Republic Day 2025: ಈ ಬಾರಿ ಎಷ್ಟನೇ ಗಣರಾಜ್ಯೋತ್ಸವ? 76 ಅಥವಾ 77 ವರ್ಷ ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ
ಪ್ರತಿ ವರ್ಷ ಜನವರಿ 26ಕ್ಕೆ ಭಾರತದಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಇದು 1950ರಲ್ಲಿ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದ ದಿನವನ್ನು ನೆನಪಿಸುತ್ತದೆ. ಈ ಬಾರಿ ನಾವು ಆಚರಿಸುತ್ತಿರುವುದು 76ನೇ ಗಣರಾಜ್ಯೋತ್ಸವವೋ ಅಥವಾ 77ನೇ ವರ್ಷವೋ ಎನ್ನುವ ಗೊಂದಲ ನಿಮ್ಮ ಮನಸ್ಸಿನಲ್ಲೂ ಇದ್ದರೆ ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

ಜನವರಿ 26, ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದ ದಿನ. ಈ ದಿನ ಸವಿನೆನಪಿಗಾಗಿ ಪ್ರತಿ ವರ್ಷ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಗಣರಾಜ್ಯೋತ್ಸವ ಸಂದರ್ಭ ದೆಹಲಿಯ ಇಂಡಿಯಾ ಗೇಟ್ ಬಳಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ದೇಶಭಕ್ತಿ ಹೆಚ್ಚಿಸುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಈ ಬಾರಿ ನಾವು ಎಷ್ಟನೇ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ, 76ನೇ ವರ್ಷದ ಗಣರಾಜ್ಯೋತ್ಸವವೋ ಅಥವಾ 77ನೇ ವರ್ಷದ ಗಣರಾಜ್ಯೋತ್ಸವವೋ ಎಂಬ ಗೊಂದಲ ನಿಮ್ಮಲ್ಲೂ ಇರಬಹುದು. ಈ ಪ್ರಶ್ನೆ ಇಲ್ಲಿದೆ ಉತ್ತರ.
ಗಣರಾಜ್ಯೋತ್ಸವ ಆಚರಣೆ
ಗಣರಾಜ್ಯೋತ್ಸ ಸಂದರ್ಭ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಮತ್ತು ಅರೆಸೈನಿಕ ಪಡೆಗಳ ತುಕಡಿಗಳು ಭಾಗವಹಿಸುತ್ತವೆ. ಇದರಲ್ಲಿ ದೇಶದ ವಿವಿಧ ರಾಜ್ಯಗಳ ಸಾಂಸ್ಕೃತಿಕ ವೈಭವವನ್ನು ಸಾರುವ ಟ್ಲಾಬೊಗಳ ಮೆರವಣಿಗೆಯೂ ಇರುತ್ತದೆ. ರೋಮಾಂಚಕ ಪಥ ಸಂಚಲನವು ಗಮನ ಸೆಳೆಯುತ್ತದೆ. ಸ್ವಾತಂತ್ಸ್ಯೋತ್ಸವದ ನಂತರ ದೇಶದಲ್ಲಿ ಆಚರಿಸುವ ಪ್ರಮುಖ ರಾಷ್ಟ್ರಭಕ್ತಿ ಹರಡುವ ಹಬ್ಬವಿದು ಎಂದು ಹೇಳಬಹುದು. 1950 ಜನವರಿ 26 ರಂದು ಭಾರತೀಯ ಸಂವಿಧಾನವನ್ನು ಅಳವಡಿಸಿಕೊಂಡು. ಪ್ರಜಾಪ್ರಭುತ್ವ ರಾಷ್ಟ್ರವಾದ ದಿನವನ್ನು ಗುರುತಿಸಲು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
76ನೇ ಗಣರಾಜ್ಯೋತ್ಸವ
ಈ ದಿನದಂದು, ಭಾರತ ಅಧಿಕೃತವಾಗಿ ಪ್ರಜಾಪ್ರಭುತ್ವ ಗಣರಾಜ್ಯವಾಯಿತು. ಮೊದಲ ಗಣರಾಜ್ಯೋತ್ಸವವನ್ನು 1951 ಜನವರಿ 26 ರಂದು ಆಚರಿಸಲಾಯಿತು. ಈ ವರ್ಷ ಸಂವಿಧಾನವನ್ನು ಅಂಗೀಕರಿಸಿದ 75 ವರ್ಷಗಳನ್ನು ಸೂಚಿಸುತ್ತದೆ, ಇದು ರಾಷ್ಟ್ರದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು. 2025ರ ಜನವರಿ 26 ರಂದು ಭಾರತವು 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. 2024ಕ್ಕೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ 75 ವರ್ಷಗಳು ಕಳೆದಿವೆ.
2025ರ ಗಣರಾಜ್ಯೋತ್ಸವ ಥೀಮ್
ಈ ವರ್ಷದ ಗಣರಾಜ್ಯೋತ್ಸವ ಆಚರಣೆಯು ‘ಸುವರ್ಣ ಭಾರತ: ಪರಂಪರೆ ಮತ್ತು ಪ್ರಗತಿ‘ ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಪ್ರತಿ ವರ್ಷ ಭಾರತ ಸರ್ಕಾರವು ಗಣರಾಜ್ಯೋತ್ಸವಕ್ಕಾಗಿ ಒಂದು ನಿರ್ದಿಷ್ಟ ವಿಷಯವನ್ನು ಆಯ್ಕೆ ಮಾಡುತ್ತದೆ. ಈ ವರ್ಷದ ವಿಷಯವು ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅದರ ಬೆಳವಣಿಗೆ ಮತ್ತು ಅಭಿವೃದ್ಧಿಯ ಪ್ರಯಾಣವನ್ನು ಎತ್ತಿ ತೋರಿಸುತ್ತದೆ.
2025 ರ ಗಣರಾಜ್ಯೋತ್ಸವಕ್ಕೆ, ಆಂಧ್ರಪ್ರದೇಶ, ಬಿಹಾರ, ಚಂಡೀಗಢ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ ಮತ್ತು ಮಧ್ಯಪ್ರದೇಶ ಸೇರಿದಂತೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋಗಳು ಕರ್ತವ್ಯ ಪಥ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿವೆ. ಹೆಚ್ಚುವರಿಯಾಗಿ, 11 ಕೇಂದ್ರ ಸರ್ಕಾರಿ ತುಕಡಿಗಳು ಈ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.
ಜನವರಿ 26, 2025 ರಂದು ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರನ್ನು ಮುಖ್ಯ ಅತಿಥಿಯಾಗಿ ಘೋಷಿಸಲಾಗಿದೆ.

ವಿಭಾಗ