ಗಣರಾಜ್ಯೋತ್ಸವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೀರಾ? ಭಾರತ ಸಂವಿಧಾನದ ಇತಿಹಾಸ, ಮಹತ್ವದ ಕುರಿತ ಈ ವಿಚಾರಗಳು ನಿಮಗೆ ತಿಳಿದಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗಣರಾಜ್ಯೋತ್ಸವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೀರಾ? ಭಾರತ ಸಂವಿಧಾನದ ಇತಿಹಾಸ, ಮಹತ್ವದ ಕುರಿತ ಈ ವಿಚಾರಗಳು ನಿಮಗೆ ತಿಳಿದಿರಲಿ

ಗಣರಾಜ್ಯೋತ್ಸವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೀರಾ? ಭಾರತ ಸಂವಿಧಾನದ ಇತಿಹಾಸ, ಮಹತ್ವದ ಕುರಿತ ಈ ವಿಚಾರಗಳು ನಿಮಗೆ ತಿಳಿದಿರಲಿ

ಗಣರಾಜ್ಯೋತ್ಸವ ಭಾರತದ ಅತ್ಯಂತ ಮಹತ್ವದ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಪ್ರತಿ ವರ್ಷ ಜನವರಿ26 ರಂದುದೇಶದೆಲ್ಲೆಡೆ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದ ಬಗ್ಗೆ ನಿಮಗೆಷ್ಟು ಗೊತ್ತು? ಸಂವಿಧಾನದ ಇತಿಹಾಸ ಹಾಗೂ ಮಹತ್ವದ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ. ಗಣರಾಜ್ಯೋತ್ಸವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಈ ಮಾಹಿತಿ ತಿಳಿದಿರಬೇಕು.

Republic Day 2025: ಸಂವಿಧಾನದ ಇತಿಹಾಸ, ಮಹತ್ವದ ಬಗ್ಗೆ ಪ್ರತಿಯೊಬ್ಬರು ತಿಳಿದಿಲೇಬೇಕಾದ ವಿಚಾರವಿದು
Republic Day 2025: ಸಂವಿಧಾನದ ಇತಿಹಾಸ, ಮಹತ್ವದ ಬಗ್ಗೆ ಪ್ರತಿಯೊಬ್ಬರು ತಿಳಿದಿಲೇಬೇಕಾದ ವಿಚಾರವಿದು (Canva)

ಗಣರಾಜ್ಯೋತ್ಸವವು ಭಾರತದ ಅತ್ಯಂತ ಮಹತ್ವದ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಜನವರಿ 26 ರಂದು ಇದನ್ನು ದೇಶದೆಲ್ಲೆಡೆ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. 1950 ರಲ್ಲಿ ಭಾರತದ ಸಂವಿಧಾನ ಜಾರಿಗೆ ಬಂದ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ಜನವರಿ 26 ರಂದು ಭಾರತ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತಿ ಪಡೆದ ಭಾರತ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಆದರ್ಶಗಳಿಗೆ ದೇಶದ ಬದ್ಧತೆಯನ್ನು ಆಚರಿಸುವ ದಿನ ಇದಾಗಿದೆ.

