ಸಾಗರ ಚುನಾವಣೆ ಫಲಿತಾಂಶದಿಂದ ಗೋಪಾಲಕೃಷ್ಣ ಅಡಿಗರು ಪ್ರಾಂಶುಪಾಲ ಹುದ್ದೆಗೆ ರಾಜೀನಾಮೆ ನೀಡಿದರು : ಇಲ್ಲಿದೆ ನೋಡಿ ಕಾರಣ
Election memory ಶಿವಮೊಗ್ಗ ಜಿಲ್ಲೆಯ ಸಾಗರ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಹಾಗೂ ಕೆಎಚ್ ಶ್ರೀನಿವಾಸ್ ನಡುವೆ ಸ್ಪರ್ಧೆ. ಫಲಿತಾಂಶ ಬಂದಾಗ ಸಾಹಿತಿ ಗೋಪಾಲಕೃಷ್ಣ ಅಡಿಗರು ಪ್ರಾಂಶುಪಾಲ ಹುದ್ದೆಗೆ ರಾಜೀನಾಮೆ ನೀಡಿದರು. ಈ ಘಟನೆಯನ್ನು ಹಿರಿಯ ಪತ್ರಕರ್ತ ಸಿ.ರುದ್ರಪ್ಪ ಅವರು ಫೇಸ್‌ಬುಕ್‌ನಲ್ಲಿ ನೆನಪಿಸಿಕೊಂಡಿದ್ದಾರೆ.
ಸಾಗರದ ಕೆ.ಎಚ್ .ಶ್ರೀನಿವಾಸ್ ಅವರಿಗೆ 85 ತುಂಬಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ.ನಾನು ಅವರನ್ನು ಮೊದಲು ನೋಡಿದ್ದು 1967 ರಲ್ಲಿ.ವಿಧಾನ ಸಭೆ ಚುನಾವಣೆಗೆ ಕಾಗೋಡು ತಿಮ್ಮಪ್ಪನವರ ವಿರುದ್ಧ ಸ್ಪರ್ಧಿಸಿದ್ದ ಶ್ರೀನಿವಾಸ್ ಆಗ 25 ರ ಸ್ಪುರದ್ರೂಪಿ ಯುವಕ. ಅದೇ ಚಿತ್ರವೇ ಕಣ್ಣು ಮುಂದೆ ಬರುತ್ತದೆ.
ಅವರು ಸಚಿವರು ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದರು.ಅವರೊಬ್ಬ ಪ್ರಚಂಡ ವಾಗ್ಮಿ ಮತ್ತು ಸಂಸದೀಯ ಪಟು.
ರಾಜೀವ್ ಗಾಂಧಿಯವರು ಕರ್ನಾಟಕಕ್ಕೆ ಬಂದಾಗಲೆಲ್ಲಾ ಅವರ ಭಾಷಣದ ಭಾವಾನುವಾದವನ್ನು ಬಹುತೇಕ ಶ್ರೀನಿವಾಸ್ ಅವರೇ ಮಾಡುತ್ತಿದ್ದರು.ದೇವರಾಜ ಅರಸು,ಆರ್.ಗುಂಡೂರಾವ್ ,ಜೆ .ಎಚ್ .ಪಟೇಲ್ ,ಎಸ್.ಎಂ.ಕೃಷ್ಣ ಸೇರಿದಂತೆ ಹಲವು ಮುಖ್ಯಮಂತ್ರಿಯವರಿಗೆ ಅಧಿಕೃತವಾಗಿ ಅಥವಾ ಅನೌಪಚಾರಿಕವಾಗಿ ರಾಜಕೀಯ ಸಲಹೆಗಾರರಾಗಿದ್ದರು.
