2023 ಮೆಲುಕು: ಹಿಂದಿರುಗಿ ನೋಡಿದಾಗ ನೆನಪಾದ ನನ್ನಿಷ್ಟದ 10 ಸಂಗತಿಗಳಿವು; ನೀರುದೋಸೆ ಕಡುಬು ಪತ್ರೊಡೆಗಳೇ ಈ ವರ್ಷ ನನ್ನ ಕ್ಷಮಿಸಿ ಪ್ಲೀಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  2023 ಮೆಲುಕು: ಹಿಂದಿರುಗಿ ನೋಡಿದಾಗ ನೆನಪಾದ ನನ್ನಿಷ್ಟದ 10 ಸಂಗತಿಗಳಿವು; ನೀರುದೋಸೆ ಕಡುಬು ಪತ್ರೊಡೆಗಳೇ ಈ ವರ್ಷ ನನ್ನ ಕ್ಷಮಿಸಿ ಪ್ಲೀಸ್‌

2023 ಮೆಲುಕು: ಹಿಂದಿರುಗಿ ನೋಡಿದಾಗ ನೆನಪಾದ ನನ್ನಿಷ್ಟದ 10 ಸಂಗತಿಗಳಿವು; ನೀರುದೋಸೆ ಕಡುಬು ಪತ್ರೊಡೆಗಳೇ ಈ ವರ್ಷ ನನ್ನ ಕ್ಷಮಿಸಿ ಪ್ಲೀಸ್‌

Praveen Chandra's Favorite things 2023: 2024ಕ್ಕೆ ಕಾಲಿಡಲು ಒಂದು ದಿನ ಬಾಕಿಯಿದೆ. 2023 ನಿಮಗೆ ಏಕೆ ಮುಖ್ಯ. ನೀವು ನೆನಪಿಸಿಕೊಳ್ಳಲು ಬಯಸುವ ನಿಮ್ಮಿಷ್ಟದ ವಿಷಯ, ಘಟನೆ, ಪುಸ್ತಕ, ಸಿನಿಮಾ, ಆಹಾರ, ತಂತ್ರಜ್ಞಾನ ಇತ್ಯಾದಿ 10 ಸಂಗತಿಗಳು ಯಾವುವು? ಈ ಪ್ರಶ್ನೆಗೆ ಎಚ್‌ಟಿ ಕನ್ನಡದ ನಿಮ್ಮ ಗೆಳೆಯ ಪ್ರವೀಣ್‌ ಚಂದ್ರ ಪುತ್ತೂರು ಏನ್‌ ಹೇಳ್ತಾರೆ ಓದಿ.

ಹೊಸ ವರ್ಷದ ಹೊಸ್ತಿಲಲ್ಲಿ 2023ರ ನೆನಪು
ಹೊಸ ವರ್ಷದ ಹೊಸ್ತಿಲಲ್ಲಿ 2023ರ ನೆನಪು

Rewind 2023: ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಒಂದು ದಿನದಲ್ಲಿ ಹಳೆ ಕ್ಯಾಲೆಂಡರ್‌ ಮೂಲೆ ಸೇರಬಹುದು. ಹೊಸ ಕ್ಯಾಲೆಂಡರ್‌ ಗೋಡೆ ಏರಬಹುದು. ಆದರೆ, ಕಳೆದುಹೋದ ಆ ಮಧುರ 365 ದಿನ, ಸುಂದರ 52 ವಾರ, ಅಪೂರ್ವ 8760 ಗಂಟೆ, ಅಮೂಲ್ಯ 525600 ನಿಮಿಷ, ಕಳೆದು ಹೋದ ಆ 31536000 ಸೆಕೆಂಡುಗಳ ನೋವು ನಲಿವಿನ ಕ್ಷಣಗಳನ್ನು ಮರೆಯುವುದುಂಟೆ. ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಈ ವರ್ಷ ನಾನೇನು ಮಾಡಿದೆ? ನನ್ನ ಬದುಕಿನ ಗುರಿಗಳು ಈಡೇರುವ ಪಥದಲ್ಲಿವೆಯೇ? ಒಂದು ವರ್ಷದ ಸಾಧನೆಗಳೇನು? ವೇದನೆಗಳೇನು? ಖುಷಿ ಕೊಟ್ಟ ಕ್ಷಣಗಳು ಯಾವುವು? ಯಾರಿಗೂ ತಿಳಿಯದಂತೆ ಬಿಕ್ಕಳಿಸಿದ ಕ್ಷಣಗಳು ಇವೆಯೇ? ಹೀಗೆಲ್ಲ ಯೋಚಿಸುವಂತೆ ಮಾಡುವ ದಿನವಿದು.

