅಂತ ಹಿಂಜರಿಕೆ. ನಾನು ವಿಚಿತ್ರವಾಗಿ ಯೋಚನೆ ಮಾಡ್ತಿದ್ದೀನಾ ಮೇಡಂ? ನನಗೆ ಮಗು ಬೇಕು, ನಾನು ಒಳ್ಳೇ ಅಪ್ಪ ಅನ್ನಿಸಿಕೊಳ್ಳಬೇಕು ಅಂತೆಲ್ಲಾ ಆಸೆಗಳು ಇರುವುದೂ ನಿಜ. ನಮ್ಮ ಮನೆಗೆ ಪಾಪು ಬರಲು ಇನ್ನೂ 6 ತಿಂಗಳು ಟೈಮ್ ಇದೆ. ಹೇಳಿ ಮೇಡಂ, ನಾನು ಹೇಗೆ ಸಿದ್ಧತೆ ಮಾಡಿಕೊಳ್ಳಲಿ?
ಉತ್ತರ: ಮೊದಲು ನಿಮಗೆ ಅಭಿನಂದನೆಗಳನ್ನು ಹೇಳಲು ಇಷ್ಟಪಡುತ್ತೇನೆ. ನಿಮ್ಮ ಅನಿಸಿಕೆಯನ್ನು ಯಾವುದೇ ಹಿಂಜರಿಕೆ ಇಲ್ಲದೆ ನಮ್ಮ ಜೊತೆಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಈ ಸಮಯದಲ್ಲಿ ನಿಮ್ಮ ಸಂತೋಷ ಉತ್ಸಾಹ ಸಂಭ್ರಮ ಎಷ್ಟು ಸ್ವಾಭಾವಿಕವೋ, ಅಷ್ಟೆೇ ಸಾಮಾನ್ಯ ನಿಮ್ಮ ಆತಂಕವೂ ಕೂಡ. ಬಹುತೇಕ ಪೋಷಕರು ಈ ಆತಂಕಕ್ಕೆ ಒಳಗಾಗಿರುತ್ತಾರೆ. ತಂದೆಗಾಗಲಿ-ತಾಯಿಗಾಗಲಿ ಇಂತಹ ಯೋಚನೆ ಬರುವುದು ಸಾಮಾನ್ಯ. ಇಷ್ಟು ದಿನಗಳ ಕಾಲ ಗಂಡ ಹೆಂಡತಿಯು ಬಹಳ ಆತ್ಮೀಯತೆಯಿಂದ, ಪ್ರೀತಿಯಿಂದ ಒಬ್ಬರಿಗೊಬ್ಬರು ಮೀಸಲಾಗಿರುತ್ತಾರೆ. ಈಗ ಇವರಿಬ್ಬರ ಮಧ್ಯೆ ದಿಢೀರನೆ ಮತ್ತೊಂದು ಜೀವ ಸೇಪ೯ಡೆಯಾದಾಗ ಸ್ವಲ್ಪ ಆತಂಕ, ದಿಗಿಲು ಆಗುವುದು ಸಹಜ.
