Republic Day: ಗಣರಾಜ್ಯೋತ್ಸವಕ್ಕೆ ನಿಮ್ಮ ಶಾಲೆಯನ್ನು ಅಲಂಕರಿಸುವುದು ಹೇಗೆ? ಈ ಐಡಿಯಾಗಳನ್ನು ಪಾಲಿಸಿದ್ರೆ ವಿದ್ಯಾಮಂದಿರ ಇನ್ನಷ್ಟು ಸುಂದರ
ಕನ್ನಡ ಸುದ್ದಿ  /  ಜೀವನಶೈಲಿ  /  Republic Day: ಗಣರಾಜ್ಯೋತ್ಸವಕ್ಕೆ ನಿಮ್ಮ ಶಾಲೆಯನ್ನು ಅಲಂಕರಿಸುವುದು ಹೇಗೆ? ಈ ಐಡಿಯಾಗಳನ್ನು ಪಾಲಿಸಿದ್ರೆ ವಿದ್ಯಾಮಂದಿರ ಇನ್ನಷ್ಟು ಸುಂದರ

Republic Day: ಗಣರಾಜ್ಯೋತ್ಸವಕ್ಕೆ ನಿಮ್ಮ ಶಾಲೆಯನ್ನು ಅಲಂಕರಿಸುವುದು ಹೇಗೆ? ಈ ಐಡಿಯಾಗಳನ್ನು ಪಾಲಿಸಿದ್ರೆ ವಿದ್ಯಾಮಂದಿರ ಇನ್ನಷ್ಟು ಸುಂದರ

ಪ್ರತಿವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಈ ಬಾರಿ ನಾವು 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಈ ವರ್ಷದ ಗಣತಂತ್ರದ ದಿನ ನಿಮ್ಮ ಶಾಲೆಯನ್ನು ವಿಶೇಷವಾಗಿ ಅಲಂಕರಿಸಬೇಕು ಅಂತಿದ್ದರೆ ಈ ಐಡಿಯಾಗಳನ್ನು ಒಮ್ಮೆ ಗಮನಿಸಿ. ಈ ರೀತಿ ಶಾಲೆಯನ್ನು ಅಲಂಕಾರ ಮಾಡಿ, ದೇಶಭಕ್ತಿ ಮೆರೆಯಿರಿ.

ಗಣರಾಜ್ಯೋತ್ಸವ ಶಾಲೆ ಅಲಂಕರಿಸಲು ಟಿಪ್ಸ್
ಗಣರಾಜ್ಯೋತ್ಸವ ಶಾಲೆ ಅಲಂಕರಿಸಲು ಟಿಪ್ಸ್ (PC: Canva)

1950, ಜನವರಿ 26 ಭಾರತ ಸಂವಿಧಾನ ಜಾರಿಗೆ ಬಂದ ದಿನ. ಈ ದಿನದ ಸವಿ ನೆನಪಿಗಾಗಿ ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸುತ್ತೇವೆ. ಈ ಬಾರಿ ನಾವು 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. 1947 ಆಗಸ್ಟ್ 15ಕ್ಕೆ ಭಾರತ ಸ್ವಾತಂತ್ರ್ಯ ಪಡೆದರೂ, ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿಕೊಂಡಿದ್ದು 1950, ಜನವರಿ 26ರ ಸಂವಿಧಾನದ ಅಂಗೀಕಾರದ ನಂತರ. ಭಾರತ ಸಂವಿಧಾನವು ಭಾರತದ ನಾಗರಿಕರಿಗೆ ತಮ್ಮದೇ ಆದ ಸರ್ಕಾರವನ್ನು ಆಯ್ಕೆ ಮಾಡುವ ಅಧಿಕಾರವನ್ನು ನೀಡಿತು ಮತ್ತು ಪ್ರಜಾಪ್ರಭುತ್ವಕ್ಕೆ ದಾರಿ ಮಾಡಿಕೊಟ್ಟಿತು.