ಈ ವರ್ಷ ಏನೆಲ್ಲ ನಡೆಯಿತು ಎಂದು ಯೋಚಿಸಿದಾಗ ಹಲವು ಅಂಶಗಳು ಕಣ್ಮುಂದೆ ಬರುತ್ತವೆ. ಖುಷಿಕೊಟ್ಟ ಸಣ್ಣಸಣ್ಣ ವಿಷಯಗಳು, ಹೊಸ ಕಲಿಕೆಗಳು, ಸಂಭ್ರಮದ ದಿನಗಳು ನೆನಪಾಗುತ್ತವೆ. ಅದೇ ಸಮಯದಲ್ಲಿ ನಿನ್ನೆ ನಗುತ್ತ ಇದ್ದವರು ಇವತ್ತು ಇಲ್ಲ ಎಂಬ ಆಪ್ತರ ಅಗಲಿಕೆಯ ಸುದ್ದಿಗಳು ನೆನಪಾಗದೆ ಇರದು. ಈ ವರ್ಷ ನನಗೆ ಖುಷಿಕೊಟ್ಟ ಕ್ಷಣಗಳನ್ನು ವಿಷಯಗಳನ್ನು ಮೆಲುಕು ಹಾಕಲು ಹೊರಟರೆ ನೆನಪುಗಳು ಮೆರವಣಿಗೆ ಹೊರಡುತ್ತವೆ. ಈ ವರ್ಷ ನನಗೆ ಇಷ್ಟವಾದ, ಖುಷಿಕೊಟ್ಟ ಹತ್ತು ಘಟನೆಗಳು, ವಿಷಯಗಳ ಕುರಿತು ಈ ಮುಂದೆ ಬರೆದಿದ್ದೇನೆ. ಪೂರ್ತಿ ಓದಲು ಪ್ರಯತ್ನಿಸಿ. ಪೂರ್ತಿ ಓದಲು ಕಷ್ಟವಾದರೆ ಹತ್ತನೇ ಪಾಯಿಂಟ್‌ ತಪ್ಪದೇ ಓದಬೇಕಾಗಿ ಸವಿನಯ ವಿನಂತಿ.

