Makar Sankranti 2024: ಕರ್ನಾಟಕ ಸೇರಿ ಭಾರತದ ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಆಚರಣೆ ಹೇಗಿರುತ್ತೆ? ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  Makar Sankranti 2024: ಕರ್ನಾಟಕ ಸೇರಿ ಭಾರತದ ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಆಚರಣೆ ಹೇಗಿರುತ್ತೆ? ಇಲ್ಲಿದೆ ಉತ್ತರ

Makar Sankranti 2024: ಕರ್ನಾಟಕ ಸೇರಿ ಭಾರತದ ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಆಚರಣೆ ಹೇಗಿರುತ್ತೆ? ಇಲ್ಲಿದೆ ಉತ್ತರ

ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ಯಾಲೆಂಡರ್‌ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಮಕರ ಸಂಕ್ರಾಂತಿ ಭಾರತದಾದ್ಯಂತ ಆಚರಿಸುವ ಸಂಭ್ರಮ ಹಬ್ಬ. ಈ ಹಬ್ಬದ ಉದ್ದೇಶ ಒಂದೇಯಾದರೂ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿ ಆಚರಣೆ ಇದೆ. ಹಾಗಾದ್ರೆ ಯಾವೆಲ್ಲಾ ರಾಜ್ಯಗಳಲ್ಲಿ ಮಕರ ಸಂಕ್ರಾಂತಿಯನ್ನು ಯಾವೆಲ್ಲಾ ಹೆಸರಿನಿಂದ ಕರೆಯುತ್ತಾರೆ, ಹೇಗೆ ಆಚರಿಸುತ್ತಾರೆ ನೋಡಿ.

ಮಕರ ಸಂಕ್ರಾಂತಿ
ಮಕರ ಸಂಕ್ರಾಂತಿ

ಜನವರಿ ತಿಂಗಳು ಬಂತೆಂದರೆ ಭಾರತದಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಆರಂಭವಾಗುತ್ತದೆ. ಭಾರತದಾದ್ಯಂತ ಮಕರ ಸಂಕ್ರಾಂತಿಯನ್ನು ಬಹಳ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ.

ಭಾರತವು ಹಬ್ಬಗಳ ತವರು. ಇಲ್ಲಿ ಪ್ರತಿ ತಿಂಗಳು ಒಂದಿಲ್ಲೊಂದು ಹಬ್ಬವಿರುತ್ತದೆ. ಪ್ರತಿ ಕ್ಯಾಲೆಂಡರ್‌ ವರ್ಷದ ಮೊದಲ ಹಬ್ಬ ಮಕರ ಸಂಕಾಂತ್ರಿ. ಇದನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಇದು ಚಳಿಗಾಲದ ಅಂತ್ಯವನ್ನು ಸೂಚಿಸುವ ಹಬ್ಬ ಮಾತ್ರವಲ್ಲ, ಈ ಹಬ್ಬದ ನಂತರ ಸೂರ್ಯನು ಉತ್ತರ ದಿಕ್ಕಿನ ಕಡೆಗೆ ಪಯಣಿಸುವ ಕಾರಣ ದಿನಗಳು ದೀರ್ಘವಾಗಿರುತ್ತದೆ.

ಸಾಮಾನ್ಯವಾಗಿ ಜನವರಿ 14 ಅಥವಾ 15 ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ಸುಗ್ಗಿ ಹಬ್ಬ ಎಂದು ಕರೆದರೂ ಕೂಡ ಹಬ್ಬದ ಆಚರಣೆಯ ವಿಧಾನ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಹಾಗಾದರೆ ಯಾವೆಲ್ಲಾ ರಾಜ್ಯದಲ್ಲಿ ಮಕರ ಸಂಕ್ರಾಂತಿಯನ್ನು ಹೇಗೆಲ್ಲಾ ಆಚರಿಸುತ್ತಾರೆ ನೋಡಿ.