ಸಂವಿಧಾನ ಜಾರಿಗೆ ಬಂದ ನಂತರ ಭಾರತವು ಸಂಪೂರ್ಣ ಸ್ವತಂತ್ರ ಗಣರಾಜ್ಯವಾದ ದಿನವನ್ನು ಸ್ಮರಿಸುತ್ತದೆ. 1950ರಂದು ಸಂವಿಧಾನ ಜಾರಿಗೆ ಬಂದಿರುವುದರಿಂದ ಗಣರಾಜ್ಯೋತ್ಸವವನ್ನು ಅಂದಿನಿಂದ ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಭಾರತವು ಸುಮಾರು 200 ವರ್ಷಗಳ ಕಾಲ ಬ್ರಿಟಿಷರ ಹಿಡಿತದಲ್ಲಿತ್ತು. ಇಂಗ್ಲಿಷರು ನಮ್ಮನ್ನು ಆಳುತ್ತಿದ್ದರು. ಭಾರತದ ಸ್ವಾತಂತ್ರ್ಯಕ್ಕಾಗಿ ತೀವ್ರಗೊಂಡ ಚಳುವಳಿಯು ಕೊನೆಗೆ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿತು. ಅನೇಕ ಮಹನೀಯರ ತ್ಯಾಗ, ಬಲಿದಾನಗಳಿಂದ ಆಗಸ್ಟ್ 14ರ ಮಧ್ಯರಾತ್ರಿ 1947 ರಂದು ದೇಶ ಸ್ವಾತಂತ್ರ್ಯವನ್ನು ಪಡೆಯಿತು. ಆದರೆ, 1950ರ ವರೆಗೆ ಭಾರತವು ಶಾಶ್ವತ ಸಂವಿಧಾನವನ್ನು ಹೊಂದಿರಲಿಲ್ಲ.

ಸಂವಿಧಾನಕ್ಕೆ ಡಾ ಬಿ.ಆರ್. ಅಂಬೇಡ್ಕರ್ ಕೊಡುಗೆ

ಭಾರತ ಸಂವಿಧಾನ ರೂಪಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕೊಡುಗೆ ಮಹತ್ವದ್ದು. ಇದಕ್ಕಾಗಿ ಇವರನ್ನು ಸಂವಿಧಾನ ಶಿಲ್ಪಿ ಎಂದೇ ಕರೆಯಲಾಗುತ್ತದೆ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ತಮ್ಮ ದೂರದೃಷ್ಟಿಯಿಂದ ದೇಶಕ್ಕೆ ಮಾರ್ಗದರ್ಶನ ನೀಡುವ ಸಂವಿಧಾನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದಾರ್ಶನಿಕ ಮತ್ತು ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿದ್ದ ಅಂಬೇಡ್ಕರ್, ಸಂವಿಧಾನದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳನ್ನು ಅಳವಡಿಸಿದರು. ಇದು ಭಾರತದ ಪ್ರಜಾಪ್ರಭುತ್ವ ಚೌಕಟ್ಟಿಗೆ ಭದ್ರ ಅಡಿಪಾಯವಾಯಿತು. ಸಂವಿಧಾನವನ್ನು ರಚಿಸುವಲ್ಲಿ ಅಂಬೇಡ್ಕರ್ ಅವರ ಕಾರ್ಯವು ದೇಶದ ಸಮಗ್ರ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕೆ ಸಹಾಯಕವಾಗಿದೆ.