1. ನನ್ನ ಇಷ್ಟದ ಕನ್ನಡ ಪುಸ್ತಕ

ಈ ವರ್ಷ ಓದಿದ್ದು ಕೆಲವೇ ಪುಸ್ತಕ. ಹಲವು ವರ್ಷಗಳ ಹಿಂದೆ ಇಡೀ ಲೈಬ್ರರಿಯನ್ನೇ ಖಾಲಿ ಮಾಡುವಷ್ಟು ಓದುವ ಹಸಿವಿತ್ತು. ಈ ಡಿಜಿಟಲ್‌ ಜಗತ್ತು ಮೊಬೈಲ್‌, ಕಂಪ್ಯೂಟರ್‌ನಲ್ಲಿಯೇ ಎಲ್ಲವನ್ನೂ ನೀಡುವುದರ ಫಲವೋ ಎಂಬಂತೆ ಕೆಲವು ಪುಸ್ತಕಗಳನ್ನು ಮಾತ್ರ ಈ ವರ್ಷ ಓದುವಂತಾಯ್ತು. ಈ ವರ್ಷ ನನಗೆ ರಮೇಶ್‌ ಅರವಿಂದ್‌ ಬರೆದ ಸ್ಪೂರ್ತಿದಾಯಕ ಪುಸ್ತಕ "ಪ್ರೀತಿಯಿಂದ ರಮೇಶ್‌- ಯಶಸ್ಸಿನ ಸರಳ ಸೂತ್ರಗಳು" ಹೆಚ್ಚು ಇಷ್ಟವಾಯ್ತು. ಈ ಪುಸ್ತಕದಲ್ಲಿ ಯಶಸ್ಸು ಪಡೆಯಲು, ಜೀವನವನ್ನು ಇನ್ನೂ ಚೆನ್ನಾಗಿ ನಡೆಸಲು ಬೇಕಾದ ಸ್ಪೂರ್ತಿದಾಯಕ ಮಾತುಗಳಿವೆ. ಸ್ವತಃ ರಮೇಶ್‌ ಅರವಿಂದ್‌ ಜೀವನದ ಅನುಭವಗಳಿವೆ. ನೀವಿನ್ನೂ ಓದಿಲ್ಲವೆಂದಾದರೆ ತಪ್ಪದೇ ಓದಿ.

2. ನನಗೆ ಇಷ್ಟವಾದ ವ್ಯಕ್ತಿ

ವೈಯಕ್ತಿಕವಾಗಿ ಅಮ್ಮ, ಅಪ್ಪ, ಹೆಂಡ್ತಿ, ಮಗ, ಸಹೋದ್ಯೋಗಿಗಳು, ಸ್ನೇಹಿತರು ಎಂದಿನಂತೆ ಇಷ್ಟವಾಗುತ್ತಾರೆ. ಇದರಾಚೆಗೆ ನೋಡಿದರೆ ಈ ವರ್ಷ ತುಂಬಾ ಇಷ್ಟವಾದ ವ್ಯಕ್ತಿ "ಎಲಾನ್‌ ಮಸ್ಕ್‌" ಅಂದರೆ ನಗಬೇಡಿ. ಟ್ವಿಟ್ಟರ್‌ ಅನ್ನು ಎಕ್ಸ್‌ ಮಾಡಿದ್ದು, ಹಲವು ದೃಢ ನಿರ್ಧಾರ ಕೈಗೊಂಡ ಆತನ ಮನಸ್ಥಿತಿ ಇಷ್ಟವಾಯಿತು. ದೊಡ್ಡ ರಿಸ್ಕ್‌ ತೆಗೆದುಕೊಳ್ಳುವ ಮತ್ತು ದೊಡ್ಡದಾಗಿ ಯೋಚಿಸುವ ಗುಣ ಎಲ್ಲರಲ್ಲೂ ಇರುವುದಿಲ್ಲ. ನಾವು ಸಾಮಾನ್ಯವಾಗಿ ಇವತ್ತು, ನಾಳೆಯ ಕ್ಷಣಿಕ ತೊಂದರೆಗಳ ಕುರಿತು ಆಲೋಚಿಸಿ ಯಾವುದೇ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ. ಆದರೆ, ಆತನ ದೂರ ದೃಷ್ಟಿ, ಎಲ್ಲರಿಗಿಂತ ಭಿನ್ನವಾಗಿ ಯೋಚಿಸುವ ಕ್ರಮ ನನಗಂತೂ ಇಷ್ಟವಾಯಿತು.

