Varalakshmi Vratham 2023: ವರಮಹಾಲಕ್ಷ್ಮೀ ವ್ರತದ ಆಚರಣೆ, ಮುಹೂರ್ತ, ಮಹತ್ವದ ಕುರಿತು ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Varalakshmi Vratham 2023: ವರಮಹಾಲಕ್ಷ್ಮೀ ವ್ರತದ ಆಚರಣೆ, ಮುಹೂರ್ತ, ಮಹತ್ವದ ಕುರಿತು ವಿವರ ಇಲ್ಲಿದೆ

Varalakshmi Vratham 2023: ವರಮಹಾಲಕ್ಷ್ಮೀ ವ್ರತದ ಆಚರಣೆ, ಮುಹೂರ್ತ, ಮಹತ್ವದ ಕುರಿತು ವಿವರ ಇಲ್ಲಿದೆ

ಹಿಂದೂ ಸಂಪ್ರದಾಯದಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ವಿಶೇಷ ಪ್ರಧಾನ್ಯವಿದೆ. ನಾಗರಪಂಚಮಿ ಹಬ್ಬದ ನಂತರ ಹುಣ್ಣಿಮೆಗಿಂತ ಮೊದಲು ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್‌ 25 ರಂದು ವರಮಹಾಲಕ್ಷ್ಮೀ ಆಚರಣೆ ಇದೆ.

ಆಗಸ್ಟ್‌ 25 ರಂದು ವರಮಹಾಲಕ್ಷ್ಮೀ ಆಚರಣೆ ಇದೆ
ಆಗಸ್ಟ್‌ 25 ರಂದು ವರಮಹಾಲಕ್ಷ್ಮೀ ಆಚರಣೆ ಇದೆ

ಆಷಾಢ ಕಳೆದು ಶ್ರಾವಣ ಮಾಸ ಆರಂಭವಾದರೆ ಹಬ್ಬಗಳು ಆರಂಭವಾಗುತ್ತವೆ. ನಾಗರಪಂಚಮಿಯ ನಂತರ ಆಚರಿಸುವ ಹಬ್ಬ ವರಮಹಾಲಕ್ಷ್ಮೀ. ಇದನ್ನು ಹೆಂಗಳೆಯರ ಹಬ್ಬ ಎಂದರೂ ತಪ್ಪಾಗಲಿಕ್ಕಿಲ್ಲ.

ಹೆಣ್ಣುಮಕ್ಕಳು ಈ ಹಬ್ಬಕ್ಕಾಗಿ 15 ದಿನಗಳ ಮೊದಲೇ ತಯಾರಿ ನಡೆಸುತ್ತಾರೆ. ಪೂಜೆ, ವ್ರತ, ಬಾಗೀನದ ಜೊತೆಗೆ ಬಗೆ ಬಗೆಯ ಸಿಹಿ ತಿನಿಸುಗಳು ಈ ವರಮಹಾಲಕ್ಷ್ಮೀ ಹಬ್ಬದ ವಿಶೇಷ.

ಲಕ್ಷ್ಮೀಯನ್ನು ಒಲಿಸಿಕೊಳ್ಳುವ ಈ ಹಬ್ಬವನ್ನು ಬೆಂಗಳೂರು, ಮೈಸೂರು ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸುತ್ತಾರೆ. ಲಕ್ಷ್ಮೀಯನ್ನು ಕೂರಿಸುವುದೇ ಒಂದು ವಿಶೇಷ. ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡಿನಲ್ಲೂ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.

ಈ ವರ್ಷದ ವರಮಹಾಲಕ್ಷ್ಮೀ ವ್ರತದ ಆಚರಣೆ

ಈ ವರ್ಷ ಆಗಸ್ಟ್‌ 25 ರಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಈ ವ್ರತದ ಆಚರಣೆ ಇದೆ.