ಗಣರಾಜ್ಯೋತ್ಸವದಂದು, ದೇಶದ ವಿವಿಧ ಭಾಗಗಳಲ್ಲಿ ಸಶಸ್ತ್ರ ಪಡೆಗಳು ಮತ್ತು ಶಾಲಾ ಮಕ್ಕಳಿಂದ ಧ್ವಜಾರೋಹಣ ಸಮಾರಂಭ ಮತ್ತು ಮೆರವಣಿಗೆಗಳು ನಡೆಯುತ್ತವೆ. ಸಾಮಾನ್ಯವಾಗಿ, ಗಣರಾಜ್ಯೋತ್ಸವದ ಭಾಗವಾಗಿ ರಾಷ್ಟ್ರಧ್ವಜ ಹಾರಿಸುವುದು, ರಾಷ್ಟ್ರಗೀತೆ, ನೃತ್ಯ ಮತ್ತು ದೇಶಭಕ್ತಿ ಗೀತೆಗಳ ಕುರಿತು ಗಾಯನ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಶಾಲೆಗಳು ಮತ್ತು ಕಾಲೇಜುಗಳು ಗಣರಾಜ್ಯೋತ್ಸವವನ್ನು ಬಹಳ ಉತ್ಸಾಹದಿಂದ ಆಚರಿಸುತ್ತವೆ. ಈ ಸಂದರ್ಭದಲ್ಲಿ, ಶಾಲೆಗಳು, ತರಗತಿ ಕೊಠಡಿಗಳು, ಆಟದ ಮೈದಾನಗಳು, ಸೂಚನಾ ಫಲಕಗಳು ಮತ್ತು ವೇದಿಕೆಗಳನ್ನು ಗಣರಾಜ್ಯೋತ್ಸವದ ವಿಷಯದೊಂದಿಗೆ ಅಲಂಕರಿಸಲಾಗುತ್ತದೆ.

ಗಣರಾಜ್ಯೋತ್ಸವದ ಸಂದರ್ಭ ವಿದ್ಯಾರ್ಥಿಗಳಲ್ಲಿ ರಾಷ್ಟ್ರದ ಬಗ್ಗೆ ಹೆಮ್ಮೆಯ ಮನೋಭಾವ ಹೆಚ್ಚಿಸುವುದು ಮಾತ್ರವಲ್ಲ, ರಾಷ್ಟ್ರ ಸಂವಿಧಾನದ ಬಗ್ಗೆ ಅರಿವೂ ಮೂಡಿಸುವ ಕೆಲಸವನ್ನೂ ಮಾಡಬೇಕಿದೆ. ಗಣರಾಜ್ಯೋತ್ಸವದಂದು ಶಾಲೆಯನ್ನ ಅಲಂಕರಿಸಲು ಇಲ್ಲಿದೆ ಸೃಜನಾತ್ಮಕ ಐಡಿಯಾಗಳು.

