Ayyappa: ಅಯ್ಯಪ್ಪ ಸ್ವಾಮಿ ಭಕ್ತಾದಿಗಳ ಆಚಾರ ವಿಚಾರ ಹೇಗಿರುತ್ತದೆ? ಅವರು ಪಾಲಿಸಬೇಕಾದ ನಿಯಮಗಳು ಇಲ್ಲಿದೆ
Ayyappa devotees: ಅಯ್ಯಪ್ಪನ ಮಾಲೆ ಧರಿಸಿರುವವರ ದೇಹ ಮತ್ತು ಆತ್ಮ ಎರಡೂ ಶುದ್ಧಿವಾಗಿರಬೇಕು. ಮಾಲೆ ಧರಿಸಿದ ದಿನಗಳಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂಬುದು ಇಲ್ಲಿದೆ.. (ಬರಹ: ಎಚ್. ಸತೀಶ್, ಜ್ಯೋತಿಷಿ)
ಶಬರಿಮಲೆಗೆ ತೆರಳುವವರು ಅನೇಕ ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸಬೇಕು. ಬಹು ಮುಖ್ಯವಾಗಿ ಸ್ತ್ರೀ ಮತ್ತು ಹಣದ ವ್ಯಾಮೋಹ ಇರಬಾರದು. ಅಯ್ಯಪ್ಪನ ನಾಮವನ್ನು ಜಪಿಸಿದರೆ ಆತ್ಮ ಶುದ್ಧಿಯಾಗುತ್ತದೆ. ಆದರೆ ದೇಹ ಶುದ್ದಿಯೂ ಅವಶ್ಯಕವಾಗುತ್ತದೆ. ಆದ್ದರಿಂದ ಪ್ರತಿದಿನವೂ ಅಯ್ಯಪ್ಪನ ಮಾಲೆ ಧರಿಸಿರುವವರು ಸೂರ್ಯೋದಯದ ಮುನ್ನ ತಣ್ಣೀರಿನ ಸ್ನಾನವನ್ನೇ ಮಾಡಬೇಕಾಗುತ್ತದೆ. ಇದಕ್ಕೆ ದೈಹಿಕ ಶಕ್ತಿ ಮತ್ತು ಆತ್ಮ ಶಕ್ತಿ ಬಹುಮುಖ್ಯ. ಈ ಅವಧಿಯಲ್ಲಿ ಸ್ನಾನ ಮಾಡಿದರೆ ದೇಹ ಶುದ್ಧಿ ಆಗುವುದು ಮಾತ್ರವಲ್ಲದೆ ಕ್ರಿಯಾಶೀಲತೆಯಿಂದ ಮುನ್ನಡೆಯಬಹುದು.
ಧಾರ್ಮಿಕತೆಯ ಅನುಗುಣವಾಗಿ ನದಿಯಸ್ನಾನವನ್ನು ಮಾಡಬೇಕು. ಆದರೆ ಎಲ್ಲೆಡೆ ನದಿ ಇರದ ಕಾರಣ ಇರುವ ಮೂಲಗಳನ್ನು ಉಪಯೋಗಿಸಿಕೊಂಡು ಶುಚಿಯಾಗಿರಬೇಕು. ಹಿರಿಯರು ಹೇಳುವ ಪ್ರಕಾರ ಅಯ್ಯಪ್ಪನಾಮವನ್ನು ಜಪಿಸಿದರೆ ಅದು ದೇವರನ್ನು ತಲುಪುತ್ತದೆ.