ಕರ್ನಾಟಕದಲ್ಲಿ ಮಕರ ಸಂಕ್ರಮಣ

ಕರ್ನಾಟಕದಲ್ಲಿ ಈ ಸುಗ್ಗಿ ಹಬ್ಬವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಈ ದಿನದಂದು ಸಮೃದ್ಧ ಫಸಲು ನೀಡಿದ ದೇವರಿಗೆ ಕೃತಜ್ಞತೆ ಅರ್ಪಿಸುವ ಮೂಲಕ ಆಚರಿಸಲಾಗುತ್ತದೆ. ಇದು ರೈತರ ಹಬ್ಬ. ಎಳ್ಳು-ಬೆಲ್ಲ ಹಂಚಿ ಶುಭಾಶಯ ಕೋರಲಾಗುತ್ತದೆ. ಮಹಿಳೆಯರು ಬಾಗಿನ ನೀಡುವ ಮೂಲಕ ಹಬ್ಬ ಆಚರಿಸುತ್ತಾರೆ. ಹಸುಗಳನ್ನು ಅಲಂಕರಿಸಿದ ಮೆರವಣಿಗೆ ಮಾಡುವುದು ವಿಶೇಷ.

ಇದನ್ನೂ ಓದಿ: 2024 ರ ರಾಶಿ ಪ್ರಕಾರ ವರ್ಷ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಒರಿಸ್ಸಾದಲ್ಲಿ ಸಂಕ್ರಾಂತಿ ಆಚರಣೆ

ಒರಿಸ್ಸಾ ಮಕರ ಸಂಕ್ರಾಂತಿ ಆರಂಭವಾಗುವುದು ಇಲ್ಲಿನ ಜನರು ಕೊಳ ಅಥವಾ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಮೂಲಕ. ಇವರು ಮಕಲ ಚೌಲ ಅಥವಾ ಹೊಸದಾಗಿ ಕೊಯ್ಲ ಮಾಡಿದ ಅಕ್ಕಿ, ಬಾಳೆಹಣ್ಣು, ತೆಂಗಿನಕಾಯಿ, ಬೆಲ್ಲ, ಎಳ್ಳು, ಕುಡುಬು ಹೀಗೆ ಇವನ್ನೆಲ್ಲಾ ದೇವರಿಗೆ ನೈವೇದ್ಯ ಮಾಡುತ್ತಾರೆ. ಒಡಿಶಾದ ಮಯೂರ್‌ಭಂಜ್‌, ಸುಂದರ್‌ಗಢ್‌ ಮತ್ತು ಕಿಯೋಂಜಾರ್‌ ಜಿಲ್ಲೆಗಳಲ್ಲಿ ಶೇ 40 ರಷ್ಟು ಆದಿವಾಸಿಗಳಿದ್ದಾರೆ. ಅವರಲ್ಲಿ ಮಕರ ಸಂಕ್ರಾಂತಿ ವಿಶೇಷವಾಗಿರುತ್ತದೆ. ಅವರು ಒಂದು ವಾರಗಳ ಕಾಲ ಹಾಡು, ನೃತ್ಯದ ಮೂಲಕ ಹಬ್ಬವನ್ನು ಎಂಜಾಯ್‌ ಮಾಡುತ್ತಾರೆ. ಇಲ್ಲಿ ಮಕರ ಸಂಕಾಂತ್ರಿಯಂದು ಸಂಜೆ ಗಾಳಪಟ ಹಾರಿಸುವುದು ವಿಶೇಷ. ಈ ದಿನ ಸೂರ್ಯನು ತನ್ನ ಪಥ ಬದಲಿಸುವ ಕಾರಣ ಇಲ್ಲಿನ ಕೋನಾರ್ಕ್‌ ದೇವಾಲಯದಲ್ಲಿ ಸೂರ್ಯನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪಶ್ಚಿಮ ಒಡಿಶಾದಲ್ಲಿ ಆತ್ಮಿಯ ಸ್ನೇಹಿತದೊಂದಿಗೆ ತಮ್ಮ ಬಾಂಧವ್ಯ ಹೆಚ್ಚಿಸುವ ದಿನವನ್ನಾಗಿ ಇದನ್ನು ಆಚರಿಸಲಾಗುತ್ತದೆ. ಆ ಕಾರಣಕ್ಕೆ ಇವರು ಮಕರ ಬಾಸಿಬಾ ಎಂದು ಕರೆಯುತ್ತಾರೆ.

