Friends: ಸ್ನೇಹಿತರ ಆಯ್ಕೆಗೂ ಮುನ್ನ ಜಾಣ್ಮೆ ತೋರಿ, ಇಲ್ಲದಿದ್ದರೆ ಅಪಾಯ ಖಚಿತ; ಸ್ನೇಹ ಸಂಬಂಧದ ಕುರಿತ ನೀತಿಪಾಠವಿದು
ಕೆಟ್ಟ ಉದ್ದೇಶದಿಂದ ಸ್ನೇಹ ಸಂಪಾದಿಸುವ ಜನರಿಂದ ಸಹಾ ದೂರವಿರಬೇಕು ಎಂದು ಹಿತೋಪದೇಶ ಪುಸ್ತಕದಲ್ಲಿ ವಿವರಿಸಲಾಗಿದೆ. ಇದರಲ್ಲಿ ಸ್ನೇಹದ ಬಗ್ಗೆ ಒಂದು ಕಥೆ ಇದೆ. ಈ ಕಥೆಯ ಸಾರಾಂಶ ಇಲ್ಲಿದೆ.
ಈ ಜಗತ್ತಿನಲ್ಲಿ ಅದ್ಭುತ ಸಂಬಂಧ ಎಂದರೆ ಅದು ಸ್ನೇಹ ಸಂಬಂಧ. ಸ್ನೇಹಿತರಿಲ್ಲದ ಬದುಕು ನಿಜಕ್ಕೂ ಬರಡು. ಬದುಕಿನಲ್ಲಿ ಸ್ನೇಹಿತರು ಬಹಳ ಮುಖ್ಯ. ಸ್ನೇಹ ಎಂದರೆ ಎಲ್ಲೋ ಇದ್ದವರನ್ನು ಆತ್ಮೀಯರನ್ನಾಗಿಸುವ ಬಂಧ. ಯಾವುದೋ ಸಂದರ್ಭದಲ್ಲಿ ಹೇಗೋ ಪರಿಚಿತರಾಗುತ್ತೇವೆ. ಆ ಪರಿಚಯ ಸ್ನೇಹವಾಗಿ ಬದಲಾಗಿ ನಮ್ಮ ನಡುವೆ ಗಾಢವಾದ ಬಂಧ ಏರ್ಪಡಲು ಕಾರಣವಾಗುತ್ತದೆ. ಸ್ನೇಹಕ್ಕೆ ಹಣ ಆಸ್ತಿ ಸೌಂದರ್ಯ ಯಾವುದು ಮುಖ್ಯವಾಗುವುದಿಲ್ಲ. ಆದರೆ ನಮಗೆ ಪ್ರಾಣಕ್ಕೆ ಪ್ರಾಣ ಕೊಡುವವರಾಗಿರಬೇಕು. ಆದರೆ ಕೆಟ್ಟ ಉದ್ದೇಶದಿಂದ ಸ್ನೇಹ ಸಂಪಾದಿಸುವ ಜನರಿಂದ ಸಹಾ ದೂರವಿರಬೇಕು ಎಂದು ಹಿತೋಪದೇಶ ಪುಸ್ತಕದಲ್ಲಿ ವಿವರಿಸಲಾಗಿದೆ. ಇದರಲ್ಲಿ ಸ್ನೇಹದ ಬಗ್ಗೆ ಒಂದು ಕಥೆ ಇದೆ.
ಚಂಪಕವನ ಎಂಬ ಕಾಡಿನಲ್ಲಿ ವಾಸಿಸುತ್ತಿದ್ದ ಜಿಂಕೆ ಹಾಗೂ ಕಾಗೆ ನಡುವೆ ಆತ್ಮೀಯ ಸ್ನೇಹವಿರುತ್ತದೆ. ಒಂದು ದಿನ ನರಿಯೊಂದು ಜಿಂಕೆಯು ಕಾಡಿನಲ್ಲಿ ಮೇಯುತ್ತಿರುವುದನ್ನು ನೋಡುತ್ತದೆ. ಅದು ಜಿಂಕೆಯ ಮಾಂಸ ತಿನ್ನಲು ಆಸೆ ಪಡುತ್ತದೆ. ಅದಕ್ಕಾಗಿ ಜಿಂಕೆ ಬಳಿ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತದೆ. ಜಿಂಕೆಯ ಬಳಿಗೆ ಹೋಗುವ ನರಿಯು ʼನನಗೆ ಜೀವನದಲ್ಲಿ ಯಾರೂ ಸ್ನೇಹಿತರಿಲ್ಲ. ನಾನು ನಿನ್ನನ್ನು ಸ್ನೇಹಿತನನ್ನಾಗಿ ಮಾಡಿಕೊಳ್ಳಲೇ. ನಾನು ನಿನ್ನೊಂದಿಗೆ ಹೊಸ ಜೀವನ ಮಾಡಲು ಆಸೆ ಪಡುತ್ತಿದ್ದೇನೆʼ ಎಂದು ಮೋಸದಿಂದ ಮಾತನಾಡಿ ಜಿಂಕೆಯನ್ನು ಬಲೆಗೆ ಬೀಳಿಸಿಕೊಳ್ಳುತ್ತದೆ. ನರಿಯ ಕಪಟ ಅರಿಯದ ಜಿಂಕೆ ಅದರೊಂದಿಗೆ ಸ್ನೇಹ ಬೆಳೆಸುತ್ತದೆ.