ವರಮಹಾಲಕ್ಷ್ಮೀ ಆಚರಣೆಯ ಮುಹೂರ್ತ

ಸಿಂಹ ಲಗ್ನ ಪೂಜಾ ಮುಹೂರ್ತ (ಬೆಳಿಗ್ಗೆ) - 5.55 ರಿಂದ 7.42

ವೃಶ್ಚಿಕ ಲಗ್ನ ಪೂಜಾ ಮುಹೂರ್ತ (ಮಧ್ಯಾಹ್ನ) – 12.17 ರಿಂದ 2.36

ಕುಂಭ ಲಗ್ನ ಪೂಜೆ ಮುಹೂರ್ತ (ಸಂಜೆ) - 6.22 ರಿಂದ 7.50

ವೃಷಭ ಲಗ್ನ ಪೂಜೆ ಮುಹೂರ್ತ (ಮಧ್ಯರಾತ್ರಿ) - 11.50 ರಿಂದ ಆಗಸ್ಟ್ 26 ರ ಮಧ್ಯರಾತ್ರಿ 12.45

ವರಮಹಾಲಕ್ಷ್ಮೀ ಹಬ್ಬದ ಮಹತ್ವ

ಮದುವೆಯಾಗಿರುವ ಹೆಣ್ಣುಮಕ್ಕಳು ಅಥವಾ ಮುತೈದೆಯರು ತಮ್ಮ ಮನೆ ಹಾಗೂ ಗಂಡ, ಮಕ್ಕಳ ಯಶಸ್ಸಿಗಾಗಿ ವರಮಹಾಲಕ್ಷ್ಮೀ ವ್ರತವನ್ನು ಆಚರಿಸುತ್ತಾರೆ. ಹಿಂದೂ ಧರ್ಮದ ಪ್ರಕಾರ ಈ ಶುಭದಿನದಂದು ಲಕ್ಷ್ಮೀದೇವಿಯನ್ನು ಪೂಜೆ ಮಾಡುವುದರಿಂದ ಅಷ್ಟಲಕ್ಷ್ಮಿಯರನ್ನು ಪೂಜಿಸಿದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ವರಮಹಾಲಕ್ಷ್ಮೀ ಹಬ್ಬದಂದು ವ್ರತ ಮಾಡುವುದರಿಂದ ಸಂಪತ್ತು, ಆರ್ಥಿಕಾಭಿವೃದ್ಧಿ, ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂಬುದು ನಂಬಿಕೆ.

ವ್ರತ ಆಚರಣೆ ಹೇಗಿರಬೇಕು?

ವರಮಹಾಲಕ್ಷ್ಮೀ ಹಬ್ಬದಂದು ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು ದೇಹ ಹಾಗೂ ಮನಸ್ಸು ಎರಡನ್ನೂ ಶುದ್ಧವಾಗಿ ಇರಿಸಿಕೊಳ್ಳಬೇಕು. ಆ ಕಾರಣಕ್ಕಾಗಿ ಹಬ್ಬದ ದಿನದಂದು ಮನೆಯನ್ನು ಗುಡಿಸಿ, ಸಾರಿಸಿ ಸ್ವಚ್ಛ ಮಾಡಿ ಹೊಸ ಬಟ್ಟೆ ಧರಿಸಬೇಕು. ನಂತರ ದೇವರಿಗೆ ನೈವೇದ್ಯ ಮಾಡಬೇಕು. ಕಲಶವನ್ನು ತಯಾರಿಸುವ ಮೂಲಕ ಕಲಶ ಕೂರಿಸುವುದು ಈ ಹಬ್ಬದ ವಿಶೇಷ. ಕಲಶದ ನೀರಿನಲ್ಲಿ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕುವುದು ಕ್ರಮ. ಅಕ್ಕಿಯನ್ನು ಹರಡಿದ ತಟ್ಟೆಯ ಮೇಲೆ ಕಲಶ ಇಡಬೇಕು. ನಂತರ ಕಲಶವನ್ನು ಒಡವೆ, ವೈಡೂರ್ಯಗಳಿಂದ ಸಿಂಗರಿಸಬೇಕು.