ಒಂದು ಪ್ರಸಂಗ ನೆನಪಾಗುತ್ತಿದೆ.ವಿದ್ವಾಂಸರೂ ಸಾಹಿತಿಗಳೂ ಆಗಿದ್ದ ಇಂಗ್ಲಿಷ್ ಪ್ರೊಫೆಸರ್ ಅಬ್ದುಲ್ ಮಜೀದ್ ಖಾನ್ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಒಂದು ಕಥೆಯನ್ನು ಬರೆದಿದ್ದರು.ಕಾಲೇಜೊಂದರ ರಾಜಕಾರಣದ ಸುತ್ತ ಅದನ್ನು ಹೆಣೆಯಲಾಗಿತ್ತು.ಅದರಲ್ಲಿ "ಸೀನಿ"ಎನ್ನುವ ಪಾತ್ರವಿತ್ತು."ಆ ಸೀನಿ ಬೇರಾರೂ ಅಲ್ಲ;ನಾನೇ.!ಆ ಪಾತ್ರದ ಮೂಲಕ ನನ್ನ ಮಾನ ಹಾನಿ ಮಾಡಲಾಗಿದೆ.ವ್ಯಂಗೋಕ್ತಿ,ವಕ್ರೋಕ್ತಿ ,ಕೊಂಕು ನುಡಿಗಳು ,ಸಂಕೇತಗಳು ಮತ್ತು ಇಂಗಿತಗಳ (INNUENDO )ಮೂಲಕ ನನ್ನ ಗೌರವಕ್ಕೆ ಧಕ್ಕೆ ಮಾಡಲಾಗಿದೆ ಎಂದು ಅವರು ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದರು.ಆ ಕೇಸು ಕೆಲವು ವರ್ಷಗಳು ನಡೆದು ಕೊನೆಗೆ ಪ್ರಜಾವಾಣಿಯೇ ಕೆ.ಎಚ್.ಶ್ರೀನಿವಾಸ್ ಅವರ ಬೇಷರತ್ ಕ್ಷಮೆಯನ್ನು ಯಾಚಿಸಿತ್ತು.
1964ರಲ್ಲಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರದ ಕಾಲೇಜಿನ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು.1965 ರಲ್ಲಿ ಕಾಲೇಜು ಆರಂಭವಾಯಿತು.ಮೊದಲನೇ ಪ್ರಿನ್ಸಿಪಾಲರು ನವ್ಯ ಕವಿ ಗೋಪಾಲಕೃಷ್ಣ ಅಡಿಗರು.ಕಾಲೇಜನ್ನು ಅಭಿವೃದ್ಧಿ ಪಡಿಸಲು ಡಾ.ಚಂದ್ರಶೇಖರ ಕಂಬಾರ ,ಜಿ.ಕೆ.ಗೋವಿಂದ ರಾವ್ ಮುಂತಾದ ಪ್ರಸಿದ್ದ ಸಾಹಿತಿಗಳು ಮತ್ತು ವಿದ್ವಾಂಸರು ಅಡಿಗರ ಜೊತೆ ಕೈ ಜೋಡಿಸಿದ್ದರು.ಭೂಮಿ ಹೋರಾಟದ ಮೂಲಕ ಸಮಾಜವಾದಿ ಸಿದ್ದಾಂತದ ಕರ್ಮಭೂಮಿಯಾಗಿದ್ದ ಸಾಗರ,ಸಾಹಿತ್ಯ,ಸಂಸ್ಕೃತಿಯ ಪ್ರಮುಖ ಕೇಂದ್ರವೂ ಆಗಿತ್ತು.
ಇದೇ ಸಂದರ್ಭದಲ್ಲಿ 1967 ರಲ್ಲಿ ವಿಧಾನಸಭೆ ಚುನಾವಣೆಯೂ ಬಂದಿತು.ಸೋಷಿಯಲಿಸ್ಟ್ ಪಾರ್ಟಿಯ ಕಾಗೋಡು ತಿಮ್ಮಪ್ಪ ಮತ್ತು ಕಾಂಗ್ರೆಸ್ ಪಕ್ಷದ ಕೆ.ಎಚ್.ಶ್ರೀನಿವಾಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತು.ಬಹುತೇಕ ಅದೇ ಸಂದರ್ಭದಲ್ಲಿ ಸಾಗರಕ್ಕೆ ಎರಡನೇ ಬಾರಿಗೆ ಭೇಟಿ ನೀಡಿದ್ದ ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಅವರಿಗೆ ಗೋಪಾಲಕೃಷ್ಣ ಅಡಿಗರು ಚಹಾ ಕೂಟ ಏರ್ಪಡಿಸಿ ಸತ್ಕರಿಸಿದ್ದರು.(ಬಹುತೇಕ ಇದೇ ಸಂದರ್ಭದಲ್ಲಿ ಅಡಿಗರು,ಲೋಹಿಯಾ ಅವರ "ವೀಲ್ ಆಫ್ ಹಿಸ್ಟರಿ"ಕೃತಿಯನ್ನು "ಇತಿಹಾಸ ಚಕ್ರ"ಎಂದು ತರ್ಜುಮೆ ಮಾಡಿದ್ದರು).
