DINK: ಜನಪ್ರಿಯವಾಗುತ್ತಿದೆ ಡಬಲ್‌ ಇನ್‌ಕಮ್‌ ನೋ ಕಿಡ್ಸ್‌ ಟ್ರೆಂಡ್‌; ಮಕ್ಕಳು ಬೇಡ ಎನ್ನುವ ಯುವಜನರ ಮನಸ್ಥಿತಿಗೆ ಕಾರಣವಿದು
ಕನ್ನಡ ಸುದ್ದಿ  /  ಜೀವನಶೈಲಿ  /  Dink: ಜನಪ್ರಿಯವಾಗುತ್ತಿದೆ ಡಬಲ್‌ ಇನ್‌ಕಮ್‌ ನೋ ಕಿಡ್ಸ್‌ ಟ್ರೆಂಡ್‌; ಮಕ್ಕಳು ಬೇಡ ಎನ್ನುವ ಯುವಜನರ ಮನಸ್ಥಿತಿಗೆ ಕಾರಣವಿದು

DINK: ಜನಪ್ರಿಯವಾಗುತ್ತಿದೆ ಡಬಲ್‌ ಇನ್‌ಕಮ್‌ ನೋ ಕಿಡ್ಸ್‌ ಟ್ರೆಂಡ್‌; ಮಕ್ಕಳು ಬೇಡ ಎನ್ನುವ ಯುವಜನರ ಮನಸ್ಥಿತಿಗೆ ಕಾರಣವಿದು

ಕಳೆದ ಕೆಲವು ದಿನಗಳಿಂದ ʼಡಿಂಕ್‌ʼ ಎಂಬ ಪರಿಕಲ್ಪನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಡ್ಯುಯಲ್‌ ಇನ್‌ಕಮ್‌ ನೋ ಕಿಡ್ಸ್‌ ಎನ್ನುವುದು ಡಿಂಕ್‌ನ ವಿಸ್ಕೃತ ರೂಪವಾಗಿದೆ. ಡಿಂಕ್‌ನ ಪ್ರಯೋಜನವನ್ನು ತೋರಿಸುವ ವಿಡಿಯೊಗಳು ವೈರಲ್‌ ಆಗುತ್ತಿವೆ. ಹಾಗಾದ್ರೆ ಏನಿದು ಡಿಂಕ್‌? ಯುವಜನರು ಈ ಪರಿಕಲ್ಪನೆಯ ಮೇಲೆ ಒಲವು ಹೊಂದಿರುವುದೇಕೆ?

ಡಿಂಕ್‌ ಟ್ರೆಂಡ್‌ (ಸಾಂಕೇತಿಕ ಚಿತ್ರ)
ಡಿಂಕ್‌ ಟ್ರೆಂಡ್‌ (ಸಾಂಕೇತಿಕ ಚಿತ್ರ)

ಮನುಷ್ಯ ಎಂದ ಮೇಲೆ ಮದುವೆ, ಸಂಸಾರ, ಮಕ್ಕಳು ಎಲ್ಲವೂ ಇದ್ದರೆ ಚೆನ್ನ. ಬದುಕು ಹೀಗೆ ಸಾಗಬೇಕು ಎಂಬುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಆದರೆ ಮಿಲೇನಿಯಲ್‌ ಜಮಾನದವರು ಮಕ್ಕಳು ಹೊಂದುವ ವಿಚಾರದಲ್ಲಿ ಮನಸ್ಸು ಮಾಡುತ್ತಿಲ್ಲ. ಮದುವೆ ಬೇಕು, ಮಕ್ಕಳು ಬೇಡ ಎನ್ನುವ ಮಂದಿ ನಮ್ಮಲ್ಲೂ ಹಲವರಿದ್ದಾರೆ. ಮಕ್ಕಳ ಬೇಡ ಎನ್ನುವುದು ಈಗ ಟ್ರೆಂಡ್‌ ಕೂಡ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ʼಡಿಂಕ್‌ʼ ಎನ್ನುವ ಪರಿಕಲ್ಪನೆಯೊಂದು ಭಾರಿ ಸದ್ದು ಮಾಡುತ್ತಿದೆ. ಡಿಂಕ್‌ ಎಂದರೆ ಡ್ಯುಯಲ್‌ ಇನ್‌ಕಮ್‌ ನೋ ಕಿಡ್ಸ್‌ ಎಂದಾಗಿದೆ. ಅಮೆರಿಕ, ಚೀನಾದಂತಹ ರಾಷ್ಟ್ರಗಳಲ್ಲಿ ಡಿಂಕ್‌ ಪರಿಕಲ್ಪನೆ ಹೆಚ್ಚು ಪ್ರಸ್ತುತದಲ್ಲಿದ್ದು, ಭಾರತದಲ್ಲೂ ಈ ಟ್ರೆಂಡ್‌ ಶುರುವಾಗಿದೆ. ಡಿಂಕ್‌ನ ಪ್ರಯೋಜನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಮಿಲೇನಿಯಲ್‌ ಕಪಲ್‌ಗಳು ತಾವು ಡಿಂಕ್‌ ಅನ್ನು ಮೆಚ್ಚಿರುವುದಾಗಿ ಬರೆದುಕೊಳ್ಳುತ್ತಿದ್ದಾರೆ.