ಗುಜರಾತ್‌

ಗುಜರಾತ್‌ನಲ್ಲಿ ಮಕರ ಸಂಕ್ರಾಂತಿ ಉತ್ತರಾಯಣ ಎಂದೇ ಪ್ರಸಿದ್ಧಿ. ಇಲ್ಲಿನ ಹಬ್ಬದ ಆಚರಣೆಯ ಪ್ರಮುಖ ಅಂಶ ಗಾಳಿಪಟ ಹಾರಿಸುವುದು. ಲಕ್ಷಾಂತರ ಗುಜರಾತಿಗಳು ತಮ್ಮ ಬಾಲ್ಕನಿ, ಟೆರೆಸ್‌ನಿಂದ ಗಾಳಿಪಟ ಹಾರಿಸುವ ಮೂಲಕ ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡುವಂತೆ ಮಾಡುತ್ತಾರೆ. ಅಲ್ಲದೆ ಬಗೆಬಗೆಯ ಭಕ್ಷ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಈ ಹಬ್ಬದಂದು ಚಿಕ್ಕಿ, ಉಂಧಿಯು, ಜಿಲೇಬಿಯಂತಹ ವಿಶೇಷ ಖಾದ್ಯಗಳನ್ನೂ ತಯಾರಿಸಲಾಗುತ್ತದೆ.

ತಮಿಳುನಾಡಿನ ಪೊಂಗಲ್‌

ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿಯನ್ನು ʼಪೊಂಗಲ್‌ʼ ಎಂದು ಕರೆಯುತ್ತಾರೆ. ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿ ಆಚರಣೆ ಬಹಳ ವಿಶೇಷ. ಅನಾದಿಕಾಲದಿಂದಲೂ ಇಲ್ಲಿ ಪೊಂಗಲ್‌ ಅನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದರು. ಇಲ್ಲಿ ಪೊಂಗಲ್‌ ಅನ್ನು ನಾಲ್ಕು ದಿನಗಳ ಕಾಲ ಆಚರಿಸುತ್ತಾರೆ. ವಿಶಾಲವಾದ ಬಯಲು ಅಥವಾ ಅಂಗಳದಲ್ಲಿ ಒಲೆ ಇರಿಸುವ ಮೂಲಕ ಮಡಿಕೆಯಲ್ಲಿ ಪೊಂಗಲ್‌ ತಯಾರಿಸುತ್ತಾರೆ. ಇದು ತಮಿಳು ತಿಂಗಳಾದ ಮಾರ್ಗಜಿಯ ಕೊನೆಯ ದಿನ ಆರಂಭಗೊಂಡು ತಮಿಳು ತಿಂಗಳ ಥಾಯ್‌ನ ಮೂರನೇ ದಿನ ಕೊನೆಗೊಳ್ಳುತ್ತದೆ.

ಅಸ್ಸಾಂನಲ್ಲಿ ಸಂಕ್ರಾಂತಿಗೆ ಬಿಹು ಅಂತಾರೆ

ಭೋಗಾಲಿ ಬಿಹು ಎಂದೂ ಕರೆಯಲ್ಪಡುವ ಮಾಗ್‌ ಬಿಹು ಅಸ್ಸಾಮಿಯ ಸುಗ್ಗಿ ಹಬ್ಬವಾಗಿದೆ. ಇದು ಮಾಘ ತಿಂಗಳು ಅಂದರೆ ಜನವರಿ-ಫೆಬ್ರುವರಿ) ತಿಂಗಳ ಕೊಯ್ಲಿನ ಋತುವಿನ ಮುಕ್ತಾಯವನ್ನು ಸೂಚಿಸುತ್ತದೆ. ಹಬ್ಬ ಅಂಗವಾಗಿ ಆಚರಣೆಗಳು ಹಾಗೂ ದೀಪೋತ್ಸವ ಕೂಡ ನಡೆಯುತ್ತದೆ. ಇಲ್ಲಿನ ಯುವಕರು ಬಿಹು ಸಮಯದಲ್ಲಿ ಬಿದಿರು, ಎಲೆ ಹಾಗೂ ಹುಲ್ಲಿನಿಂದ ಮೆಜಿ ಎಂದು ಕರೆಯುವ ಮನೆಗಳನ್ನು ನಿರ್ಮಿಸುತ್ತಾರೆ. ಮರುದಿನ ಆ ಗುಡಿಸಲುಗಳನ್ನು ಸುಡುವ ಮೂಲಕ ಹಬ್ಬದ ವಿಶೇಷ ಖಾದ್ಯಗಳನ್ನು ಸವಿಯುತ್ತಾರೆ. ಇಲ್ಲಿನ ಸ್ಥಳೀಯ ಸಾಂಪ್ರದಾಯಿಕ ಕಲೆಗಳಾದ ಟೆಕೇಲಿ ಭೋಂಗಾ (ಮಡಕೆ ಒಡೆಯುವುದು) ಮತ್ತು ಎಮ್ಮೆ ಕಾಳಗ ಕೂಡ ಹಬ್ಬದ ಭಾಗವಾಗಿದೆ.

