Republic Day 2024: ಗಣರಾಜ್ಯೋತ್ಸವ ಆಚರಣೆ ನಡೆದು ಬಂದ ಹಾದಿ, ಈ ವರ್ಷದ ಥೀಮ್ ಮತ್ತು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ
Republic Day Celebration: ಭಾರತ ಗಣತಂತ್ರವಾದ ನಂತರ ಪ್ರತಿವರ್ಷ ಜನವರಿ 26 ರಂದು ವಿಶೇಷವಾಗಿ ಆಚರಿಸುತ್ತಾ ಬಂದಿದೆ. ಅಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಶಸ್ತ್ರ ಪಡೆಗಳ ಪಥಸಂಚಲನ ನಡೆಯುತ್ತವೆ. ಈ ಸಮಾರಂಭಕ್ಕೆ ವಿದೇಶಿ ಅತಿಥಿಯನ್ನು ಆಹ್ವಾನಿಸಲಾಗುತ್ತದೆ. ಗಣರಾಜ್ಯೋತ್ಸವದ ಆಚರಣೆ ಬೆಳೆದು ಬಂದ ಹಾದಿ ಮತ್ತು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
ಈ ವರ್ಷ ಭಾರತವು 75ನೇ ಗಣರಾಜ್ಯೋತ್ಸವ ನಡೆಸಲು ಸಜ್ಜಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜನವರಿ 26ರಂದು ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಿದೆ. ನಮ್ಮ ದೇಶ ಗಣರಾಜ್ಯವಾಗಿ 75 ವರ್ಷಗಳಾಗಿರುವ ಈ ಸಂದರ್ಭ ವಿಶೇಷವಾಗಿದೆ. ನವದೆಹಲಿಯ ಕರ್ತವ್ಯ ಪಥದಲ್ಲಿ ಪಥಸಂಚಲನ ನೆರವೇರಲಿದೆ. ಅಂದು ಭಾರತದ ಸಶಸ್ತ್ರ ಪಡೆಗಳ ಸಿಬ್ಬಂದಿ ಮಾರ್ಚ್–ಪಾಸ್ಟ್ ಮಾಡುತ್ತಾರೆ. ವಿವಿಧ ರಾಜ್ಯಗಳ ಸಂಸ್ಕೃತಿ ಮತ್ತು ವೈವಿಧ್ಯತೆಗಳನ್ನು ಸಾರುವ ರೋಮಾಂಚಕ ಸ್ತಬ್ದಚಿತ್ರಗಳ ಪ್ರದರ್ಶನವು ಗಣರಾಜ್ಯೋತ್ಸವ ಆಚರಣೆಯ ಭಾಗವಾಗಿದೆ. ಭಾರತ ಪ್ರತಿವರ್ಷ ಗಣರಾಜ್ಯೋತ್ಸದ ಸಂಭ್ರಮಾಚರಣೆಗೆ ವಿಶೇಷ ಅತಿಥಿಯನ್ನು ಆಹ್ವಾನಿಸುತ್ತದೆ. ಈ ವರ್ಷ ಇದರಲ್ಲಿ ಪಾಲ್ಗೊಳ್ಳಲು ಫ್ರಾನ್ಸ್ ದೇಶದ ಅಧ್ಯಕ್ಷ ಎಮ್ಮಾನ್ಯುಲ್ ಮ್ಯಾಕ್ರನ್ ಅವರನ್ನು ಆಹ್ವಾನಿಸಲಾಗಿದೆ.
ಗಣರಾಜ್ಯೋತ್ಸವದ ಆಚರಣೆ ಬೆಳೆದು ಬಂದ ಹಾದಿ ಮತ್ತು ಕುತೂಹಲಕಾರಿ ವಿಷಯಗಳು ಇಲ್ಲಿವೆ:
1) ಭಾರತ ಆಗಸ್ಟ್ 15, 1947ರಂದು ಸ್ವಾತಂತ್ರ್ಯವನ್ನು ಪಡೆದ ನಂತರ, ಭಾರತ ಸಂವಿಧಾನವನ್ನು ಜಾರಿಗೆ ಬಂದ ದಿನವನ್ನಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
2) ಬ್ರಿಟೀಷ್‌ರ ವಸಾಹತುಶಾಹಿ ಸರ್ಕಾರದ ಕಾಯಿದೆಗಳನ್ನು (1935) ಬದಲಾಯಿಸಿ ನಮ್ಮದೇ ಲಿಖಿತ ಸಂವಿಧಾನವನ್ನು ಜಾರಿಗೆ ತಂದ ದಿನವಾಗಿದೆ.
3) ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಜನವರಿ 26, 1950 ರಂದು, ಭಾರತವು ಗಣರಾಜ್ಯವಾಗಿ ಜನ್ಮತಾಳಿದ್ದನ್ನು ಸೂಚಿಸಲು ರಾಷ್ಟ್ರಧ್ವಜವನ್ನು ಹಾರಿಸಿದರು. ಈ ದಿನವನ್ನು ಭಾರತದ ಗಣರಾಜ್ಯೋತ್ಸವ ಎಂದು ಗುರುತಿಸಲ್ಪಟ್ಟ ನಂತರ ಈ ದಿನವನ್ನು ರಾಷ್ಟ್ರೀಯ ಹಬ್ಬ ಹಾಗೂ ರಾಷ್ಟ್ರೀಯ ರಜಾ ದಿನ ಎಂದು ಘೋಷಿಸಲಾಯಿತು.