ಏನಿದು ಡಿಂಕ್‌?

ʼಡ್ಯುಯಲ್‌ ಇನ್‌ಕಮ್‌ ನೋ ಕಿಡ್ಸ್‌ʼ ಎನ್ನುವುದನ್ನು ಸುಲಭವಾಗಿ ಹೇಳಬೇಕು ಅಂದ್ರೆ ಮಕ್ಕಳು ಮಾಡಿಕೊಳ್ಳದೇ ಆದಾಯ ಹೆಚ್ಚಿಸಿಕೊಳ್ಳುವುದು. ಮಕ್ಕಳು ಇದ್ದರೆ ಖರ್ಚು ಹೆಚ್ಚುತ್ತದೆ. ಹಲವು ದೇಶಗಳಲ್ಲಿ ಪೋಷಕರು ತಮ್ಮ ದುಡಿಮೆಯ ಬಹುಪಾಲನ್ನು ಮಕ್ಕಳ ಖರ್ಚು-ವೆಚ್ಚ, ಓದಿಗಾಗಿ ತೆಗೆದಿರಿಸುತ್ತಾರೆ. ಆದರೆ ಮಕ್ಕಳಿಲ್ಲದೇ ಇದ್ದರೆ ನಮ್ಮ ಆದಾಯ ದುಪ್ಪಟ್ಟು ಹೆಚ್ಚುತ್ತದೆ ಎಂಬುದು ಈ ಪರಿಕಲ್ಪನೆಯ ಉದ್ದೇಶವಾಗಿದೆ. ಆ ಕಾರಣದಿಂದಲೇ ಅಮೆರಿಕದಂತಹ ದೇಶದಲ್ಲಿ ಯುವ ಪೋಷಕರು ಮಕ್ಕಳು ಮಾಡಿಕೊಳ್ಳುವ ಬಗ್ಗೆ ಒಲವು ತೋರಿಸುತ್ತಿಲ್ಲ.

2022ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ 2009ರಿಂದ ಇಲ್ಲಿಯವರೆಗೆ ಅಮೆರಿಕದಲ್ಲಿ ಮಕ್ಕಳ ಜನನದ ಪ್ರಮಾಣವು ಶೇ 23ರಷ್ಟು ತಗ್ಗಿದೆ. ಜನರೇಷನ್‌ ಝಡ್‌ ಹಾಗೂ ಮಿಲೇನಿಯಲ್‌ ದಂಪತಿಗಳು ಈ ಟ್ರೆಂಡ್‌ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ ಎಂಬುದನ್ನು ಈ ಅಧ್ಯಯನ ತೋರಿಸಿದೆ. ಭವಿಷ್ಯದ ಜನಸಂಖ್ಯೆಯು ಕಾಳಜಿ, ಮಕ್ಕಳನ್ನು ಹೊಂದುವ ವಿಚಾರದಲ್ಲಿ ಸಾಮಾಜಿಕ ಒತ್ತಡಗಳ ಹೊರತಾಗಿಯೂ ಯುವ ದಂಪತಿಗಳು ಡಿಂಕ್‌ ಮೇಲೆ ಗಮನ ಹರಿಸಿದ್ದಾರೆ.

ಟಿಕ್‌ಟಾಕ್‌ (ಭಾರತದಲ್ಲಿ ಬ್ಯಾನ್‌ ಆಗಿದೆ), ಎಕ್ಸ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮಿಲೇನಿಯಲ್‌ ಜಮಾನದವರು ತಮ್ಮ ನಿರ್ಧಾರವನ್ನು ವ್ಯಕ್ತಪಡಿಸುತ್ತಿದ್ದಾರೆ. ಡಿಂಕ್‌ ಪರಿಕಲ್ಪನೆಗೆ ಸಂಬಂಧಿಸಿ ವಿಡಿಯೊವೊಂದು ವೈರಲ್‌ ಆಗಿದ್ದು ಮಕ್ಕಳಿಲ್ಲದೇ ಇರುವ ದಂಪತಿಗಳು ಯಾವ ಕಾರಣಕ್ಕೆ ಉತ್ತಮ ಜೀವನ ನಡೆಸುತ್ತಾರೆ ಎಂಬುದನ್ನು ಇದರಲ್ಲಿ ತೋರಿಸಲಾಗಿದೆ.