ಬ್ರಾಹ್ಮಿ ಮುಹೂರ್ತದಲ್ಲಿ ದೇವರ ಪ್ರತಿಷ್ಠಾಪನೆ ಮಾಡುವುದು ಉತ್ತಮ. ಬ್ರಾಹ್ಮಿ ಮುಹೂರ್ತದಲ್ಲಿ ದೇವರನ್ನು ಪ್ರತಿಷ್ಠಾಷನೆ ಮಾಡಿ, ಪೂಜೆ ಸಲ್ಲಿಸುವುದರಿಂದ ಲಕ್ಷ್ಮೀದೇವಿ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬುದು ನಂಬಿಕೆ.

ವರಮಹಾಲಕ್ಷ್ಮಿ ಮಂತ್ರ

ಪದ್ಮಾಸನೇ ಪದ್ಮಾಕರೇ ಸರ್ವ ಲೌಕೈಕ ಪೂಜಿತೇ|

ನಾರಾಯಣಾಪ್ರಿಯೇ ದೇಯಿ ಸುಪ್ರಿತಾ ಭವ ಸರ್ವದಾ

ಈ ಮಂತ್ರವನ್ನು ಪಠಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬಹುದು.

ಇದನ್ನೂ ಓದಿ

Varalakshmi Vratham 2023: ವರಮಹಾಲಕ್ಷ್ಮಿ ಹಬ್ಬ ಯಾವಾಗ, ಹಬ್ಬದ ಮಹತ್ವ ಪೂಜಾ ಸಮಯ ವ್ರತ ಮಾಡುವ ವಿಧಾನ ಇತ್ಯಾದಿ ವಿವರ ತಿಳಿದುಕೊಳ್ಳಿ

ಶ್ರಾವಣ ಮಾಸವೆಂದರೆ ಹಬ್ಬ ಹರಿದಿನಗಳ ಕಾಲ. ನಾಗರಪಂಚಮಿ ನಂತರ ಬರುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತ ಪ್ರಮುಖವಾದದ್ದು. ಬದುಕಿನ ಸಮೃದ್ಧಿ, ಏಳ್ಗೆ, ವಿದ್ಯೆ, ಬುದ್ಧಿ ಎಲ್ಲವನ್ನೂ ಕೊಡುವ ಲಕ್ಷ್ಮೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರವಾಗಲು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಪೌರ್ಣಮಿಗೆ ಮೊದಲು ಬರುವ ಶುಕ್ರವಾರ ಆಚರಿಸಲಾಗುತ್ತದೆ. ವಿವಾಹಿತ ಮಹಿಳೆಯರು ಈ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೆ. ಆದಿ ಲಕ್ಷ್ಮಿ (ರಕ್ಷಕ), ಧನ ಲಕ್ಷ್ಮಿ (ಸಂಪತ್ತಿನ ದೇವತೆ), ಧೈರ್ಯ ಲಕ್ಷ್ಮಿ (ಧೈರ್ಯ ದೇವತೆ), ಸೌಭಾಗ್ಯ ಲಕ್ಷ್ಮಿ (ಸಮೃದ್ಧಿಯ ದೇವತೆ), ವಿಜಯ ಲಕ್ಷ್ಮಿ (ವಿಜಯದ ದೇವತೆ), ಧಾನ್ಯ ಲಕ್ಷ್ಮಿ (ಪೋಷಣೆಯ ದೇವತೆ), ಸಂತಾನ ಲಕ್ಷ್ಮಿ (ಸಂತಾನದ ದೇವತೆ), ವಿದ್ಯಾ ಲಕ್ಷ್ಮಿ (ಬುದ್ಧಿವಂತಿಕೆಯ ದೇವತೆ)ಯ ಕೃಪೆಗೆ ಪಾತ್ರವಾಗಲು ಈ ಹಬ್ಬವು ಪ್ರಮುಖವಾಗಿದೆ.

Whats_app_banner