ಗಣರಾಜ್ಯೋತ್ಸವಕ್ಕೆ ಶಾಲೆ ಅಲಂಕರಿಸಲು ಟಿಪ್ಸ್

  • ಶಾಲೆಯ ಗೇಟ್‌: ಶಾಲೆಯ ಗೇಟ್‌ ಅಥವಾ ದ್ವಾರವನ್ನು ತ್ರಿವರ್ಣ ಬಣ್ಣದ ಕಾಗದಗಳಿಂದ ಸಿಂಗರಿಸಬಹುದು. ಸಂವಿಧಾನ ಚಿತ್ರ ಹಾಗೂ ಮೌಲ್ಯಗಳನ್ನು ಸಂಕೇತಿಸುವ ಬ್ಯಾನರ್ ಅಥವಾ ಪೋಸ್ಟರ್‌ಗಳನ್ನು ಅಂಟಿಸಬಹುದು. ಆ ಮೂಲಕ ಗೇಟ್‌ನಿಂದಲೇ ಗಣರಾಜ್ಯೋತ್ಸವ ಸಂಭ್ರಮ ಕಳೆಗಟ್ಟುವಂತೆ ಮಾಡುವ ಜೊತೆಗೆ ಸಂವಿಧಾನದ ಮೌಲ್ಯವನ್ನು ಸಾರಬಹುದು.
  • ದೇಶಭಕ್ತಿ ಹೆಚ್ಚಿಸುವ ರಂಗೋಲಿಗಳು: ಗಣರಾಜ್ಯೋತ್ಸವದ ಸಂದರ್ಭ ತಪ್ಪದೇ ಧ್ವಜಾರೋಹಣ ಮಾಡಲಾಗುತ್ತದೆ. ಈ ದಿನದಂದು ಶಾಲೆಯ ಅಂಗಳದಲ್ಲಿ ಹಾಗೂ ಧ್ವಜಾರೋಹಣ ನೆರವೇರುವ ಸ್ಥಳಗಳಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ದೇಶಭಕ್ತಿ ಹೆಚ್ಚಿಸುವ ರಂಗೋಲಿಗಳನ್ನು ಚಿತ್ರಿಸಬಹುದು. ರಂಗೋಲಿಯಲ್ಲೇ ಭಾರತದ ಧ್ವಜದ ಚಿತ್ತಾರವನ್ನೂ ಮೂಡಿಸಬಹುದು.
  • ಆಟದ ಮೈದಾನ: ಆಟದ ಮೈದಾನದಲ್ಲಿ ಸುತ್ತಲೂ ತ್ರಿವರ್ಣದ ಬಲೂನ್‌ಗಳು ಹಾಗೂ ಬಣ್ಣದ ಕಾಗದಗಳಿಂದ ಸಿಂಗರಿಸಬಹುದು.
  • ಶಾಲೆಯ ಕಾರಿಡಾರ್‌ಗಳು: ಶಾಲೆಯ ಕಾರಿಡಾರ್‌ಗಳನ್ನು ಚಿಕ್ಕ ಚಿಕ್ಕ ಬಾವುಟಗಳಿಂದ ಅಲಂಕಾರ ಮಾಡಬಹುದು. ಇದಕ್ಕೂ ಬಣ್ಣದ ಕಾಗದ ಹಾಗೂ ಬಲೂನ್ ಕಟ್ಟಬಹುದು.
  • ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಜ್ಯ ಲಾಂಛನ, ರಾಷ್ಟ್ರೀಯ ಪ್ರಾಣಿ ಮತ್ತು ರಾಷ್ಟ್ರೀಯ ಪಕ್ಷಿಯಂತಹ ರಾಷ್ಟ್ರೀಯ ಗುರುತಿನ ಅಂಶಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಪೋಸ್ಟರ್‌ಗಳನ್ನು ಪ್ರದರ್ಶಿಸಬಹುದು.

    ಇದನ್ನೂ ಓದಿ: ಗಣರಾಜ್ಯೋತ್ಸವ ಭಾಷಣ 2025: ವಿದ್ಯಾರ್ಥಿಗಳಿಗಾಗಿ ಜನವರಿ 26ರ ರಿಪಬ್ಲಿಕ್‌ ಡೇ ಮಾದರಿ ಭಾಷಣ ಇಲ್ಲಿದೆ ನೋಡಿ
  • ತರಗತಿ ಕೋಣೆಗಳು: ಗಣರಾಜ್ಯೋತ್ಸವಕ್ಕೆ ತರಗತಿ ಕೋಣೆಗಳನ್ನು ವಿಶೇಷವಾಗಿ ಅಲಂಕಾರ ಮಾಡಬಹುದು. ಕೋಣೆಯ ಬಾಗಿಲಿನಿಂದಲೇ ಸಿಂಗರಿಸಬಹುದು. ಬಾಗಿಲಿಗೆ ಬಲೂನ್‌ಗಳಿಂದ ಅಲಂಕರಿಸಿ. ತ್ರಿವರ್ಣದ ಹ್ಯಾಂಗಿಂಗ್‌ಗಳನ್ನು ನೇತು ಹಾಕಿ. ತರಗತಿ ಕೋಣೆಯೊಳಗೆ ಕೇಸರಿ, ಬಿಳಿ, ಹಸಿರು ಬಣ್ಣದ ರಿಬ್ಬನ್‌ ಹಾಗೂ ಬಲೂನ್‌ಗಳಿಂದ ಸುಂದರವಾಗಿ ಡಿಸೈನ್ ಬರುವಂತೆ ಅಲಂಕಾರ ಮಾಡಬಹುದು.