ನಮ್ಮ ಪರಂಪರೆಯಂತೆ ಪ್ರತಿಯೊಂದು ವಸ್ತುವಿನಲ್ಲಿಯೂ ನಾವು ದೇವರನ್ನು ಕಾಣುತ್ತೇವೆ. ಅದರಲ್ಲಿ ಮುಖ್ಯವಾದವೆಂದರೆ ಇಡೀ ಜಗತ್ತಿಗೆ ಬೆಳಕು ನೀಡುವ ಸೂರ್ಯ ಮತ್ತು ಅಗ್ನಿ. ಆದ್ದರಿಂದ ಬೆಳಗಿನ ವೇಳೆ ಸೂರ್ಯನ ಪೂಜೆಯನ್ನು ಮಾಡಬೇಕು. ಆನಂತರ ಸುತ್ತಮುತ್ತಲಿರುವ ದೇವಾಲಯಕ್ಕೆ ಭೇಟಿ ನೀಡಬೇಕು. ಯಾವುದೇ ಕಾರಣಕ್ಕೂ ಕಾಲಿಗೆ ಪಾದರಕ್ಷೆಯನ್ನು ಧರಿಸಬಾರದು. ನೀಲಿ-ಕಪ್ಪು ಬಣ್ಣದ ಬಟ್ಟೆಯನ್ನಲ್ಲದೆ ಬೇರಾವುದೇ ವಸ್ತ್ರವನ್ನು ಧರಿಸಬಾರದು.
ಅಯ್ಯಪ್ಪನ ಭಕ್ತರ ಜೊತೆಗೂಡಿ ಹಗಲು ರಾತ್ರಿ ಎನ್ನದೆ ಕೇವಲ ಅಯ್ಯಪ್ಪನಲ್ಲದೆ ಇತರ ದೇವರುಗಳ ಭಜನೆಯಲ್ಲಿ ತೊಡಗಬೇಕು. ಸೂರ್ಯ ಉದಯವಾಗುವ ವೇಳೆ ಮತ್ತು ಸೂರ್ಯನು ಮುಳುಗುವ ವೇಳೆ ದೇವರ ಭಜನೆಯನ್ನು ಆರಂಭಿಸಬೇಕಾಗುತ್ತದೆ. ಕತ್ತಿನಲ್ಲಿ ವಿವಿಧ ರೀತಿಯ ಜಪಸರಗಳನ್ನು ಧರಿಸಿರಬೇಕು. ಮುಖ್ಯವಾಗಿ ಈ ಸರವು ಗುರುಸ್ವಾಮಿಗಳಿಂದ ಪಡೆದಿರಬೇಕು. ಅಯ್ಯಪ್ಪನ ದೇವಾಲಯದಲ್ಲಿ ಪೂಜೆ ಮಾಡುವ ಅರ್ಚಕರು ಸಹ ಜಪಸರವನ್ನು ಭಕ್ತರ ಕೊರಳಿಗೆ ಹಾಕಬಹುದು. ಯಾವುದೇ ದೇವಾಲಯವಾದರೂ ಈ ಸರಗಳನ್ನು ಕೈಯಲ್ಲಿ ಹಿಡಿದು ಆರತಿಯನ್ನು ತೆಗೆದುಕೊಳ್ಳಬೇಕು. ಸಂಪೂರ್ಣವಾಗಿ ಇವರು ಮಾಂಸಾಹಾರವನ್ನು ತ್ಯಜಿಸಬೇಕು. ಧೂಮಪಾನ ಮತ್ತು ಮಧ್ಯಪಾನದಿಂದಲೂ ದೂರವಿರಬೇಕು.
ಅನ್ನದಾನಕ್ಕಿಂತಲೂ ಬೇರೇನೂ ಹೆಚ್ಚಿನ ಫಲವನ್ನು ನೀಡುವುದಿಲ್ಲ. ಆದ್ದರಿಂದ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪನ ಭಕ್ತರು ಒಂದುಗೂಡಿ ಅಯ್ಯಪ್ಪನ ಭಕ್ತರು ಮತ್ತು ಜನಸಾಮಾನ್ಯರಿಗೆ ಅನ್ನದಾನ ಮಾಡುತ್ತಾರೆ. ಯಾವುದೇ ಭೇದಭಾವವಿಲ್ಲದೆ ಅನ್ನವಿಲ್ಲದವರಿಗೆ ಅನ್ನದಾನ ಮಾಡಬೇಕು. ಪುರಾಣ ಗ್ರಂಥಗಳಲ್ಲಿ ದಾನ ಮಾಡಿದರೆ ಯೋಗ್ಯರಿಗೆ ದಾನ ಮಾಡು ಎಂಬ ಮಾತಿದೆ. ಆದ್ದರಿಂದ ಹಸಿದು ನೊಂದವರಿಗೆ ಅನ್ನದಾನ ಮಾಡುವುದು ಒಳ್ಳೆಯದು.