ʼನಾವು ಡಿಂಕ್‌ ದಂಪತಿಗಳು. ನಾವು ಬಯಸಿದಂತೆ ಖರ್ಚು ಮಾಡಲು, ನಮ್ಮ ಇಷ್ಟದಂತೆ ಬದುಕಲು ನಮಗೆ ಆದಾಯವಿದೆ. ನಮ್ಮ ಆದಾಯವನ್ನು ಮಕ್ಕಳಿಗೆ ಮೀಸಲಿರಿಸುವ ಅಗತ್ಯ ನಮಗಿಲ್ಲʼ ಎಂದು ಮಹಿಳೆಯೊಬ್ಬರು ಹೇಳುತ್ತಾರೆ. ಮಕ್ಕಳಿಲ್ಲದ ಕಾರಣ, ಆಕೆ ಕುಟುಂಬ ಸದಸ್ಯರಿಂದ ಸಹಾಯ ಕೇಳಬೇಕಾಗಿಲ್ಲ, ಮನೆಯಿಂದ ಹೊರ ಹೋಗುವಾಗ ಮಗುವನ್ನು ನೋಡಿಕೊಳ್ಳಿ ಎಂದು ಸಂಬಂಧಿಕರು ಹಾಗೂ ಪರಿಚಯದವರ ಬಳಿ ಗೋಗರೆಯುವ ಹಾಗಿಲ್ಲ ಎಂದು ತೋರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಡಿಂಕ್‌ ಪರಿಕಲ್ಪನೆಯನ್ನು ಇಷ್ಟಕ್ಕೆ ಮುಗಿದಿಲ್ಲ. ಇದು ಇನ್ನಷ್ಟು ಮುಂದುವರಿದು ಡಿಂಕ್‌ವಾಡ್ಸ್‌(DINKWADs) ಅಂದರೆ ಡಬಲ್‌ ಇನ್‌ಕಮ್‌ ನೋ ಕಿಡ್ಸ್‌ ವಿತ್‌ ಡಾಗ್‌ ಹಾಗೂ ಡಿಂಕ್‌ವಾಹ್ಸ್‌(DINKWAHs) ಡಬಲ್‌ ಇನ್‌ಕಮ್‌ ನೋ ಕಿಡ್ಸ್‌ ವಿತ್‌ ಹೌಸ್‌ʼ ಈ ಪರಿಕಲ್ಪನೆಗಳೂ ಚಾಲ್ತಿಗೆ ಬಂದಿವೆ.

ಟಿಕ್‌ಟಾಕ್‌ ಸಾಮಾಜಿಕ ಜಾಲತಾಣದಲ್ಲಿ ಡಿಂಕ್‌ ಸಂಬಂಧಿಸಿದ ವಿಡಿಯೊಗಳು ಹೆಚ್ಚು ಶೇರ್‌ ಆಗುತ್ತಿದ್ದು, ಡಿಂಕ್‌, ಡಿಂಕ್ಸ್‌, ಡಿಂಕ್‌ಲೈಫ್‌ ಎಂಬೆಲ್ಲಾ ಹ್ಯಾಷ್‌ಟ್ಯಾಗ್‌ಗಳು ಕೂಡ ಸೃಷ್ಟಿಯಾಗಿವೆ.

ಎಲಾನ್‌ ಮಸ್ಕ್‌ ಪ್ರತಿರೋಧ

ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಕ್ಕಳು ಬೇಡ ಎನ್ನುವ ಟ್ರೆಂಡ್‌ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕೆಲವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೆಟಾ ಕಂಪನಿಯ ಒಡೆಯ ಎಲಾನ್‌ ಮಸ್ಕ್‌ ಈ ಟ್ರೆಂಡ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ಬದುಕಿನಲ್ಲಿ ಮಕ್ಕಳು ಇರುವುದು ಬಹಳ ಮುಖ್ಯ. ಡಿಂಕ್‌ ಟಿಕ್‌ಟಾಕ್‌ ವಿಡಿಯೊಗಳು ಟ್ರೆಂಡ್‌ ಆಗುತ್ತಿರುವ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಎಲಾನ್‌ ಮಸ್ಕ್‌ ʼಉದ್ದೇಶಪೂರ್ವಕವಾಗಿ ಮಕ್ಕಳನ್ನು ಹೊಂದದೇ ಇರುವುದು ನಿಜಕ್ಕೂ ಸರಿಯಲ್ಲ. ವೃದ್ಧಾಪ್ಯದಲ್ಲಿ ಮಕ್ಕಳು ನಮ್ಮನ್ನು ನೋಡಿಕೊಳ್ಳಬೇಕು ಎಂದು ಹಲವು ಪೋಷಕರು ಆಸೆ ಪಡುತ್ತಾರೆ. ಆದರೆ ಈ ಟ್ರೆಂಡ್‌ ಜನರಲ್ಲಿ ಗೊಂದಲ ಸೃಷ್ಟಿಸಿದೆʼ ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