ಬಾರತದ ಸಂವಿಧಾನವು ಒಂದೆರಡು ದಿನಗಳಲ್ಲಿ ತಯಾರಾಗಿರುವುದಲ್ಲ. ಸಂವಿಧಾನದ ಕರಡನ್ನು 4 ನವೆಂಬರ್ 1947 ರಂದು ಭಾರತೀಯ ಸಂವಿಧಾನ ಸಭೆಗೆ ಸಲ್ಲಿಸಲಾಯಿತು. ಎರಡು ವರ್ಷಗಳ ಕಾಲ 166 ದಿನಗಳ ಕಾಲ ಸಭೆ ಸೇರಲಾಗಿತ್ತು. ಅಸೆಂಬ್ಲಿ ಸದಸ್ಯರು ಸೇರಿದಂತೆ ಸಭೆಯಲ್ಲಿ ಹಲವಾರು ಮಂದಿ ಮಹನೀಯರು ಪಾಲ್ಗೊಂಡಿದ್ದರು. ಅಲ್ಲಿನ ಚರ್ಚೆಗಳಲ್ಲಿ ಪತ್ರಕರ್ತರು ಹಾಗೂ ಸಾರ್ವಜನಿಕರ ಮುಕ್ತ ಪ್ರವೇಶ ಒದಗಿಸಲಾಗಿತ್ತು. ಕೊನೆಗೆ ಸಭೆಯಲ್ಲಿ ಸಂವಿಧಾನ ರಚನೆ ಪೂರ್ಣಗೊಂಡು 1949ರ ನವೆಂಬರ್‌ನಲ್ಲೇ ದೇಶಕ್ಕೆ ಸಮರ್ಪಿಸಲಾಯಿತು. ಅಂತಿಮವಾಗಿ, ಜನವರಿ 24, 1950 ರಂದು ಭಾರತದ ಸಂವಿಧಾನ ಜಾರಿಗೆ ಬಂತು. ಇದಾದ ಎರಡು ದಿನಗಳ ನಂತರ ಇತಿಹಾಸ ನಿರ್ಮಾಣವಾಯಿತು. ಆ ದಿನದಂದು ಭಾರತೀಯ ಒಕ್ಕೂಟದ ಅಧ್ಯಕ್ಷರಾಗಿ (ರಾಷ್ಟ್ರಪತಿ) ಡಾ. ರಾಜೇಂದ್ರ ಪ್ರಸಾದ್ ಅವರ ಮೊದಲ ಅಧಿಕಾರಾವಧಿ ಪ್ರಾರಂಭವಾಯಿತು. ಹೊಸ ಸಂವಿಧಾನದ ಪರಿವರ್ತನಾ ನಿಬಂಧನೆಗಳ ಅಡಿಯಲ್ಲಿ ಸಂವಿಧಾನ ಸಭೆಯು ಭಾರತದ ಸಂಸತ್ತಾಯಿತು.

ಭಾರತದ ಸಂವಿಧಾನದ ಇನ್ನೊಂದು ವಿಶೇಷವೇನೆಂದರೆ ಭಾರತ ಸಂವಿಧಾನವನ್ನು ಕೈಯಲ್ಲಿ ಬರೆಯಲಾಗಿದೆ. ಸಂವಿಧಾನದ ಮೂಲ ಪಠ್ಯವನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ತದನಂತರ ಅದನ್ನು ಭಾರತದ ಇತರೆ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲಾಗಿದೆ. ಭಾರತದ ಸಂವಿಧಾನದ ಪ್ರತಿಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಸಂಸತ್‌ ಭವನದಲ್ಲಿದೆ. ಆರಂಭದಲ್ಲಿ, ಅಂದರೆ ಸಂವಿಧಾನ ರಚನೆಯಾಗಿ ಜಾರಿಗೆ ಬಂದಾಗ ಅದರಲ್ಲಿ 8 ಅನುಚ್ಛೇದಗಳು ಹಾಗೂ 22 ಭಾಗಗಳು ಹಾಗೂ 395 ವಿಧಿಗಳು ಇದ್ದವು. ಆ ಬಳಿಕ ಇಲ್ಲಿಯವರೆಗೆ ಒಟ್ಟು 105 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ಈಗ ಭಾರತ ಸಂವಿಧಾನದಲ್ಲಿ 12 ಅನುಚ್ಛೇದಗಳು ಹಾಗೂ 25 ಭಾಗಗಳು ಹಾಗೂ 470 ವಿಧಿಗಳಿವೆ.