ಇದನ್ನೂ ಓದಿ: Finance Horoscope: ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುವುದಿಲ್ಲ; ಅನಾವಶ್ಯಕ ಖರ್ಚು ಎದುರಾಗಲಿದೆ; 2024ರ ಕುಂಭ, ಮೀನ ರಾಶಿಯ ಹಣಕಾಸು ಭವಿಷ್ಯ

ಪಂಜಾಬ್‌ನಲ್ಲಿ ಲೋಹ್ರಿ

ಪಂಜಾಬ್‌ನಲ್ಲಿ ಮಕರ ಸಂಕಾಂತ್ರಿಯನ್ನು ಲೋಹ್ರಿ ಎಂದು ಕರೆಯಲಾಗುತ್ತದೆ. ಇಲ್ಲಿ ಈ ಹಬ್ಬವನ್ನು ಬಣ್ಣಗಳು ನೃತ್ಯ, ಸಂಗೀತ ಹಾಗೂ ದೀಪೋತ್ಸವಗಳ ಮೂಲಕ ಆಚರಿಸಲಾಗುತ್ತದೆ. ಇಲ್ಲಿನ ಮಕ್ಕಳು ಮನೆ ಮನೆಗೆ ಹೋಗಿ ಲೂಟಿ (ಪಾಪ್‌ಕಾರ್ನ್‌, ಕಡಲೆಕಾಯಿ, ಬೆಲ್ಲ ಹೀಗೆ ಸಿಹಿ ತಿಂಡಿಗಳು) ಸಂಗ್ರಹಿಸುತ್ತಾ ದುಲ್ಹಭಟ್ಟಿ ಹಾಡುತ್ತಾರೆ. ಸಂಜೆ ಎಲ್ಲೆಡೆಯೂ ದೀಪ ಬೆಳಗಿ ದೀಪದ ಸುತ್ತಲೂ ಭಾಂಗ್ರಾ ನೃತ್ಯ ಮಾಡುತ್ತಾರೆ.

ಹಿಮಾಚಲ ಪ್ರದೇಶ ಮಾಘ ಸಾಜಿ

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮಕರ ಸಂಕ್ರಾಂತಿಯನ್ನು ಮಾಘ ಸಾಜಿ ಎಂದು ಕರೆಯಲಾಗುತ್ತದೆ. ಇಲ್ಲಿನ ಜನರಿಗೆ ಇದು ಮಾಘ ಮಾಸದ ಆರಂಭದ ದಿನವಾಗಿದೆ. ಇದನ್ನು ಮಾಘ ಸಾಜಿಯಂದೂ ಕರೆಯಲಾಗುತ್ತದೆ. ಈ ದಿನ ಬೆಳಿಗ್ಗೆ ಬೇಗ ಎದ್ದು ಕೊಳ, ನದಿಗಳಲ್ಲಿ ಸ್ನಾನ ಮಾಡಲಾಗತುತ್ತದೆ. ಇಲ್ಲಿನ ಜನರು ತಮ್ಮ ನೆರೆಹೊರೆಯವರನ್ನು ಭೇಟಿ ಮಾಡುವ ಮೂಲಕ ಹಬ್ಬ ಆಚರಿಸುತ್ತಾರೆ. ಹಾಡು, ನಾಟಿ (ಜನಪದ ನೃತ್ಯ) ದೊಂದಿಗೆ ಉತ್ಸವ ಕೊನೆಗೊಳ್ಳುತ್ತದೆ.