ಮಕ್ಕಳಿಲ್ಲದ ಜೀವನದ ಇಷ್ಟಪಡಲು ಕಾರಣ

2021ರಲ್ಲಿ ಪ್ಯೂ ರಿಸರ್ಚ್‌ ಸೆಂಟರ್‌ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ 18 ರಿಂದ 49 ವರ್ಷದ ಶೇ 44ರಷ್ಟು ಜನರು ಮಕ್ಕಳು ಹೊಂದುವುದು ತಮಗೆ ಇಷ್ಟವಿಲ್ಲ ಎಂಬ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಮಕ್ಕಳು ಬೇಡ ಎನ್ನುವವರ ಸಂಖ್ಯೆ ಶೇ 37 ರಷ್ಟಿತ್ತು. ಇತ್ತೀಚಿನ ದಿನಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚಿದೆ.

ಅಧ್ಯಯನ ವರದಿಗಳ ಪ್ರಕಾರ ಶೇ 56ರಷ್ಟು ಮಂದಿ ಮಕ್ಕಳನ್ನು ಹೊಂದುವ ಸಾಧ್ಯತೆ ಇಲ್ಲ ಎಂಬ ಅಂಶಗಳನ್ನು ಹೊರ ಹಾಕಿದೆ. ಇದರಲ್ಲಿ ಶೇ 19ರಷ್ಟು ಮಂದಿ ವೈದ್ಯಕೀಯ ಕಾರಣ ಹೇಳುತ್ತಾರೆ. ಶೇ 17 ರಷ್ಟು ಮಂದಿ ಆರ್ಥಿಕ ಕಾರಣ ತಿಳಿಸಿದರೆ, ಇನ್ನೂ ಶೇ 15ರಷ್ಟು ಮಂದಿ ನಮಗೆ ಸಂಗಾತಿಯಿಲ್ಲ ಎಂಬ ಮಾತು ಹೇಳಿದ್ದಾರೆ.

ಈ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ 10ರಷ್ಟು ಮಂದಿ ಮಕ್ಕಳನ್ನು ಪಡೆಯುವ ವಿಚಾರದಲ್ಲಿ ತಮ್ಮ ಸಂಗಾತಿಯ ವಯಸ್ಸಿನ ಕಾರಣವನ್ನೂ ತಿಳಿಸಿದ್ದಾರೆ. ಅಲ್ಲದೇ ಶೇ 9 ರಷ್ಟು ಮಂದಿ ಪ್ರಪಂಚದ ಪ್ರಸ್ತುತ ಸ್ಥಿತಿಯ ಕಾರಣದಿಂದಾಗಿ ಮಕ್ಕಳನ್ನು ಬಯಸುತ್ತಿಲ್ಲ. ಒಟ್ಟಾರೆ ಇವರೆಲ್ಲರ ಅಂತಿಮ ಉದ್ದೇಶ ಮಕ್ಕಳನ್ನು ಹೊಂದದೇ ಇರುವುದು.

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗಿರುವ ವಿಡಿಯೊಗಳು ಮಕ್ಕಳಿಲ್ಲದೇ ಇದ್ದರೆ ದಂಪತಿಗಳಿಗೆ ಏನೆಲ್ಲಾ ಲಾಭವಾಗಲಿದೆ ಎಂಬುದನ್ನು ತೋರಿಸಿದೆ. ತಮಗೆ ಇಷ್ಟಬಂದಂತೆ ಬದುಕುವುದು, ನಿಗಾ ಇಲ್ಲದಂತೆ ಹಣ ಖರ್ಚು ಮಾಡುವ ಸ್ವಾತಂತ್ರ್ಯ, ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಇತರರ ಮೇಲೆ ಅವಲಂಬಿತವಾಗಿರುವುದನ್ನು ತಪ್ಪಿಸುವುದು ಸೇರಿದಂತೆ ಇನ್ನೂ ಹಲವು ಕಾರಣದಿಂದಾಗಿ ಮಕ್ಕಳ-ಮುಕ್ತ ಬದುಕು ನಡೆಸಲು ಅವರು ಸಜ್ಜಾಗಿದ್ದಾರೆ.