ಗಣರಾಜ್ಯೋತ್ಸವಕ್ಕೆ ನಿಮ್ಮ ಶಾಲೆಯನ್ನು ಅಲಂಕರಿಸುವುದು ಹೇಗೆ?
ಗಣರಾಜ್ಯೋತ್ಸವಕ್ಕೆ ನಿಮ್ಮ ಶಾಲೆಯನ್ನು ಅಲಂಕರಿಸುವುದು ಹೇಗೆ? (PC: Pinterest )
  • ಬೋರ್ಡ್‌ಗಳ ಮೇಲೆ ಗಣರಾಜ್ಯೋತ್ಸವದ ಕುರಿತು ಮಾಹಿತಿಗಳನ್ನು ಬರೆಯಬಹುದು ಅಥವಾ ಪೋಸ್ಟರ್ ರೂಪದಲ್ಲಿ ವಿನ್ಯಾಸ ಮಾಡಿ ಅಂಟಿಸಬಹುದು.
  • ಪ್ರತಿ ತರಗತಿಯ ಬೋರ್ಡ್‌ಗಳ ಮೇಲೂ ಗಣರಾಜ್ಯೋತ್ಸವ ಶುಭಾಶಯ ಎಂದು ಬರೆಯುವ ಜೊತೆಗೆ ರಾಷ್ಟ್ರಧ್ವಜದ ಚಿತ್ತಾರವನ್ನು ಮೂಡಿಸಬಹುದು. ಇದರೊಂದಿಗೆ ಅಶೋಕ ಚಕ್ರದ ಚಿತ್ತಾರ ಬಿಡಿಸಲು ಮರೆಯದಿರಿ.
  • ಮಕ್ಕಳು ಹೀಗೆ ಸಿಂಗಾರಗೊಂಡರೆ ಚೆಂದ: ಸ್ವಾತಂತ್ರ್ಯ ದಿನಾಚರಣೆಯ ನಂತರ ಆಚರಿಸುವ ದೇಶಭಕ್ತಿ ಸಾರುವ ಹಬ್ಬಗಳಲ್ಲಿ ಗಣರಾಜ್ಯೋತ್ಸವವು ಒಂದು. ಈ ಬಾರಿ ಗಣರಾಜ್ಯೋತ್ಸವಕ್ಕೆ ನಿಮ್ಮ ಶಾಲೆಯ ಮಕ್ಕಳೆಲ್ಲಾ ಒಂದೇ ಥೀಮ್‌ನ ಡ್ರೆಸ್ ಧರಿಸಿದರೆ ಬಹಳ ಚೆನ್ನಾಗಿ ಕಾಣುತ್ತದೆ. ಇದರೊಂದಿಗೆ ಕೈಗೆ ತ್ರಿವರ್ಣದ ಬ್ಯಾಂಡ್ ಧರಿಸಬೇಕು. ಇದರಿಂದ ನಿಮ್ಮ ಶಾಲೆಯ ಗಣರಾಜ್ಯೋತ್ಸವ ವಿಶೇಷವಾಗುತ್ತದೆ.
  • ಸ್ಟೇಜ್ ಅಲಂಕಾರ ವಿಶೇಷವಾಗಿರಲಿ. ಸ್ಟೇಜ್‌ನ ಹಿಂಭಾಗದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ಕರ್ಟನ್ ಹಾಕಿ. ಅದರ ಮೇಲೆ ತ್ರಿವರ್ಣ ಹೂವಿನ ಚಿತ್ತಾರವಿರುವ ಅಥವಾ ಚಿಟ್ಟೆಯ ಚಿತ್ತಾರಗಳನ್ನು ಅಂಟಿಸಿ. ಮಧ್ಯದಲ್ಲಿ ದೊಡ್ಡದಾದ ರಾಷ್ಟ್ರಧ್ವಜ ಅಂಟಿಸಿ. ಎದುರು ಭಾಗದಲ್ಲೂ ತ್ರಿವರ್ಣ ಬಣ್ಣದ ಬಲೂನ್‌ಗಳನ್ನು ಅಂಟಿಸಿ.

ಇದನ್ನೂ ಓದಿ: ಹೂವುಗಳಲ್ಲಿ ಅರಳಿದ್ದಾರೆ ಮಹರ್ಷಿ ವಾಲ್ಮೀಕಿ, ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್‌ ಸಜ್ಜು; ಇಂದು ಉದ್ಘಾಟನೆ

Whats_app_banner