ಗಂಡ-ಹೆಂಡತಿಯ ಮನಸ್ಸು ಪರಸ್ಪರರಿಗೆ ಹೊಂದಿಕೊಂಡಿರುತ್ತದೆ. ಸಂಗಾತಿಯ ಕಾಳಜಿ, ಸಮಯ , ಗಮನ ಎಲ್ಲವೂ ನನಗೊಬ್ಬನಿಗೆ (ಳಿಗೆ) ಎನ್ನುವ ಹೆಮ್ಮೆ, ಸಂತೋಷ, ಸಮಾಧಾನದಿಂದ ಕಳೆದ ಇಷ್ಟು ಕಾಲವು ಮುಗಿಯಿತೇ? ಮತ್ತೆ ಸಿಗುವುದೇ ಇಲ್ಲವೇ ? ಸಂಗಾತಿಯ ವರ್ತನೆ ಬದಲಾದರೆ ಮುಂದೆ ಏನು ಗತಿ? ಹೀಗೆ ನೂರೆಂಟು ಪ್ರಶ್ನೆಗಳು ಉದ್ಭವಿಸುತ್ತವೆ. ಬದುಕಿನ ಈ ಹಂತದಲ್ಲಿ ಹೀಗೆಲ್ಲಾ ಅನ್ನಿಸುವುದು ಸಾಮಾನ್ಯ. ಯಾಕೆಂದರೆ, ಬದುಕಿನ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಮುಂದಡಿ ಇಡುವಾಗ ಕೆಲವು ಬದಲಾವಣೆಗಳಾಗುತ್ತವೆ. ಆಗ ಮನಸ್ಸಿಗೆ ತಾನು ಹೊಂದಿಕೊಂಡಿರುವ ವಾತಾವರಣದಿಂದ ಹೊರಬಂದು, ಮುಂದಿರುವ ಹೊಸ ಬದಲಾವಣೆಗಳನ್ನು ಗುರುತಿಸಿ, ಒಪ್ಪಿಕೊಂಡು, ಸ್ವೀಕಾರ ಮಾಡಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಇದನ್ನೆೇ ಮಾನಸಿಕ ಸಿದ್ಧತೆ ಎನ್ನಬಹುದು.
ನಿಮ್ಮ ಹೆಂಡತಿಯ ಸಂಪೂರ್ಣ ಸಮಯ, ಭಾವನೆಗಳು ನಿಮಗೆ ಮಾತ್ರ ಸೀಮಿತವಾಗಿದ್ದು, ಈಗ ಅದನ್ನು ಹಂಚಿಕೊಳ್ಳಲು ಇನ್ನೊಬ್ಬರು ಬರುತ್ತಿದ್ದಾರೆ ಅನ್ನಿಸಿದಾಗ ಮನಸ್ಸಿಗೆ ಕಸಿವಿಸಿಯಾಗುತ್ತದೆ. ಭಯ, ಬೇಸರವು ಕೂಡ ಆಗಬಹುದು.ಆದರೆ, ಈ ಭಾವನೆಗಳು ಕ್ರಮೇಣ ಮಾಸಿ ಹೋಗುತ್ತವೆ. ಮನಸ್ಸು ಹೊಸ ಬದಲಾವಣೆಗಳಿಗೆ ಕ್ರಮೇಣ ಹೊಂದಿಕೊಳ್ಳುತ್ತದೆ. ನೀವು ಮಗುವಿನ ಬರುವಿಕೆಯನ್ನು ಅತಿ ಉತ್ಸಾಹ, ಸಂತೋಷದಿಂದ ಕಾಯುತ್ತಿದ್ದೀರಿ, ಒಳ್ಳೆಯ ತಂದೆಯಾಗಬೇಕು ಎಂದು ಬಯುಸುತ್ತೀದ್ದೀರಿ. ನಿಮಗೆ ಒಳ್ಳೆಯ ಉದ್ದೇಶಗಳಿವೆ. ಮುಂದೆ ಬರುವ ಸವಾಲುಗಳನ್ನು, ತಂದೆಯ ಕರ್ತವ್ಯಗಳನ್ನು ಚೆನ್ನಾಗಿ ನಿಭಾಯಿಸುವಿರೆಂದು ಭಾವಿಸಬಹುದು.