ಸೂರ್ಯ ಮುಳುಗುತ್ತಿದ್ದಂತೆ ಜಿಂಕೆಯು ನರಿಯೊಂದಿಗೆ ಚಂಪಕ ಮರದ ಕೆಳಗಿರುವ ತನ್ನ ಮನೆಗೆ ಹಿಂದಿರುಗುತ್ತದೆ. ಆ ಮರದ ಮೇಲೆ ಜಿಂಕೆಯ ಸ್ನೇಹಿತ ಕಾಗೆ ಕೂಡ ವಾಸಿಸುತ್ತಿರುತ್ತದೆ. ಜಿಂಕೆಯು ತನ್ನ ಹೊಸ ಸ್ನೇಹಿತ ನರಿಯನ್ನು ಕಾಗೆಗೆ ಪರಿಚಯಿಸುತ್ತದೆ. ಆಗ ಕಾಗೆ ಸ್ಪಷ್ಟ ಕಾರಣವಿಲ್ಲದೆ ನಮ್ಮ ಜೀವನದಲ್ಲಿ ಬರುವ ಯಾವುದೇ ಅಪರಿಚಿತರನ್ನು ನಂಬುವುದು ಸರಿಯಲ್ಲ ಎಂದು ಸಲಹೆ ನೀಡುತ್ತದೆ. ಜಿಂಕೆಯು ಬುದ್ಧಿವಂತ ಕಾಗೆಯ ಸಲಹೆಯನ್ನು ಕೇಳಿಸಿಕೊಳ್ಳುವುದಿಲ್ಲ. ಮೂವರು ಒಟ್ಟಿಗೆ ಸಂತೋಷದಿಂದ ಬದುಕೋಣ ಎಂದು ಸಲಹೆ ನೀಡುತ್ತದೆ.
ನರಿ ಈ ಇಬ್ಬರೊಂದಿಗೆ ವಾಸಿಸಲು ಆರಂಭಿಸುತ್ತದೆ. ಒಮ್ಮೆ ನರಿಯು ಜಿಂಕೆಗೆ ತೋಳಗಳಿಂದ ತುಂಬಿದ ಹೊಲವನ್ನು ತೋರಿಸುತ್ತದೆ. ಅಲ್ಲಿ ಮೇಯಲು ಚೆನ್ನಾಗಿರುತ್ತದೆ ಎಂದು ಸಲಹೆ ನೀಡುತ್ತದೆ. ಒಂದು ದಿನ ಜಿಂಕೆ ಅಲ್ಲಿ ಮೇಯುತ್ತಿದ್ದಾಗ ರೈತ ಹಾಕಿದ ಬಲೆಗೆ ಸಿಕ್ಕಿಕೊಳ್ಳುತ್ತದೆ. ತನಗೂ ಜಿಂಕೆಯ ಮಾಂಸ ದೊರೆಯುತ್ತದೆ ಎಂದು ನರಿ ಖುಷಿ ಪಡುತ್ತದೆ. ನರಿಯನ್ನು ನೋಡಿದ ಜಿಂಕೆಯು ಬಲೆಯನ್ನು ಕತ್ತರಿಸಿ ತನ್ನನ್ನು ಬಿಡಿಸು ಎಂದು ನರಿಯ ಬಳಿ ವಿನಂತಿ ಮಾಡಿಕೊಳ್ಳುತ್ತದೆ. ಆದರೆ ನರಿ ಅದಕ್ಕೆ ನಿರಾಕರಿಸುತ್ತದೆ. ನಾನು ಉಪವಾಸ ಮಾಡುತ್ತಿದ್ದೇನೆ. ಈ ದಿನ ಚರ್ಮದಿಂದ ಮಾಡಿದ ಬಲೆಯನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಹೇಳುತ್ತದೆ.
ಇತ್ತ ಜಿಂಕೆ ಮನೆಗೆ ಬಾರದ್ದನ್ನು ಕಂಡ ಕಾಗೆ ಅದನ್ನು ಹುಡುಕಿ ಬರುತ್ತದೆ. ಆಗ ಬಲೆಗೆ ಸಿಲುಕಿಕೊಂಡ ನರಿಯನ್ನು ಕಾಣುತ್ತದೆ. ಅಷ್ಟರಲ್ಲೇ ಆ ರೈಲು ಕೋಲು ಹಿಡಿದು ಆ ಜಾಗಕ್ಕೆ ಬರುವುದು ಕಾಣಿಸುತ್ತದೆ. ಕಾಗೆ ಕೂಡಲೇ ನರಿಗೆ ಸತ್ತಂತೆ ನಟಿಸುವಂತೆ ಹೇಳುತ್ತದೆ.
ಕಾಗೆ ಹೇಳಿದಂತೆ ಜಿಂಕೆ ನೆಲದ ಮೇಲೆ ಬಿದ್ದು, ಕಣ್ಣನ್ನು ಪಕ್ಕಕ್ಕೆ ಹೊರಳಿಸುತ್ತದೆ. ಜಿಂಕೆ ಸತ್ತಿದೆ ಎಂದು ಭಾವಿಸಿ ರೈತ ಬಲೆ ತೆಗೆಯಲು ಮುಂದಾಗುತ್ತಾನೆ. ಸರಿಯಾದ ಸಮಯಕ್ಕೆ ಕಾಗೆ ಕೂಗುತ್ತದೆ, ಜಿಂಕೆ ಎದ್ದು ಓಡಿ ಹೋಗುತ್ತದೆ. ಕೋಪಗೊಂಡ ರೈತ ತನ್ನ ಕೈಯಲ್ಲಿದ್ದ ಕೋಲನ್ನು ಜಿಂಕೆಯ ಕಡೆಗೆ ಎಸೆಯುತ್ತಾನೆ. ಆದರೆ ಇದು ತಪ್ಪಿ ಪೊದೆಯಲ್ಲಿ ಅಡಗಿದ್ದ ನರಿಗೆ ತಾಕಿ, ನರಿ ಸಾವನ್ನಪ್ಪುತ್ತದೆ.