ಇದೂ ಕೂಡ ಕಾರಣ

ಕೆಲವು ಸಂಸ್ಥೆಗಳು ನಡೆಸಿರುವ ಅಧ್ಯಯನಗಳ ಪ್ರಕಾರ ಯುವಜನರು ಮಕ್ಕಳು ಬೇಡ ಎನ್ನಲು ಮೊದಲ ಕಾರಣ ಹೆಚ್ಚುತ್ತಿರುವ ಬೆಲೆ ಏರಿಕೆ. ʼಈಗಾಗಲೇ ಜೀವನ ತುಂಬಾ ದುಬಾರಿಯಾಗಿದೆ. ಹಾಗಾಗಿ ಮಕ್ಕಳನ್ನು ಹೊಂದಿ, ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕೆ ಮಕ್ಕಳು ಇಲ್ಲದೇ ಇರುವುದು ಉತ್ತಮʼ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಡಿಂಕ್‌ ವಿವಾದ ಸೃಷ್ಟಿಸಿದ್ದು ಏಕೆ?

ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳ ಹೊರತಾಗಿಯೂ ಡಿಂಕ್‌ ಜೀವನಶೈಲಿಯು ಯುವ ದಂಪತಿಗಳ ಸ್ವಾರ್ಥವನ್ನೂ ಎತ್ತಿ ತೋರಿಸುತ್ತಿದೆ. ಬ್ರಿಟಿಷ್‌ ಸಮೀಕ್ಷೆಯೊಂದರ ಪ್ರಕಾರ ಮಕ್ಕಳನ್ನು ಬಯಸದ ಶೇ 49ರಷ್ಟು ಜನರು ತಮ್ಮ ವೈಯಕ್ತಕಿ ಸ್ವಾತಂತ್ರ್ಯಕ್ಕಾಗಿ ಮಕ್ಕಳು ಬೇಡ ಎನ್ನುತ್ತಿದ್ದಾರೆ.

ಇನ್ನು ಮಸ್ಕ್‌ರಂತಹವರು ವೃದ್ಧಾಪ್ಯದಲ್ಲಿ ತಮ್ಮನ್ನು ನೋಡಿಕೊಳ್ಳಲು ಮಕ್ಕಳು ಬೇಕು, ವೃದ್ಧಾಪ್ಯದಲ್ಲಿ ಮಕ್ಕಳ ಪೋಷಕರನ್ನು ಸಲಹಬೇಕು ಎಂದು ಒತ್ತಾಯಿಸುತ್ತಿದ್ದಾರೆ.

2018ರ ಅಧ್ಯಯನದ ಪ್ರಕಾರ ಸ್ವಾರ್ಥ ಉದ್ದೇಶ ಹೊಂದಿರುವವರು ಮಕ್ಕಳನ್ನು ಹೊಂದಲು ಬಯಸುತ್ತಿಲ್ಲ ಎಂದು ತಿಳಿಸಿದೆ. ಅಂದರೆ ಮಕ್ಕಳಿಗಾಗಿ ನಾವು ದುಡಿಯಬೇಕು, ನಮ್ಮ ವೈಯಕ್ತಕಿ ಸ್ವಾತಂತ್ರ್ಯ ಹರಣವಾಗುತ್ತದೆ ಎಂಬುದು ಇವರ ಉದ್ದೇಶವಾಗಿದೆ ಎಂದು ಈ ವರದಿ ತಿಳಿಸುತ್ತದೆ.

ಆದರೆ ಡಿಂಕ್‌ ಪರಿಕಲ್ಪನೆ ನಿಜಕ್ಕೂ ಸ್ವಾರ್ಥವೇ, ಮಕ್ಕಳು ಬೇಡ ಎಂದು ನಿರ್ಧರಿಸಿದವರೆಲ್ಲಾ ಸ್ವಾರ್ಥಿಗಳಾಗಲು ಹೇಗೆ ಸಾಧ್ಯ, ಎಲ್ಲರಿಗೂ ವೈಯಕ್ತಿಕ ಅಭಿಪ್ರಾಯ ಹೊಂದುವ ಹಕ್ಕಿದೆ. ಮಕ್ಕಳು ಬೇಕು ಬೇಡ ಎಂಬುದನ್ನು ನಿರ್ಧರಿಸುವುದು ಪೋಷಕರು ಹಕ್ಕು ಹೀಗೆ ಈ ಪರಿಕಲ್ಪನೆಯ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ.

Whats_app_banner