1967 ರ ವಿಧಾನಸಭೆ ಚುನಾವಣೆಯಲ್ಲಿ ಗೋಪಾಲಕೃಷ್ಣ ಅಡಿಗ ಮತ್ತು ನೀನಾಸಂ ಸಂಸ್ಥಾಪಕ ಕೆ.ವಿ.ಸುಬಣ್ಣ ಕಾಗೋಡು ತಿಮ್ಮಪ್ಪನವರಿಗೆ ಪರೋಕ್ಷವಾಗಿ ಬೆಂಬಲ ನೀಡಿರಬಹುದು ಎನ್ನುವ ಗುಮಾನಿಯೂ ಕೆಲವು ಕಾಂಗ್ರೆಸ್ ನಾಯಕರಿಗೆ ಇತ್ತು.ಕಾಗೋಡು ತಿಮ್ಮಪ್ಪನವರನ್ನು ಕೆ.ಎಚ್.ಶ್ರೀನಿವಾಸ್ 749 ಮತಗಳಿಂದ ಸೋಲಿಸಿದರು.ಕಾಲೇಜು ಆಡಳಿತ ಮಂಡಳಿಯಲ್ಲಿ ಇದ್ದವರು ಬಹುತೇಕ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರು.ಕೆ.ಎಚ್. ಶ್ರೀನಿವಾಸ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು.ಅಡಿಗರು ಮಾನಸಿಕ ಯಾತನೆಯಿಂದಾಗಿ ಪ್ರಿನ್ಸಿಪಾಲ್ ಹುದ್ದೆಗೆ ರಾಜೀನಾಮೆ ನೀಡಿದರು.ಅಡಿಗರ ನಿರ್ಗಮನದಿಂದ ಆಘಾತಕ್ಕೊಳಗಾದ ವಿದ್ಯಾರ್ಥಿಗಳು ಬೀದಿಗಿಳಿದು "ವಿ ವಾಂಟ್ ಅಡಿಗ"ಎನ್ನುವ ಭಿತ್ತಿ ಪತ್ರಗಳನ್ನು ಹಿಡಿದು ತಿಂಗಳಿಗೂ ಹೆಚ್ಚು ಕಾಲ ಚಳುವಳಿ ನಡೆಸಿದರು.ನಂತರ ಅಡಿಗರು ಈ ಕಹಿ ಘಟನೆಗಳನ್ನು ವಿವರಿಸಿ"ರಾಕ್ಷಸರು"ಎನ್ನುವ ಲೇಖನವನ್ನು ತಮ್ಮ ಸಾಕ್ಷಿ ಪತ್ರಿಕೆಯಲ್ಲಿ ಬರೆದರು.ಸಮಾಜವಾದಿ ಮುಖಂಡರ ಸಹವಾಸದಲ್ಲಿದ್ದ ಅಡಿಗರು ನಂತರ ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಜನಸಂಘದ ಅಭ್ಯರ್ಥಿಯಾಗಿದ್ದು ಒಂದು ವಿಪರ್ಯಾಸ.