4) 1950 ರಲ್ಲಿ, ಗಣರಾಜ್ಯೋತ್ಸವದ ಉದ್ಘಾಟನಾ ಮೆರವಣಿಗೆ ನಡೆಯಿತು. ಆ ಮೆರವಣೆಗೆಯನ್ನು ಈ ಹಿಂದೆ ಇರ್ವಿನ್ ಆಂಫಿಥಿಯೇಟರ್ ಎಂದು ಕರೆಯಲ್ಪಡುತ್ತಿದ್ದ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನೆರವೇರಿತ್ತು. ಆ ಪ್ರದರ್ಶನದಲ್ಲಿ 100 ಕ್ಕೂ ಹೆಚ್ಚು ವಿಮಾನಗಳು ಮತ್ತು 3,000 ಭಾರತೀಯ ಸೈನಿಕರು ಭಾಗವಹಿಸಿದ್ದರು.
5) ಭಾರತದ ಮೊದಲ ಗಣರಾಜ್ಯೋತ್ಸವದ ಪರೇಡ್‌ನ ಮೊದಲ ಮುಖ್ಯ ಅತಿಥಿಯಾಗಿದ್ದವರು ಇಂಡೋನೇಷ್ಯಾದ ಅಧ್ಯಕ್ಷ ಸುಕರ್ನೋ ಅವರು.
6) 1955 ರಲ್ಲಿ ಮೊದಲ ಬಾರಿಗೆ ರಾಜಪಥ ಎಂದು ಕರೆಯಲ್ಪಡುತ್ತಿದ್ದ ಈಗಿನ ಕರ್ತವ್ಯ ಪಥದಲ್ಲಿ ಈ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು. ಕುತೂಹಲಕಾರಿ ವಿಷಯವೆಂದರೆ ಆ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದವರು ಪಾಕಿಸ್ತಾನದ ಗವರ್ನರ್ ಜನರಲ್ ಮಲಿಕ್ ಗುಲಾಮ್ ಮುಹಮ್ಮದ್ ಅವರು.
7) ಬೀಟಿಂಗ್ ರಿಟ್ರೀಟ್ ಸಮಾರಂಭವು 1600ರ ಸಂಪ್ರದಾಯವನ್ನೇ ಹೊಂದಿದೆ. ವಾರ್ಷಿಕವಾಗಿ ಜನವರಿ 29 ರಂದು ನವದೆಹಲಿಯ ವಿಜಯ್ ಚೌಕ್‌ನಲ್ಲಿ ಇದು ನಡೆಯುತ್ತದೆ. ಇದು ಸೈನ್ಯವು ಹಿಂದಿರುಗುವುದನ್ನು ಘೋಷಿಸುವ ಸಂಪ್ರದಾಯವಾಗಿದೆ. 1600ರಲ್ಲಿ ಕಿಂಗ್ ಜೇಮ್ಸ್ II ತನ್ನ ಸೈನಿಕರಿಗೆ ಡ್ರಮ್‌ಗಳನ್ನು ಬಾರಿಸಲು, ಧ್ವಜಗಳನ್ನು ಕೆಳಕ್ಕೆ ಇಳಿಸಲು ಮತ್ತು ಯುದ್ಧದ ದಿನದ ಮುಕ್ತಾಯವನ್ನು ಗುರುತಿಸಲು ಮೆರವಣಿಗೆಯನ್ನು ನಡೆಸಲು ಆಜ್ಞೆಯನ್ನು ನೀಡಿದ್ದನು.
8) 2024 ರ ಗಣರಾಜ್ಯೋತ್ಸವದ ಥೀಮ್ ‘ಭಾರತ-ಪ್ರಜಾಪ್ರಭುತ್ವದ ತಾಯಿ’ ಮತ್ತು ‘ವಿಕಸಿತ್ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಎಂಬುದಾಗಿದೆ.
9) ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಕ್ಷಣಾ ಪಡೆಗಳ ಮಹಿಳಾ ತುಕಡಿ ಪಥಸಂಚಲನ ನಡೆಸಲಿವೆ. 144 ಸಿಬ್ಬಂದಿಗಳನ್ನು ಒಳಗೊಂಡಿರುವ ಒಂದು ತುಕಡಿಯಾಗಿದೆ. ಅದರಲ್ಲಿ ಇರುವವರೆಲ್ಲರೂ ಮಹಿಳಾ ಸೈನಿಕರೇ. ಭಾರತೀಯ ಸೇನೆಯಿಂದ 60 ಸೈನಿಕರು ಮತ್ತು ಉಳಿದವರು ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯವರಾಗಿರುತ್ತಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
10) ಈ ವರ್ಷ ಭಾರತದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಫ್ರಾನ್ಸ್ ಅಧ್ಯಕ್ಷ ಎಮ್ಮಾನ್ಯುಲ್ ಮ್ಯಾಕ್ರನ್ ಅವರನ್ನು ಆಹ್ವಾನಿಸಲಾಗಿದೆ. ವಿಶೇಷವೇನೆಂದರೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಆಚರಣೆಯಲ್ಲಿ 6ನೇ ಬಾರಿಗೆ ಫ್ರೆಂಚ್ ನಾಯಕರೊಬ್ಬರು ಮುಖ್ಯ ಅತಿಥಿಯಾಗುತ್ತಿರುವುದು. ಕಳೆದ ವರ್ಷ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಮುಖ್ಯ ಅತಿಥಿಯಾಗಿದ್ದರು.