ಕಿಚೇರಿ ಉತ್ತರಪ್ರದೇಶ

ಉತ್ತರ ಪ್ರದೇಶದಲ್ಲಿ ಮಕರ ಸಂಕ್ರಾತಿಗೆ ಕಿಚೇರಿ ಎನ್ನುತ್ತಾರೆ. ಇದು ಪವಿತ್ರ ಸ್ನಾನ ಮಾಡುವ ದಿನವಾಗಿದೆ. ಈ ದಿನ ಪವಿತ್ರ ಸ್ನಾನದಲ್ಲಿ ಉತ್ತರಪ್ರದೇಶ ಮಂದಿ ಅಲಹಾಬಾದ್‌, ವಾರಣಸಿ, ಹರಿದ್ವಾರದಂತಹ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಸ್ನಾನ ನಂತರ ತಿಲ್‌ ಲಡ್ಡು ಅಥವಾ ಗುಡ್‌ ಲಡ್ಡು ಸೇವಿಸುವುದು ವಾಡಿಕೆ.

ಪಶ್ಚಿಮ ಬಂಗಾಳದಲ್ಲಿ ಪೌಶ್‌ ಸಂಕ್ರಾಂತಿ

ಪಶ್ಚಿಮ ಬಂಗಾಳದಲ್ಲಿ ಪೌಶ್‌ ಸಂಕ್ರಾಂತಿಯಂದು ಕರೆಯಲಾಗುತ್ತದೆ. ಬಂಗಾಳದಲ್ಲಿ ಈ ಸುಗ್ಗಿ ಹಬ್ಬವನ್ನು ಪೌಶ್‌ ಪರ್ಬನ್‌ ಎಂದು ಆಚರಿಸಲಾಗುತ್ತದೆ. ಹೊಸದಾಗಿ ಕೊಯ್ಲು ಮಾಡಿದ ಭತ್ತ ಮತ್ತು ಖರ್ಜೂರದ ಸಿರಪ್ ಅನ್ನು 'ಖೆಜುರೆರ್ ಗುರ್' ಮತ್ತು 'ಪಾಟಲಿ' ರೂಪದಲ್ಲಿ 'ಪಿತಾ' ಎಂದು ಕರೆಯಲಾಗುವ ವಿವಿಧ ಸಾಂಪ್ರದಾಯಿಕ ಬಂಗಾಳಿ ಸಿಹಿತಿಂಡಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಅಕ್ಕಿ ಹಿಟ್ಟು, ತೆಂಗಿನಕಾಯಿ, ಹಾಲು ಮತ್ತು 'ಇದನ್ನು ಬಳಸಿ ಉತ್ಪಾದಿಸಲಾಗುತ್ತದೆ. ಖೆಜುರೆರ್ ಗುರ್' (ಖರ್ಜೂರ ಬೆಲ್ಲ). ಇಲ್ಲಿ ಮಕರ ಸಂಕ್ರಾಂತಿಗೆ ಲಕ್ಷ್ಮೀದೇವಿಯನ್ನು ಆಚರಿಸುತ್ತಾರೆ, ಮೂರು ದಿನಗಳ ಕಾಲ ಹಬ್ಬ ನಡೆಯಲಾಗುತ್ತದೆ.

ಜಾರ್ಖಂಡ, ಬಿಹಾರದಲ್ಲಿ ಖಿಚದಿ ಪರ್ವ್‌

ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಖಿಚಡಿ ಪರ್ವ್‌ ಎನ್ನುತ್ತಾರೆ. ಇಲ್ಲೂ ಕೂಡ ಪವಿತ್ರಸ್ನಾನ, ದೀಪೋತ್ಸವ, ಗಾಳಿಪಟ ಹಾರಿಸುವುದು ಜೊತೆಗೆ ಮಸೂರ ಬೇಳೆ, ಅಕ್ಕಿ, ಹೂಕೋಸು, ಬಟಾಣಿ ಮತ್ತು ಆಲೂಗೆಡ್ಡೆಗಳಿಂದ ತಯಾಋಿಸಿದ ಖಿಚಡಿ, ಚೋಖಾ (ಹುರಿದ ತರಕಾರಿಗಳು), ಆಚಾರ್‌ (ಉಪ್ಪಿನಕಾಯಿ), ಹಪ್ಪಳ, ತುಪ್ಪ ಮುಂತಾದುವನ್ನು ಸೇವಿಸಬೇಕಾಗುತ್ತದೆ.

Whats_app_banner