3. ಈ ವರ್ಷ ಕೈಗೊಂಡ ಪ್ರವಾಸ

ಈ ವರ್ಷ ಹಲವು ಕಡೆಗಳಿಗೆ ಟ್ರಿಪ್‌ ಪ್ಲಾನ್ ಮಾಡಿದ್ದೆ. ಮನೆಯೇ ಆಫೀಸ್‌ ಆಗಿರುವಾಗ ಮನೆಯಿಂದ ಹೊರ ನಡೆದು ಹೊಸ ಜಗತ್ತಿನಲ್ಲಿ ಒಂದಿಷ್ಟು ಕಾಲ ಕಳೆಯುವುದು ಖುಷಿ ನೀಡುತ್ತದೆ. ಬೆಂಗಳೂರಿನ ವಿವಿಧ ಪ್ರದೇಶಗಳು, ಮೈಸೂರು, ಮಡಿಕೇರಿ ಹೀಗೆ ಹಲವು ಪ್ರದೇಶಗಳಿಗೆ ಹೋಗಿ ಬಂದೆವು. ಆದರೆ, ಎಲ್ಲಕ್ಕಿಂತ ಖುಷಿ ಕೊಟ್ಟದ್ದು ಇತ್ತೀಚಿಗೆ ಕೈಗೊಂಡ ಮೂರು ದಿನದ ಊಟಿ ಪ್ರವಾಸ. ಈ ಕಾಂಕ್ರಿಟ್‌ ಕಟ್ಟಡಗಳಿಂದ ದೂರ ಸರಿದು ಆಕಾಶದೆತ್ತರದ ಪರ್ವತಗಳು, ನೀಲಗಿರಿ ಕಾಡುಗಳನ್ನೆಲ್ಲ ನೋಡುತ್ತ ಹೊಗೆಯಂತೆ ಹಾರುತ್ತಿರುವ ಮಂಜಿನ ನಡುವೆ ಸುಂದರ ಚಹಾ ತೋಟಗಳು, ಡಾಲ್ಫಿನ್‌ ನೋಸ್‌, ದೊಡ್ಡಬೆಟ್ಟ, ಊಟಿ ಕರ್ನಾಟಕ ಉದ್ಯಾನವನ, ಸ್ವಿಮ್ಸ್‌ ಪಾರ್ಕ್‌, ಕೂನೂರು, ಪೈಕಾರ ಎಂದೆಲ್ಲ ಸುತ್ತಾಡಿದ್ದು ಈ ವರ್ಷದ ಸುಂದರ ಅನುಭವ.

4. 2023ರಲ್ಲಿ ನನ್ನ ನೆಚ್ಚಿನ ಸಿನಿಮಾ

ಈ ವರ್ಷ ಲಿಯೋ, ಜವಾನ್‌, ಪಠಾಣ್‌, ಡಂಕಿ, 2028, ಕಥಲ್‌- ದಿ ಕೋರ್‌, ಕಣ್ಣೂರ್‌ ಸ್ಕ್ವಾಡ್‌, ಸಪ್ತ ಸಾಗರದಾಚೆ ಎಲ್ಲೋ, ಟೈಗರ್‌ 3, ವಾರಿಸು, ಜೈಲರ್‌, ಮಿಷನ್‌ ಮಂಜ್ನು, ಪೊನ್ನಿಯನ್‌ ಸೆಲ್ವನ್‌, ಸಲಾರ್‌ ಹೀಗೆ ಹಲವು ಸಿನಿಮಾಗಳು ಬಂದಿವೆ. ಇವುಗಳಲ್ಲಿ ಸಪ್ತ ಸಾಗರದಾಚೆ ಸಿನಿಮಾ ತುಸು ಕಾಡಿದಂತೆ ಆಯ್ತು. ಆದರೆ, ಅದು ನನ್ನ ಫೇವರಿಟ್‌ ಮೂವಿಯಾಗದು. ಟಗರು ಪಲ್ಯ ಇಷ್ಟವಾಯ್ತು. ಆದ್ರೂ ಅದು ಫೇವರಿಟ್‌ ಅಲ್ಲ. ಕಳೆದ ವರ್ಷವಾದರೆ ಹೆಚ್ಚು ಯೋಚಿಸದೆ ಕಾಂತಾರ ಅನ್ನುತ್ತಿದೆ. ಜೈಲರ್‌ ಚಿತ್ರದಲ್ಲಿ ಶಿವಣ್ಣ, ರಜನಿಕಾಂತ್‌ ಇವರೆಲ್ಲರೂ ಇಷ್ಟವಾಗಿದ್ದರು. ಕಾಟೇರ ನೋಡಬೇಕಷ್ಟೇ. ಸಲಾರ್‌ ಇನ್ನೂ ನೋಡಿಲ್ಲ. ಆದರೆ, ಈ ವರ್ಷದ ನನ್ನ ಫೇವರಿಟ್‌ ಚಿತ್ರ ಜವಾನ್.‌ ನನಗೆ ಮೊದಲಿನಿಂದಲೂ ಶಾರೂಖ್‌ ಖಾನ್‌ ಚಿತ್ರಗಳ ಮೇಲೆ ಏನೋ ತಾತ್ಸಾರ ಇತ್ತು. ಆದರೆ, ನಿರ್ದೇಶಕ ಅಟ್ಲಿಯ ಕೈಚಳಕದ ಪರಿಣಾಮವಾಗಿರಬಹುದು, ಈ ವರ್ಷ "ಜವಾನ್‌" ಸಿನಿಮಾ ನನ್ನ ಫೇವರಿಟ್‌.