ಬರೀ ನೆಲದ ಮೇಲೆ ಮಲಗುವ ರೀತಿ ಬಹು ವರ್ಷಗಳ ಹಿಂದೆ ನಡೆದು ಬಂದಿತ್ತು. ಆದರೆ ಈ ಕಾಲದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ನೀಡುವ ಕಾರಣ ಚಾಪೆಯನ್ನು ಉಪಯೋಗಿಸಬಹುದು. ಆದರೆ ಬೇರೆಯವರು ಉಪಯೋಗಿಸುವ ಅಥವಾ ಜಪಸರ ಧರಿಸುವ ಮುನ್ನ ಬಳಸುತ್ತಿದ್ದ ಹಾಸಿಗೆಯನ್ನು ಬಳಸಬಾರದು. ಅಸಂಬದ್ಧ ದೃಶ್ಯಗಳನ್ನು ನೋಡುವುದು ಮತ್ತು ಅಸಂಬದ್ಧ ಸಾಹಿತ್ಯವನ್ನು ಓದುವುದರಿಂದ ದೂರವಾಗಿರಬೇಕು. ಬೇಡದ ವಿಚಾರಗಳಿಗೆ ಜಗಳವಾಡಬಾರದು. ಕೋಪದಿಂದ ದೂರವಿರಬೇಕು. ಪ್ರಯೋಜನವಿಲ್ಲದ ಮಾತುಗಳಿಂದ ಸಮಯ ಕಳೆಯಬಾರದು.
ಈ ಕಾರಣದಿಂದಲೇ ಸಾಮಾನ್ಯವಾಗಿ ಅಯ್ಯಪ್ಪನ ಭಕ್ತರು ಸದಾ ಕಾಲ ದೇವರ ಜಪದಲ್ಲೇ ಕಾಲ ಕಳೆಯುತ್ತಾರೆ. ಮಾಲೆ ಧರಿಸಿದವರಲ್ಲಿ ತನ್ನ ಮಕ್ಕಳಾಗಲಿ ಸೋದರವೇ ಆಗಲಿ ಅಥವಾ ಯಾವುದೇ ಸಂಬಂಧವಿರಲಿ ಹೆಸರನ್ನಿಟ್ಟು ಕರೆಯುವುದಿಲ್ಲ. ಅದರ ಬದಲಾಗಿ ಮೂಲ ಹೆಸರಿನ ಜೊತೆಯಲ್ಲಿ ಸ್ವಾಮಿ ಎಂಬ ಪದವನ್ನು ಸೇರಿಸಿ ಹೆಸರನ್ನು ಕರೆಯುತ್ತಾರೆ. ಅಂದರೆ ವಯಸ್ಸಿನ ಅಂತರವಿಲ್ಲದೆ ಜಾತಿ ಭೇದವಿಲ್ಲದೆ ಎಲ್ಲರೂ ಒಬ್ಬರಿಗೊಬ್ಬರು ಗೌರವವನ್ನು ನೀಡಬೇಕು.
ಅಯ್ಯಪ್ಪ ದೇವರನ್ನು ನಂಬಿದರೆ ತೊಂದರೆ ಇಲ್ಲ ಎಂಬ ಭಾವನೆಯು ಭಕ್ತರಲ್ಲಿ ಇರುತ್ತದೆ. ವಿವಾಹವಾದವರು ಪತ್ನಿಯಿಂದ ದೂರವಿರಬೇಕು. ಒಟ್ಟಾರೆ ಮಾಲೆ ಧರಿಸಿದ ಭಕ್ತಾದಿಗಳ ಜೀವನ ಗಂಗೆಯಂತೆ ಪರಿಶುದ್ಧವಾಗಿರಬೇಕು. ಚಿಕ್ಕ ಪುಟ್ಟ ಕೆಲಸಗಳನ್ನೂ ಗುರುಸ್ವಾಮಿಗಳ ಅನುಮತಿಯನ್ನು ಪಡೆದೇ ಮಾಡಬೇಕು.
ಬರಹ: ಎಚ್. ಸತೀಶ್
ಜ್ಯೋತಿಷಿ, ಬೆಂಗಳೂರು
ಮೊಬೈಲ್: 8546865832