ಇನ್ನೊಂದು ಸಕಾರಾತ್ಮಕ ಬೆಳವಣಿಗೆಯನ್ನು ಇಲ್ಲಿ ದಾಖಲಿಸಬೇಕು.ಅಡಿಗರ ರಾಜೀನಾಮೆ ಪ್ರಕರಣದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರ ಬಗ್ಗೆ ಸಾಹಿತ್ಯ ವಲಯದಲ್ಲಿ ಉತ್ತಮ ಅಭಿಪ್ರಾಯ ಇರಲಿಲ್ಲ.ಆದರೆ ನಂತರ ಶ್ರೀನಿವಾಸ್ "ಕಾನುಗೋಡು ಮನೆ"ಮುಂತಾದ ಮೌಲಿಕವಾದ ಕವನ ಸಂಕಲನದ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅಪ್ಯಾಯಮಾನವೆನಿಸಿದರು.
ಜೀನ್ ಪಾಲ್ ಸಾತ್ರೆಯ "ಕ್ವೀನ್"ನಾಟಕವನ್ನು ಕನ್ನಡಕ್ಕೆ ತರ್ಜುಮೆ ಮಾಡಿದರು.ಒಂದು ಕಾಲದಲ್ಲಿ ಮೇಲುವರ್ಗದ ಪ್ರತಿನಿಧಿಯಂತೆ ಗೋಚರಿಸುತ್ತಿದ್ದ ಶ್ರೀನಿವಾಸ್ ,ದೇವರಾಜ ಅರಸರ ರಕ್ತರಹಿತ ಕ್ರಾಂತಿಯ ಯಶಸ್ಸಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.ಹಾವನೂರು ಆಯೋಗದ ಶಿಫಾರಸ್ಸಿನ ಅನ್ವಯ ಮೀಸಲಾತಿ ಪರ ಜನಾಭಿಪ್ರಾಯವನ್ನು ರೂಪಿಸಲು ಅರಸು ರಾಜ್ಯಾದ್ಯಂತ ಪ್ರವಾಸವನ್ನು ಆರಂಭಿಸಿದರು.ಅವರ ಜೊತೆಗೆ ಆಗ ಯುವಜನ,ಕ್ರೀಡೆ,ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಕೆ.ಎಚ್ .ಶ್ರೀನಿವಾಸ್ ಅವರೂ ಇದ್ದರು.ಅರಸು ಭಾಷಣಕ್ಕೆ ಮುನ್ನ ಶ್ರೀನಿವಾಸ್ ಮಾತನಾಡುತ್ತಿದ್ದರು.ಆಗ ಒಂದು ಕತೆಯನ್ನು ಹೇಳುತ್ತಿದ್ದರು.ಅದು ತಾಯಿ ಮತ್ತು ನಾಲ್ಕು ಮಕ್ಕಳ ಕತೆ.ನಾಲ್ಕು ಮಕ್ಕಳಲ್ಲಿ ಇಬ್ಬರು ಅತ್ಯಂತ ದುರ್ಬಲರು.ಆ ತಾಯಿ ಒಂದು ರೊಟ್ಟಿಯನ್ನು ನಾಲ್ಕು ಮಕ್ಕಳಿಗೂ ಸಮವಾಗಿ ಪಾಲು ಮಾಡುತ್ತಿದ್ದಳು.ಸಬಲರಾಗಿದ್ದ ಮಕ್ಕಳ ರೊಟ್ಟಿಯಲ್ಲಿ ಒಂದೊಂದು ಚೂರನ್ನು ಮುರಿದುಕೊಳ್ಳುತ್ತಿದ್ದಳು.ಈ ರೊಟ್ಟಿ ತುಂಡುಗಳನ್ನು ದುರ್ಬಲರಾಗಿದ್ದ ಮಕ್ಕಳಿಗೆ ಹೆಚ್ಚುವರಿಯಾಗಿ ತಿನ್ನಿಸುತ್ತಿದ್ದಳು.ಈ ಕಥೆಯ ಮೂಲಕ ಶ್ರೀನಿವಾಸ್ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಜನರಿಗೆ ಮನವರಿಕೆ ಮಾಡುತ್ತಿದ್ದರು.ಅವರಿಗೆ ಶುಭಾಶಯಗಳು.
-ಸಿ.ರುದ್ರಪ್ಪ, ಹಿರಿಯ ಪತ್ರಕರ್ತರು, ಬೆಂಗಳೂರು
ವಿಭಾಗ