5. ನನ್ನ ಇಷ್ಟದ ಗ್ಯಾಜೆಟ್‌

ಈ ವರ್ಷ ನನ್ನ ಗ್ಯಾಜೆಟ್‌ ಲೋಕಕ್ಕೆ ಹೊಸ ಸಂಗಾತಿಯೊಂದು ಸೇರ್ಪಡೆಯಾಗಿದೆ. ಜೀವನದಲ್ಲಿ ಮೊದಲ ಬಾರಿಗೆ ಆಪಲ್‌ ಮ್ಯಾಕ್‌ ಲ್ಯಾಪ್‌ಟಾಪ್‌ ಖರೀದಿಸಿದ ಖುಷಿ ನನ್ನದು. ಬಳಕೆ ಆರಂಭದಲ್ಲಿ ತುಸು ಕಷ್ಟವೆನಿಸಿದರೂ ಅದರ ಪರ್ಫಾಮೆನ್ಸ್‌, ಫೀಚರ್ಸ್‌ ಇಷ್ಟವಾಯಿತು.

6. ಇಷ್ಟವಾದ ಸುದ್ದಿ- ಚಂದ್ರಯಾನ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಅಂತರಿಕ್ಷ ಯೋಜನೆಗಳ ಬಗ್ಗೆ ಮೊದಲಿನಿಂದಲೂ ಒಂದು ಕುತೂಹಲದ ಕಣ್ಣಿಟ್ಟಿದ್ದೆ. ಈ ಹಿಂದೆ ಲೂನರ್‌ ಮಿಷನ್‌ ವೈಫಲ್ಯವಾದಗ ತುಂಬಾ ಬೇಸರಪಟ್ಟಿದ್ದೆ. ಈ ಬಾರಿ ಆಗಸ್ಟ್‌ನಲ್ಲಿ ಚಂದ್ರಯಾನ ಯಶಸ್ವಿಯಾದ ಸುದ್ದಿ ಕೇಳಿ ಸಖತ್‌ ಖುಷಿಯಾಗಿತ್ತು. ದಕ್ಷಿಣ ಧ್ರುವದಲ್ಲಿ ರೋವರ್ ಲ್ಯಾಂಡ್‌ ಆದ ಕ್ಷಣ ನಿಜಕ್ಕೂ ಹೆಮ್ಮೆ ಪಡುವಂತಹದ್ದು.