ನಿಮ್ಮ ಹೆಂಡತಿಯು ಇನ್ನುಮುಂದೆ ತಾಯಿಯೂ ಹೌದು. ತಾಯಿಯಾದ ಮೇಲೆ ಅವರ ಜವಾಬ್ದಾರಿಗಳು ಹೆಚ್ಚುತ್ತವೆ. ಗರ್ಭಧಾರಣೆಯಿಂದಾಗಿ ದೈಹಿಕ ಮತ್ತು ಮಾನಸಿಕವಾಗಿ ಹಲವು ಸವಾಲುಗಳು ಮತ್ತು ಬದಲಾವಣೆಗಳನ್ನು ಎದುರಿಸುತ್ತಾರೆ. ಅವರಿಗೂ ಕೂಡ ನಿಮ್ಮಂತೆಯೆ ಆತಂಕ, ದುಗುಡವೆಲ್ಲವೂ ಇರುತ್ತದೆ. ಮಾನಸಿಕ ಸಿದ್ದತೆಯಲ್ಲಿ ತೊಡಗಿರುತ್ತಾರೆ. ತಾಯಿಯಾಗಿ, ನಿಮ್ಮ ಸಂಗಾತಿಯಾಗಿ ಯಾವುದೇ ಕೊರತೆಯಿಲ್ಲದೇ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಬೇಕೆಂಬ ಬಯಕೆಯೂ ಸಹ ಇರುತ್ತದೆ. ಜೊತೆಗೆ, ಅವರ ಮೇಲಿರುವ ನಿಮ್ಮ ಪ್ರೀತಿ ಗಮನ ಸಮಯವೆಲ್ಲವೂ ಮಗುವಿನ ಜೊತೆ ಹಂಚಿಹೋಗುತ್ತದೆ ಎನ್ನುವ ಆತಂಕ ಭಯ ಅವರಿಗೂ ಇರುತ್ತದೆ.
ಆತಂಕದಿಂದ ಹೊರ ಬರುವುದಕ್ಕೆ ಹೀಗೆ ಮಾಡಿ
1) ಮುಕ್ತವಾಗಿ ನಿಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಿ. ಭಯ, ಆತಂಕಗಳ ಕುರಿತು ಮಾತನಾಡಿ. ನಿಮ್ಮ ನೀರೀಕ್ಷೆಗಳನ್ನು ವ್ಯಕ್ತಪಡಿಸಿ. ಮಗುವಿನ ಬರುವಿಕೆಯ ನಂತರ ಯಾವ ರೀತಿಯಲ್ಲಿ ಖಾಸಗಿ ಸಮಯವನ್ನು ಮೀಸಲಿಡಬಹುದೆಂದು ಯೋಚಿಸಿ.
2) ಇಬ್ಬರ ಪರಿಸ್ಥಿತಿಗಳನ್ನು ಒಬ್ಬರಿಗೊಬ್ಬರು ಅರ್ಥ ಮಾಡಿಕೊಡಲು ಪ್ರಯತ್ನಿಸಿ. ಸಾಧ್ಯವಾದಷ್ಟೂ ಪರಸ್ಪರನ್ನು ಬೆಂಬಲಿಸಿ. ಒತ್ತಡಗಳನ್ನು ಎದುರಿಸಲು ಪರಸ್ಪರ ಸಹಾಯ ಮಾಡಿ.
3) ಪರಸ್ಪರ ದೂಷಣೆ ಮಾಡುವುದು, ಇವರು ಹೀಗೆಯೇ, ನನ್ನನ್ನು ಪ್ರೀತಿಸುವುದಿಲ್ಲ, ನನ್ನ ಅವಶ್ಯಕತೆಯಿಲ್ಲ ಇತ್ಯಾದಿ ತೀರ್ಮಾನಗಳನ್ನು ಮಾಡಬೇಡಿ.
4) ಹೊಸ ಬದಲಾವಣೆಗಳನ್ನು ಅರಿತು, ಹೊಂದಿಕೊಳ್ಳಲು ಸಾಕಷ್ಟು ಸಮಯ, ಹಾಗು ಸಂಯಮದ ಅವಶ್ಯಕವಿರುತ್ತದೆ. ಸಾಧ್ಯವಾಗದಿದ್ದಲ್ಲಿ, ಆಪ್ತಸಮಾಲೋಚಕರ ಸಹಾಯ ತೆಗೆದುಕೊಳ್ಳಿ.
---
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.
ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.