ಭಾರತದಲ್ಲಿ ಗಣರಾಜ್ಯೋತ್ಸವ ಆಚರಣೆ

ದೇಶಾದ್ಯಂತ ಗಣರಾಜ್ಯೋತ್ಸವವನ್ನು ದೇಶಭಕ್ತಿಯ ಉತ್ಸಾಹದಿಂದ ಆಚರಿಸಲಾಗುತ್ತದೆ. ಅತ್ಯಂತ ಪ್ರಮುಖ ಕಾರ್ಯಕ್ರಮವು ರಾಜಧಾನಿ ನವದೆಹಲಿಯಲ್ಲಿ ನೆರವೇರುತ್ತದೆ. ಭಾರತದ ರಾಷ್ಟ್ರಪತಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ನಂತರ, ರಾಜಪಥದ ಉದ್ದಕ್ಕೂ ಅದ್ಭುತ ಮೆರವಣಿಗೆ ನಡೆಯುತ್ತದೆ. ಇದರಲ್ಲಿ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು, ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಟ್ಯಾಬ್ಲೋಗಳು ಮತ್ತು ಭಾರತದ ರಕ್ಷಣಾ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಮಿಲಿಟರಿ ಪ್ರದರ್ಶನವನ್ನೂ ಏರ್ಪಡಿಸಲಾಗುತ್ತದೆ.

ಅಷ್ಟೇ ಅಲ್ಲ, ಈ ದಿನದಂದು ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಸಾರುವ ಕಲಾವಿದರ ನೃತ್ಯ, ಸೈನಿಕರ ಆಕರ್ಷಕ ಪಥಸಂಚಲನ ನೆರವೇರುತ್ತದೆ. ಅಂದು ಸಮಾಜಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ ನಾಗರಿಕರಿಗೆ ರಾಷ್ಟ್ರಪತಿ ಪದ್ಮ ಪ್ರಶಸ್ತಿಗಳು ಸೇರಿದಂತೆ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಾರೆ. ಈ ಅದ್ಧೂರಿ ಕಾರ್ಯಕ್ರಮವು ಫೈಟರ್ ಜೆಟ್‌ಗಳ ಹಾರಾಟ ಮತ್ತು 21 ಗನ್ ಸೆಲ್ಯೂಟ್‌ನೊಂದಿಗೆ ಮುಕ್ತಾಯಗೊಳ್ಳುತ್ತದೆ. ಇದನ್ನು ನೋಡುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣವಾಗಿದೆ.

ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಸೇರಿದಂತೆ ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳ ಜ್ಞಾಪನೆಯಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಪ್ರಜಾಪ್ರಭುತ್ವದ ಮಹತ್ವ ಮತ್ತು ಈ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಮಹತ್ವದ್ದು. ಈ ಆಚರಣೆಯು ಧರ್ಮ, ಭಾಷೆ ಅಥವಾ ಜನಾಂಗೀಯತೆಯನ್ನು ಲೆಕ್ಕಿಸದೆ ಒಂದು ಏಕೀಕೃತ ರಾಷ್ಟ್ರವಾಗಿ ಒಟ್ಟಾಗಿ ಸೇರುವ ಸಂದರ್ಭವಾಗಿದೆ.

ಗಣರಾಜ್ಯೋತ್ಸವದಂದು ಸರಕಾರಿ ರಜೆ ನೀಡಲಾಗುತ್ತದೆ. ಹಾಗಂತ ಇದು ಕೇವಲ ರಾಷ್ಟ್ರೀಯ ರಜಾದಿನವಲ್ಲ. ಇದು ಭಾರತದ ಸಾಂಸ್ಕೃತಿಕ ಪರಂಪರೆ, ಮೌಲ್ಯಗಳನ್ನು ಎತ್ತಿಹಿಡಿಯುವ ಆಚರಣೆ. ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಭಾರತೀಯ ನಾಗರಿಕರಿಗೆ ಈ ದಿನ ಅತ್ಯಂತ ಮಹತ್ವದ್ದು. ಭಾರತ ಸಂವಿಧಾನವು ಸಮಾನತೆಯನ್ನು ಎತ್ತಿ ಹಿಡಿಯುತ್ತದೆ. ಇಲ್ಲಿ ಪ್ರಜೆಗಳೇ ಪ್ರಭುಗಳು. ದೇಶದ ಕಾನೂನು ಸುವವಸ್ಯೆ ಕಾಪಾಡುವಲ್ಲೂ ಸಂವಿಧಾನದ ಪಾತ್ರ ಮಹತ್ವದ್ದು. ಸಂವಿಧಾನ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು.

Whats_app_banner