7. ಇಷ್ಟವಾದ ತಂತ್ರಜ್ಞಾನ: ಚಾಟ್‌ ಜಿಪಿಟಿ ಮತ್ತು ಎಐ

ಈ ಬಾರಿ ನನಗೆ ಅಚ್ಚರಿ, ಖುಷಿ ಕೊಟ್ಟ ತಂತ್ರಜ್ಞಾನ ಬೆಳವಣಿಗೆಯಿದು. ತಂತ್ರಜ್ಞಾನವು ಎಷ್ಟು ವೇಗವಾಗಿ ಬದಲಾಗುತ್ತಿದೆ? ನಾವು ಏನಾದರೂ ಸೂಚನೆ ನೀಡಿದರೆ ನಮಗಾಗಿ ಲೇಖನ, ಚಿತ್ರ, ಹಾಡು, ಪ್ರಬಂಧ ಬರೆಯುವ ಚಾಟ್‌ಜಿಪಿಟಿ ಬೆರಗು ಹುಟ್ಟಿಸಿತು. ಇದರ ಸದ್ಯದ ದುರ್ಬಳಕೆ ಬೇಸರ ಹುಟ್ಟಿಸಿದರೂ ನೆಲದ ಕಾನೂನುಗಳು ಸರಿಪಡಿಸಬಲ್ಲದು ಎಂಬ ನಿರೀಕ್ಷೆ. ಮುಂದಿನ ವರ್ಷದಲ್ಲಿ ತಂತ್ರಜ್ಞಾನ ಜಗತ್ತಿನಲ್ಲಿ ಏನೆಲ್ಲ ಬದಲಾವಣೆಯಾಗಬಹುದು ಎಂಬ ಕೌತುಕವೂ ಜತೆಯಾಗಿದೆ.

8. ಖುಷಿಕೊಟ್ಟ ಕಲಿಕೆ

ಈ ವರ್ಷ ಡಿಜಿಟಲ್‌ ಜಗತ್ತಿನಲ್ಲಿ ಹಲವು ಹೊಸ ವಿಷಯಗಳನ್ನು ಕಲಿತ ಸಮಧಾನ ನನ್ನಲ್ಲಿದೆ. ಕರಿಯರ್‌ನಲ್ಲೂ ನಿಂತ ನೀರಾಗದೆ ಹಲವು ಹೊಸ ಸಂಗತಿಗಳನ್ನು ಕಲಿತ ಖುಷಿ ನನ್ನದು. ಆನ್‌ಲೈನ್‌ ಮತ್ತು ಯೂಟ್ಯೂಬ್‌ನಲ್ಲಿ ಲಭ್ಯವಿರುವ ವಿವಿಧ ಕೋರ್ಸ್‌ಗಳನ್ನು ಕಲಿತಿರುವುದು ಈ 2023 ವರ್ಷವನ್ನು ಸಾರ್ಥಕಗೊಳಿಸಿದೆ.

9. ಖುಷಿಕೊಟ್ಟ ಆಹಾರ

ಬೆಂಗಳೂರಿನಲ್ಲಿದ್ದರೂ ಕರಾವಳಿ ಮೂಲದ ಆಹಾರ ತಿನ್ನುವುದು ಹೆಚ್ಚು ಖುಷಿ ಕೊಡುವ ಸಂಗತಿ. ನೀರು ದೋಸೆ, ಪುಂಡಿ, ರೊಟ್ಟಿ, ಪತ್ರೊಡೆ ಅಚ್ಚುಮೆಚ್ಚು. ಸಮುದ್ರದೊಳಗಿನ ಆಹಾರವೆಂದರೆ ಹೆಚ್ಚು ಪ್ರೀತಿ. ಆದರೆ, ಈ ಬಾರಿ ಖುಷಿಕೊಟ್ಟದ್ದು ಮಲೆನಾಡಿನ ನಿತ್ಯ ತಿಂಡಿ. ಇತ್ತೀಚೆಗೆ ಶಿವಮೊಗ್ಗ ಸಾಗರಕ್ಕೆ ಹೋಗಿದ್ದಾಗ ಅಲ್ಲಿ ಸ್ನೇಹಿತನ ಅಮ್ಮ ಪ್ರೀತಿಯಿಂದ ಮಾಡಿಕೊಟ್ಟ ಕಜ್ಜಾಯದ ಸವಿ ಈಗಲೂ ಬಾಯಲ್ಲಿದೆ. ಹೀಗಾಗಿ, 2023ರ ನನ್ನ ಫೇವರಿಟ್‌ ತಿಂಡಿ ಸಾಗರದಲ್ಲಿ ತಿಂದ ಕೋಡುಬಳೆ ಕಜ್ಜಾಯ ಅಥವಾ ಬಳೆ ಕಜ್ಜಾಯ. ದಯವಿಟ್ಟು ಈ ವರ್ಷ ನಿಮ್ಮ ಹೆಸರು ಹೇಳದೆ ಇರುವುದಕ್ಕೆ ನೀರುದೋಸೆ, ಪತ್ರೊಡೆ, ಕಡುಬು ಯಾನೆ ಪುಂಡಿಗಳು ನನ್ನನ್ನು ದೊಡ್ಡ ಮನಸ್ಸಿನಿಂದ ಕ್ಷಮಿಸಬೇಕು.

10. ನನ್ನ ಇಷ್ಟದ ಕನ್ನಡ ನ್ಯೂಸ್‌ ವೆಬ್‌ಸೈಟ್‌

ಕಳೆದ ವರ್ಷದಂತೆ ಈ ವರ್ಷವೂ ನಾನು ಒಂದು ಕನ್ನಡ ವೆಬ್‌ಸೈಟನ್ನು ಅತಿಯಾಗಿ ಪ್ರೀತಿಸಿದೆ. ಕೆಲವೊಮ್ಮೆ ಹೆಂಡತಿ, ಮಗುವಿಗಿಂತಲೂ ಹೆಚ್ಚು ಸಮಯವನ್ನೂ ಆ ವೆಬ್‌ಸೈಟ್‌ ಜತೆ ಕಳೆದೆ. ಬೆಳಗ್ಗೆ ಎದ್ದಾಗ, ತಿಂಡಿ ತಿನ್ನುವಾಗ, ಊಟ ಮಾಡುವಾಗ, ಬಸ್‌ನಲ್ಲಿದ್ದಾಗ, ಕಾರಲ್ಲಿದ್ದಾಗ, ರಾತ್ರಿ ಮಲಗುವ ಮೊದಲು, ಮಲಗಿದ ನಂತರ ಸದಾ ಆ ವೆಬ್‌ಸೈಟ್‌ನದ್ದೇ ಧ್ಯಾನ. ನಾನು ಅತಿಯಾಗಿ ಪ್ರೀತಿಸುತ್ತಿರುವುದು ಒನ್‌ಇಂಡಿಯಾ ಕನ್ನಡ, ಉದಯವಾಣಿ, ಪ್ರಜಾವಾಣಿ, ವಿಜಯಕರ್ನಾಟಕ, ಟಿವಿ9, ಈಟಿವಿ, ಝೀನ್ಯೂಸ್‌ ಕನ್ನಡ, ಕನ್ನಡಪ್ರಭ ಇತ್ಯಾದಿ ವೆಬ್‌ಸೈಟ್‌ಗಳನ್ನಲ್ಲ. ಈ ಸುದ್ದಿ ವೆಬ್‌ಸೈಟ್‌ಗಳು ನನಗೆ ಜಸ್ಟ್‌ ಫ್ರೆಂಡ್ಸ್‌ ಅಷ್ಟೇ. ನಾನು ಅತಿಯಾಗಿ ಪ್ರೀತಿಸುವ ಒಂದೇ ಒಂದು ವೆಬ್‌ಸೈಟ್‌ ಅದು ಎಚ್‌ಟಿ ಕನ್ನಡ. ನೀವೂ ಓದಿ. ಇಷ್ಟಪಡದೆ ಇರಲಾರಿರಿ.

Whats_app_banner